ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಸಂಹಿತೆ ಉಲ್ಲಂಘನೆ: 92 ಎಫ್‌ಐಆರ್

ನಗದು, ಮದ್ಯ ಸೇರಿ ₨ 32.6 ಲಕ್ಷ ಮೌಲ್ಯದ ಸ್ವತ್ತು ವಶ: ಜಿಲ್ಲಾಧಿಕಾರಿ
Last Updated 5 ಏಪ್ರಿಲ್ 2018, 11:46 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಇದುವರೆಗೆ 92 ಎಫ್‌ಐಆರ್ ದಾಖಲಿಸಲಾಗಿದ್ದು, ನಗದು ಸೇರಿದಂತೆ ₹ 32,06,954 ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.ತೀರ್ಥಹಳ್ಳಿಯಲ್ಲಿ ಊಟ ಹಾಕಿಸಿದ ಪ್ರಕರಣ, ಶಿವಮೊಗ್ಗದಲ್ಲಿ ₹ 27.19 ಲಕ್ಷ ಮೌಲ್ಯದ 160 ಲ್ಯಾಪ್‌ಟಾಪ್, ಶಿವಮೊಗ್ಗ ಗ್ರಾಮಾಂತರದಲ್ಲಿ ಮುದ್ರಕರ ಹೆಸರಿಲ್ಲದ 35 ಸಾವಿರ ಮೌಲ್ಯದ ಕರ ಪತ್ರಗಳು, ₹ 1.07 ಲಕ್ಷ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪೊಲೀಸರು, ಅಬಕಾರಿ ಇಲಾಖೆ, ವಿಚಕ್ಷಣ ದಳದ ಸಿಬ್ಬಂದಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ. ನೀತಿ ಸಂಹಿತೆ ಕಟ್ಟುನಿಟ್ಟಿನ ಅನುಷ್ಠಾನಕ್ಕಾಗಿ 162 ಸೆಕ್ಟರ್ ಅಧಿಕಾರಿಗಳು ಸೇರಿದಂತೆ 272 ಅಧಿಕಾರಿಗಳ ತಂಡ ಕಾರ್ಯನಿರ್ವಹಿಸುತ್ತಿದೆ. ಮಾಹಿತಿ ಬಂದ ತಕ್ಷಣ ಕ್ರಮಕೈಗೊಳ್ಳುತ್ತಿದ್ದಾರೆ. ಇದುವರೆಗೂ ವಿವಿಧ ರಾಜಕೀಯ ಪಕ್ಷಗಳ ಪರ ಪ್ರಚಾರ ವಿಷಯ ಹೊಂದಿದ್ದ 4,524 ಗೋಡೆ ಬರಹಗಳನ್ನು ಅಳಿಸಿಹಾಕಲಾಗಿದೆ.
3,230 ಬಿತ್ತಿಪತ್ರ, 738 ಬ್ಯಾನರ್‌ಗಳನ್ನು ತೆರವುಗೊಳಿಸ ಲಾಗಿದೆ ಎಂದು ವಿವರ ನೀಡಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಜನಾಶೀರ್ವಾದ ಯಾತ್ರೆಗೆ ಜನರನ್ನು ಕರೆ ತಂದಿದ್ದ 8 ಸರಕು ಸಾಗಣೆ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿನೋಬನಗರ ದಲ್ಲಿ ಈಚೆಗೆ ನಡೆದ ವಿಪ್ರ ಸಮಾವೇಶದಲ್ಲಿ ಒಬ್ಬ ಅಭ್ಯರ್ಥಿಗೆ ಮತ ನೀಡುವಂತೆ ಭಾಷಣ ಮಾಡಿದ ಆರೋಪದ ಮೇಲೆ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ವಿರುದ್ಧ ನಿಯಮ ಉಲ್ಲಂಘಿಸಿ ಕರಪತ್ರ ಮುದ್ರಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಪಂಚಾಯ್ತಿ ಸಿಇಒ ಡಾ.ರಾಕೇಶ್‌ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಉಪಸ್ಥಿತರಿದ್ದರು.

ವ್ಯವಸ್ಥಿತ ಚುನಾವಣೆಗೆ ಕ್ರಮ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಚುನಾವಣೆ ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಚುನಾವಣಾಧಿಕಾರಿ ಬಿ.ಟಿ. ರಂಗನಾಥ್ ತಿಳಿಸಿದರು.ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 235 ಮತಗಟ್ಟೆ ಸ್ಥಾಪಿಸಲು ನಿರ್ಧರಿಸಲಾಗಿದೆ. 2,07,041 ಮತದಾರರು ಹೆಸರು ನೋಂದಾಯಿಸಿದ್ದಾರೆ. 1,03,626 ಪುರುಷರು ಹಾಗೂ 1,03,415 ಮಹಿಳಾ ಮತದಾರರು ಇದ್ದಾರೆ. 1,300ಕ್ಕೂ ಹೆಚ್ಚಿನ ಮತದಾರರು ಇರುವ 12 ಮತಗಟ್ಟೆಗಳಲ್ಲಿ ಹೆಚ್ಚುವರಿ ಮತಗಟ್ಟೆ ಸ್ಥಾಪಿಸಲು ಜಿಲ್ಲಾ ಚುನಾವಣಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮತದಾರರ ಪಟ್ಟಿ ನಿರಂತರ ಪರಿಷ್ಕರಣೆ ಏಪ್ರಿಲ್ 14ರವರೆಗೆ ನಡೆಯಲಿದೆ. ಏಪ್ರಿಲ್ 8ರಂದು ಪ್ರತಿ ಮತಗಟ್ಟೆಗಳಲ್ಲಿ ಮತದಾರರ ಮಿಂಚಿನ ನೋಂದಣಿಗೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಅವಧಿಯಲ್ಲಿ ಮತದಾರರ ಹೆಸರು ಪಟ್ಟಿಯಲ್ಲಿ ಬಿಟ್ಟುಹೋಗಿರುವುದು, ವಿಳಾಸ ಬದಲಾವಣೆ, ಹೆಸರು ಸೇರ್ಪಡೆಗೆ ಹಾಗೂ ಹೆಸರು ತಿದ್ದುಪಡಿಗೆ ಅವಕಾಶವಿರುತ್ತದೆ. ಮತದಾರರು ಈ ಸದವಕಾಶ ಬಳಸಿಕೊಳ್ಳಬೇಕು. ಈಗಾಗಲೇ ಮತದಾರರ ಅಂತಿಮ ಕರಡು ಪ್ರಕಟವಾದ ನಂತರ ಸುಮಾರು 350 ಅರ್ಜಿ ಪಡೆಯಲಾಗಿದೆ. ಹೊಸಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಚುನಾವಣಾ ಪ್ರಕ್ರಿಯೆಗಳಿಗೆ ಸಾರ್ವಜನಿಕರು ದೂರವಾಣಿ ಮುಖಾಂತರ ದೂರು ದಾಖಲಿಸಬಹುದಾಗಿದೆ. ಅದಕ್ಕಾಗಿ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. ದೂ: ಸಂಖ್ಯೆ 18004250137ಕ್ಕೆ ಉಚಿತವಾಗಿ ಕರೆ ಮಾಡಿ, ದೂರು ದಾಖಲಿಸಬಹುದು ಎಂದು ವಿವರ ನೀಡಿದರು.

ಪ್ರತಿ ಅಭ್ಯರ್ಥಿ ಗರಿಷ್ಠ ₹ 28 ಲಕ್ಷ ವೆಚ್ಚ ಮಾಡಬಹುದು. ಚುನಾವಣಾ ಪ್ರಚಾರಕ್ಕೆ ಬಳಸುವ ಸಾಮಗ್ರಿ ಮುದ್ರಣ ಮತ್ತು ಪ್ರಸಾರಕ್ಕೆ ಮುನ್ನ ಜಿಲ್ಲಾ ಮಾಧ್ಯಮ ದೃಢೀಕರಣ ಮತ್ತು ನಿರ್ವಹಣಾ ಸಮಿತಿಯ ಅನುಮತಿ ಪಡೆಯವುದು ಕಡ್ಡಾಯ. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ತಹಶೀಲ್ದಾರ್‌ ಜಿ.ಪಿ. ಮಂಜೇಗೌಡ, ಕಾರ್ಯನಿರ್ವಾಹಕ ಅಧಿಕಾರಿ ಅತೀಕ್‌ ಪಾಶ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸುವಿಧಾ, ಸಮಾಧಾನ ಆ್ಯಪ್

ಚುನಾವಣಾ ಮಾಹಿತಿಗಳಿಗಾಗಿ ಸಮಾಧಾನ ಮತ್ತು ಸುವಿಧಾ ಎಂಬ ಎರಡು ಆ್ಯಪ್‌ ವಿನ್ಯಾಸಗೊಳಿಸಲಾಗಿದೆ. ಕೆಲವೇ ದಿನಗಳಲ್ಲಿ ಈ ಆ್ಯಪ್‌ಗಳು ಸಕ್ರಿಯವಾಗಲಿವೆ. ‘ಸಮಾಧಾನ’ ಬಳಸಿ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ದೂರು ದಾಖಲಿಸಿ, ಅವುಗಳ ಪ್ರಕ್ರಿಯೆ ಕುರಿತು ಮಾಹಿತಿ ಪಡೆಯಬಹುದು. ‘ಸುವಿಧಾ’ ಬಳಸಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಅನುಮತಿ, ಪರವಾನಗಿ ಪಡೆಯಬಹುದು ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT