ಮಂಗಳವಾರ, ಆಗಸ್ಟ್ 11, 2020
21 °C
ಬೀದಿ ನಾಯಿಗಳಿಗೆ ಬಲಿಯಾದ ನವಜಾತ ಶಿಶುವಿನ ಹೆತ್ತವರ ಜಾಡು ಹಿಡಿದು ಹೋದ ಅಧಿಕಾರಿಗಳು

ಪ್ರೀತಿಗೆ ಜನಿಸಿದ ಶಿಶು ಎಸೆದಿದ್ದ ಪ್ರೇಮಿಗಳು; ಈಗ ಮದುವೆಯಾದರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರೀತಿಗೆ ಜನಿಸಿದ ಶಿಶು ಎಸೆದಿದ್ದ ಪ್ರೇಮಿಗಳು; ಈಗ ಮದುವೆಯಾದರು!

ಗೌರಿಬಿದನೂರು: ಪರಿತ್ಯಕ್ತಗೊಂಡು ಬೀದಿನಾಯಿಗಳ ದಾಳಿಗೆ ಬಲಿಯಾದ ನವಜಾತ ಶಿಶುವಿನ ಹೆತ್ತವರ ಜಾಡು ಹಿಡಿದು ಹೋದ ಅಧಿಕಾರಿಗಳು, ಪ್ರೀತಿಸಿ ವಿವಾಹವಾಗದೆ ದೂರವಾಗಿದ್ದ ಪ್ರೇಮಿಗಳಿಗೆ ವಿವಾಹ ಮಾಡಿಸಿ ಮತ್ತೆ ಒಂದು ಮಾಡಿದರು. ಗುರುವಾರ ಪಟ್ಟಣ ಹೊರವಲಯದ ಸಾಯಿಬಾಬಾ ದೇವಸ್ಥಾನದಲ್ಲಿ ನಡೆದ ಈ ವಿವಾಹಕ್ಕೆ ಅನೇಕರು ಸಾಕ್ಷಿಯಾದರು.

ಏನಿದು ಘಟನೆ?

ತಾಲ್ಲೂಕಿನ ಹುದುಗೂರು ಗ್ರಾಮದ ಹೊರವಲಯದಲ್ಲಿ ಕಳೆದ ಒಂದು ತಿಂಗಳ ಹಿಂದೆ ಬೇಲಿಯಲ್ಲಿ ನವಜಾತ ಗಂಡು ಶಿಶುವನ್ನು ಎಸೆದು ಹೋಗಲಾಗಿತ್ತು. ನಾಯಿಗಳ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಶಿಶು ಅಸುನೀಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ಸ್ಥಳೀಯರಾದ ಸುರೇಶ್ ಎಂಬುವವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಶಿಶುವಿನ ಪೋಷಕರ ಪತ್ತೆಗೆ ಮುಂದಾದವರಿಗೆ ಹುದುಗೂರಿನ ಭಗ್ನಪ್ರೇಮಿಗಳ ಕಥೆಯೊಂದು ತಿಳಿದು ಬಂದಿತ್ತು. ಅದರ ಜಾಡು ಹಿಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಎನ್.ಪಿ.ರಾಜೇಂದ್ರಪ್ರಸಾದ್ ಮತ್ತು ಸಾಂತ್ವನ ಕೇಂದ್ರದ ಮುಖ್ಯಸ್ಥೆ ಸೌಭಾಗ್ಯಮ್ಮ ಇತ್ತೀಚೆಗೆ ಆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಗ್ರಾಮದವರೇ ಆದ ಶಿವಲಿಂಗ (27) ಹಾಗೂ ಮಮತಾ (26) ಎಂಬುವರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪ್ರೀತಿ ಪ್ರಯಣಕ್ಕೆ ತಿರುಗಿ ಮಮತಾ ಗರ್ಭಿಣಿಯಾಗಿದ್ದರು. ಇದನ್ನು ತಿಳಿಯುತ್ತಿದ್ದಂತೆ ಶಿವಲಿಂಗ ಆಕೆಯನ್ನು ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದರು. ಇದರಿಂದ ತೀವ್ರ ನೊಂದುಕೊಂಡ ಮಮತಾ ಶಿಶುವನ್ನು ಬೇಲಿಯಲ್ಲಿ ಎಸೆದ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು ಎನ್ನಲಾಗಿದೆ.

ಬುಧವಾರ ಪ್ರೇಮಿಗಳು ಮತ್ತವರ ಕುಟುಂಬದವರೊಂದಿಗೆ ಚರ್ಚೆ ನಡೆಸಿದ ರಾಜೇಂದ್ರಪ್ರಸಾದ್ ಅವರು ಪ್ರೇಮಿಗಳಿಗೆ ವಿವಾಹ ಮಾಡಿಕೊಳ್ಳುವಂತೆ ಮನವೊಲಿಸಿದ್ದರು. ಅದಕ್ಕೆ ಇಬ್ಬರು ಒಪ್ಪುತ್ತಿದ್ದಂತೆ ಗುರುವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಸರಳವಾಗಿ ಮದುವೆ ಶಾಸ್ತ್ರ ನೆರೆವೇರಿಸಲಾಯಿತು. ನಂತರ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ವಿವಾಹವನ್ನು ನೋಂದಾಯಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.