ಬುಧವಾರ, ಫೆಬ್ರವರಿ 26, 2020
19 °C

ಸಲ್ಮಾನ್ ಬಂಧನ: ಬಾಲಿವುಡ್‌ಗೆ ₹600 ಕೋಟಿ ನಷ್ಟ?

ಪಿಟಿಐ Updated:

ಅಕ್ಷರ ಗಾತ್ರ : | |

ಸಲ್ಮಾನ್ ಬಂಧನ: ಬಾಲಿವುಡ್‌ಗೆ ₹600 ಕೋಟಿ ನಷ್ಟ?

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರು ಜೈಲಿಗೆ ಹೋಗಿರುವುದರಿಂದ ಹಿಂದಿ ಚಿತ್ರೋದ್ಯಮಕ್ಕೆ ₹400ರಿಂದ ₹600 ಕೋಟಿ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.

ಸಲ್ಮಾನ್‌ ಅವರು ‘ರೇಸ್‌ 3’ ಸಿನಿಮಾದ ಚಿತ್ರೀಕರಣದ ನಡುವಿನಿಂದಲೇ ಎದ್ದು ನ್ಯಾಯಾಲಯಕ್ಕೆ ಹೋಗಿದ್ದರು. ಇದು ರೆಮೊ ಡಿ ಸೋಜ ನಿರ್ದೇಶನದ ಚಿತ್ರ. ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆಯೇ ಎಂಬುದು ತಿಳಿದು ಬಂದಿಲ್ಲ.

ಈ ಸಿನಿಮಾವನ್ನು ಜೂನ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಚಿತ್ರೀಕರಣ ಪೂರ್ಣಗೊಳ್ಳದೇ ಇದ್ದರೆ ಜೂನ್‌ನಲ್ಲಿ ಬಿಡುಗಡೆ ಮಾಡುವುದು ಕಷ್ಟಸಾಧ್ಯ. ಸಲ್ಮಾನ್‌ ಅವರು ನಾಯಕ ನಟರಾಗಿರುವ ಇತರ ಮೂರು ಸಿನಿಮಾ ಯೋಜನೆಗಳು ಇವೆ. ಆದರೆ ‘ಕಿಕ್‌ 2’, ‘ದಬಂಗ್‌ 3’ ಮತ್ತು ‘ಭಾರತ್‌’ ಸಿನಿಮಾಗಳ ಚಿತ್ರೀಕರಣ ಆರಂಭವಾಗಿಲ್ಲ. ಹಾಗಾಗಿ ಈ ಯೋಜನೆಯಲ್ಲಿ ದೊಡ್ಡ ಮಟ್ಟದ ಹಣ ನಷ್ಟ ಆಗದು. ಸಲ್ಮಾನ್‌ ಅವರ ಸಿನಿಮಾಗಳಿಗೆ ದೊಡ್ಡ ಮಟ್ಟದ ಯಶಸ್ಸಿನ ಖಾತರಿ ಇರುತ್ತದೆ. ಹಾಗಾಗಿ ಸಲ್ಮಾನ್‌ ಜೈಲಿಗೆ ಹೋಗಿರುವುದರಿಂದ ಚಿತ್ರೋದ್ಯಮಕ್ಕೆ ದೊಡ್ಡ ನಷ್ಟವಾಗುತ್ತದೆ ಎಂದು ಉದ್ಯಮ ವಿಶ್ಲೇಷಕ ಕೋಮಲ್‌ ನಹತಾ ಹೇಳಿದ್ದಾರೆ.

‘ರೇಸ್‌ 3’ ಸಿನಿಮಾದ ಮೇಲೆ ₹125ರಿಂದ ₹150 ಕೋಟಿ ಹೂಡಿಕೆ ಮಾಡಲಾಗಿದೆ. ಇತರ ಸಿನಿಮಾಗಳಿಗೆ ಸಂಬಂಧಿಸಿ ಹೇಳುವುದಾದರೆ ಹಣಕಾಸಿನ ವಿಚಾರದಲ್ಲಿ ನಷ್ಟ ಇಲ್ಲ. ಆದರೆ ಸಾಕಷ್ಟು ಸಮಯ ವ್ಯಯ ಮಾಡಲಾಗಿದೆ. ‘ರೇಸ್‌ 3’ ಬಿಟ್ಟು ಬೇರೆ ಯಾವುದೇ ಸಿನಿಮಾದ ಚಿತ್ರೀಕರಣವನ್ನು ಸಲ್ಮಾನ್‌ ಆರಂಭಿಸಿಲ್ಲ. ಹಾಗಾಗಿ ಯಾವುದೇ ಯೋಜನೆಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇಲ್ಲ. ಏಪ್ರಿಲ್‌ 5 ತೀರ್ಪು ಪ್ರಕಟವಾಗುವ ದಿನ ಎಂಬುದನ್ನು ತಿಳಿದುಕೊಂಡೇ ಅವರು ಈ ರೀತಿ ಯೋಜನೆ ಹಾಕಿಕೊಂಡಿರಬಹುದು ಎಂದು ನಹತಾ ಅಭಿಪ್ರಾಯಪಟ್ಟಿದ್ದಾರೆ.

‘ಸಲ್ಮಾನ್‌ ಅವರ ಒಂದು ಸಿನಿಮಾ ಕನಿಷ್ಠ ಅಂದರೂ ₹200 ಕೋಟಿ ಗಳಿಸುತ್ತವೆ. ‘ರೇಸ್‌ 3’ ಸೇರಿ ಮೂರು ಸಿನಿಮಾಗಳ ಯೋಜನೆ ಸಿದ್ಧವಾಗಿದೆ. ಹಾಗಾಗಿ ಬಾಲಿವುಡ್‌ಗೆ ಅಂದಾಜು ₹600 ಕೋಟಿ ನಷ್ಟ ಆಗಬಹುದು ಎಂದು ಅಂದಾಜಿಸಲಾಗಿದೆ’ ಎಂದವರು ಚಿತ್ರ ವ್ಯಾಪಾರ ವಿಶ್ಲೇಷಕ ಗಿರೀಶ್‌ ವಾಂಖೆಡೆ.

ಇದಲ್ಲದೆ, ಅವರು ಜಾಹೀರಾತುಗಳಲ್ಲಿ ಅಭಿನಯಿಸಿದ್ದಾರೆ. ಟಿ.ವಿ. ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಈ ಎಲ್ಲದರ ಮೇಲೆಯೂ ಅವರಿಗೆ ಶಿಕ್ಷೆಯಾಗಿರುವುದು ನಕಾರಾತ್ಮಕ ಪರಿಣಾಮ ಬೀರಲಿದೆ.

ವಿವಾದಗಳ ಸುತ್ತ ‘ಬಾಲಿವುಡ್‌ ಹೀರೊ’ ಸುತ್ತಾಟ

ಐಶ್ವರ್ಯಾ ಜತೆ ಜಗಳ

ನಂಟು ಕಡಿದುಕೊಂಡಿರುವುದನ್ನು ಒಪ್ಪಿಕೊಳ್ಳಲು ಸಲ್ಮಾನ್‌ಗೆ ಆಗುತ್ತಿಲ್ಲ. ಅವರು ತಮ್ಮ ಬೆನ್ನು ಬಿದ್ದಿದ್ದಾರೆ ಎಂದು 2002ರ ಸೆಪ್ಟೆಂಬರ್‌ನಲ್ಲಿ ಬಾಲಿವುಡ್‌ ನಟಿ ಮತ್ತು ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಆರೋಪಿಸಿದ್ದರು. ಐಶ್ವರ್ಯಾ–ಸಲ್ಮಾನ್‌ ಪ್ರೇಮದ ಬಗ್ಗೆ ಪತ್ರಿಕೆಗಳು ಮತ್ತು ಟ್ಯಾಬ್ಲಾಯ್ಡ್‌ಗಳು ಪುಟಗಟ್ಟಲೆ ಬರೆದಿದ್ದವು. ಐಶ್ವರ್ಯಾರನ್ನು ಸಲ್ಮಾನ್‌ ಹಿಂಸಿಸಿದ್ದಾರೆ ಎಂಬ ವರದಿಗಳೂ ಇದ್ದವು. ಬಳಿಕ, ನಟ ಅಭಿಷೇಕ್‌ ಬಚ್ಚನ್‌ ಅವರು ಐಶ್ವರ್ಯಾರನ್ನು ಮದುವೆಯಾದರು.

ಮುಂಬೈ ದಾಳಿ ಹೇಳಿಕೆ

ಮುಂಬೈ ದಾಳಿಯಲ್ಲಿ ‘ಶ್ರೀಮಂತ’ ಜನರು ಸತ್ತ ಕಾರಣಕ್ಕೆ ಇಷ್ಟೊಂದು ದೊಡ್ಡ ವಿಷಯವಾಗಿದೆ. ಪಂಚತಾರಾ ಹೋಟೆಲ್‌ ಮತ್ತು ಅಂತಹ ಸ್ಥಳಗಳ ಮೇಲೆಯೇ ದಾಳಿ ಆಗಿದೆ. ಹಾಗಾಗಿ ಈ ಜನರು ದಿಕ್ಕೆಟ್ಟಂತೆ ಆಡುತ್ತಿದ್ದಾರೆ. ಹಿಂದೆಯೂ ಸಣ್ಣ ಸಣ್ಣ ಪಟ್ಟಣಗಳಲ್ಲಿ ದಾಳಿ ಆಗಿತ್ತು. ಆದರೆ ಆಗ ಯಾರೂ ದೊಡ್ಡದಾಗಿ ಮಾತನಾಡಿರಲಿಲ್ಲ ಎಂದು ಪಾಕಿಸ್ತಾನದ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಲ್ಮಾನ್‌ ಹೇಳಿದ್ದರು.

ರಿಯೊ ಒಲಿಂಪಿಕ್ಸ್‌ ರಾಯಭಾರಿ

ರಿಯೊ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತ ತಂಡದ ಪ್ರಚಾರ ರಾಯಭಾರಿಯಾಗಿ 2016ರ ಏಪ್ರಿಲ್‌ನಲ್ಲಿ ಸಲ್ಮಾನ್‌ ಅವರನ್ನು ನೇಮಿಸಲಾಗಿತ್ತು. ಇದರ ವಿರುದ್ಧ ಪ್ರತಿಕ್ರಿಯೆಗಳು ಬಂದಿದ್ದವು.

‘ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಕ್ರೀಡಾಳುಗಳೇ ಭಾರತದ ನಿಜವಾದ ರಾಯಭಾರಿಗಳು. ಬೇರೊಬ್ಬರು ರಾಯಭಾರಿ ಬೇಕು ಎಂದಿದ್ದರೆ ಅವರನ್ನು ಕ್ರೀಡಾ ವಲಯದಿಂದಲೇ ಆಯ್ಕೆ ಮಾಡಬೇಕು’ ಎಂದು ಹಿರಿಯ ಕ್ರೀಡಾಳು ಮಿಲ್ಖಾ ಸಿಂಗ್‌ ಹೇಳಿದ್ದರು.

ಮೆಮನ್‌ ಪರ ಟ್ವೀಟ್‌

ಮುಂಬೈನಲ್ಲಿ 1993ರ ಮಾರ್ಚ್‌ 12ರಂದು ನಡೆದ ಸರಣಿ ಬಾಂಬ್‌ ದಾಳಿಗೆ ಸಂಬಂಧಿಸಿ 2015ರ ಜುಲೈ 26ರಂದು ಬೆಳಿಗ್ಗೆ ಸಲ್ಮಾನ್‌ ಸರಣಿ ಟ್ವೀಟ್‌ ಮಾಡಿದ್ದರು. ಪ್ರಮುಖ ಸಂಚುಕೋರ ಟೈಗರ್‌ ಮೆಮನ್‌ನನ್ನು ಗಲ್ಲಿಗೆ ಹಾಕಿ, ಆದರೆ ಆತನ ಸಹೋದರನನ್ನು ಯಾಕೆ ಗಲ್ಲಿಗೆ ಹಾಕಬೇಕು ಎಂದು ಪ್ರಶ್ನಿಸಿದ್ದರು. ‘ಒಬ್ಬ ನಿರಪರಾಧಿಯನ್ನು ಕೊಲ್ಲುವುದು ಮಾನವೀಯತೆಯನ್ನು ಕೊಂದಂತೆ. ಟೈಗರ್‌ ಮೆಮನ್‌ನನ್ನು ಹಿಡಿದು ತನ್ನಿ, ಆತನನ್ನು ಮೆರವಣಿಗೆ ಮಾಡಿಸಿ, ಗಲ್ಲಿಗೆ ಹಾಕಿ. ಆತನ ಸಹೋದರನನ್ನು ಅಲ್ಲ’ ಎಂದೂ ಟ್ವೀಟ್‌ ಮಾಡಿದ್ದರು. ಭಾರಿ ಆಕ್ರೋಶಕ್ಕೆ ಒಳಗಾದ ಸಲ್ಮಾನ್‌ ರಕ್ಷಣೆಗೆ ಅವರ ತಂದೆ ಸಲೀಂ ಖಾನ್‌ ಬಂದಿದ್ದರು. 2015ರ ಜುಲೈ 30ರಂದು ಯಾಕೂಬ್‌ ಮೆಮನ್‌ನನ್ನು ಗಲ್ಲಿಗೆ ಹಾಕಲಾಯಿತು.

ಮಾಧ್ಯಮ ಜತೆಗೆ ಸಂಘರ್ಷ

ಛಾಯಾಗ್ರಾಹಕರ ಜತೆಗೆ ಸಲ್ಮಾನ್‌ ಅವರು ಹಲವು ಬಾರಿ ಕಾದಾಟ ನಡೆಸಿದ್ದಾರೆ. 1990ರ ದಶಕದಲ್ಲಿ ಸಲ್ಮಾನ್‌ ಅವರು ಪ್ರಕರಣವೊಂದರ ಸಂಬಂಧ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದರು. ಆಗ ಅಲ್ಲಿ ಇದ್ದ ಛಾಯಾಗ್ರಾಹಕರ ಗುಂಪಿನ ಮೇಲೆ ಹಲ್ಲೆ ನಡೆಸಿದ್ದರು. ನಿರ್ದಿಷ್ಟ ಸ್ಥಳದಲ್ಲಿ ಫೋಟೊಗೆ ಪೋಸ್‌ ಕೊಡುವಂತೆ ಸಲ್ಮಾನ್‌ ಅವರನ್ನು ‘ಕಿಕ್‌’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಛಾಯಾಗ್ರಾಹಕರು ಕೋರಿದ್ದರು. ಅದನ್ನು ಅವರು ನಿರಾಕರಿಸಿದ್ದಷ್ಟೇ ಅಲ್ಲ, ‘ಕಾರ್ಯಕ್ರಮದಲ್ಲಿ ಇರಲು ಇಷ್ಟವಿರುವವರು ಇರಿ, ಉಳಿದವರು ಹೋಗುವುದಕ್ಕೆ ಯಾವುದೇ ಅಭ್ಯಂತರ ಇಲ್ಲ’ ಎಂದಿದ್ದರು.

ಅಪಘಾತ ನಡೆಸಿ ಪರಾರಿ ಮುಂಬೈನ ಹಿಲ್ ರೋಡ್‌–ಸೇಂಟ್‌ ಆ್ಯಂಡ್ರ್ಯೂಸ್‌ ಜಂಕ್ಷನ್‌ನ ಅಮೆರಿಕನ್‌ ಎಕ್ಸ್‌ಪ್ರೆಸ್‌ ಬೇಕರಿ ಹೊರಭಾಗದಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಟೊಯೊಟಾ ಲ್ಯಾಂಡ್‌ಕ್ರೂಸರ್‌ ಕಾರು ಹತ್ತಿಸಿ ಒಬ್ಬರ ಸಾವು ಮತ್ತು ನಾಲ್ವರು ಗಾಯಗೊಳ್ಳಲು ಸಲ್ಮಾನ್‌ ಕಾರಣರಾಗಿದ್ದಾರೆ ಎಂದು ದೂರು ದಾಖಲಾಗಿತ್ತು. 2002ರ ಸೆಪ್ಟೆಂಬರ್‌ 28ರ ರಾತ್ರಿ ಇದು ನಡೆದಾಗ ಸಲ್ಮಾನ್‌ ಪಾನಮತ್ತರಾಗಿದ್ದರು ಎಂದು ದೂರಿನಲ್ಲಿ ಹೇಳಲಾಗಿತ್ತು. 2015ರ ಮೇ 6ರಂದು ಮುಂಬೈನ ಸೆಷನ್ಸ್‌ ನ್ಯಾಯಾಲಯ ಈ ಪ್ರಕರಣದ ತೀರ್ಪು ನೀಡಿ, ಐದು ವರ್ಷ ಶಿಕ್ಷೆ ವಿಧಿಸಿತ್ತು. ಬಾಂಬೆ ಹೈಕೋರ್ಟ್‌ ಅದೇ ದಿನ ಅವರಿಗೆ ಜಾಮೀನು ನೀಡಿತ್ತು. ಅದೇ ಡಿಸೆಂಬರ್‌ 10ರಂದು ಸಲ್ಮಾನ್‌ ಮೇಲ್ಮನವಿಯ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್‌, ಅವರನ್ನು ಖುಲಾಸೆಗೊಳಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)