ಶುಕ್ರವಾರ, ಡಿಸೆಂಬರ್ 6, 2019
26 °C
ಬ್ಯಾಡ್ಮಿಂಟನ್‌: ಶ್ರೀಲಂಕಾ ಮತ್ತು ಪಾಕಿಸ್ತಾನದ ಎದುರು ಸುಲಭ ಗೆಲುವು

ಮೊದಲ ದಿನ ಭಾರತದ ಪ್ರಾಬಲ್ಯ

Published:
Updated:
ಮೊದಲ ದಿನ ಭಾರತದ ಪ್ರಾಬಲ್ಯ

ಗೋಲ್ಡ್‌ ಕೋಸ್ಟ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಸ್ಪರ್ಧಿಗಳು ಪ್ರಾಬಲ್ಯ ಮೆರೆದರು.

ಗುರುವಾರ ನಡೆದ ಮಿಶ್ರ ತಂಡ ವಿಭಾಗದ ಹೋರಾಟಗಳಲ್ಲಿ ಭಾರತ ತಂಡ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳಿಗೆ ಸೋಲುಣಿಸಿತು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ 5–0ರಿಂದ ಗೆದ್ದಿತು.

ಮಿಶ್ರ ಡಬಲ್ಸ್‌ನಲ್ಲಿ ಕಣಕ್ಕಿಳಿದಿದ್ದ ಪ್ರಣವ್‌ ಜೆರಿ ಚೋಪ್ರಾ ಮತ್ತು ರುತ್ವಿಕಾ ಗಾದ್ದೆ 21–15, 19–21, 22–20ರಲ್ಲಿ ಸಚಿನ್‌ ದಿಯಾಸ್‌ ಮತ್ತು ತಿಲಿನಿ ಪ್ರಮೋದಿಕ ಅವರನ್ನು ಸೋಲಿಸಿದರು.

ಪುರುಷರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತ ಆಟಗಾರ ಕೆ.ಶ್ರೀಕಾಂತ್‌ 21–16, 21–10ರ ನೇರ ಗೇಮ್‌ಗಳಿಂದ ನಿಲುಕ ಕರುಣಾರತ್ನೆ ವಿರುದ್ಧ ಗೆದ್ದರು.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ರಣಕಿ ರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ 21–17, 21–14ರಲ್ಲಿ  ದಿನುಕ ಕರುಣಾರತ್ನ ಮತ್ತು ಬುವಾನೆಕ ಗುಣತಿಲಕೆ ಅವರನ್ನು ಮಣಿಸಿದರು. ಹೀಗಾಗಿ ಭಾರತ 3–0ರ ಮುನ್ನಡೆ ಗಳಿಸಿ ಗೆಲುವು ಖಾತ್ರಿ ಪಡಿಸಿಕೊಂಡಿತು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಅಂಗಳಕ್ಕಿಳಿದಿದ್ದ ಸೈನಾ ನೆಹ್ವಾಲ್‌ 21–8, 21–4ರಲ್ಲಿ ಮಧುಶಿಕಾ ಬೆರುಲಾಗೆ ಅವರನ್ನು ಸೋಲಿಸಿ ಭಾರತದ ಮುನ್ನಡೆಯನ್ನು 4–0ಗೆ ಹೆಚ್ಚಿಸಿದರು.

22 ನಿಮಿಷಗಳ ಹೋರಾಟದಲ್ಲಿ ಸೈನಾ, ಸುಲಭವಾಗಿ ಎದುರಾಳಿಯ ಸವಾಲು ಮೀರಿದರು.

ಮಹಿಳೆಯರ ಡಬಲ್ಸ್‌ನಲ್ಲೂ ಭಾರತ ಮೇಲುಗೈ ಸಾಧಿಸಿತು.

ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ 21–12, 21–14ರಲ್ಲಿ ತಿಲಿನಿ ಪ್ರಮೋದಿಕಾ ಮತ್ತು ಕವಿದಿ ಸಿರಿಯನ್ನಗೆ ವಿರುದ್ಧ ಗೆದ್ದು ಭಾರತದ ‘ಕ್ಲೀನ್‌ ಸ್ವೀಪ್‌’ ಸಾಧನೆಗೆ ಕಾರಣರಾದರು.

ಪಾಕ್‌ ವಿರುದ್ಧವೂ ಪರಾಕ್ರಮ: ಪಾಕಿಸ್ತಾನ ಎದುರಿನ ಪಂದ್ಯದಲ್ಲೂ ಭಾರತ ಪರಾಕ್ರಮ ಮೆರೆಯಿತು. ಭಾರತ 5–0ರಿಂದ ವಿಜಯಿಯಾಯಿತು.

ಮಿಶ್ರ ಡಬಲ್ಸ್‌ ವಿಭಾಗದ ಹೋರಾಟದಲ್ಲಿ ಸಾತ್ವಿಕ್‌ ಮತ್ತು ಸಿಕ್ಕಿ ರೆಡ್ಡಿ 21–10, 21–13ರಿಂದ ಮಹಮ್ಮದ್‌ ಇರ್ಫಾನ್ ಸಯೀದ್‌ ಭಟ್ಟಿ ಮತ್ತು ಪಲವಶಾ ಬಸೀರ್‌ ವಿರುದ್ಧ ಗೆದ್ದು ಭಾರತಕ್ಕೆ 1–0ರ ಮುನ್ನಡೆ ತಂದುಕೊಟ್ಟರು.

ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್‌ 21–16, 22–20ರಲ್ಲಿ ಮುರಾದ್‌ ಅಲಿ ಅವರನ್ನು ಪರಾಭವಗೊಳಿಸಿದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಸೈನಾ 21–7, 21–11ರಲ್ಲಿ ಮಹೂರ್‌ ಶಹಜಾದ ವಿರುದ್ಧ ಗೆದ್ದರು. ಹೀಗಾಗಿ ಭಾರತ 3–0ರ ಮುನ್ನಡೆ ತನ್ನದಾಗಿಸಿಕೊಂಡಿತು.

ಪುರುಷರ ಡಬಲ್ಸ್‌ನಲ್ಲಿ ಪ್ರಣವ್‌ ಜೆರಿ ಚೋಪ್ರಾ ಮತ್ತು ಚಿರಾಗ್‌ ಶೆಟ್ಟಿ 21–9, 21–15ರಲ್ಲಿ ಮಹಮ್ಮದ್‌ ಇರ್ಫಾನ್‌ ಸಯೀದ್‌ ಭಟ್ಟಿ ಮತ್ತು ಮುರಾದ್‌ ಅಲಿ ಅವರನ್ನು ಸೋಲಿಸಿದರು.

ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ರುತ್ವಿಕಾ ಶಿವಾನಿ 21–6, 21–10ರಲ್ಲಿ ಮಹೂರ್‌ ಮತ್ತು ಪಲವಶಾ ಅವರನ್ನು ಮಣಿಸಿದರು.

ಮುಂದಿನ ಪಂದ್ಯದಲ್ಲಿ ಭಾರತ ತಂಡ ಸ್ಕಾಂಟ್ಲೆಂಡ್‌ ವಿರುದ್ಧ ಸೆಣಸಲಿದೆ.

ಪ್ರತಿಕ್ರಿಯಿಸಿ (+)