ಚಿತ್ರನಟರ ಫ್ಲೆಕ್ಸ್‌ ತೆರವು: ವಾಗ್ವಾದ

7

ಚಿತ್ರನಟರ ಫ್ಲೆಕ್ಸ್‌ ತೆರವು: ವಾಗ್ವಾದ

Published:
Updated:

ಹೂವಿನಹಡಗಲಿ: ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ವೀರಭದ್ರೇಶ್ವರ ರಥೋತ್ಸವ ಅಂಗವಾಗಿ ಅಭಿಮಾನಿಗಳು ಅಳವಡಿಸಿದ್ದ ಚಿತ್ರನಟರ ಫ್ಲೆಕ್ಸ್‌, ಬ್ಯಾನರ್‌ ಅನ್ನು ಬುಧವಾರ ತೆರವುಗೊಳಿಸಿದ್ದರಿಂದ ಅಧಿಕಾರಿಗಳು ಮತ್ತು ಗ್ರಾಮದ ಯುವಕರ ನಡುವೆ ವಾಗ್ವಾದ ನಡೆದಿದೆ.ಜಾತ್ರೆ ಪ್ರಯುಕ್ತ ನಟರಾದ ಸುದೀಪ್, ದರ್ಶನ್, ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ದೊಡ್ಡ ಗಾತ್ರದ ಫ್ಲೆಕ್ಸ್ ಅಳವಡಿಸಿ, ವಿದ್ಯುತ್ ದೀಪಾಲಂಕಾರ ಮಾಡಿದ್ದರು.

ಗ್ರಾಮ ಪಂಚಾಯ್ತಿ ಸಿಬ್ಬಂದಿ ಹಾಗೂ ಎಂಸಿಸಿ ತಂಡದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ‘ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಯಾವುದೇ ಫ್ಲೆಕ್ಸ್, ಬ್ಯಾನರ್ ಅಳವಡಿಸಲು ಅವಕಾಶ ನೀಡುವುದಿಲ್ಲ’ ಎಂದು ತೆರವುಗೊಳಿಸಲು ಮುಂದಾದರು.ಆಗ ಅಭಿಮಾನಿ ಬಳಗದ ಯುವಕರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ‘ನಾವು ಯಾವುದೆ ರಾಜಕಾರಣಿಯ ಭಾವಚಿತ್ರ, ರಾಜಕೀಯ ಪಕ್ಷದ ಚಿಹ್ನೆಯನ್ನು ಬಳಸಿಲ್ಲ. ಇದು ನೀತಿ ಸಂಹಿತೆ ವ್ಯಾಪ್ತಿಗೆ ಒಳಪಡದು. ಚಿತ್ರನಟರ ಫ್ಲೆಕ್ಸ್‌ ತೆರವುಗೊಳಿಸಲು ಬಿಡುವುದಿಲ್ಲ’ ಎಂದು ಯುವಕರು ಪಟ್ಟು ಹಿಡಿದರು.ಯುವಕರು ಮತ್ತು ಅಧಿಕಾರಿಗಳ ನಡುವೆ ಚಕಮಕಿ ಜೋರಾಗುತ್ತಿದ್ದಂತೆ ಗ್ರಾಮದ ಮುಖಂಡರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಅಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನಗಳನ್ನು ಮನವರಿಕೆ ಮಾಡಿಕೊಟ್ಟು ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದರು. ಇದರಿಂದ ಸಿಟ್ಟಿಗೆದ್ದ ಯುವಕರು ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಶಿಲಾನ್ಯಾಸ ನೆರವೇರಿಸಿದ್ದ ಅಭಿವೃದ್ಧಿ ಕಾಮಗಾರಿಗಳ ನಾಮ ಫಲಕಗಳನ್ನು ಕಿತ್ತುಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry