ಮಂಗಳವಾರ, ಡಿಸೆಂಬರ್ 10, 2019
26 °C
ಜಿಲ್ಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ: ಸುದ್ದಿಗೋಷ್ಠಿಯಲ್ಲಿ ರೇವಣ್ಣ ಆರೋಪ

ಮಂಜೇಗೌಡ ವಿರುದ್ಧ ಎಫ್‌ಐಆರ್‌ ದಾಖಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಜೇಗೌಡ ವಿರುದ್ಧ ಎಫ್‌ಐಆರ್‌ ದಾಖಲಿಸಿ

ಹಾಸನ: ‘ಜಿಲ್ಲೆಯಲ್ಲಿ ಬಾಡೂಟ,ಹಣ ಹಂಚಿಕೆ ಹಾಗೂ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಅವ್ಯಾಹತವಾಗಿ ನಡೆಯುತ್ತಿದ್ದರೂ ಚುನಾವಣಾ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ’ ಎಂದು ಶಾಸಕ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.

‘ಸರ್ಕಾರಿ ಅಧಿಕಾರಿಯಾಗಿದ್ದು ಕೊಂಡು ಬಾಗೂರು ಮಂಜೇಗೌಡ ನಿರಂತರವಾಗಿ ಹೊಳೆ ನರಸೀಪುರ ಕ್ಷೇತ್ರದಲ್ಲಿ ಬಾಡೂಟ ಆಯೋಜನೆ ಮಾಡುವ ಮೂಲಕ ಮತದಾರರ ಓಲೈಕೆ ಮಾಡುತ್ತಿದ್ದಾರೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು. ಅಬಕಾರಿ ಇಲಾಖೆಯವರು ಕಾಂಗ್ರೆಸ್ ನೊಂದಿಗೆ ಶಾಮೀಲಾಗಿದ್ದಾರೆ. ಹೀಗಾಗಿ ಚುನಾವಣಾ ಆಯೋಗ ಇತ್ತ ಗಮನ ಹರಿಸಬೇಕು’ ಎಂದು ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದರು.

‘ಸಾರಿಗೆ ಇಲಾಖೆಯಲ್ಲಿ ಬ್ರೇಕ್ ಇನ್‌ಸ್ಪೆಕ್ಟರ್‌, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೂ ಆಗಿರುವ ಮಂಜೇಗೌಡರ ರಾಜೀನಾಮೆ ಇನ್ನು ಅಂಗೀಕಾರ ಆಗಿಲ್ಲ. ಅಧಿಕ ಆಸ್ತಿ ಸಂಪಾದನೆ ಮಾಡಿದ ಪ್ರಕರಣ ಲೋಕಾಯುಕ್ತದಲ್ಲಿ ಇದೆ. ಆಸ್ತಿ 400 ಪಟ್ಟು ಹೆಚ್ಚಾಗಿದೆ ಎಂಬ ಬಗ್ಗೆ ಕಡತದಲ್ಲಿ ದಾಖಲಾಗಿದೆ. ಕೇಂದ್ರ ಚುನಾವಣಾ ಆಯೋಗ ಕಣ್ಣಿಡಬೇಕು’ ಎಂದು ಆಗ್ರಹಿಸಿದರು.

‘ಸಕಲೇಶಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾರ್ವೆ ಸೋಮಶೇಖರ್ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಹಣ, ಹೆಂಡ ಹಂಚುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಅಬಕಾರಿ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ನೊಂದಿಗೆ ಶಾಮೀಲಾಗಿದ್ದಾರೆ’ ಎಂದು ಟೀಕಿಸಿದರು.

‘ನಿಯಮದ ಪ್ರಕಾರ ಬಸ್‌ಗಳನ್ನು ಬಳಸುವಂತಿಲ್ಲ ಎಂಬ ಆದೇಶವಿದೆ. ಬೆಂಗಳೂರಿನಲ್ಲಿ ನಡೆಯುವ ಕಾಂಗ್ರೆಸ್ ಸಮಾವೇಶಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 2,000 ಬಸ್‌ಗಳನ್ನು ನೀಡಲು ಮುಂದಾಗಿದೆ. ಅದರ ವೆಚ್ಚ ಅಂದಾಜು ₹ 40 ಕೋಟಿ ಆಗಲಿದೆ. ಆದರೆ ಜೆಡಿಎಸ್‌ ಸಮಾವೇಶಕ್ಕೆ ಬಸ್‌ಗಳನ್ನು ನೀಡುತ್ತಿಲ್ಲ’ ಎಂದು ಕಿಡಿಕಾರಿದರು.

‘ಹಾಸನ ಕ್ಷೇತ್ರದಲ್ಲಿ ರಿಟರ್ನಿಂಗ್‌ ಆಫೀಸರ್‌ (ಆರ್ ಒ) ರಾಜೇಶ್ ಮತ್ತು ಪುಂಡರೀಕ ಎಂಬುವರು ಬಟ್ಟೆ ಕಾರ್ಖಾನೆಗಳಿಂದ ಹಣ ವಸೂಲಿ ಮಾಡಿಕೊಂಡು ರಾಷ್ಟ್ರೀಯ ಪಕ್ಷಗಳಿಗೆ ನೀಡುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು. ರಾಹುಲ್ ಗಾಂಧಿಯಿಂದ ರಾಜಕೀಯ ಕಲಿಯಬೇಕಾಗಿಲ್ಲ. ಅವರಿಗೆ ಪಕೋಡ, ಬೆಣ್ಣೆದೋಸೆ ತಿನ್ನುವ ಪರಿಸ್ಥಿತಿ ಬಂದಿದೆ. 10 ವರ್ಷ ಯುಪಿಎ ಸರ್ಕಾರದಲ್ಲಿ ಮನಮೋಹನ್ ಸಿಂಗ್‌ ಅವರನ್ನು ಗೊಂಬೆಯಂತೆ ಕೂರಿಸಿದ್ದರು ಎಂದು ವ್ಯಂಗ್ಯವಾಡಿದರು.

ಶಾಸಕ ಎಚ್.ಎಸ್.ಪ್ರಕಾಶ್, ಹಿರಿಯ ಮುಖಂಡ ಪಟೇಲ್ ಶಿವರಾಂ ಇದ್ದರು.

ಪೊಲೀಸ್ ವಾಹನದಲ್ಲಿ ಹಣ ಸಾಗಣೆ

ಹಾಸನದಲ್ಲಿ ಸ್ಥಳೀಯವಾಗಿ ತಯಾರಿಸಿದ ಅಕ್ರಮ ಮದ್ಯ ಹಂಚಿಕೆ ಆಗುತ್ತಿದೆ. ಹಳ್ಳಿಗಳಲ್ಲಿ ಅವರೇ ಯಂತ್ರಗಳನ್ನು ಅಳವಡಿಸಿಕೊಂಡು ಬೇಕಾದ ಮದ್ಯ ತಯಾರಿಸಿ ವಿತರಿಸುತ್ತಿದ್ದಾರೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಪೊಲೀಸ್ ವಾಹನಗಳಲ್ಲಿಯೇ ಹಣ ಸಾಗಿಸುವ ಕೆಲಸಕ್ಕೆ ಸಿದ್ಧತೆ ನಡೆದಿದೆ ಎಂದು ಆರೋಪಿಸಿದರು.‘ಬೇಲೂರಿನಲ್ಲಿ ಜೆಡಿಎಸ್ ಕಾರ್ಯಕರ್ತರೊಬ್ಬರ ಕಾರಿಗೆ ಅನುಮತಿ ನೀಡಲು ಬೆಳಿಗ್ಗೆಯಿಂದ ಕಾಯಿಸಿದ್ದಲ್ಲದೆ, ಅವರ ವಿರುದ್ಧವೇ ಕರ್ತವ್ಯಕ್ಕೆ ಅಡ್ಡಿ ಮಾಡಿದರು ಎಂದು ಆರೋಪಿಸಿ ಪ್ರಕರಣ ದಾಖಲಿಸುವ ಮೂಲಕ ಬೇಲೂರು ತಹಶೀಲ್ದಾರ್ ಕಾಂಗ್ರೆಸ್ ಏಜೆಂಟ್‌ರಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

**

ಜಿಲ್ಲೆಯಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಯದಿದ್ದರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ – ಎಚ್‌.ಡಿ.ರೇವಣ್ಣ, ಶಾಸಕ.

**

ಪ್ರತಿಕ್ರಿಯಿಸಿ (+)