ಮೆರವಣಿಗೆ ನಡೆಸಿದ ಸಾವಿರಾರು ವಿದ್ಯಾರ್ಥಿಗಳು

7
ಮತದಾನ ಜಾಗೃತಿಗೆ ಉಡುಪಿಯಲ್ಲಿ ಬೃಹತ್ ಜಾಥಾ

ಮೆರವಣಿಗೆ ನಡೆಸಿದ ಸಾವಿರಾರು ವಿದ್ಯಾರ್ಥಿಗಳು

Published:
Updated:

ಉಡುಪಿ: ಮತದಾನ ಕುರಿತು ಜಾಗೃತಿ ಮೂಡಿಸಲು ಮತದಾನ ಅರಿವು ಹಾಗೂ ಪಾಲ್ಗೊಳ್ಳುವಿಕೆ ಸಮಿತಿ ಮತ್ತು ಜಿಲ್ಲಾಡಳಿತ ವಿವಿಧ ಇಲಾಖೆಗಳ ಸಗಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಬೃಹತ್ ಜಾಥಾ ಎಲ್ಲರ ಗಮನ ಸೆಳೆಯಿತು.

ನಗರದ 13 ಕಾಲೇಜುಗಳ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿದ್ದರು. ನಗರದ ಸರ್ವೀಸ್ ಬಸ್ ನಿಲ್ದಾಣದ ಎದುರು ಜಮಾಯಿಸಿದ್ದ ವಿದ್ಯಾರ್ಥಿಗಳು ಮತದಾನದ ಮಹತ್ವ ಸಾರುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಒಂಟೆ ಹಾಗೂ ಕುದುರೆಗಳ ಹೊಟ್ಟೆಯ ಮೇಲೆ ದೊಡ್ಡ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಖುದ್ದು ವಿದ್ಯಾರ್ಥಿಗಳೇ ಸವಾರಿ ಮಾಡುತ್ತಾ ಪ್ರತಿಯೊಬ್ಬರೂ ಮತದಾನ ಮಾಡುವಂತೆ ನಾಗರಿಕರಲ್ಲಿ ಮನವಿ ಮಾಡಿದರು.

ನಗರದ ಕೆ.ಎಂ. ಮಾರ್ಗ್, ಅಜ್ಜರಕಾಡು ಮೂಲಕ ಮೆರವಣಿಗೆ ಸಾಗಿತು. ಮತದಾನದ ಬಗ್ಗೆ ಮಾಹಿತಿ ನೀಡುವ ಕರಪತ್ರಗಳನ್ನು ಸಹ ವಿದ್ಯಾರ್ಥಿಗಳು ಹಂಚಿದರು. ಮೇ12ರಂದು ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿ ಎಂದು ಅವರು ಮನವಿ ಮಾಡಿದರು. ‘ನನ್ನ ಮತ ನನ್ನ ಧ್ವನಿ, ಹೆಚ್ಚು ಪ್ರತಿಶತ ಮತದಾನ ಪ್ರಜಾಪ್ರಭುತ್ವದ ಯಶಸ್ಸು, ಮತದಾರನಾಗಿರುವುದಕ್ಕೆ ಹೆಮ್ಮೆ ಇದೆ, ಮತ ಚಲಾಯಿಸಿ ಪ್ರಜಾಪ್ರಭುತ್ವ ಉಳಿಸಿ ಎಂಬ ಭಿತ್ತಿಪತ್ರಗಳು ರಾರಾಜಿಸಿದವು.

ಈ ಬಾರಿಯ ಚುನಾವಣಾ ಆಯೋಗದ ರಾಯಭಾರಿ ಮಾಜಿ ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಅವರ ಸಂದೇಶಗಳನ್ನು ಸಹ ಮತದಾರರಿಗೆ ತಲುಪಿಸುವ ಪ್ರಯತ್ನ ಮಾಡಿದರು. ಒಟ್ಟಾರೆ ಇಡೀ ನಗರದ ಗಮನ ಆಕರ್ಷಕ ಜಾಥಾದ ಮೇಲೆ ಕೇಂದ್ರೀಕೃತವಾಗಿತ್ತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಅವರು ಮಾತನಾಡಿ, ಅರ್ಹರೆಲ್ಲರೂ ಮತದಾನ ಮಾಡುವುದು ಮಾತ್ರವಲ್ಲ, ಇತರರನ್ನು ಸಹ ಈ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದು ಮನವಿ ಮಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಅಭಿಮಾನದ ವಿಷಯವಾಗಿದೆ. ಮತದಾನದ ದಿನ ಹೋಗಿ ಸರದಿ ಸಾಲಿನಲ್ಲಿ ನಿಂತು ಹಾಗೂ ದಾಖಲೆಗಳನ್ನು ಹಾಜರುಪಡಿಸುವುದು ಸ್ವಲ್ಪ ತ್ರಾಸದಾಯಕ ಅನಿಸಬಹುದು. ಆದರೆ ಐದು ವರ್ಷಗಳ ಕಾಲ ವಿಧಾನಸಭೆಯಲ್ಲಿ ನಮ್ಮ ಪ್ರತಿನಿಧಿ ಯಾರಿರಬೇಕು ಎಂದು ಆಯ್ಕೆ ಮಾಡುವ ಮಹತ್ವದ ದಿನ ಎಂಬುದನ್ನು ಯಾರೂ ಮರೆಯಬಾರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ನಗರಸಭೆ ಪೌರಾಯುಕ್ತ ಡಿ. ಮಂಜುನಾಥಯ್ಯ ಇದ್ದರು.

**

ರಾಜ ಪ್ರಭುತ್ವದಲ್ಲಿ ನಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಇರಲಿಲ್ಲ. ಈಗ ಪ್ರಜಾಪ್ರಭುತ್ವ ನೀಡಿರುವ ಈ ಅವಕಾಶವನ್ನು ಬಳಸಿಕೊಳ್ಳೋಣ –  ವಿಜೇತ ಶೆಟ್ಟಿ, ವಿದ್ಯಾರ್ಥಿನಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು. 

**

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಈ ವ್ಯವಸ್ಥೆ ಇನ್ನಷ್ಟು ಬಳಗೊಳ್ಳಬೇಕು ಎಂದರೆ ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಬೇಕು – ಶ್ರೇಯಸ್ ಕೋಟ್ಯಾನ್, ವಿದ್ಯಾರ್ಥಿ, ಎಂಜಿಎಂ ಕಾಲೇಜು.

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry