ಗುರುವಾರ , ಡಿಸೆಂಬರ್ 12, 2019
20 °C
ಷೇರು ವಿಕ್ರಯಕ್ಕೆ ನೌಕರರ ಸಂಘಟನೆಗಳ ವಿರೋಧ

ಎಐ: ಹಿಂದೆ ಸರಿದ ಇಂಡಿಗೊ

ಪಿಟಿಐ Updated:

ಅಕ್ಷರ ಗಾತ್ರ : | |

ಎಐ: ಹಿಂದೆ ಸರಿದ ಇಂಡಿಗೊ

ನವದೆಹಲಿ : ರಾಷ್ಟ್ರೀಯ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾದ (ಎ.ಐ) ಖರೀದಿ ಪ್ರಕ್ರಿಯೆಯಿಂದ ಅಗ್ಗದ ವಿಮಾನ ಯಾನ ಸಂಸ್ಥೆ ಇಂಡಿಗೊ ಹಿಂದೆ ಸರಿದಿದೆ.

‘ಎ.ಐ’ದ ಅಂತರರಾಷ್ಟ್ರೀಯ ವಿಮಾನ ಸೇವೆ ಮತ್ತು ಅಗ್ಗದ ವಿಮಾನ ಯಾನ ಸಂಸ್ಥೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಖರೀದಿಸಲು ಇಂಡಿಗೊ ಆರಂಭದಿಂದಲೂ ಆಸಕ್ತಿ ತೋರಿಸಿತ್ತು.

ಸರ್ಕಾರ ಇತ್ತೀಚೆಗೆ ಪ್ರಕಟಿಸಿದ ಷೇರು ವಿಕ್ರಯ ನೀತಿಯಲ್ಲಿ ಅಂತರರಾಷ್ಟ್ರೀಯ ವಿಮಾನ ಸೇವೆಯನ್ನು ಪ್ರತ್ಯೇಕವಾಗಿ ಮಾರಾಟ ಮಾಡುವ ಪ್ರಸ್ತಾವ ಇಲ್ಲ. ಹೀಗಾಗಿ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿದಿರುವುದಾಗಿ ಇಂಡಿಗೊ ತಿಳಿಸಿದೆ.

‘ಎ.ಐ’ದ ಒಟ್ಟಾರೆ ವಹಿವಾಟನ್ನು ಖರೀದಿಸಿ ನಷ್ಟಪೀಡಿತ ಸಂಸ್ಥೆಯನ್ನು ಯಶಸ್ವಿಯಾಗಿ ಲಾಭದ ಹಾದಿಗೆ ತರುವ ಸಾಮರ್ಥ್ಯ ನಮಗೆ ಇದೆ ಎಂದೇನೂ ನಾವು ಭಾವಿಸಿಲ್ಲ’ ಎಂದು ಸಂಸ್ಥೆಯ ಅಧ್ಯಕ್ಷ ಆದಿತ್ಯ ಘೋಷ್‌ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ದೇಶಿ ವಿಮಾನ ಯಾನ ಸಂಸ್ಥೆಯಲ್ಲಿ ಇಂಡಿಗೊ ಶೇ 40ರಷ್ಟು ಪಾಲು ಹೊಂದಿದೆ.

‘ಎ.ಐ’ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರವು 2017ರ ಜೂನ್‌ ತಿಂಗಳಲ್ಲಿ ತಾತ್ವಿಕ ಸಮ್ಮತಿ ನೀಡುತ್ತಿದ್ದಂತೆ ಆ ಬಗ್ಗೆ ಆಸಕ್ತಿ ತೋರಿಸಿದ ಮೊದಲ ಸಂಸ್ಥೆಗಳಲ್ಲಿ ಇಂಡಿಗೊ ಒಂದಾಗಿತ್ತು. ಅಂತರರಾಷ್ಟ್ರೀಯ ವಿಮಾನ ಸೇವೆ ಖರೀದಿ ಸಂಬಂಧ ನಾಗರಿಕ ವಿಮಾನ ಯಾನ ಸಚಿವಾಲಯಕ್ಕೆ ಪತ್ರವನ್ನೂ ಬರೆದಿತ್ತು.

ದೇಶಿ ಅಂತರರಾಷ್ಟ್ರೀಯ ವಿಮಾನ ಸೇವೆಯು ಕೊಲ್ಲಿ ದೇಶಗಳ ವಿಮಾನ ಯಾನ ಸಂಸ್ಥೆಗಳ ವಶಕ್ಕೆ ಹೋಗುವು ದರ ಬಗ್ಗೆ ಇಂಡಿಗೊ ಕಳವಳ ವ್ಯಕ್ತಪಡಿಸಿದೆ.

ಪ್ರಧಾನಿಗೆ ಕಾರ್ಮಿಕ ಸಂಘಟನೆಗಳ ಮನವಿ: ಷೇರು ವಿಕ್ರಯದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ‘ಎ.ಐ’ದ ಎಂಟು ಕಾರ್ಮಿಕ ಸಂಘಟನೆಗಳು, ಪರ್ಯಾಯ ಮಾರ್ಗೋಪಾಯ ಕಂಡುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿವೆ.

ಸಂಸ್ಥೆಯ ಷೇರು ವಿಕ್ರಯ ಅಥವಾ ಖಾಸಗೀಕರಣವನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಇಂತಹ ಪ್ರಯತ್ನ ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ. ಸರ್ಕಾರ ತನ್ನ ನಿರ್ಧಾರ ಮರುಪರಿಶೀಲಿಸಲು ಒತ್ತಾಯಿಸುತ್ತೇವೆ ಎಂದು ಪತ್ರದಲ್ಲಿ ಹೇಳಲಾಗಿದೆ.

₹ 30 ಸಾವಿರ ಕೋಟಿಗಳಷ್ಟು ಸಾಲ ವಜಾ ಮಾಡಿ ಅಥವಾ ಮರು ಹೊಂದಾಣಿಕೆ ಮಾಡಿ, ದಕ್ಷ ಆಡಳಿತ ವ್ಯವಸ್ಥೆ ಜಾರಿಗೆ ತಂದರೆ ಸಂಸ್ಥೆ ಲಾಭದ ಹಾದಿಗೆ ಮರಳಲಿದೆ. ’ಎ.ಐ’ ಖಾಸಗೀಕರಣ ಮಾಡಿದರೆ ಉದ್ಯೋಗ ಅವಕಾಶಗಳು ನಷ್ಟವಾಗಲಿವೆ ಎಂದೂ ಆತಂಕ ವ್ಯಕ್ತಪಡಿಸಿವೆ.

ಪ್ರತಿಕ್ರಿಯಿಸಿ (+)