4

ನನ್ನೊಲವಿನ 'ಭಾಗ್ಯ'ದ ಬಾಗಿಲಿನ ಅಮೃತಧಾರೆ

Published:
Updated:
ನನ್ನೊಲವಿನ 'ಭಾಗ್ಯ'ದ ಬಾಗಿಲಿನ ಅಮೃತಧಾರೆ

‘ಎವೆರಿ ಸಕ್ಸಸ್‍ಫುಲ್‍ಮ್ಯಾನ್ ಹ್ಯಾಸ್ ಎ ವುಮನ್ ಬಿಹೈಂಡ್ ಹಿಮ್’ (Every successful man has a women behind him) ಎನ್ನುವ ಮಾತಂತೂ ನನ್ನ ಪಾಲಿಗೆ ಅಕ್ಷರಶಃ ನಿಜ. ದಾಂಪತ್ಯದಲ್ಲಿ ಮುಖ್ಯವಾಗಿರುವುದು ಮಾನವೀಯ ನೆಲೆಯಲ್ಲಿನ ಅಂತಃಕರಣದ ಆಪ್ತತೆ. ಇಲ್ಲಿ ಮೇಲು-ಕೀಳೆಂಬ ಭಾವನೆಗಳೇ ಬರಬಾರದು. ಗಂಡ-ಹೆಂಡತಿ ಅನ್ಯೋನ್ಯತೆಯಿಂದ ಬಾಳುವೆ ನಡೆಸುತ್ತಿದ್ದಾರೆಂದರೆ ಕುಟುಂಬದಲ್ಲಿ ನೆಮ್ಮದಿ ನೆಲೆಸಿದೆಯೆಂದಾದರೆ, ಅಲ್ಲಿ ಹೆಣ್ಣಿನ ಪಾತ್ರ ಬಹುಮುಖ್ಯವಾಗುತ್ತದೆ.

ಇಂತಹದೊಂದು ಬಾಳ್ವೆಯನ್ನು ನನ್ನ ‘ಬಾಳ ಸಂಗಾತಿ’ಯಾದ ‘ಭಾಗ್ಯ’ಳೊಂದಿಗೆ ಕಳೆದ ಹದಿನೆಂಟು ವರ್ಷಗಳಿಂದ ನಡೆಸುತ್ತಿದ್ದೇನೆಂದರೆ ಅದು ಅತಿಶಯೋಕ್ತಿಯಂತು ಖಂಡಿತಾ ಅಲ್ಲ. ಅವಳ ವಿನಯ, ಸಹನಶೀಲತೆ ಹಾಗೂ ಔದಾರ್ಯ ಗುಣಗಳು ನನ್ನನ್ನು ಮಂತ್ರ ಮುಗ್ಧನನ್ನಾಗಿಸಿದೆ. ತೀರಾ ಮುಂಗೋಪಿಯಲ್ಲದ ನಾನು ಕೆಲವೊಮ್ಮೆ ರೇಗಿದರೂ ಕೂಡ ನಗು-ನಗುತ್ತಲೇ ಸ್ವಾಗತಿಸುವ ಅವಳ ಗುಣ ನನಗೆ ಇಷ್ಟ. ಪತಿಯ ಆದಾಯಕ್ಕೆ ತಕ್ಕಂತೆ ಸರಳ ಬದುಕಾದರೂ ಸರಿಯೆಂದು ತಾಳ್ಮೆಯಿಂದ, ತೃಪ್ತಿಯಿಂದ ಬದುಕುವುದನ್ನು ಅವಳಿಂದ ಕಲಿಯಬೇಕು. ಹಣ, ಅಂತಸ್ತು, ಬಂಗಲೆ ಇವು ಯಾವುದೂ ಕೂಡ ಮನಸ್ಸಿಗೆ ನೆಮ್ಮದಿಯನ್ನು ತರುವಂತಹುದಲ್ಲ. ‘ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚಬೇಕು’ ಪಕ್ಕದಮನೆ ಎಂದಿಗೂ ಹೆಣ್ಣಿಗೆ ಆದರ್ಶಪ್ರಾಯವಾಗಿರಬಾರದು ಎಂಬ ನೀತಿ ಅವಳದ್ದು. ಮನೆಯ ಇತರೆ ಸದಸ್ಯರೂ ಕೂಡ ತನ್ನ ಕುಟುಂಬವರ್ಗದವರೇ ಎನ್ನುವಷ್ಟು ಅಕ್ಕರೆ ಅವಳಿಗೆ ಸದಾ ಇರುತ್ತದೆ. ಅಂತೆಯೇ, ಮಕ್ಕಳೂ ಕೂಡ ಕುಟುಂಬದಲ್ಲಿ ಅರಳುವ ಸುಂದರ ಹೂವುಗಳಾಗಿರುವುದರಿಂದ ಅವರಿಗೂ ಉತ್ತಮ ಶಿಕ್ಷಣ, ತಾಯ್ನೆಲವನ್ನು ಪ್ರೀತಿಸುವ ಅಂತಃಕರಣದ ಭಾವನೆಯನ್ನು ಭಿತ್ತಿರುವ ಹಿರಿಮೆ ಅವಳಿಗೆ ಸಲ್ಲುತ್ತದೆ.

ಪ್ರೀತಿಯ ಪತ್ನಿಯಾಗಿ, ಮುದ್ದಿನ ಸೊಸೆಯಾಗಿ, ಅಕ್ಕರೆಯ ಮಾತೆಯಾಗಿ, ಮನೆಮಂದಿಗೆಲ್ಲಾ ಪ್ರೀತಿ-ಪಾತ್ರಳಾಗಿರುವ ನನ್ನವಳನ್ನು ಎಷ್ಟು ಕೊಂಡಾಡಿದರೂ ಸಾಲದು. ಕೇವಲ ಮನೆಯ ಕೆಲಸಗಳಿಗಷ್ಟೇ ತನ್ನ ಕಾರ್ಯ ಪ್ರವೃತ್ತಿಯನ್ನು ಸೀಮಿತಗೊಳಿಸದೆ ಅನೇಕ ಸಾಮಾಜಿಕ, ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ‘ಸಮಯ’ ಹೊಂದಿಸುವ ಅವಳ ಚತುರತೆ ಇತರೆ ಮಹಿಳೆಯರಿಗೆ ಅನುಕರಣೀಯ. ಹದವಾದ ಮೌಲ್ಯಗಳನ್ನು ಸರಿದೂಗಿಸಿ ಕಟ್ಟಿಕೊಳ್ಳುವ ಈ ಕುಟುಂಬ ವ್ಯವಸ್ಥೆಯಲ್ಲಿ ಹೆಂಡತಿಗೆ-ಗಂಡ, ಗಂಡನಿಗೆ-ಹೆಂಡತಿ ಪರಸ್ಪರ ಅತೀ ಸಮೀಪದ ಬಂಧುಗಳು. ಇದು ನನ್ನ ಪಾಲಿಗೆ ಅಕ್ಷರಶಃ ನಿಜ. ಮಾತೆಯ ಮಡಿಲಿನಿಂದ ದೂರವಿದ್ದ ನನಗೆ ಬಾಳಸಂಗಾತಿಯಾಗಿ ಮಾತೃತ್ವವನ್ನು ತುಂಬಿ ತನ್ನ ಸ್ಥಾನದ ಜವಾಬ್ದಾರಿಯ ಹೊಣೆಯನ್ನು ಹೊತ್ತಿರುವ ನನ್ನವಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೆನಿಸುತ್ತದೆ. ಪ್ರತಿದಿನವೂ ಹೊಸತನ್ನು ಕಾಣುವ ನನ್ನ ಜೀವನದ ಪಾಲಿಗೆ ನನ್ನವಳು ಸದಾ ‘ಅಮೃತಧಾರೆ’.

-ಹೆಚ್. ನಂಜುಂಡಸ್ವಾಮಿ,

ಚಿಕ್ಕಮಗಳೂರು ಜಿಲ್ಲೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry