ಮಂಗಳವಾರ, ಜುಲೈ 14, 2020
24 °C
ಗಜರಾಜನ ರಕ್ಷಣೆಗೆ ಯೋಜನೆ ರೂಪಿಸಿ: ‘ಸುಪ್ರೀಂ’ ಸೂಚನೆ

‘ವೀರಪ್ಪನ್‌ ಸತ್ತ ಬಳಿಕವೂ ಆನೆಗಳು ಸಾಯುತ್ತಿವೆ’

ಪಿಟಿಐ Updated:

ಅಕ್ಷರ ಗಾತ್ರ : | |

‘ವೀರಪ್ಪನ್‌ ಸತ್ತ ಬಳಿಕವೂ ಆನೆಗಳು ಸಾಯುತ್ತಿವೆ’

ನವದೆಹಲಿ : ‘ಕಾಡುಗಳ್ಳ ವೀರಪ್ಪನ್ ಸತ್ತ ನಂತರ ಆನೆಗಳ ಸಂಖ್ಯೆ ಹೆಚ್ಚಿದೆ. ಆದರೆ ಬೇರೆ–ಬೇರೆ ಕಾರಣಗಳಿಗೆ ಆನೆಗಳು ಸಾಯುತ್ತಲೇ ಇವೆ. ಆನೆ ಕಾರಿಡಾರ್ ರೂಪಿಸಿದರೆ ಅವುಗಳ ಸಾವನ್ನು ತಡೆಯಬಹುದೇ’ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಪ್ರಶ್ನಿಸಿತು.

ಆನೆ ಕಾರಿಡಾರ್‌ಗಳಿಗಾಗಿ ಒತ್ತಾಯಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಮದನ್.ಬಿ.ಲೋಕೂರ್ ಮತ್ತು ದೀಪಕ್ ಗುಪ್ತಾ ಅವರಿದ್ದ ಪೀಠವು ವಿಚಾರಣೆ ನಡೆಸಿತು.

‘ಹೆದ್ದಾರಿಗಳಲ್ಲಿ ಆನೆಗಳು ಸಾಯುತ್ತಿವೆ, ರೈಲುಗಳಿಗೆ ಸಿಲುಕಿ ಆನೆಗಳು ಬಲಿಯಾಗುತ್ತಿವೆ. ನೋಡಿ, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದರೆ ಏನೂ ಬದಲಾವಣೆ ಆಗದು. ಇವೇ ಜಾಗಗಳಲ್ಲಿ ಓಡಾಡಬೇಕು ಎಂದು ಆನೆಗಳಿಗೆ ಸೂಚಿಸುವುದು ಸಾಧ್ಯವಿಲ್ಲ. ಆನೆಗಳಿಗೆ ಸುರಕ್ಷಿತವಾದ ಕಾರಿಡಾರ್ ಬೇಕು. ಈ ಬಗ್ಗೆ ಯೋಚನೆ ಮಾಡಿ. ಇನ್ನು ಹತ್ತು ದಿನಗಳಲ್ಲಿ ವರದಿ ನೀಡಿ’ ಎಂದು ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎ.ಎನ್‌.ಎಸ್.ನಾಡಕರ್ಣಿ ಅವರಿಗೆ ಪೀಠ ಸೂಚಿಸಿತು.

‘ಆನೆಗಳಿಗೆ ಮೀಸಲಿರಿಸಿರುವ ಪ್ರದೇಶ ಅವುಗಳಿಗೆ ಸಾಲುತ್ತಿಲ್ಲ. ಆನೆ ಕಾರಿಡಾರ್‌ಗಳನ್ನು ಹಾದು ಹೋಗುವ ಹೆದ್ದಾರಿ ಮತ್ತು ರೈಲು ಮಾರ್ಗಗಳಲ್ಲಿ ಅಪಘಾತಗಳು ಸಂಭವಿಸಿ ಆನೆಗಳು ಸಾಯುತ್ತಿವೆ. ಹೀಗಾಗಿ ಸುರಕ್ಷಿತವಾದ ಆನೆ ಕಾರಿಡಾರ್‌ಗಳನ್ನು ರೂಪಿಸಬೇಕು’ ಎಂದು ಅರ್ಜಿದಾರರ ಪರ ವಕೀಲರು ಪೀಠದ ಎದುರು ಪ್ರತಿಪಾದಿಸಿದರು.

ಈ ವಿಚಾರದಲ್ಲಿ ಪೀಠಕ್ಕೆ ನೆರವಾಗಲು ನೇಮಿಸಿರುವ ನ್ಯಾಯಾಲಯ ಸಹಾಯಕರು (ಅಮಿಕಸ್ ಕ್ಯೂರಿ) ಕೂಡ, ‘ಆನೆ ಕಾರಿಡಾರ್‌ಗಳನ್ನು ರೂಪಿಸಿದರೆ ಆನೆಗಳ ಸಾವನ್ನು ಸ್ವಲ್ಪಮಟ್ಟಿಗೆ ತಡೆಯಬಹುದು’ ಎಂದು ತಿಳಿಸಿದರು.

‘ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಇದೇ ವಿಚಾರಕ್ಕೆ ಸಂಬಂಧಿಸಿದ ಕೆಲವು ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ದೇಶದಲ್ಲಿ 27 ಆನೆ ಕಾರಿಡಾರ್‌ಗಳನ್ನು ರೂಪಿಸಬೇಕು ಎಂಬ ಶಿಫಾರಸುಗಳನ್ನು ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯು ಪರಿಗಣಿಸುವ ಸಾಧ್ಯತೆ ಇದೆ ಎಂದು ಈಗಾಗಲೇ ಆ ಪೀಠಕ್ಕೆ ಮಾಹಿತಿ ನೀಡಿದ್ದೇವೆ’ ಎಂದು ನಾಡಕರ್ಣಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.