ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಗೆ ಮರೀಚಿಕೆಯಾದ ರಾಜಕೀಯ ಪ್ರಾತಿನಿಧ್ಯ

ಬಳ್ಳಾರಿ ಸಿದ್ದಮ್ಮ ಜಿಲ್ಲೆಯ ಮೊದಲ ಶಾಸಕಿ l ಮೂರು ಬಾರಿ ಆಯ್ಕೆಯಾಗಿದ್ದ ನಾಗಮ್ಮ ಕೇಶವಮೂರ್ತಿ
Last Updated 7 ಏಪ್ರಿಲ್ 2018, 8:26 IST
ಅಕ್ಷರ ಗಾತ್ರ

ದಾವಣಗೆರೆ: ಇದುವರೆಗೆ ಜಿಲ್ಲೆಯಲ್ಲಿ ನಡೆದ ರಾಜ್ಯದ ವಿಧಾನಸಭೆಯ 14 ಚುನಾವಣೆಗಳ ಇತಿಹಾಸದ ಪುಟಗಳನ್ನು ತಿರುವಿದಾಗ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ‘ಮರೀಚಿಕೆ’ಯಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಲೋಕಸಭೆ ಹಾಗೂ ವಿಧಾನಸಭೆಯಲ್ಲೂ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಪುರುಷ ಪ್ರಧಾನ ಸಮಾಜದಲ್ಲಿ ರಾಜಕೀಯ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸಿದ್ದರೂ, ಗೆದ್ದ ಬಳಿಕ ಅವರ ಗಂಡಂದಿರೇ ಅಧಿಕಾರ ಚಲಾಯಿಸುತ್ತಿರುವ ಹಲವು ನಿದರ್ಶನಗಳು ಆಗಾಗ ಕಂಡುಬರುತ್ತಿವೆ.

ಈಗಿನ ದಾವಣಗೆರೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ (ಈ ಹಿಂದೆ ಚಿತ್ರದುರ್ಗ, ಶಿವಮೊಗ್ಗ ಹಾಗೂ ಬಳ್ಳಾರಿ ಜಿಲ್ಲೆಗಳ ಭಾಗವಾಗಿದ್ದ ವಿಧಾನಸಭಾ ಕ್ಷೇತ್ರಗಳು ಸೇರಿ) ನಡೆದ ಚುನಾವಣೆಗಳಲ್ಲಿ ಇಬ್ಬರು ಮಹಿಳೆಯರು ಮಾತ್ರ ಶಾಸಕಿಯರಾಗಿದ್ದಾರೆ. ಕಾಂಗ್ರೆಸ್‌ನ ಗಾಂಧಿವಾದಿ ಬಳ್ಳಾರಿ ಸಿದ್ದಮ್ಮ ಜಿಲ್ಲೆಯ ಮೊದಲ ಶಾಸಕಿಯಾಗಿದ್ದರೆ, ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ನಾಗಮ್ಮ ಕೇಶವಮೂರ್ತಿ ಅವರೇ ಕೊನೆಯ ಶಾಸಕಿಯಾಗಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ನಡೆದ 14 ಚುನಾವಣೆಗಳಲ್ಲಿ (1951ರಿಂದ 2013ರವರೆಗೆ) ಒಟ್ಟು 649 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇವರ ಪೈಕಿ 631 ಪುರುಷ ಅಭ್ಯರ್ಥಿಗಳಾದರೆ, ಕೇವಲ 18 ಮಹಿಳಾ ಅಭ್ಯರ್ಥಿಗಳಿದ್ದರು. ಒಟ್ಟು ನಾಲ್ಕು ಬಾರಿ ಮಹಿಳೆಯರು ಗೆಲುವು ಸಾಧಿಸಿದ್ದರೂ ಅವರಲ್ಲಿ ನಾಗಮ್ಮ ಕೇಶವಮೂರ್ತಿ ಅವರೇ ಮೂರು ಬಾರಿ ಆಯ್ಕೆಯಾಗಿದ್ದರು ಎಂಬುದು ಇನ್ನೊಂದು ವಿಶೇಷ.

ಮೊದಲ ಹೆಜ್ಜೆ ಗುರುತು: 1951ರಲ್ಲಿ ರಾಜ್ಯದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಬಳ್ಳಾರಿ ಸಿದ್ದಮ್ಮ (10,294 ಮತ) ಅವರು ಪಕ್ಷೇತರ ಅಭ್ಯರ್ಥಿ ಬಂಡೆ ಹನುಮಂತರಾವ್‌ ವಿರುದ್ಧ 10,294 ಮತಗಳ ಅಂತರದಿಂದ ಗೆದ್ದಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬಳ್ಳಾರಿ ಸಿದ್ದಮ್ಮ, ಐವರು ಪ್ರತಿಸ್ಪರ್ಧಿಗಳ ವಿರುದ್ಧ ಭಾರಿ ಗೆಲುವು ಸಾಧಿಸುವ ಮೂಲಕ ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯ ಮೊದಲ ಹೆಜ್ಜೆ ಗುರುತನ್ನು ಮೂಡಿಸಿದ್ದರು.

ಕೊನೆಯ ಹೆಜ್ಜೆ ಗುರುತು:  ಎರಡು ದಶಕಗಳ ಬಳಿಕ 1972ರಲ್ಲಿ ಕಾಂಗ್ರೆಸ್‌ನ ನಾಗಮ್ಮಕೇಶವಮೂರ್ತಿ ಶಾಸಕಿಯಾಗಿ ಆಯ್ಕೆಯಾಗುವ ಮೂಲಕ ವಿಧಾನಸೌಧದ ಮೆಟ್ಟಿಲು ಏರಿದರು.ಇದಕ್ಕೂ ಮೊದಲು ಎರಡು ಬಾರಿ ಅವರ ಪತಿ ಕೇಶವಮೂರ್ತಿ ಅವರು ಪ್ರಜಾ ಸೋಷಲಿಸ್ಟ್‌ ಪಾರ್ಟಿ(ಪಿ.ಎಸ್‌.ಪಿ)ಯಿಂದ ಸ್ಪರ್ಧಿಸಿದ್ದರೂ ಗೆಲುವು ಸಾಧಿಸಿರಲಿಲ್ಲ. 1978ರಲ್ಲಿ ಮಾಯಕೊಂಡ ಕ್ಷೇತ್ರದಿಂದ ಇಂದಿರಾ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಾಗಮ್ಮ ಕೇಶವಮೂರ್ತಿ 5,721 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 1983ರಲ್ಲಿ ದಾವಣಗೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರು ಮೂರನೇ ಸ್ಥಾನಕ್ಕೆ ಕುಸಿದಿದ್ದರು.1989ರಲ್ಲಿ ಮಾಯಕೊಂಡ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು, (31,869 ಮತ) ಜನತಾದಳದ ಕೆ.ಮಲ್ಲಪ್ಪ (21,141 ಮತ) ವಿರುದ್ಧ ಗೆದ್ದು ಮೂರನೇ ಬಾರಿಗೆ ಶಾಸಕಿಯಾದರು. 1994ರಲ್ಲಿ ಪುನಃ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ ನಾಗಮ್ಮ (22,799 ಮತ), ಬಿಜೆಪಿಯ ಎಸ್‌.ಎ. ರವೀಂದ್ರನಾಥ (48,955 ಮತ) ಅವರ ವಿರುದ್ಧ ಭಾರಿ ಮತಗಳ ಅಂತರದಿಂದ ಸೋತರು. ಜನತಾದಳದಿಂದ ಸ್ಪರ್ಧಿಸಿದ್ದ ಕೆ.ಜಿ. ಸುಶೀಲಮ್ಮ (6,085 ಮತ) ನಾಲ್ಕನೇ ಸ್ಥಾನ ಪಡೆದಿದ್ದರು.

ಮಕ್ಕಳ ಶಿಕ್ಷಣದಲ್ಲಿ ಪಿ.ಜಿ. ಡಿಪ್ಲೊಮಾ ಪದವಿ ಪಡೆದಿದ್ದ ನಾಗಮ್ಮ ಕೇಶವಮೂರ್ತಿ ಅವರು, ಗುಂಡೂರಾವ್ ಸಂಪುಟದಲ್ಲಿ ಶಿಕ್ಷಣ ಸಚಿವೆಯಾಗಿಯೂ ಜನಮೆಚ್ಚುಗೆ ಗಳಿಸಿದ್ದರು.

2004ರಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಜನತಾ ಪಕ್ಷದಿಂದ ಶಾಮನೂರು ಗೀತಾ (1,194 ಮತ) ಹಾಗೂ ಕೆ.ಎನ್‌.ಡಿ.ಪಿಯಿಂದ ರೇಖಾ ಎಂ.ಸಿ (967) ಮತ್ತು ಮಾಯಕೊಂಡದಲ್ಲಿ ಜನತಾ ಪಕ್ಷದಿಂದ ಶೀಲಾ ಜೆ.ಎನ್‌. (2,667 ಮತ) ಸ್ಪರ್ಧಿಸಿದ್ದರು.

ಜಗಳೂರಿನಲ್ಲಿ ಪಕ್ಷೇತರರಾಗಿ ಶಾಂತಾಕುಮಾರಿ ಎಂ.ವಿ. (1,062) ಹಾಗೂ ಹರಪನಹಳ್ಳಿಯಲ್ಲಿ ಕೆಎನ್‌ಡಿಪಿಯಿಂದ ರೇಣುಕಮ್ಮ ಪಿ.ಟಿ. (2496) ಮತ್ತು ಪಕ್ಷೇತರರಾಗಿ ಲೋಕಮ್ಮ ಕೆ. (2962) ಸ್ಪರ್ಧಿಸಿದ್ದರು.

2008ರಲ್ಲಿ ಹರಿಹರದಲ್ಲಿ ಪಕ್ಷೇತರರಾಗಿ ಅನಿತಾ ಪಾಟೀಲ (497) ಕಣಕ್ಕೆ ಇಳಿದಿದ್ದರು. 2013ರಲ್ಲಿ ದಾವಣಗೆರೆ ಉತ್ತರ (137) ಹಾಗೂ ದಾವಣಗೆರೆ ದಕ್ಷಿಣ (214) ಎರಡೂ ಕ್ಷೇತ್ರಗಳಲ್ಲಿ ಪಕ್ಷೇತರರಾಗಿ ಟಿ.ಆರ್‌. ಇಂದ್ರಮ್ಮ ಸ್ಪರ್ಧಿಸಿದ್ದರು. ಚನ್ನಗಿರಿಯಲ್ಲಿ ಎಲ್‌ಜೆಪಿಯಿಂದ ಜಯಮ್ಮ ಡೊಡ್ಡಬ್ಬಿಗೆರೆ (626), ಬಿಎಸ್‌ಪಿಯಿಂದ ಆರ್‌. ಮಮತಾ (621) ಸ್ಪರ್ಧಿಸಿದ್ದರು. ಹೊನ್ನಾಳಿಯಲ್ಲಿ ಎಸ್‌.ಜೆ.ಪಿ.ಎಯಿಂದ ಆಶಾ ಆರ್‌. ಪಾಟೀಲ (1563) ಹಾಗೂ ಹರಪನಹಳ್ಳಿಯಲ್ಲಿ ಪಕ್ಷೇತರರಾಗಿ ಚೈತ್ರಾ ಜಿ. (430) ಕಣಕ್ಕೆ ಇಳಿದಿದ್ದರು.

ಇದುವರೆಗೆ ಸ್ಪರ್ಧಿಸಿದ ಮಹಿಳೆಯರ ಪೈಕಿ ಇಬ್ಬರು ಮಾತ್ರ ಗೆಲುವಿನ ನಗೆ ಬೀರಿದ್ದಾರೆ. ಉಳಿದವರೆಲ್ಲ ಠೇವಣಿಯನ್ನೂ ಕಳೆದುಕೊಂಡಿದ್ದಾರೆ.

‘ವಿಧಾನಸಭೆಯಲ್ಲೂ ಮೀಸಲಾತಿ ನೀಡಲಿ’

‘ನಮ್ಮ ಕಾಲದಲ್ಲಿ ಜಿಲ್ಲಾ ಪರಿಷತ್‌, ತಾಲ್ಲೂಕು ಪಂಚಾಯ್ತಿ ಚುನಾವಣೆಗಳಲ್ಲೂ ಮಹಿಳೆಯರು ಸ್ಪರ್ಧಿಸಿ ಗೆಲ್ಲುವ ಸ್ಥಿತಿ ಇರಲಿಲ್ಲ. ಅಂಥ ವಾತಾವರಣದಲ್ಲೂ ಕಾಂಗ್ರೆಸ್‌ ಟಿಕೆಟ್‌ ಸಿಕ್ಕಿದ್ದರಿಂದ ನಾನು ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೆ’ ಎಂದು ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ಸ್ಮರಿಸಿದರು.

‘ಈಗ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿರುವುದರಿಂದ ಅರ್ಧದಷ್ಟು ಮಹಿಳೆಯರು ಆಯ್ಕೆಯಾಗುತ್ತಿದ್ದಾರೆ. ಅಧ್ಯಕ್ಷ ಸ್ಥಾನವೂ ಅವರಿಗೆ ಲಭಿಸುತ್ತಿದೆ. ಚುನಾವಣೆಯಲ್ಲಿ ಭಾರಿ ಪ್ರಮಾಣದ ಹಣ ಖರ್ಚು ಮಾಡಿ ಗೆಲ್ಲುವಷ್ಟು ಸಾಮರ್ಥ್ಯ ಮಹಿಳೆಯರಲ್ಲಿ ಇಲ್ಲ. ಹೀಗಾಗಿ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಟಿಕೆಟ್‌ ನೀಡುತ್ತಿಲ್ಲ. ರಾಜಕೀಯ ಪ್ರಾತಿನಿಧ್ಯ ನೀಡಲು ವಿಧಾನಸಭೆ ಹಾಗೂ ಲೋಕಸಭೆಯಲ್ಲೂ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು’ ಎಂದು ನಾಗಮ್ಮ ಕೇಶವಮೂರ್ತಿ ಒತ್ತಾಯಿಸಿದರು.

ಸ್ಪರ್ಧಿಸಿದ್ದ ಮಹಿಳೆಯರು ಕೇವಲ ಹದಿನೆಂಟು!

ಜಗಳೂರು, ಹರಿಹರ, ಚನ್ನಗಿರಿ ಕ್ಷೇತ್ರಗಳಲ್ಲಿ ಇದುವರೆಗೆ 14 ಚುನಾವಣೆಗಳು ನಡೆದಿದ್ದರೂ ಒಬ್ಬ ಮಹಿಳೆ ಮಾತ್ರ ಇದುವರೆಗೆ ಚುನಾವಣೆಗೆ ಸ್ಪರ್ಧಿಸಿರುವುದು ವಿಶೇಷವಾಗಿದೆ. ಹರಪನಹಳ್ಳಿಯಲ್ಲಿ ಮೂರು ಹಾಗೂ ಚನ್ನಗಿರಿಯಲ್ಲಿ ಇಬ್ಬರು ಮಹಿಳೆಯರು ಸ್ಪರ್ಧಿಸಿದ್ದಾರೆ.ಮಾಯಕೊಂಡ ಕ್ಷೇತ್ರದಲ್ಲಿ (1978ರಿಂದ) ಒಟ್ಟು ಐವರು ಮಹಿಳೆಯರು ಹಾಗೂ ದಾವಣಗೆರೆ ಕ್ಷೇತ್ರದಲ್ಲಿಯೂ ಅಷ್ಟೇ ಸಂಖ್ಯೆಯ (2004ವರೆಗೆ) ಮಹಿಳೆಯರಷ್ಟೇ ಕಣಕ್ಕೆ ಇಳಿದಿದ್ದರು. ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ದಾವಣಗೆರೆ ಉತ್ತರ ಹಾಗೂ ದಕ್ಷಿಣ ಕ್ಷೇತ್ರದಲ್ಲಿ ತಲಾ ಒಬ್ಬ ಮಹಿಳೆಯರು ಸ್ಪರ್ಧಿಸಿದ್ದಾರೆ.ಇದುವರೆಗಿನ ಚುನಾವಣೆಗಳಲ್ಲಿ ಸ್ಪರ್ಧಿಸಿದ ಒಟ್ಟು 649 ಅಭ್ಯರ್ಥಿಗಳ ಪೈಕಿ ಕೇವಲ 18 ಮಹಿಳಾ ಸ್ಪರ್ಧಿಗಳಿದ್ದರು ಎಂಬುದು ಗಮನಾರ್ಹ ಸಂಗತಿ.ಈ ಬಾರಿಯ ಚುನಾವಣೆಯಲ್ಲಿ ಮಾಯಕೊಂಡ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಶೀಲಾ ನಾಯ್ಕ ಅವರ ಹೆಸರು ಮಾತ್ರ ಕೇಳಿ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT