‘ಧರ್ಮಗಳು ದಮನದ ಮಾಧ್ಯಮ’

7
‘ಸ್ವತಂತ್ರ ಲಿಂಗಾಯತ ಧರ್ಮ–ಸವಾಲುಗಳು’ ಸಂವಾದ ಗೋಷ್ಠಿ

‘ಧರ್ಮಗಳು ದಮನದ ಮಾಧ್ಯಮ’

Published:
Updated:

ಧಾರವಾಡ: ‘ಪ್ರಸ್ತುತ ಸಂದರ್ಭ‌ದಲ್ಲಿ ಧರ್ಮಗಳು ದಮನದ ಮಾಧ್ಯಮವಾಗಿವೆಯೇ ಹೊರತು ದಯವೇ ಧರ್ಮದ ಮೂಲವಾಗಿ ಉಳಿದಿಲ್ಲ’ ಎಂದು ಚಿಂತಕ ಡಾ.ಸಿದ್ಧನಗೌಡ ಪಾಟೀಲ ವಿಷಾದಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ವಿಚಾರವಾದಿಗಳ ವೇದಿಕೆ ಆಯೋಜಿಸಿದ್ದ ಸ್ವತಂತ್ರ ಲಿಂಗಾಯತ ಧರ್ಮ, ಸವಾಲುಗಳು ಕುರಿತ ಸಂವಾದಗೋಷ್ಠಿಯಲ್ಲಿ ಮಾತನಾಡಿದ ಅವರು, ‘12ನೇ ಶತಮಾನ ಸಂದರ್ಭದಲ್ಲಿ ಬಹುತೇಕ ಶರಣರು ಇಂಥ ಮೌಲ್ಯಗಳನ್ನು ವಚನಗಳ ಮೂಲಕ ಪ್ರತಿಪಾದಿಸಿದ್ದರು. ಜನರು ಕೂಡಾ ಅವುಗಳನ್ನು ಒಪ್ಪಿಕೊಂಡಿದ್ದರು. ಆದರೆ, ದೇವರು ಧರ್ಮದ ಮೂಲವಲ್ಲ. ದಯವೇ ಧರ್ಮದ ಮೂಲ ಎನ್ನುವುದು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮದ ನೆಲೆಗಟ್ಟಾಗಿತ್ತು’ ಎಂದರು.

‘ವೀರಶೈವ ಎನ್ನುವುದು ಒಂದು ಧರ್ಮವಲ್ಲ. ಅದೊಂದು ಕಠಿಣ ವ್ರತವಾಗಿತ್ತು. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿ, ಧರ್ಮಗಳು ಮತದಾನ ಮಾಡುತ್ತಿವೆಯೇ ಹೊರತು, ಮನುಷ್ಯರು ಮತದಾನ ಮಾಡುತ್ತಿಲ್ಲ. ಇಲ್ಲಿ ಎಲ್ಲವೂ ಜಾತಿಗಳ ಆಧಾರದಲ್ಲಿ ನಡೆಯುತ್ತಿವೆ. ಲಿಂಗಾಯತರು ಈ ವ್ಯವಸ್ಥೆಯ ಭಾಗವಾಗದೆ, ಎಲ್ಲರೂ ಒಂದೇ ಎಂಬ ನೆಲೆಗಟ್ಟಿನಲ್ಲಿ ಒಂದಾಗಿ ಜೀವಿಸಬೇಕಿದೆ’ ಎಂದರು. 

‘ಈಗಿರುವ ಎಲ್ಲಾ ಧರ್ಮಗಳು ಪ್ರಭುತ್ವದ ಪರವಾಗಿವೆ. ಇವನಾರವ, ಇವನಾರವ ಎನ್ನದೇ ಇವ ನಮ್ಮವ, ಇವ ನಮ್ಮವ ಎನ್ನುವ ತತ್ವ ಅಳವಡಿಸಿಕೊಳ್ಳಬೇಕು. ಪ್ರಭುತ್ವದ ಜತೆ ರಾಜಿಯಾಗದೆ ವಚನಕಾರರು ನೀಡಿರುವ ವಚನಗಳ ನೆಲೆಗಟ್ಟಿನಲ್ಲಿ ರೂಪಗೊಳ್ಳಬೇಕು’ ಎಂದರು.

‘ಪ್ರಭುತ್ವದ ಸುಲಿಗೆ ವಿರೋಧಿಸಿ, ಸಂಪತ್ತಿನ ವಿಕೇಂದ್ರೀಕರಣಕ್ಕಾಗಿ ಜನ್ಮತೆಳೆದ ಮೊಟ್ಟಮೊದಲ ಧರ್ಮ ಲಿಂಗಾಯತ. ಹೀಗಾಗಿ, ಎಲ್ಲಾ ಆಯಾಮಗಳಿಂದಲೂ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಘೋಷಿಸಲು ಯೋಗ್ಯವಾಗಿದೆ’ ಎಂದು ಅವರು ಹೇಳಿದರು.

ಲೇಖಕ ರಂಜಾನ್ ದರ್ಗಾ ಮಾತನಾಡಿ, ‘ಇಷ್ಟು ದಿನ ಲಿಂಗಾಯತ ಧರ್ಮದವರು ಆಲಸಿಗಳಾಗಿ ಜೀವಿಸಿದ್ದರು. ಇದೀಗ ಪ್ರತ್ಯೇಕ ಧರ್ಮದ ಬೇಡಿಕೆ ಇಟ್ಟಿದ್ದಾರೆ. ಇಂದಲ್ಲಾ, ನಾಳೆ ಸರ್ಕಾರ ಮಾನ್ಯತೆ ನೀಡಿಯೇ ನೀಡುತ್ತದೆ. ಆದರೆ, ಆಚರಣೆಗಳಿಂದ ಇವರು ಲಿಂಗಾಯತರಾಗುವುದು ಯಾವಾಗ’ ಎಂದು ಪ್ರಶ್ನಿಸಿದರು.

’ಧರ್ಮದ ಶೋಷಣೆ ಎನ್ನುವ ಕತ್ತಲೆಯಿಂದ ಹೊರಬರಲು ಲಿಂಗಾಯತ ಎನ್ನುವ ಬೆಳಕಿನ ಅಗತ್ಯವಿದೆ. ಬಸವಣ್ಣ ಹೇಳಿರುವಂತೆ ಎಲ್ಲರೂ ಒಂದು ಎನ್ನುವ ಮನೋಭಾವವವನ್ನು ಆಚಾರ–ವಿಚಾರಗಳಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಲಿಂಗಾಯತರು ನಿಜವಾದ ಲಿಂಗಾಯತರಾಗಲು ಸಾಧ್ಯ’ ಎಂದರು. ‌ವಿಕಾಸ ಸೊಪ್ಪಿನ, ಶಿವಣ್ಣ ಬೆಲ್ಲದ, ಪ್ರಕಾಶ ಉಡಿಕೇರಿ, ಬಸವರಾಜ ಸೂಳಿಭಾವಿ ಸಂವಾದಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry