ಮಂಗಳವಾರ, ಡಿಸೆಂಬರ್ 10, 2019
23 °C
ನರಗುಂದದಲ್ಲಿ ಮಹದಾಯಿ ಜಾರಿ ಆಗ್ರಹಿಸಿ 996ನೇ ದಿನಕ್ಕೆ ಕಾಲಿಟ್ಟ ಧರಣಿ

‘ರಾಜ್ಯ ಸರ್ಕಾರ ಸಮರ್ಪಕ ದಾಖಲೆ ಸಲ್ಲಿಸಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರಾಜ್ಯ ಸರ್ಕಾರ ಸಮರ್ಪಕ ದಾಖಲೆ ಸಲ್ಲಿಸಲಿ’

ನರಗುಂದ: ಆಗಸ್ಟ್‌ ಕೊನೆಗೆ ಮಹದಾಯಿ ನ್ಯಾಯಮಂಡಳಿ ತೀರ್ಪು ಪ್ರಕಟವಾಗುತ್ತದೆ ಆದ್ದರಿಂದ ಅದಕ್ಕೆ ಈಗ ಲಿಖಿತವಾಗಿ ದಾಖಲೆ ಕೊಡುವ ಅವಕಾಶ ಇದೆ. ಆದ್ದರಿಂದ ರಾಜ್ಯ ಸರ್ಕಾರ ನ್ಯಾಯಮಂಡಳಿಗೆ ಅವಶ್ಯಕವಾದ ದಾಖಲೆ ಸಲ್ಲಿಸಿ ನಮ್ಮ ಪರ ನ್ಯಾಯ ಪಡೆಯುವಲ್ಲಿ ಮುಂದಾಗಬೇಕೆಂದು ಮಹದಾಯಿ ಹೋರಾಟ ಸಮಿತಿ ಸದಸ್ಯ ಭರತಕುಮಾರ ಮೋರೆ ಹೇಳಿದರು.ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 996ನೇ ದಿನವಾದ ಶುಕ್ರವಾರ ಅವರು ಮಾತನಾಡಿದರು.

ರೈತರ ಬೇಡಿಕೆಗಳನ್ನು ಬಹಳ ಲಘುವಾಗಿ ಪರಿಗಣಿಸುತ್ತಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ರೈತರ ಏಳ್ಗೆ ಬೇಕಿಲ್ಲ. ಮಹದಾಯಿ ಬಗ್ಗೆ ರಾಜ್ಯ ಸರ್ಕಾರದಿಂದ ಗಂಭೀರ ಚಿಂತನೆ ನಡೆಯುತ್ತಿಲ್ಲ. ಇದನ್ನು ನಾವು ಸಹಿಸುವುದಿಲ್ಲ ಎಂದು ಅವರು ಖಾರವಾಗಿ ಎಚ್ಚರಿಸಿದರು.

ಮನವಿ ಸಲ್ಲಿಕೆಗೆ ನಮ್ಮ ಕಡೆಯಿಂದ ಅಗತ್ಯವಿರುವ ದಾಖಲೆಗಳ ಜೊತೆಗೆ ಅದರ ಸಮರ್ಥನೆಗೆ ಮುಂದಾಗಬೇಕು. ಅದರಲ್ಲೂ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ರೈತರ ಸಂಕಷ್ಟ ಪ್ರಸ್ತಾಪ ಅಗತ್ಯವಾಗಿದೆ, ನಮ್ಮ ಪಾಲಿನ ಹಕ್ಕನ್ನು ಪಡೆಯಲು ನಮ್ಮ ಪರ ವಕೀಲರು ಹೆಚ್ಚಿನ ಲಕ್ಷ್ಯ ವಹಿಸಬೇಕಿದೆ ಎಂದರು.

ಮೂರು ದಶಕಗಳಿಂದ ನಡೆದ ಪ್ರಯತ್ನಕ್ಕೆ ಈಗಲೂ ಸಂಧಾನ ಸಭೆ ನಡೆಸಲು ಮುಂದಾದರೆ ಈ ಭಾಗದ ರೈತರ ಒಳಿತು ಬಯಸಿದಂತಾಗುತ್ತದೆ. ಮೂರೂ ರಾಜ್ಯದ ಮುಖ್ಯಮಂತ್ರಿಗಳು ನಮ್ಮ ರೈತರ ಹಿತ ಕಾಯಬೇಕೆಂದು ಆಗ್ರಹಿಸಿದರು.

ಮಹದಾಯಿ ಹೋರಾಟ ಸಮಿತಿ ಸದಸ್ಯ ಚನ್ನಪ್ಪಗೌಡ ಪಾಟೀಲ ಮಾತನಾಡಿ ವಿಧಾನಸಭೆ ಚುನಾವಣೆ ಗುಂಗಿನಲ್ಲಿ ರೈತರು ಬೀಳದೇ ಕೇವಲ ರಾಜಕೀಯಕ್ಕಾಗಿ ಮಹದಾಯಿ ಬಳಸುವ ಅಭ್ಯರ್ಥಿ ವಿರುದ್ಧ ಹೋರಾಟ ಮಾಡಬೇಕೆಂದು ಸಲಹೆ ಮಾಡಿದರು.

ಧರಣಿಯಲ್ಲಿ ಈರಣ್ಣ ಗಡಗಿಶೆಟ್ಟರ, ಸಿದ್ದಪ್ಪ ಇ.ಬಿ., ಎಸ್‌.ಬಿ.ಜೋಗಣ್ಣವರ ಹಾಗೂ ಹೋರಾಟ ಸಮಿತಿ ಸದಸ್ಯರು ಇದ್ದರು.

ಪ್ರತಿಕ್ರಿಯಿಸಿ (+)