15ರ ಮೊದಲು ಅಭ್ಯರ್ಥಿಗಳ ಘೋಷಣೆ

7
ಕಾರವಾರ: ಕಾಂಗ್ರೆಸ್‌ನ ಪ್ರಮುಖ ಕಾರ್ಯಕರ್ತರ ಜತೆ ಚರ್ಚಿಸಿದ ದೇಶಪಾಂಡೆ

15ರ ಮೊದಲು ಅಭ್ಯರ್ಥಿಗಳ ಘೋಷಣೆ

Published:
Updated:

ಕಾರವಾರ: ‘ಕಾಂಗ್ರೆಸ್ ಟಿಕೆಟ್ ಪರಾಮರ್ಶೆ ಸಮಿತಿ ಸಭೆಯು ಇದೇ 9 ಮತ್ತು 10ರಂದು ದೆಹಲಿಯಲ್ಲಿ ನಿಗದಿಯಾಗಿದೆ. 12 ಹಾಗೂ 13ರಂದು ಚುನಾವಣಾ ಸಮಿತಿ ಸಭೆ ನಡೆಯಲಿದೆ. ಇದರಲ್ಲಿ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಲಿದೆ. ಎಲ್ಲ 224 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಏ.15ರ ಮೊದಲು ಏಕಕಾಲಕ್ಕೆ ಬಿಡುಗಡೆಯಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ನಗರ ಸಮೀಪದ ಸದಾಶಿವಗಡ ಜಂಗಲ್‌ರೆಸಾರ್ಟ್‌ನಲ್ಲಿ ಶುಕ್ರವಾರ ಕಾರ್ಯಕರ್ತರ ಜತೆ ಚರ್ಚಿಸಲು ಬಂದಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು.ಕಳೆದ ಬಾರಿ ಆಯ್ಕೆಯಾದ ಎಲ್ಲರಿಗೂ ಟಿಕೆಟ್ ನೀಡಲಾಗುತ್ತದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ‘ನಮ್ಮ ಜಿಲ್ಲೆಯಲ್ಲಿ ಹೆಚ್ಚು ಬದಲಾವಣೆಗೆ ಅವಕಾಶವಿಲ್ಲ’ ಎಂದು ಚುಟುಕಾಗಿ ಉತ್ತರಿಸಿದರು.

ಕೆಲವು ಕ್ಷೇತ್ರಗಳಲ್ಲಿ ಇಬ್ಬರು, ಮೂವರು ಆಕಾಂಕ್ಷಿಗಳು ಇದ್ದಾರಲ್ಲ ಎಂದು ಕೇಳಿದಾಗ, ‘ಅದರಲ್ಲಿ ತಪ್ಪೇನಿದೆ? ಪಕ್ಷದ ಶಕ್ತಿ ಉತ್ತಮವಾಗಿದ್ದಾಗ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುವುದು ಸಹಜ. ಎಲ್ಲರ ಜತೆ ಹೊಂದಾಣಿಕೆ ಮಾಡಿ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ’ ಎಂದು ಹೇಳಿದರು.

ಬೇರೆ ಪಕ್ಷಗಳಿಗಿಂತ ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಹಿಂದೆ ಉಳಿದಿದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದರು. ಅದಕ್ಕೆ, ‘ಹಾಗೇನಿಲ್ಲ. ಪ್ರದೇಶ ಕಾಂಗ್ರೆಸ್‌ ಚುನಾವಣಾ ಪರಿಶೀಲನಾ ಸಮಿತಿ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರ ನೇತೃತ್ವದಲ್ಲಿ ಎರಡು ಸಭೆಗಳಾಗಿವೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರೂ ಕಾರ್ಯಕರ್ತರ ಜತೆ ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ರಾಜ್ಯದ ವಿವಿಧ ಭಾಗಗಳಿಗೆ ಕರೆದುಕೊಂಡು ಬಂದಿದ್ದಾರೆ. ನಮ್ಮ ಜಿಲ್ಲೆಗೂ ಭೇಟಿ ನೀಡುವಂತೆ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದೇವೆ. ಕೆಪಿಸಿಸಿ ಚುನಾವಣಾ ಪ್ರಣಾಳಿಕೆ‌ ಸಮಿತಿ ಅಧ್ಯಕ್ಷ ವೀರಪ್ಪ ಮೊಯಿಲಿ ಅವರ ಅಧ್ಯಕ್ಷತೆಯ ಸಮಿತಿ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಿದೆ’ ಎಂದು ಸ್ಪಷ್ಟಪಡಿಸಿದರು.

ಶಾಸಕ ಸತೀಶ್ ಸೈಲ್, ವಿಧಾನಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ, ಮುಖಂಡರಾದ ಭೀಮಣ್ಣ ನಾಯ್ಕ, ಶಂಭುಶೆಟ್ಟಿ, ಗಣಪತಿ ಮಾಂಗ್ರೆ, ರವೀಂದ್ರ ಅಮದಳ್ಳಿ ಅವರೂ ಇದ್ದರು.

‘ಯಾವುದೇ ಗೊಂದಲವಿಲ್ಲ’

‘ಶಿರಸಿ ಕ್ಷೇತ್ರದ ಟಿಕೆಟ್‌ ಹಂಚಿಕೆ ಬಗ್ಗೆ ಯಾವುದೇ ಗೊಂದಲವಿಲ್ಲ. ಭೀಮಣ್ಣ ನಾಯ್ಕ ಜಿಲ್ಲಾ ಘಟಕದ ಅಧ್ಯಕ್ಷರು, ಪಕ್ಷವನ್ನು ಅವರು ಉತ್ತಮ ರೀತಿಯಲ್ಲಿ ಸಂಘಟಿಸಿದ್ದಾರೆ. ಮತ್ತೊಬ್ಬ ಆಕಾಂಕ್ಷಿ ನಿವೇದಿತ್ ಆಳ್ವ ಯುವಕ ಹಾಗೂ ಉತ್ತಮ ಕಾರ್ಯಕರ್ತ. ಅವರು ಟಿಕೆಟ್ ಬಯಸುವುದರಲ್ಲಿ ತಪ್ಪೇನಿದೆ?. ಭೀಮಣ್ಣ ನಾಯ್ಕ ಅವರಿಗೆ ಟಿಕೆಟ್ ಕೊಡಬೇಕು ಎಂದು ಕಳೆದ ಬಾರಿ ನಾನು ಹೇಳಿದ್ದೆ. ಆದರೆ, ಹೈಕಮಾಂಡ್ ಬೇರೆಯೇ ತೀರ್ಮಾನ ತೆಗೆದುಕೊಂಡಿತು. ಯಾರಿಗೆ ಟಿಕೆಟ್ ಕೊಡಬೇಕು ಎಂಬುದು ಹೈಕಮಾಂಡ್‌ಗೆ ಬಿಟ್ಟ ವಿಚಾರ’ ಎಂದು ದೇಶಪಾಂಡೆ ಹೇಳಿದರು.

**

ಮಾರ್ಗರೆಟ್ ಆಳ್ವ ಮತ್ತು ನನ್ನ ನಡುವೆ ವೈಮನಸ್ಸು ಎಲ್ಲಿತ್ತು? ನಾನು ಎಂದಾದರೂ ಯಾರ ವಿರುದ್ಧವಾದರೂ ತಪ್ಪಾಗಿ ಮಾತನಾಡಿದ್ದಕ್ಕೆ ಸಾಕ್ಷಿ ತೋರಿಸಿ. ಇಂತಹ ಊಹಾಪೋಹಗಳು ಸರಿಯಲ್ಲ – ಆರ್.ವಿ.ದೇಶಪಾಂಡೆ,ಜಿಲ್ಲಾ ಉಸ್ತುವಾರಿ ಸಚಿವ.

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry