ಶುಕ್ರವಾರ, ಡಿಸೆಂಬರ್ 6, 2019
25 °C

ಹೊಸ ಬಟ್ಟೆಗಳ ಹಸಿ ವಾಸನೆ

Published:
Updated:
ಹೊಸ ಬಟ್ಟೆಗಳ ಹಸಿ ವಾಸನೆ

ಬೇರು ಸತ್ತೀ ಮರವನ್ನೆತ್ತಿ ನಿಲ್ಲಿಸು ಮಗೂ,

ಕೊಂಬೆರೆಂಬೆಗಳಿರಲಿ ಇದ್ದ ಹಾಗೆ;

ಒಣಗಿದೆಲೆಗಳ ತಂದು ಕಾಫಿಯ ಕಾಯಿಸು, ಕುಡಿ

ತುಂಬಿ ಬರುತಿರೆ ಕಂಠ ಕಳಲ ಬೇಗೆ

                -ಎಂ. ಗೋಪಾಲಕೃಷ್ಣ ಅಡಿಗ

 

ಇ- ಗಾರ್ಡನ್ ಅಪಾರ್ಟ್‌ಮೆಂಟ್‌ನ ಆರನೇ ಮಹಡಿಯ ಮೂವತ್ತಾರನೇ ಸಂಖ್ಯೆಯ ಫ್ಲ್ಯಾಟ್‌ನ ವಿಶಾಲ ಹಾಲ್‌ನಲ್ಲಿ ನಿಗೂಢವಾಗಿ ಸಾವು ಕಂಡ ತಿಲಾಂಜಲಿಯಮ್ಮ ಎಂಬ ಎಂಬತ್ತೊಂದರ ಹರೆಯದ ವೃದ್ಧೆಯ ಸಾವಿನ ಬಗ್ಗೆ ಹತ್ತಾರು ನಿಮಿಷಗಳವರೆಗೆ ಚಾನೆಲ್‌ಗಳು ಬ್ರೇಕಿಂಗ್ ನ್ಯೂಸ್ ಬಿತ್ತರಿಸಿದ್ದವು.  ಕಮೋಡ್ ಮೇಲೆ ಬಿದ್ದಿದ್ದ ಆಕೆಯ ಹೊಸ ನೈಟಿ, ಸಾಯುವ ಮುಂಚೆ ಆಕೆ ಉಟ್ಟಿದ್ದ ಅಸ್ತವ್ಯಸ್ತಗೊಂಡಿದ್ದ ಸೀರೆ ಮತ್ತಿತರೆ ಸಾಕ್ಷಿಗಳ ಕುರಿತು ಪೊಲೀಸರು ಒಂದೆರಡು ದಿನ ತೀವ್ರ ತಲೆಕೆಡಿಸಿಕೊಂಡಿದ್ದರು. ಆನಂತರ ಎಲ್ಲವೂ ಮೊದಲಿನಂತೆಯೇ ಚಾಲೂಗೊಂಡವು. ಚಾನೆಲ್‌ಗಳೂ ತಮ್ಮ ಕ್ಯಾಮೆರಾ ಕೋನಗಳನ್ನು ಬದಲಾಯಿಸಿದವು.

***

ಸಿಲ್ಕ್ ಸ್ಯಾರಿಯ ಒನ್‌ಲೈನ್ ಸ್ಟೋರಿ

ತನ್ನ ಗಂಡ ಐವತ್ತು ವರ್ಷಗಳಿಂದಲೂ ಉಳಿಸಿಹೋಗಿದ್ದ ಊರಿನ ನಾಲ್ಕು ಎಕರೆ ತೋಟ, ಹದಿನಾರು ಕಂಬಗಳ, ವಿಶಾಲ ಮಧ್ಯತೊಟ್ಟಿಯ ಮನೆಯಲ್ಲಿ ತನ್ನ ಪಾಡಿಗೆ ತಾನು ಕಾಲೆಳೆದುಕೊಂಡು ಅಡ್ಡಾಡಿಕೊಂಡಿದ್ದಳು ತಿಲಾಂಜಲಿಯಮ್ಮ. ದೇವಿ ಉತ್ಸವಕ್ಕೆಂದು ಬಂದ ಮಗ ಚಂದ್ರವದನ, ಸೊಸೆ ಪದ್ಮವಲ್ಲಿ ಆಗಾಗ್ಗೆ ಹಿಂಜರಿಯುತ್ತ, ಒಮ್ಮೊಮ್ಮೆ ಅಧಿಕಾರಯುತವಾಗಿ ಎಲ್ಲವನ್ನೂ ಮಾರಿಬಿಡೋಣ ಎಂದು ಹೇಳತೊಡಗಿದಾಗ ತಿಲಾಂಜಲಿಯಮ್ಮ ಇಬ್ಬರತ್ತಲೂ ನಿರ್ಲಿಪ್ತ ನೋಟ ಬೀರಿದ್ದಳು. ತನಗೂ ಊರ ಒಂಟಿಬಾಳು ಒಮ್ಮೊಮ್ಮೆ ನಿರಾಶೆಗೆ ದೂಡುವುದನ್ನು ನೆನಪಿಸಿಕೊಂಡು ಮಗ, ಸೊಸೆ, ಮೊಮ್ಮಕ್ಕಳೊಂದಿಗೆ ಕೊನೆಗಾಲದವರೆಗೆ ನಿರಾಳವಾಗಿ ಇದ್ದುಬಿಡಬೇಕೆಂದುಕೊಳ್ಳುತ್ತಿದ್ದಳು. ಆದರೂ ಗಂಡ ತನ್ನ ಕಡೆಯ ದಿನಗಳಲ್ಲೂ ಹೊಸ ಹೊಸ ತೆಂಗಿನ ಸಸಿಗಳಿಗೆ ನೀರುಣಿಸುತ್ತಲೇ ಇದ್ದುದನ್ನು ನೆನೆದು ‘ನನ್ನ ಜೀವ ಈ ಮರಗಳ ಉಸಿರುಗಳೊಂದಿಗೇ ಲೀನವಾಗಲಿ’ ಎಂಬ ಬಯಕೆ ಒಳಗೊಳಗೇ ಸುಳಿದಾಡುತ್ತಿತ್ತು.

ಪ್ರತಿವರ್ಷದ ದೇವಿ ಉತ್ಸವಕ್ಕೆ ಬರುವುದನ್ನು ಐದಾರು ವರ್ಷಗಳ ಹಿಂದೆಯೇ ನಿಲ್ಲಿಸಿಬಿಟ್ಟಿದ್ದ ಸೊಸೆ, ಮಗ ಆ ಬಾರಿ ಬಂದಿದ್ದು ಕಂಡು ತಿಲಾಂಜಲಿಯಮ್ಮನ ಕಣ್ಣಾಲಿಗಳು ತುಂಬಿಬಂದಿದ್ದವು; ಪದ್ಮವಲ್ಲಿ ಕೈಗಿತ್ತ ಭಾರದ ರೇಷ್ಮೆ ಸೀರೆಯ ನುಣುಪನ್ನು ಸುಮ್ಮನೆ ನೇವರಿಸುತ್ತಾ ನಿಂತುಬಿಟ್ಟಿದ್ದಳು; ಅವರು ತೀರಿಕೊಳ್ಳುವ ಕೊನೆಯ ದಿನಗಳಲ್ಲಿ ಅಂತಹದ್ದೊಂದು ಸೀರೆ ನಿಂಗೆ ತಂದ್ಕೊಡಬೇಕು ಕಣೆ ತಿಲಿ ಎಂದು ಆಗಾಗ್ಗೆ ಕನವರಿಸುತ್ತಿದ್ದುದು ನೆನಪಾಗಿತ್ತು.

ಅಮ್ಮಾ ನಂಗೂ ಸಾಕಾಗಿದೆ... ಮನೆ, ತೋಟ ಮಾರಿದ್ರೆ ಅಲ್ಲಿ ಇದಕ್ಕಿಂತಲೂ ಒಳ್ಳೆ ಮನೆ ತಕ್ಕೋಬೋದು...ನೀನೊಬ್ಬಳೇ ಇಲ್ಲಿ ಏನ್ಮಾಡ್ತೀ? ದಿಢೀರನೇ ನೀನು ಕಾಯಿಲೆ ಬಿದ್ದರೆ ತಕ್ಷಣ ನೋಡೋರು ಯಾರು? ಅಪ್ಪ ಹೋದಾಗಲೇ ಇಲ್ಲಿನ ಋಣ ನೀಗಿತು ಅಂದ್ಕೊಂಡು ಎಲ್ಲವನ್ನೂ ತೀರಿಸಿ ಹೊರಟುಬಿಡೋಣ... ನೀನು ಹೂಂ ಅಂದ್ರೆ ಮಾತ್ರ... ಎನ್ನುತ್ತ ಚಂದ್ರವದನ ಉಗುಳು ನುಂಗಿ ಹೆಂಡತಿಯತ್ತ ನೋಡಿದ. ಅವನ ಚಡಪಡಿಕೆಯನ್ನು ಸಹಿಸದವಳಂತೆ ನಂಗೇನೋ ಮಗು ನೀವು ಚೆನ್ನಾಗಿರಬೇಕಷ್ಟೆ... ಬಾಳಿ ಬದುಕಬೇಕಾದೋರು... ಎಂದು ತಿಲಾಂಜಲಿಯಮ್ಮ ಅದೇ ಪೇಲವ ನಗೆ ತೋರಿದ್ದಳು.

ಎಲ್ಲವನ್ನೂ ಮುಂಚಿತವಾಗಿಯೇ ಯೋಜಿಸಿಕೊಂಡವರಂತೆ ಬಂದಿದ್ದ ಮಗ-ಸೊಸೆ ಉತ್ಸವದೊಂದಿಗೆ ತೋಟ, ಮನೆಯ ಮಾರಾಟ ಎಲ್ಲವನ್ನೂ ಮುಗಿಸಿ ಕೈತೊಳೆದುಕೊಂಡು ಮೊಮ್ಮಕ್ಕಳೊಂದಿಗೆ ಆಡಿಕೊಂಡಿರುವಂತೆ ಬಾ ಎಂದು ತುದಿಗಾಲಲ್ಲೇ ಹೊರಟುನಿಂತಿದ್ದರು. ತೋಟದ, ಮನೆಯ ದಾರಿಗಳು ಕಣ್ಣಮುಂದೆ ಮಸುಕುಮಸುಕಾಗಿ ಕಾಣಿಸಿಕೊಂಡು, ಕಣ್ಣುಗಳು ತುಂಬಿಬಂದು ಹನಿಗಳು ನಿಧಾನವಾಗಿ ಸೆರಗು ತೋಯಿಸಿದವು. ನಿರ್ವಾಹವಿಲ್ಲದೆ ಹಿಂಬಾಲಿಸಿದವಳ ಕಣ್ಣ ಪಟಲದಲ್ಲಿ ಮೊಮ್ಮಕ್ಕಳಿಬ್ಬರ ನಿರ್ಮಲ ನಗು ತುಂಬಿಕೊಂಡಿತ್ತು...

ಅಪಾರ್ಟ್‌ಮೆಂಟ್ ಗೇಟ್ ಒಳಹೊಕ್ಕುತ್ತಲೇ ತಲೆ ಎತ್ತಿ ನೋಡಿ ನಡುಗಿದ ತಿಲಾಂಜಲಿಯಮ್ಮ ‘ಇದೇನೋ ಕಂದ ಆಸ್ಪತ್ರೆನಾ?’ ಎಂದು ಮಗನ ತೋಳು ಅಲ್ಲಾಡಿಸಿ ಕೇಳಿದ್ದಳು.

ಅಜ್ಜಿಯ ಮಾತಿಗೆ ಮೊಮ್ಮಕ್ಕಳಿಬ್ಬರೂ ಖಿಲ್ಲನೆ ನಕ್ಕು ಚಪ್ಪಾಳೆ ತಟ್ಟುತ್ತಾ ‘ಅಜ್ಜಿ, ಇದು ನಮ್ಮ ಫ್ಲ್ಯಾಟ್’ ಎಂದವರೇ ಆಕೆಯ ಕೈ ಹಿಡಿದು ಎಳೆದೊಯ್ಯುತ್ತಾ ನಾನು ಮೊದಲು... ನಾನು ಫಸ್ಟ್ ಎನ್ನುತ್ತಾ ಲಿಫ್ಟ್ ಗುಂಡಿ ಒತ್ತಲು ಪೈಪೋಟಿಗೆ ಬಿದ್ದರು. ಅಜ್ಜಿಯ ಕೈಹಿಡಿದುಕೊಂಡಿದ್ದ ಮೊಮ್ಮಗ ಅವಳ ಕೈಯತುಂಬ ಹಬ್ಬಿಕೊಂಡಿದ್ದ ನರಗಳನ್ನೇ ಕುತೂಹಲದಿಂದ ನೋಡುತ್ತಿದ್ದ. ಹೆಬ್ಬೆರಳು, ತೋರುಬೆರಳ ನಡುವೆ ಅಸ್ಪಷ್ಟವಾಗಿ, ಹಸಿರಾಗಿ ಕಾಣುತ್ತಿದ್ದ ಹಳೆಯ ಹಚ್ಚೆಯನ್ನು ನೇವರಿಸುತ್ತಾ ‘ಅಜ್ಜೀ...ನೀನೂ ಟ್ಯಾಟೂ ಹಾಕಿಸ್ಕೊಂಡಿದ್ದಾ?‘ ಎಂದ. ತಿಲಾಂಜಲಿಯಮ್ಮ ಸುಮ್ಮನೆ ಅವನ ತಲೆ ನೇವರಿಸಿದಳು.

ಲಿಫ್ಟ್ ಮೇಲೇರುತ್ತಿದ್ದಂತೆಯೇ ತಾನು ಬಾಲ್ಯದಲ್ಲೊಮ್ಮೆ ಬಾವಿಗೆ ಬಿದ್ದು ನೀರು ಕುಡಿದು ಉಸಿರುಕಟ್ಟಿದ್ದಾಗ ಊರವರೆಲ್ಲ ಸೇರಿ ತೊಟ್ಟಿಲು ಕೆಳಗಿಳಿಸಿ ಮೇಲೆತ್ತಿದ್ದು ನೆನಪಾಯಿತು. ಎಂತಹುದೋ ವಿಚಿತ್ರವಾದ ಭಯ, ಪುಳಕ ಮೈತುಂಬಿಕೊಂಡಿದೆ ಎನ್ನಿಸಿತು ತಿಲಾಂಜಲಿಯಮ್ಮನಿಗೆ. ಹವಾನುಕೂಲ ಥಂಡಿ ತನ್ನ ಮುದಿಮೈಯನ್ನೆಲ್ಲ ಆವರಿಸಿದ್ದು ಬೇರೆಯದೇ ಜಗತ್ತಿನ ತೊಟ್ಟಿಲಿಗೆ ತನ್ನನ್ನು ಎತ್ತಿ ಒಗೆದಂತಾಗಿತ್ತು.

‘ಅತ್ತೆ ನೀವೇನೂ ಯೋಚ್ನೆ ಮಾಡ್ಬೇಡಿ... ಇಲ್ಲಿ ನಿಮ್ಮಿಷ್ಟ ಬಂದ ಹಾಗೆ ಇರಬಹುದು... ಬೆಳಿಗ್ಗೆ ತಿಂಡಿ, ಊಟದ ವ್ಯವಸ್ಥೆಯನ್ನೆಲ್ಲ ಕೆಲಸದವಳು ನೋಡಿಕೊಳ್ತಾಳೆ... ನಿಮಗೆ ಬೇಜಾರಾದ್ರೆ ನೀವೆ ಅಡ್ಗೆ ಮಾಡ್ಕೊಳ್ಳಿ... ಎಲ್ಲ ಇದೆ’ ಎಂದು ಇದ್ದ ಹತ್ತು-ಹದಿನೈದು ನಿಮಿಷಗಳ ಬಿಡುವಿನಲ್ಲಿ ಅಡುಗೆ ಮನೆಯ ಪರಿಕರಗಳನ್ನೆಲ್ಲ ಪರಿಚಯಿಸಿದ ಪದ್ಮವಲ್ಲಿ ಹೆಲ್ಮೆಟ್, ಲಂಚ್ ಬಾಕ್ಸ್, ಬ್ಯಾಗ್ ಎಲ್ಲವನ್ನೂ ಒಂದೇ ಹಿಡಿಯಲ್ಲಿ ಹಿಡಿದುಕೊಂಡವಳಂತೆ ಹೊರಟುಬಿಟ್ಟಿದ್ದಳು.

***

ಬೆಳಗಾಗೆದ್ದರೆ ಇಷ್ಟೊಂದು ಹಗಲೆ ಎಂದು ಕಣ್ಣು ಇರಿಯುವಷ್ಟು ಬೆಳಕು. ನೆಲ, ಗೋಡೆಗಳೆಲ್ಲ ತೊಳೆದು ಒರೆಸಿದ ಕನ್ನಡಿಗಳಂತೆ ಥಳಥಳಿಸುತ್ತವೆ. ಫ್ರಿಜ್, ಫ್ಯಾನ್‌ಗಳ ಗುರುಗುಡುವ ಸಣ್ಣಗಿನ ಸದ್ದು... ರಾತ್ರಿಯೆಲ್ಲ ಕನವರಿಕೆಗಳಲ್ಲೇ ಕಳೆದು ಮುಂಜಾವಿನ ಮಂಪರಲ್ಲಿದ್ದಾಗಲೇ ‘ಅಮ್ಮ ನಾನು ಆಫೀಸ್‌ಗೆ ಹೊರಡ್ತೀನಿ’ ಅಂತ ಮಗನೂ ‘ಅತ್ತೆ, ಮನೆ ಡೋರ್ ಹುಷಾರು ನಾನೂ ಹೋಗ್ತಾ ಇದೀನಿ’ ಎಂದು ಸೊಸೆಯೂ ಕಿವಿಯ ಬಳಿ ಜೋರಾಗಿಯೇ ಹೇಳಿ ಹೋದರೆಂದು ನೆನಪು... ಪ್ರತಿ ಮುಂಜಾವಿನಲ್ಲೂ ಅದೇ ಧ್ವನಿಗಳು ಕಿವಿಗಳಲ್ಲಿ ಮರುದನಿಸಿದಂತಾಗುತ್ತದೆ. ಕನಸಿನಲ್ಲೆಂಬಂತೆ ಬೆಚ್ಚಿ ಎದ್ದು ಕುಳಿತರೆ ಹಾಲ್‌ನ ದೊಡ್ಡ ಗೋಡೆಯನ್ನು ಅರ್ಧ ಆವರಿಸಿಕೊಂಡ ಎಲ್‌.ಇ.ಡಿ ಟೀವಿ... ‘ಅರೆ ನನ್ನ ಮೊಮ್ಮಕ್ಕಳು ನಂಗೆ ಹೇಳಿ ಹೋಗಲಿಲ್ವೆ’ ಎಂದು ನೆನಪು ಮಾಡಿಕೊಂಡರೆ ಅವರ ಧ್ವನಿಗಳನ್ನು ಆಲಿಸಿದೆನೋ ಇಲ್ಲವೋ ಎನ್ನುವ ಅನುಮಾನ ಸುಳಿದು ಕರುಳು ಎಂತಹುದೊ ಸಂಕಟದ ನುಲಿತಕ್ಕೆ ಸಿಲುಕಿದೆ ಎನ್ನಿಸಿದ ಅನುಭವ.

***

ಹತ್ತಿ ಉಡುಗೆ ತೊಟ್ಟಲ್ಲದೆ...

‘ಸ್ವಲ್ಪ ಬೇಗ ಬರಬಾರದೇನೇ ಲಕ್ಷ್ಮೀ ನಂಗೂ ಇಲ್ಲಿ ಬೇಜಾರು’ ಅಂದರೆ, ‘ಅಮ್ಮಾ ನಾ ಏನ್ ಮಾಡ್ಲಿ ಮೂರ‍್ನಾಲ್ಕು ಮನೆಗಳ ಕೆಲ್ಸ ಮುಗ್ಸೋದು ಬೇಡ್ವಾ’ ಎಂದು ಕೆಲಸದವಳು ತನ್ನ ಅವ್ವನ ಕಾಯಿಲೆ ಕಥೆ ಹೇಳುತ್ತಲೇ ಕೆಲಸ ಮುಗಿಸುತ್ತಾಳೆ.

‘ಲೇ ನಿಮ್ಮಮ್ಮನಿಗೊಂದು ನನ್ನ ಹೊಸ ಸೀರೆ ಕೊಡ್ತೇನೆ...ಕರ‍್ಕೊಂಡು ಬಾರೆ’

‘ಅಮ್ಮ ನಿಮ್ಮ ಸೊಸೆಅವ್ರು ಏನಾರು ಅಂತಾರೆ...ಕೊಡಂಗಿದ್ರೆ ಕವರ್‌ಗೆ ಹಾಕಿ ಕೊಡಿ ತಗೊಂಡೋಯ್ತಿನಿ... ನಮ್ಮ ಅವ್ವಂಗೆ ಓಡಾಡೋಕೆ ಆಗಲ್ಲ ಕಣವ್ವಾ...’

‘ನಿಂಗೆ ಗೊತ್ತಾಗಲ್ಲ ಕಣೆ ಲಕ್ಷ್ಮಿ ವಯಸ್ಸಾದವರ ಕಷ್ಟ...ನಿಮ್ಮಮ್ಮನ್ನ ಬೇಕಾದ್ರೆ ಕೇಳು’ ಎನ್ನುತ್ತಾಳೆ.

‘ಒಟ್ಟಿಗೇ ತಿಂಡಿ ತಿನ್ನೋಣ ಇರೇ’ ಅಂದರೆ ‘ಬಾಕ್ಸ್ ತಂದಿದೀನಿ ಅಲ್ಲಿಗೇ ಹಾಕ್ಕೊಡಿಯಮ್ಮ ಮಕ್ಕಳಿಗೆ ಆಯ್ತದೆ’ ಎಂದು ತನ್ನೆಲ್ಲ ಸಾಮಾನುಗಳನ್ನೂ ಹಿಡಿದು ಸರಸರನೆ ಹೊರಟುಬಿಡುತ್ತಾಳೆ; ಅವಳಿಗೆ ದಿನವೂ ಎಲ್ಲರ ಮನೆಗಳಲ್ಲಿ ಸಿಗುವ ಊಟ ತಿಂಡಿಯೂ ಒಂದೇ, ತಿಲಾಂಜಲಿಯಮ್ಮ ಕೊಟ್ಟ ಹೊಸ ಹತ್ತಿ ಸೀರೆಯೂ ಒಂದೇ ಎಂಬಂತೆ...

ಅಂದು ಸೊಸೆ ಒತ್ತಾಯಿಸುತ್ತಲೇ ಇದ್ದಳು... ‘ಅತ್ತೆ ಆವತ್ತು ನಾವು ತಂದ್ಕೊಟ್ಟ ರೇಷ್ಮೆ ಸೀರೆ ಉಟ್ಕೋಬಾರದಾ? ಇವತ್ತು ಮನೆಗೆ ಗೆಸ್ಟ್ ಬರ‍್ತಾರೆ... ನೀವು ಲಕ್ಷಣವಾಗಿ ಕಾಣೋದು ಬೇಡ್ವಾ...’ ಎಂದು ತಲೆ ನೇವರಿಸಿದಾಗ ಯಾಕೋ ಅವಳ ಮೇಲೆ ಇನ್ನಿಲ್ಲದಷ್ಟು ಅಕ್ಕರೆ ಉಕ್ಕಿದಂತಾಗಿತ್ತು. ಬಂದ ಅತಿಥಿಗಳೆಲ್ಲ ಗಲಗಲನೆ ಮಾತಾಡುತ್ತಾ, ಪಿಂಗಾಣಿ ತಟ್ಟೆಗಳು, ಚಮಚಗಳ ಸದ್ದಿನಲ್ಲಿ ಸಾವಕಾಶವಾಗಿ ಊಟ ಮುಗಿಸಿ ಒಬ್ಬೊಬ್ಬರಾಗಿ ವಿದಾಯ ಹೇಳುತ್ತಾ ಹೊರಟುಹೋಗುವವರೆಗೆ ಉಟ್ಟ ಸೀರೆ ಹೆಣಭಾರದಂತೆ ಭಾಸವಾಗಿ ತಾನು ಸೀರೆ ಹೊತ್ತಿದ್ದೇನೆಯೋ ಸೀರೆ ನನ್ನ ಹೊತ್ತಿದೆಯೋ ಎಂದೆನ್ನಿಸಿ ಸಿಕ್ಕ ಜಾಗದಲ್ಲೇ ಮಲಗಿಬಿಡಬೇಕೆನ್ನುವಷ್ಟು ಸುಸ್ತು ಆವರಿಸಿತ್ತು.

***

ಕುತ್ತಿಗೆಗೆ ಬಿಗಿದ ಟೈ

...ನನಗೆ ಸೂಟ್ ಹಾಕಿ ಟೈ ಬಿಗಿಯೋದು ಅಂದರೆ ಇವಳಿಗೂ ಯಾವಾಗಲೂ ಇಷ್ಟ. ‘ಎಷ್ಟು ಸ್ಮಾರ್ಟ್ ಗೊತ್ತಾ ನೀನು’ ಎಂದು ಕೆನ್ನೆ ಹಿಂಡುತ್ತಾಳೆ. ನನಗೆ ಉಸಿರುಗಟ್ಟುತ್ತಿದೆ ಎನ್ನಿಸಿದರೂ ಅವಳ ನವಿರು ಕೆನ್ನೆಯ ನುಣುಪು, ಕೊರಳು ತಿರುಗಿಸುವ ಅವಳ ಪರಿ ಕಂಡು ನಕ್ಕು ಸುಮ್ಮನಾಗುತ್ತೇನೆ.

  ಹಾಗೆ ನಕ್ಕಾಗಲೆಲ್ಲ ಅಂದು ಅಮ್ಮನ ಕಣ್ಣುಗಳಲ್ಲಿದ್ದ ನಿರ್ಲಿಪ್ತ ಭಾವ ಕಣ್ಣ ಮುಂದೆ ತೇಲಿಬಂದಂತಾಗಿ ಎಂತಹುದೋ ಮಡುಗಟ್ಟಿದ ದುಃಖ ಒಳಗೆ ದ್ರವಿಸುತ್ತಿರುವಂತೆ ಅನ್ನಿಸಿ ಇಬ್ಬರನ್ನೂ ಯಾವ ತಕ್ಕಡಿಯಲ್ಲಿಟ್ಟು ತೂಗಬೇಕೆನ್ನಿಸುವುದು ಗೊತ್ತಾಗದೆ ಸುಮ್ಮನೇ ಆಫೀಸಿನ ಕಂಪ್ಯೂಟರ್‌ಗೆ ಕಣ್ಣು ಕೀಲಿಸಿ ಕುಳಿತುಬಿಡುತ್ತೇನೆ. ಪದ್ಮವಲ್ಲಿಯನ್ನು ಕಂಡಾಗಲಿಂದಲೂ ಅವಳ ಗುಣಗಳನ್ನು ಬಲ್ಲೆ... ಅವಳೊಂದಿಗಿನ ಹತ್ತಾರು ವರ್ಷಗಳ ಸಹಬದುಕಿನ ಯಾವ ತಿರುವಿನಲ್ಲಿ ಅವಳ ಹೀಗೆ ಮನಸ್ಸು ಹೊರಳಿಕೊಂಡು, ಗುರಿಯೇ ಇಲ್ಲದಂತೆ ಯಾವುದೋ ದಿಕ್ಕಿನಲ್ಲಿ ನುಗ್ಗುತ್ತಿದೆ ಎಂಬುದು ಗೊತ್ತಾಗದೆ ಕಂಗಾಲಾಗುತ್ತಿದ್ದೇನೆ...ನನ್ನ ಓದಿನ ದಿನಗಳಿಂದಲೂ ಮೈಗೆ ಅಂಟಿಕೊಂಡ ಟಿ- ಶರ್ಟ್‌ನಂತೆ ಈ ದೈತ್ಯನಗರದ ಝಗಮಗಿಸುವ ಕತ್ತಲು- ಬೆಳಕಿನಿಂದ ತಪ್ಪಿಸಿಕೊಂಡು ಅಪ್ಪ ಬೆಳೆಸಿದ ತೋಟದ ಮಡಿಲಿನಲ್ಲಿ ಹುದುಗಿಬಿಡಬೇಕು ಅನ್ನಿಸುತ್ತದೆ. ಇಲ್ಲಿ ದುಡಿದು, ಕೂಡಿಹಾಕಿಕೊಂಡಿದ್ದು ಸಾಕು; ಅಪ್ಪ-ಅಮ್ಮನೊಂದಿಗೆ, ತೆಂಗಿನ ಮರಗಳ ನೆರಳಲ್ಲಿ, ತೋಟದ ತಂಗಾಳಿಯಲ್ಲಿ ಇನ್ನೂ ಬತ್ತದ ಆಳದ ಬಾವಿಯ ನೀರ ತಂಪಿನಲ್ಲಿ ಇದ್ದುಬಿಡಬೇಕು ಎಂದು ಪ್ರತಿ ವರ್ಷ ಕಂಪನಿಯ ಸಂಬಳ ಹೆಚ್ಚಾದಾಗಲೆಲ್ಲ ಅಂದುಕೊಳ್ಳುತ್ತಲೇ ಬಂದಿದ್ದೇನೆ... ಊಹುಂ... ಆಗುತ್ತಲೇ ಇಲ್ಲ... ನಿಟ್ಟುಸಿರುಗಳು ಬಾಕಿ ಉಳಿಯುತ್ತಲೇ ಇವೆ...

ಚಿಂದಿ ಕೌದಿಯೂ ಲೆಗ್ಗಿಂಗ್ಸ್ ನೆನಪೂ

...ಹಾಗಾದರೆ ನಾನು ನನ್ನೆಲ್ಲ ಗೆಳತಿಯರಂತೆ ಸುಖದ ಬದುಕು ಬಯಸುವುದು ತಪ್ಪೆ? ನನ್ನ ಅಪ್ಪ ಅಮ್ಮ ಮೊದಲಿನಿಂದಲೂ ಕಷ್ಟದಲ್ಲೇ ಕೈ ತೊಳೆದವರು. ನಾನೂ ನನ್ನ ಮಕ್ಕಳೂ ಹಾಗೆಯೇ ಕಣ್ಣೀರು ಅಂಟಿಕೊಂಡ ಮುಖವನ್ನು ಜಗಕ್ಕೆ ಒಡ್ಡಬೇಕೆ? ಇವನನ್ನು ಇಷ್ಟಪಟ್ಟು ಮದುವೆಯಾಗಿದ್ದು ಕೂಡ ಇವನ ಅಸಾಧಾರಣ ಬುದ್ಧಿಮತ್ತೆ, ಪ್ರತಿಭಾ ಸಂಪನ್ನತೆ, ದುಡಿಯುವ ಛಲಕ್ಕೆ ಮರುಳಾಗಿ. ಮದುವೆಯಾದ ಆರು ತಿಂಗಳಲ್ಲೇ ಇವನು ‘ನಾವು ಊರಿಗೇ ಹೋಗಿಬಿಡೋಣ ಪದ್ಮ...ಅಲ್ಲೇ ತೋಟ, ಮನೆ ಇದೆ ಅಲ್ವ?’ ಅಂದದ್ದೇ ನನ್ನ ಅಪ್ಪ, ಅಮ್ಮ ನಾನು ಸಗಣಿ, ಗಂಜಲಗಳೊಂದಿಗೆ ಗುದ್ದಾಡಿದ್ದು ನೆನಪಾಗಿತ್ತು...

ನನ್ನ ಸಹಪಾಠಿಗಳೆಲ್ಲ ಬಾಂಬೆಯಲ್ಲೋ ದಿಲ್ಲಿಯಲ್ಲೋ, ಹೈದರಾಬಾದ್‌ನಲ್ಲೋ, ನ್ಯೂಜೆರ್ಸಿಯಲ್ಲೋ ಇದ್ದುಕೊಂಡು ತಮ್ಮ ಸಂಸಾರ ಸುಖದ ಪ್ರತಿ ಝಲಕ್‌ಗಳನ್ನೂ ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾಗಲೆಲ್ಲ ಅಪ್ಪ ಮತ್ತೆ ಮತ್ತೆ ಹೇಳುತ್ತಿದ್ದುದು ನೆನಪಾಗುತ್ತಿತ್ತು: ‘ಬೇಬಿ ನೀನು ಇಷ್ಟೆಲ್ಲ ಓದಿ ಇಲ್ಲೇ ಕೊಳೀಬೇಕಾ ಮಗಳೇ... ನಾಳೆ ನನ್ನ ಮೊಮ್ಮಗ ಸಗಣಿ ವಾಸನೆ ಸಹಿಸ್ಕೋಬೇಕಾ ಅಥವಾ ನನ್ನ ಮೊಮ್ಮಗಳು ನಿಮ್ಮಮ್ಮನಂತೆ ಹಳೇ ಕೌದಿಯ ಮುಗ್ಗಲು ವಾಸನೆಯಲ್ಲೇ ನರಳಬೇಕಾ..?’

***

ತಿಲಾಂಜಲಿಯಮ್ಮನಿಗೆ ತನ್ನಿಬ್ಬರು ಮೊಮ್ಮಕ್ಕಳನ್ನೂ ತಾನಿರುವ ಕೋಣೆಯ ಹಾಸಿಗೆಯಲ್ಲಿ ಅಕ್ಕಪಕ್ಕದಲ್ಲೇ ಮಲಗಿಸಿಕೊಂಡು ತನ್ನೂರಿನ ತೋಟ, ಮನೆ, ಅಲ್ಲಿನ ಹಬ್ಬ ಹರಿದಿನಗಳು, ಹಬ್ಬದಲ್ಲೊಮ್ಮೆ ತಾನು ನೀರು ತರಲು ಹೋಗಿ ಬಾವಿಗೆ ಬಿದ್ದು ಆಘಾತಗೊಂಡು ತತ್ತರಿಸಿದ್ದನ್ನೆಲ್ಲ ಕಥೆಯಾಗಿ ಹೇಳಬೇಕೆಂಬ ತುಡಿತ. ಸುನಿ-ವಿನುಗೂ ಅಜ್ಜಿಯ ಹಳೆಯ ಸೀರೆಗಳ ಬಗ್ಗೆ ಎಂತಹುದೋ ಕುತೂಹಲ, ಸಡಗರ. ಅವಳು ತನ್ನ ಸೀರೆಗಳನ್ನು ನಾಜೂಕಾಗಿ ಮಡಚಿಡುವಾಗಲೆಲ್ಲ ಅವುಗಳೊಳಗೆ ಹುದುಗಿಸಿಡುವ ಘಮ್ಮೆನ್ನುವ ಬೆಳ್ಳಗಿನ ಉಂಡೆಗಳನ್ನು ಅಂಗೈಲಿಟ್ಟುಕೊಂಡು ಆಡಬೇಕೆಂಬ ಆಸೆ...

ಸುನಿ: ‘ಅಜ್ಜಿ ಇದು ಫರ್‌ಫ್ಯೂಮ್ ತಾನೆ?’

ಅಜ್ಜಿ: ‘ಇಲ್ಲ ಮಗಳೇ...ಇದು...’

ವಿನು: ‘ಫರ್‌ಫ್ಯೂಮ್‌ನೇ ಸ್ಮಾಲ್ ಬಾಲ್ ಥರ ಮಾಡಿರೋದು ಕಣೇ... ಅಲ್ವ ಅಜ್ಜಿ...’

ಅಷ್ಟರಲ್ಲೇ ಪದ್ಮವಲ್ಲಿ ಬಂದು ‘ಅತ್ತೆ ಟೈಮಾಯ್ತು ಮಲ್ಕೊಳ್ಳೋದಲ್ವ... ಅಯ್ಯೋ ಇನ್ನೂ ಸೀರೇಲೇ ಇದೀರಾ? ರಾತ್ರಿ ಮಲ್ಕಳ್ಳೋವಾಗ ನಾನು ತಂದುಕೊಟ್ಟಿರೋ ನೈಟಿ ಹಾಕ್ಕೊಳ್ಳಿ ಅಂತ ಎಷ್ಟು ದಿನ ಹೇಳಿಲ್ಲ... ಏನೂ ಆಗಲ್ಲ ಹಾಕ್ಕೋಳ್ಳಿ ಅತ್ತೆ ಬಾಡಿ ಫ್ರೀ ಅನ್ಸುತ್ತೆ... ವಿನು ನೀನೂ ನಡಿ ಮಲ್ಕೋ, ಬೆಳಿಗ್ಗೆ ಡ್ಯಾನ್ಸ್ ಕ್ಲಾಸ್ ಇದೆ ಅಲ್ವ...’ ಎನ್ನುತ್ತಾ ಎಲ್ಲವನ್ನು ಎತ್ತಿಟ್ಟು ಮಕ್ಕಳನ್ನು ಎಬ್ಬಿಸಿ ಅವರನ್ನು ನಿದ್ದೆಯ ನಡಿಗೆಯಲ್ಲೇ ಕರೆದೊಯ್ದುಬಿಡುತ್ತಾಳೆ...

ಹಜಾರಕ್ಕೆ ಹಾಸಿದ ರತ್ನಗಂಬಳಿ

ಮಗ, ಸೊಸೆ, ಮೊಮ್ಮಕ್ಕಳು ಆಮೇಲೆ ಕೆಲಸದವಳೂ ತನಗೆ ಇಡೀ ಫ್ಲ್ಯಾಟ್ ಅನ್ನೇ ಒಪ್ಪಿಸಿಹೋದವರಂತೆ ಕ್ಷಣಾರ್ಧದಲ್ಲಿ ಕಾಣೆಯಾದ ಮೇಲೆ ತಿಲಾಂಜಲಿಯಮ್ಮ ಎಂತಹುದೋ ಶೂನ್ಯ ಕವಿದಂತಾಗಿ ಸದ್ದುಗಳಿಗಾಗಿ ಕಿವಿಯಾನಿಸುತ್ತಾಳೆ. ದೂರದಲ್ಲೆಲ್ಲೋ ನೂರಾರು ವಾಹನಗಳ ಹಾರ್ನ್, ಹೊರಗೆಲ್ಲೋ ಯಾರೋ ಅಪರೂಪಕ್ಕೆಂಬಂತೆ ಮೆಟ್ಟಿಲಿಳಿದ ಸದ್ದು, ಕಿಟಕಿ ಪರದೆ ಸರಿಸಿ ಗೇಟ್‌ನತ್ತ ಕಣ್ಣು ಹಾಯಿಸಿದರೆ ನಿಂತೇ ತೂಕಡಿಸುವ ಸೆಕ್ಯೂರಿಟಿ ಗಾರ್ಡ್... ಈ ಪುನರಾವರ್ತನೆ ಸದ್ದು, ದೃಶ್ಯಗಳನ್ನು ಬಿಟ್ಟರೆ ಎಲ್ಲವೂ ವಿಶಾಲವಾದ ಪಾಳು ಬಾವಿಯೊಳಗಿನ ಕತ್ತಲೆ, ಭಯ ಹುಟ್ಟಿಸುವ ಅಗಾಧ ಮೌನದಂತೆ...

ಅಯ್ಯೋ... ಅಲ್ಲಿ ನಿಂತು ತೂಕಡಿಸುತ್ತಿರುವ ಆ ಗಾರ್ಡ್ ಜೊತೆಯಾದರೂ ತುಸು ಹೊತ್ತು ಕುಳಿತು ಮಾತಾಡೋಣವೆಂದರೆ ಲಿಫ್ಟ್ ಒಳಗೆ ಹೋಗಲೂ ಭಯ; ಬಾಲ್ಯದಲ್ಲಿ ಬಾವಿಗೆ ಬಿದ್ದುಬಿಟ್ಟಿದ್ದಾಗ ಆದಂತೆ ಆಗಿಬಿಟ್ಟರೆ ಎನ್ನುವ ಆತಂಕ. ಮೆಟ್ಟಿಲಿಳಿದು ಹೋಗೋಣವೆಂದರೆ ಎಷ್ಟು ಸುತ್ತು ಇಳಿಯಬೇಕು, ಮತ್ತೆ ಹತ್ತುವಾಗ ದಾರಿತಪ್ಪಿ ಇನ್ನೊಂದು ಮಹಡಿಗೆ ಹೋಗಿಬಿಟ್ಟರೆ? ಎಲ್ಲ ಮನೆಗಳ ಬಾಗಿಲು, ಕಿಟಕಿಗಳು ಒಂದೇ ಬಣ್ಣ, ಆಕಾರಗಳಲ್ಲಿವೆ... ನಾನಿರುವ ಮನೆ ಮತ್ತೆ ಎಲ್ಲಿ ಪತ್ತೆ ಹಚ್ಚುವುದು?

ಹಸಿವಾಗುತ್ತಿದ್ದರೂ ತಿನ್ನಬೇಕೆನ್ನಿಸುತ್ತಿಲ್ಲ. ಅಡುಗೆ ಮನೆಯಲ್ಲಿ ಜೋಡಿಸಿಟ್ಟ ಪಿಂಗಾಣಿ ಕಪ್ಪುಗಳು, ಕಪ್ಪಗೆ, ಬೆಳ್ಳಗೆ ಬೆಳಗುವ ಬಟ್ಟಲು, ತಟ್ಟೆಗಳು...ಕೈಯಿಟ್ಟರೆ ಜಾರುವ ಸಿಂಕ್... ಫ್ರಿಡ್ಜ್ ತೆರೆದರೆ ಝಗ್ಗನೆ ಮುಖಕ್ಕೆ ಒದೆವ ಬೆಳಕಿನಲ್ಲಿ ಕಾಣುವ ಬಣ್ಣಬಣ್ಣಗಳ ಪೌಚ್‌ಗಳು, ಬೆಳ್ಳಿಬಣ್ಣದ ಹಾಳೆಗಳಲ್ಲಿ ಸುತ್ತಿಟ್ಟ ಎಂತಹುದೋ ತಿಂಡಿಗಳ ಪ್ಯಾಕ್‌ಗಳು...ಹಾಟ್ ಬಾಕ್ಸ್ ಮುಚ್ಚಳ ತೆಗೆದರೆ ಗರಿಗರಿಯಾಗಿ ಮಾಡಿಟ್ಟಂತಿರುವ ತಿನಿಸು...ಮುಟ್ಟಿದರೆ ಉದುರಿ ನೆಲಕ್ಕೆಲ್ಲ ಚೆಲ್ಲುತ್ತದೆಯೇನೋ ಎಂದು ಸಣ್ಣ ಕಂಪನ...   

ಯಾವುದೂ ಬೇಡ, ಮೂಸಂಬಿಯನ್ನಾದರೂ ತಿನ್ನೋಣವೆಂದುಕೊಂಡು ಗದಗುಡುವ ತಣ್ಣನೆಯ ಹಣ್ಣಿನ ಸಿಪ್ಪೆ ಸುಲಿದು ತೊಳೆ ಬಿಡಿಸಿ ಬಾಯಿಗಿಟ್ಟುಕೊಂಡಾಗಲೂ ಸಿಪ್ಪೆಗಳನ್ನು ಎಲ್ಲಿ ಎಸೆಯಬೇಕೆಂದು ಆ ಕ್ಷಣಕ್ಕೆ ಗೊತ್ತಾಗದೆ ಹುಡುಕಾಡುತ್ತಾಳೆ. ಯಾವ ಮೂಲೆಯಲ್ಲಿ ಕಸದ ಬುಟ್ಟಿ ಇದೆ ಎಂಬುದು ಗೊತ್ತಾಗದೆ ತಡಬಡಾಯಿಸುತ್ತಾಳೆ. ಅರೆ ನಿಟ್ಟುಸಿರು, ಅರೆ ಸುಸ್ತು ಮೈಮನಸ್ಸನ್ನೆಲ್ಲ ತಬ್ಬಿ ತತ್ತರಿಸುವಂತಾಗಿ ತನ್ನ ಕೋಣೆಗೆ ಬಂದು ಹತ್ತಿ ಸೀರೆಗಳೊಳಗೆ ಹುದುಗಿಸಿಟ್ಟಿದ್ದ ಉಂಡೆಗಳನ್ನು ಒಂದೊಂದಾಗಿ ತೆಗೆದು ನುಂಗುತ್ತಾಳೆ...

ಯಾಕೋ ಹೊಟ್ಟೆ ತೊಳೆಸುತ್ತಿದೆಯೆನ್ನಿಸಿ ಬಾತ್‌ರೂಮ್‌ಗೆ ಹೋದರೆ, ನೆನ್ನೆ ಸ್ನಾನಕ್ಕೆ ಹೋಗಿದ್ದಾಗ ಸೊಸೆ ತಂದು ಹಾಕ್ಕೊಳ್ಳಿ ಎಂದು ಕೊಟ್ಟಿದ್ದ ಹೊಸ ನೈಟಿ ನೇತಾಡುತ್ತಿದೆ... ನೈಟಿಯ ಹೊಳಪು ಕಂಡು ಇಂದಾದರೂ ಅದನ್ನು ತೊಟ್ಟುಕೊಳ್ಳೋಣವೆಂದುಕೊಂಡು ಹಾಕಿಕೊಳ್ಳಲು ಪ್ರಯತ್ನಿಸುತ್ತಾಳೆ. ಆದರೆ ಅದನ್ನು ತೊಡುವ ಬಗೆ ತಿಳಿಯದೆ ಒಂದರೆಗಳಿಗೆ ಒದ್ದಾಡಿ ಅದನ್ನು ಮತ್ತೆ ಮತ್ತೆ ನೇವರಿಸಿ ಕಮೋಡ್ ಮೇಲೆ ಬಿಸುಟು ಮಂಪರು ಬಂದಂತಾಗಿ ಹಾಗೆಯೇ ಹಜಾರಕ್ಕೆ ಬಂದು ಮಧ್ಯದಲ್ಲಿ ಹಾಸಿದ ಹತ್ತಿಯಂಥ ಕಂಬಳಿಯ ಮೇಲೆ ಅಡ್ಡಾಗುತ್ತಾಳೆ...

ಪುಟಾಣಿ ಪಂಟರ ಒಂದು ಸೆಲ್ಫೀ

ಅಂದು ಬೇಗನೇ ಬಂದುಬಿಟ್ಟಿದ್ದರು ಮೊಮ್ಮಕ್ಕಳಿಬ್ಬರೂ.

ಸುನಿ: ಲೋ ಅಜ್ಜಿ ಮಲಗೇಬಿಟ್ಟಿದೆ ನೆಲದ ಮೇಲೆ...

ವಿನು: ಶ್! ಮಾತಾಡಬೇಡ...ನಮ್ಮಿಬ್ಬರನ್ನ ಫೂಲ್ ಮಾಡೋಕೆ ಅಜ್ಜಿ ಈ ಥರ ಮಲ್ಗಿದೆ... ಇಬ್ರೂ ಮಲಗಿರೋ ಅಜ್ಜಿ ಜೊತೆ ಒಂದು ಸೆಲ್ಫೀ ತಗೋಳೋಣ್ವಾ..?

ಸುನಿ: ಓ ಸಖತ್ತಾಗಿರುತ್ತೆ..!

ಶವಕ್ಕೆ ಹೊದಿಸುವ ವಸ್ತ್ರ

ಕೊನೆಗೆ,

ಚಂದ್ರವದನ ಅಮ್ಮನ ಶವಕ್ಕೆ ಹೊದಿಸುವ ಬಿಳಿ ವಸ್ತ್ರಕ್ಕಾಗಿ ಅರ್ಧ ದಿನ ನಗರದ ಎಲ್ಲೆಲ್ಲೋ ಸುತ್ತಾಡಿದ; ಒಂದು ತುಂಡು ಬಿಳಿಯ ಬಟ್ಟೆಗಾಗಿ ಇವನು ಯಾಕೆ ಹೀಗೆ ಅಲೆಯುತ್ತಿದ್ದಾನೆ ಎನ್ನುವುದೇ ಪದ್ಮವಲ್ಲಿಗೆ ಅರ್ಥವಾಗಲಿಲ್ಲ... ಪೊಲೀಸರು ಕೆಲಸದವಳನ್ನೂ ಅವಳ ಬಳಿ ಇದ್ದ ಹೊಸ ಹತ್ತಿ ಸೀರೆಯನ್ನೂ ವಶಪಡಿಸಿಕೊಂಡರು. ಈ ಪ್ರಕರಣದ ನಂತರ ಇ-ಗಾರ್ಡನ್ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ಗಳಲ್ಲಿ ಕೆಲಸದವರನ್ನು ನೇಮಿಸಿಕೊಳ್ಳುವುದನ್ನು ನಿಷೇಧಿಸಲಾಯಿತು.

ಪ್ರತಿಕ್ರಿಯಿಸಿ (+)