ಕ್ವಾರ್ಟರ್‌ನಲ್ಲಿ ಎಡವಿದ ಜೋಷ್ನಾ

7
ಸ್ಕ್ವಾಷ್‌: ಮೋಡಿ ಮಾಡಿದ ಜೊಯೆಲ್ಲೆ ಕಿಂಗ್‌

ಕ್ವಾರ್ಟರ್‌ನಲ್ಲಿ ಎಡವಿದ ಜೋಷ್ನಾ

Published:
Updated:

ಗೋಲ್ಡ್‌ ಕೋಸ್ಟ್‌: ಕಾಮನ್‌ ವೆಲ್ತ್‌ ಕ್ರೀಡಾಕೂಟದ ಮಹಿಳೆಯರ ಸಿಂಗಲ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಕಂಡಿದ್ದ ಭಾರತದ ಜೋಷ್ನಾ ಚಿಣ್ಣಪ್ಪಗೆ ಶನಿವಾರ ನಿರಾಸೆ ಕಾಡಿತು.

ಸ್ಕ್ವಾಷ್‌ ವಿಭಾಗದ ಕ್ವಾರ್ಟರ್ ಫೈನಲ್‌ ಹಣಾಹಣಿಯಲ್ಲಿ ಜೋಷ್ನಾ 5–11, 6–11, 9–11ರಲ್ಲಿ ನ್ಯೂಜಿಲೆಂಡ್‌ನ ಜೊಯೆಲ್ಲೆ ಕಿಂಗ್‌ ವಿರುದ್ಧ ಪರಾಭವಗೊಂಡರು. ಉಭಯ ಆಟಗಾರ್ತಿಯರ ನಡುವಣ ಹೋರಾಟ 34 ನಿಮಿಷ ನಡೆಯಿತು.

ಮೊದಲ ಗೇಮ್‌ನ ಆರಂಭದಲ್ಲಿ ಚುರುಕಿನ ಆಟ ಆಡಿದ ಜೋಷ್ನಾ ಸತತ ಎರಡು ಪಾಯಿಂಟ್ಸ್‌ ಗಳಿಸಿ ಮುನ್ನಡೆ ತಮ್ಮದಾಗಿಸಿಕೊಂಡರು. ನಂತರ ಪುಟಿದೆದ್ದ ಜೊಯೆಲ್ಲೆ 3–3ರಲ್ಲಿ ಸಮಬಲ ಮಾಡಿಕೊಂಡರು. ಬಳಿಕ ನ್ಯೂಜಿಲೆಂಡ್‌ನ ಆಟಗಾರ್ತಿ ಮೇಲುಗೈ ಸಾಧಿಸಿದರು. ಮನಮೋಹಕ ಸರ್ವ್‌ ಮತ್ತು ಬಲಿಷ್ಠ ರಿಟರ್ನ್‌ಗಳ ಮೂಲಕ ಪಾಯಿಂಟ್ಸ್‌ ಗಳಿಸಿದ್ದ ಜೊಯೆಲ್ಲೆ 6–5, 7–5, 8–5 ಹೀಗೆ ಮುನ್ನಡೆ ಹೆಚ್ಚಿಸಿಕೊಂಡು ಸುಲಭವಾಗಿ ಎದುರಾಳಿಯ ಸವಾಲು ಮೀರಿದರು.

ಎರಡನೆ ಗೇಮ್‌ನಲ್ಲಿ ಭಾರತದ ಆಟಗಾರ್ತಿ ತಿರುಗೇಟು ನೀಡಬಹುದೆಂಬ ನಿರೀಕ್ಷೆ ಹುಸಿಯಾಯಿತು. 1–2ರಿಂದ ಹಿನ್ನಡೆ ಕಂಡಿದ್ದ ಜೋಷ್ನಾ 4–4ರಲ್ಲಿ ಸಮಬಲ ಸಾಧಿಸಿದ್ದರು. ನಂತರ ಹಲವು ತಪ್ಪುಗಳನ್ನು ಮಾಡಿದ ಅವರು ಸುಲಭವಾಗಿ ಗೇಮ್‌ ಕೈಚೆಲ್ಲಿದರು.

ಮೂರನೆ ಗೇಮ್‌ನಲ್ಲೂ ಜೋಷ್ನಾ ಮಂಕಾದರು. ಆರಂಭದಲ್ಲಿ ಅಲ್ಪ ಪ್ರತಿರೋಧ ಒಡ್ಡಿದ ಭಾರತದ ಆಟಗಾರ್ತಿ 3–3ರಲ್ಲಿ ಸಮಬಲ ಸಾಧಿಸಿದರು. ನಂತರ ಪ್ರಾಬಲ್ಯ ಮೆರೆದ ಜೊಯೆಲ್ಲೆ 9–5ರ ಮುನ್ನಡೆ ಗಳಿಸಿದರು. ಈ ಹಂತದಲ್ಲಿ ಜೋಷ್ನಾ ಸತತ ಮೂರು ಪಾಯಿಂಟ್ಸ್‌ ಕಲೆಹಾಕಿ ಹಿನ್ನಡೆ ತಗ್ಗಿಸಿಕೊಂಡರು. ಹೀಗಾಗಿ ಆಟದ ರೋಚಕತೆ ಹೆಚ್ಚಿತ್ತು. ಸಂದಿಗ್ಧ ಪರಿಸ್ಥಿತಿಯಲ್ಲಿ ಒತ್ತಡ ಮೀರಿ ನಿಂತು ಆಡಿದ ಜೊಯೆಲ್ಲೆ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು. ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ಲಾಸಿಕ್‌ ಪ್ಲೇಟ್‌ ಕ್ವಾರ್ಟರ್‌ ಫೈನಲ್‌ನಲ್ಲಿ ದೀಪಿಕಾ ಪಳ್ಳಿಕಲ್‌ಗೆ ‘ಬೈ’ ಲಭಿಸಿತು. ದೀಪಿಕಾ ವಿರುದ್ಧ ಆಡಬೇಕಿದ್ದ ಕೆನಡಾದ ಸಮಂತಾ ಕಾರ್ನೆಟ್‌ ಪಂದ್ಯದಿಂದ ಹಿಂದೆ ಸರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry