ಶುಕ್ರವಾರ, ಡಿಸೆಂಬರ್ 13, 2019
19 °C

ಮೀರಾಬಾಯಿ ಚಾನು ಮತ್ತು ಮಣಿಪುರದ ಮೀನು...

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಮೀರಾಬಾಯಿ ಚಾನು ಮತ್ತು ಮಣಿಪುರದ ಮೀನು...

‘ಹತ್ತು ವರ್ಷಗಳ ಹಿಂದೆ ನಾನು ವೇಟ್‌ಲಿಫ್ಟಿಂಗ್ ಕ್ರೀಡೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದೆ. ಆದರೆ ನನ್ನ ಅಮ್ಮನ ಪ್ರೋತ್ಸಾಹ ಮತ್ತು ಮಣಿಪುರದ ಮೀನು ನಾನು ಈ ಕ್ರೀಡೆಯಲ್ಲಿ ಉಳಿಯಲು ಮತ್ತು ಈ ಮಟ್ಟಕ್ಕೆ ಬೆಳೆಯಲು ಕಾರಣವಾದವು’– ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಯಿಕೋಮ್ ಮೀರಾಬಾಯಿ ಚಾನು ಅವರ ಸಂತಸದ ನುಡಿಗಳಿವು.

2017ರಲ್ಲಿ ವಿಶ್ವ ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದು ದಾಖಲೆ ಬರೆದಿದ್ದ ಮೀರಾಬಾಯಿ ಈಗ ಕಾಮನ್‌ವೆಲ್ತ್‌ನಲ್ಲಿಯೂ ತಮ್ಮ ಗೆಲುವಿನ ಯಾತ್ರೆ ಮುಂದುವರಿಸಿದ್ದಾರೆ. ಅಲ್ಲದೇ ಮೂರು ನೂತನ ದಾಖಲೆಗಳನ್ನೂ ಬರೆದಿದ್ದಾರೆ. ತಮ್ಮ ಸಾಧನೆಯ ಹಾದಿಯ ಬಗ್ಗೆ ’ಪ್ರಜಾವಾಣಿ’ಯೊಂದಿಗೆ ದೂರವಾಣಿಯಲ್ಲಿ ಮೀರಾ  ಹಂಚಿಕೊಂಡಿದ್ದಾರೆ.

ಮಣಿಪುರದ ಪುಟ್ಟ ಹಳ್ಳಿಯಲ್ಲಿ ಜನಿಸಿದ್ದ ಮೀರಾಬಾಯಿ ಅವರ ಮನೆಯಲ್ಲಿ ಕ್ರೀಡಾಪಟುಗಳಿದ್ದರು. ತಂದೆ, ಅಣ್ಣಂದಿರು ಫುಟ್‌ಬಾಲ್. ಸೆಪೆಕ್‌ ಟಕ್ರಾಗಳಲ್ಲಿ ಆಡುತ್ತಿದ್ದರು. ತಾಯಿ ಲೈಮಾ ಅವರಿಗೆ ಮೀರಾಬಾಯಿಯನ್ನು ಕ್ರೀಡಾಪಟುವನ್ನಾಗಿ ರೂಪಿಸಬೇಕು ಎಂಬ ಹಂಬಲ ಇತ್ತು. ಬಾಲ್ಯದಲ್ಲಿ ಮೀರಾಬಾಯಿ ಆರ್ಚರಿ ಕಲಿಯಲು ಆಸಕ್ತಿ ತೋರಿಸಿದ್ದರು. ಆಗ ಅವರಿಗೆ ಪರಿಣತ ಕೋಚ್ ಸಿಗಲಿಲ್ಲ. ಆದೇ ಸಮಯಕ್ಕೆ ಮಣಿಪುರದ ಹಿರಿಯ ವೇಟ್ ಲಿಫ್ಟರ್‌ ಕುಂಜುರಾಣಿದೇವಿ ಮತ್ತು ಅನಿತಾ ದೇವಿ ಅವರ ಸಾಧನೆಯನ್ನು ಒಂದು ಸಾಕ್ಷ್ಯಚಿತ್ರದಲ್ಲಿ ಮೀರಾಬಾಯಿ ವೀಕ್ಷಿಸಿದರು. ಅದು ಅವರ ಜೀವನಕ್ಕೆ ತಿರುವು ನೀಡಿತ್ತು.

‘ಕುಂಜುರಾಣಿ ಮತ್ತು ಅನಿತಾ ಅವರು ನಮ್ಮ ರಾಜ್ಯದ ಕ್ರೀಡಾಪ್ರಿಯರ ಕಣ್ಮಣಿಗಳು. ಮಣಿಪುರದಲ್ಲಿ ಮಹಿಳೆಯರ ವೇಟ್‌ಲಿಫ್ಟಿಂಗ್‌ ಕ್ರೀಡೆ ಬೆಳೆಯಲು ಅವರೇ ಪ್ರಮುಖ ಕಾರಣ. ನಾನು ಕೂಡ ಆವರನ್ನೇ ನೋಡಿ ಈ ಕ್ರೀಡೆಗೆ ಬಂದವಳು. ಆರಂಭದಲ್ಲಿ ಅಪ್ಪ–ಅಮ್ಮ ಒಪ್ಪಿರಲಿಲ್ಲ. ನಂತರ ನನ್ನ ಹಟಕ್ಕೆ ಮಣಿದರು. ಆದರೆ ನಂತರದ ಹಾದಿ ಸವಾಲಿನದಾಗಿತ್ತು’ ಎಂದು ಮೀರಾ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾರೆ.

2007ರಲ್ಲಿ ಅವರು ತಮ್ಮ ಮನೆಯಿಂದ 60 ಕಿ.ಮೀ ದೂರದಲ್ಲಿದ್ದ ಕುಮಾನ್ ಲಂಪಕ್ ಕ್ರೀಡಾ ಸಂಕೀರ್ಣದಲ್ಲಿ ತರಬೇತಿಗೆ ಸೇರಿದರು. ಪ್ರತಿದಿನವೂ ತರಬೇತಿಗೆ ಹೋಗಿ ಬರುವ ಗಡಿಬಿಡಿಯಲ್ಲಿ ಚೆನ್ನಾಗಿ ಊಟ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅದೇ ಕಾರಣಕ್ಕೆ ಅವರು ಒಂದು ದಿನ ಅಮ್ಮನ ಬಳಿ ಬಂದು ನಾನು ವೇಟ್‌ಲಿಫ್ಟಿಂಗ್ ಬಿಡುತ್ತೇನೆಂದರು. ಆಗ ಅವರ ತಾಯಿ ಲೈಮಾ ನೀನು ಯಾವುದೇ ಯೋಚನೆ ಮಾಡಬೇಡ. ನಿನ್ನ ಊಟ, ವಿದ್ಯಾಭ್ಯಾಸ ಮತ್ತು ಪ್ರಯಾಣದ ವ್ಯವಸ್ಥೆಗಳನ್ನು ಮಾಡುತ್ತೇವೆ. ಶ್ರದ್ಧೆಯಿಂದ ಸಾಧನೆ ಮಾಡು ಎಂದರು.

ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರು ಇದ್ದ ಮಧ್ಯಮ ವರ್ಗದ ಕುಟುಂಬದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಸರಿ ಇರಲಿಲ್ಲ. ಆದರೂ ಲೈಮಾ ಅವರು ತಮ್ಮ ಮಗಳಿಗಾಗಿ ಪ್ರತಿದಿನವೂ ವಿಶೇಷ ಆಹಾರ ಸಿದ್ಧ‍ಪಡಿಸಿದರು. ಮಣಿಪುರದಲ್ಲಿ ಸಿಗುವ ವಿಶೇಷ ಮೀನಿನ ಖಾದ್ಯವೂ ಅವರ ಊಟದೊಂದಿಗೆ ಇರುವಂತೆ ನೋಡಿಕೊಂಡರು. ಪೋಷಕಾಂಶಗಳು ಹೇರಳವಾಗಿರುವ  ಕಾರಣ ಮೀನಿನ ಖಾದ್ಯ ತಿನ್ನಿಸುವುದನ್ನು ಅವರು ತಪ್ಪಿಸುತ್ತಿರಲಿಲ್ಲ. ಅನ್ನ, ಬೇಳೆ, ಹಾಲು, ಬಾಳೆಹಣ್ಣಿನ ಜೊತೆಗೆ  ಮೀನು ಇರಲೇಬೇಕು.

‘ನಾನು 12 ವರ್ಷದವಳಾಗಿದ್ದಾಗ  ಅಣ್ಣನೊಂದಿಗೆ ಕಟ್ಟಿಗೆ ತರಲು ಕಾಡಿಗೆ ಹೋಗುತ್ತಿದ್ದೆ. ಅಣ್ಣ ಸಂಗ್ರಹಿಸುತ್ತಿದ್ದ ಕಟ್ಟಿಗೆಯ ಹೊರೆಗಿಂತ ದೊಡ್ಡ ಹೊರೆಯನ್ನು ತರಲು ಪ್ರಯತ್ನಿಸುತ್ತಿದ್ದೆ. ಪ್ರತಿ ಸಲವೂ ಅದೇ ರೀತಿ ಮಾಡಿ ಕೊನೆಗೂ ಜಯಶಾಲಿಯಾದೆ. ಅದೂ ಕೂಡ ನನ್ನ ವೇಟ್‌ಲಿಫ್ಟಿಂಗ್ ಕೌಶಲವನ್ನು ಉತ್ತಮಪಡಿಸಿತ್ತು’ ಎಂದು ಹೇಳುತ್ತಾರೆ ಮೀರಾ.

ಯಶಸ್ಸಿನ ಪಯಣ

ಸತತ ಐದು ವರ್ಷಗಳ ತಾಲೀಮಿನ ನಂತರ ಅವರ ಯಶಸ್ಸಿನ ಯಾತ್ರೆ ಆರಂಭವಾಯಿತು. ಜೂನಿಯರ್ ವಿಭಾಗದಲ್ಲಿ ಮಿಂಚಿದರು. 2011ರಲ್ಲಿ ಅಂತರರಾಷ್ಟ್ರೀಯ ಯೂತ್ ಚಾಂಪಿಯನ್ ಷಿಪ್  ಮತ್ತು ದಕ್ಷಿಣ ಏಷ್ಯಾ ಜೂನಿಯರ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕಗಳನ್ನು ಗೆದ್ದರು. 2013ರಲ್ಲಿ ಗುವಾಹಟಿಯಲ್ಲಿ ನಡೆದಿದ್ದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ‘ಬೆಸ್ಟ್ ಲಿಫ್ಟರ್’ ಗೌರವಕ್ಕೆ ಪಾತ್ರರಾದರು. ಇದು ಅವರ  ಕ್ರೀಡಾಜೀವನಕ್ಕೆ ಲಭಿಸಿದ ಮಹತ್ವದ ತಿರುವು.  2014ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮಹಿಳೆಯರ 48ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದರು. 2014ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 11ನೇ   ಹಾಗೂ 2015ರಲ್ಲಿ ಒಂಬತ್ತನೇ ಸ್ಥಾನ ಪಡೆದಿದ್ದರು.

ಕುಂಜುರಾಣಿ ಅವರ ದಾಖಲೆಯನ್ನು ಮೀರಿ ನಿಲ್ಲುವ ಸಾಧನೆಯನ್ನೂ ಮೀರಾ ಮಾಡಿದ್ದರು.  ರಾಷ್ಟ್ರೀಯ ಚಾಂಪಿಯನ್ ಷಿಪ್ ನಲ್ಲಿ 192 ಕೆ.ಜಿ. (ಸ್ನ್ಯಾಚ್ ನಲ್ಲಿ 82 ಕೆ.ಜಿ., ಕ್ಲೀನ್ ಹಾಗೂ ಜರ್ಕ್ ನಲ್ಲಿ 107 ಕೆ.ಜಿ.) ಭಾರ ಎತ್ತಿದ ಸಾಧನೆ ಮಾಡಿದರು. ಕುಂಜುರಾಣಿ ಅವರು 2004ರಲ್ಲಿ ನಡೆದಿದ್ದ ಆಥೆನ್ಸ್ ಒಲಿಂಪಿಕ್ಸ್‌ ನಲ್ಲಿ 190 ಕೆ.ಜಿ. ಭಾರ ಎತ್ತಿದ್ದ ಸಾಧನೆಯನ್ನು ಹಿಂದಿಕ್ಕಿದರು.

ಒಲಿಂಪಿಕ್ಸ್ ಅವಕಾಶ

ಮೀರಾಬಾಯಿ ಅವರು ರಿಯೊ ಡಿ ಜನೈರೊದಲ್ಲಿ 2016ರಲ್ಲಿ ನಡೆದಿದ್ದ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದರು. ಭಾರತದಿಂದ ಮಹಿಳೆಯರ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಏಕೈಕ ಕ್ರೀಡಾಪಟು ಅವರಾಗಿದ್ದರು. ಆದರೆ ಅಲ್ಲಿ ಅವರಿಗೆ ಪದಕ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಪುರುಷರ ವಿಭಾಗದಲ್ಲಿ ಸತೀಶ್ ಶಿವಲಿಂಗಮ್ (77ಕೆ.ಜಿ.) ಭಾಗವಹಿಸಿದ್ದರು.  ಅವರು 11ನೇ ಸ್ಥಾನ ಪಡೆದಿದ್ದರು.

ಒಲಿಂಪಿಕ್ಸ್‌ನಲ್ಲಿ ಆಗಿದ್ದ ಹಿನ್ನಡೆಯಿಂದ ಸಾಕಷ್ಟು ಪಾಠ ಕಲಿತಿದ್ದ ಮೀರಾಬಾಯಿ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಪದಕದ ಮೇಲೆ ಕಣ್ಣಿಟ್ಟು ಅಭ್ಯಾಸ ಮುಂದುವರಿಸಿದ್ದರು. ಮುಖ್ಯ ಕೋಚ್ ವಿಜಯ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ತಾಲೀಮು ನಡೆಸಿದರು. ಅವರ ಪರಿಶ್ರಮಕ್ಕೆ ತಕ್ಕ ಗೌರವ ಸಿಗುತ್ತಿದೆ. ಒಂದರ ಹಿಂದೆ ಒಂದು ಯಶಸ್ಸಿನ ಮೆಟ್ಟಿಲು ಏರುತ್ತಿದ್ದಾರೆ. 2020ರಲ್ಲಿ ಟೊಕಿಯೊದಲ್ಲಿಯೂ ತ್ರಿವರ್ಣ ಧ್ವಜದ ಗೌರವ ಹೆಚ್ಚಿಸುವ ಕನಸು ಕಾಣುತ್ತಿದ್ದಾರೆ.

ಪ್ರತಿಕ್ರಿಯಿಸಿ (+)