ವೈದಿಕ ಶಾಲೆ ಮುಚ್ಚಲು ಆಗ್ರಹ

7
ಜಂಗಮ ಸಮಾಜದ ಸಮಾವೇಶ: ಜಗದೀಶ ಕವಟಗಿಮಠ ಟೀಕೆ

ವೈದಿಕ ಶಾಲೆ ಮುಚ್ಚಲು ಆಗ್ರಹ

Published:
Updated:

ಸವದತ್ತಿ: ‘ಜಂಗಮರಷ್ಟೇ ವೀರಶೈವರು ಎನ್ನುವ ದೊಡ್ಡ ದೊಡ್ಡ ಮಠಾಧೀಶರು ತಮ್ಮ ಮಠದಲ್ಲಿರುವ ವೈದಿಕ ಪಾಠಶಾಲೆಗಳನ್ನು ಮುಚ್ಚಬೇಕು. ಒಂದಾದ ಧರ್ಮವನ್ನು ನಿಮ್ಮ ಸ್ವಾರ್ಥಕ್ಕಾಗಿ ಒಡೆದಾಳುವ ನೀತಿ ಎಲ್ಲರಿಗೂ ತಿಳಿದಿದೆ’ ಎಂದು ಜಂಗಮ ಸಂಗಮ ಸಮಾಜದ ಜಿಲ್ಲಾ ಮುಖಂಡ ಜಗದೀಶ ಕವಟಗಿಮಠ ನೇರವಾಗಿ ಗದಗಿನ ತೋಂಟದಾರ್ಯಮಠದ ಸಿದ್ಧಲಿಂಗ ಸ್ವಾಮೀಜಿಯನ್ನು ಟೀಕಿಸಿದರು.

ಭಾನುವಾರ ಇಲ್ಲಿನ ಮಾಮನಿ ಕಲ್ಯಾಣ ಮಂಟಪದಲ್ಲಿ ಜಂಗಮಾಭಿವೃದ್ಧಿ ಸಂಘ ಆಯೋಜಿಸಿದ್ದ ರೇಣುಕಾಚಾರ್ಯರ ಯುಗಮಾನೋತ್ಸವ ಜಯಂತಿ ಹಾಗೂ ಜಂಗಮ ಸಮಾವೇಶದಲ್ಲಿ ಮಾತನಾಡಿದ ಅವರು, ‘ಯಡಿಯೂರಪ್ಪನವರ ಅವಧಿಯಲ್ಲಿ ಎಡಿಯೂರು ಇವರ ಕೈಗೆ ಸಿಗಲಿಲಲ್ಲ ಎಂದು ಈ ರೀತಿಯ ಆಕ್ರೋಶವನ್ನು ಸಮಾಜದ ಮೇಲೆ ತೋರಿಸುವ ಶ್ರೀಗಳಿಗೆ ಧರ್ಮ ಯಾಕೆ ಬೇಕು’ ಎಂದು ಪ್ರಶ್ನಿಸಿದರು.

‘ವೀರಶೈವ ಲಿಂಗಾಯತ ಎರಡೂ ಒಂದೇ. ಅದನ್ನು ಕೆಲವೇ ಮಠಾಧೀಶರು, ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ಒಡೆಯಲು ಮುಂದಾಗಿದ್ದಾರೆ. ಒಂದು ವೇಳೆ ಲಿಂಗಾಯತರಿಗೆ ಅಲ್ಪ ಸಂಖ್ಯಾತ ಸ್ಥಾನಮಾನ ಸಿಕ್ಕರೆ, ಇದರ ಲಾಭವೂ ಯಾವ ಲಿಂಗಾಯತರಿಗೂ ಸಿಗುವುದಿಲ್ಲ. ಅದರ ಸಂಪೂರ್ಣ ಲಾಭ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಹೋಗುತ್ತದೆ’ ಎಂದರು.

‘1985ರ ಜಾತಿ ಗಣತಿಯಲ್ಲಿ ವೀರಶೈವ ಲಿಂಗಾಯತವೆಂದು ಬರೆಯಿರಿ ಎಂದರು. 1993ರಲ್ಲಿ ಹಿಂದೂ ಲಿಂಗಾಯತ, ಕುಂಬಾರ ಲಿಂಗಾಯತ, ಕುಂಬಾರ ಲಿಂಗಾಯತ ಎಂದು ಹೇಳಿದ ಇದೇ ಮಹನೀಯರು ಇದೀಗ ಲಿಂಗಾಯತ ಎಂದು ಒಡೆಯಲು ಮುಂದಾಗಿದ್ದಾರೆ’ ಎಂದು ಟೀಕಿಸಿದರು.

ವಕೀಲ ಸಿ.ವಿ ಸಾಂಭಯ್ಯನವರಮಠ ‘ಜಂಗಮರು ಮನಸ್ಸು ಮಾಡಿದರೆ ಎಲ್ಲವನ್ನು ಗೆಲ್ಲಬಹುದು ಎಂಬುವುದಕ್ಕೆ ಸುಡುಬಿಸಿಲಿನಲ್ಲಿಯೂ ಬಂದ ಮಿಂಚು, ಗುಡುಗು ಮಿಶ್ರಿತ ಮಳೆಯೇ ಸಾಕ್ಷಿ. ಜಂಗಮರು ಎಲ್ಲ ತರಹದ ಪೂಜೆ, ಸಮಾರಂಭ ಹಾಗೂ ಅಂತ್ಯಕ್ರಿಯೆಗೂ ಬೇಕು. ಮಠಾಧೀಶರು ಕೇವಲ ಆಶೀರ್ವದಿಸಲು ಮಾತ್ರ ಬೇಕು’ ಎಂದರು.

ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಬಸಯ್ಯ ಹಿರೇಮಠ, ಶಂಕರಯ್ಯ ಪಾಟೀಲ ಮಾತನಾಡಿದರು. ಕಲ್ಮಠದ ಶಿವಲಿಂಗಸ್ವಾಮೀಜಿ, ಮೂಲಿಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮುನವಳ್ಳಿಯ ಮುರುಘೇಂದ್ರ ಸ್ವಾಮೀಜಿ, ಹುಕ್ಕೇರಿಯ ಚಂದ್ರಶೇಖರ ಸ್ವಾಮೀಜಿ, ಹೂಲಿಯ ಉಮೇಶ್ವರ ಸ್ವಾಮೀಜಿ, ಯಕ್ಕುಂಡಿಯ ಪಂಚಾಕ್ಷರಿ ಸ್ವಾಮೀಜಿ, ರಾಮದುರ್ಗದ ಶಾಂತವೀರ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಈರಯ್ಯ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಚಂದ್ರಯ್ಯ ವಿರಕ್ತಮಠ ಉಪಸ್ಥಿತರಿದ್ದರು.ದುಂಡಯ್ಯ ಘಟ್ಟಿವಾಳಮಠ ಪ್ರಾರ್ಥನೆ ಹಾಡಿದರು. ಎಸ್‌.ಆರ್‌ ಹಿರೇಮಠ ನಿರೂಪಿಸಿದರು. ವಿಜಯ ಹಿರೇಮಠ ವಂದಿಸಿದರು.

ಭವ್ಯ ಕುಂಭ ಮೇಳ:

ಬೆಳಿಗ್ಗೆ ಗುಡುಗು ಮಿಂಚು ಮಿಶ್ರಿತ ಮಳೆಯ ನಡುವೆಯೂ ಪಟ್ಟಣದ ಪ್ರಮುಖ ಬೀದಿಯಲ್ಲಿ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ 300 ಜನ ಮಾತೆಯರು ಕುಂಭ ಹೊತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry