ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ‘ಕಾಯಕಲ್ಪ’ ಗರಿ

ಆಸ್ಪತ್ರೆಯ ಗುಣಮಟ್ಟದ ವೈದ್ಯಕೀಯ ಸೇವೆಗೆ ಸಂದ ಗೌರವ; ಎಂಟು ದಶಕಗಳ ಭವ್ಯ ಇತಿಹಾಸ ಹೊಂದಿರುವ ಆಸ್ಪತ್ರೆ
Last Updated 9 ಏಪ್ರಿಲ್ 2018, 10:09 IST
ಅಕ್ಷರ ಗಾತ್ರ

ಕೋಲಾರ: ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆದಿರುವ ನಗರದ ಶ್ರೀನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆಯು ಮತ್ತೊಂದು ಸಾಧನೆ ಮಾಡಿದೆ. ಗುಣಮಟ್ಟದ ವೈದ್ಯಕೀಯ ಸೇವೆಗೆ ಹೆಸರಾಗಿರುವ ಆಸ್ಪತ್ರೆಗೆ ಕಾಯಕಲ್ಪ ಪ್ರಶಸ್ತಿಯ ಗರಿ ಲಭಿಸಿದೆ.

ಮೈಸೂರಿನ ಮಹಾರಾಜ ಕೃಷ್ಣರಾಜ ಒಡೆಯರ್‌ ಅವರಿಂದ 1937ರಲ್ಲಿ ಲೋಕಾರ್ಪಣೆಯಾದ ಈ ಆಸ್ಪತ್ರೆಯು ಎಂಟು ದಶಕಗಳ ಭವ್ಯ ಇತಿಹಾಸ ಹೊಂದಿದೆ. ಇತರೆ ಸರ್ಕಾರಿ ಆಸ್ಪತ್ರೆಗಳಂತೆಯೇ ಹಿಂದೆ ಮೂಲಸೌಕರ್ಯ ಸಮಸ್ಯೆಯಿಂದ ನಲುಗಿದ್ದ ಆಸ್ಪತ್ರೆಯು ಮೂರ್‌್ನಾಲ್ಕು ವರ್ಷಗಳಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ.

ಸ್ವಚ್ಛತೆ, ಶೌಚಾಲಯ ಸೌಲಭ್ಯ, ರೋಗಿಗಳ ಆರೈಕೆ, ಸಿಬ್ಬಂದಿಯ ಸ್ಪಂದನೆ, ಕುಡಿಯುವ ನೀರು ಹೀಗೆ ಹತ್ತಾರು ವಿಭಾಗಗಳಲ್ಲಿ ಅತ್ಯುತ್ತಮ ನಿರ್ವಹಣೆ ತೋರುವ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರ ಪ್ರತಿ ವರ್ಷ ಕಾಯಕಲ್ಪ ಪ್ರಶಸ್ತಿ ನೀಡುತ್ತದೆ. ರಾಷ್ಟ್ರೀಯ ಆರೋಗ್ಯ ಮಿಷನ್‌ (ಎನ್‌ಎಚ್‌ಎಂ) ನಿಗದಿಪಡಿಸಿರುವ ಮಾನದಂಡದ ಆಧಾರದಲ್ಲಿ ಆಸ್ಪತ್ರೆಗಳನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಎನ್‌ಎಚ್‌ಎಂ, ರಾಜ್ಯ ಏಡ್ಸ್‌ ನಿಯಂತ್ರಣ ಸೊಸೈಟಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌, ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಹಾಗೂ ಪ್ರತಿನಿಧಿಗಳನ್ನು ಒಳಗೊಂಡ ಆಯ್ಕೆ ಸಮಿತಿಯು ಆಸ್ಪತ್ರೆಗಳಿಗೆ ಖುದ್ದು ಭೇಟಿ ನೀಡಿ ಮೂರು ಹಂತದಲ್ಲಿ ಮೌಲ್ಯಮಾಪನ ನಡೆಸುತ್ತದೆ. ಮೌಲ್ಯಮಾಪನದಲ್ಲಿ ಹೆಚ್ಚು ಅಂಕ ಗಳಿಸುವ ಆಸ್ಪತ್ರೆಗಳು ಪ್ರಶಸ್ತಿಗೆ ಆಯ್ಕೆಯಾಗುತ್ತವೆ.

ವಿಶೇಷ ಅನುದಾನ: ಆಯ್ಕೆ ಸಮಿತಿಯು ಇತ್ತೀಚೆಗೆ ನಡೆಸಿದ ಮೌಲ್ಯಮಾಪನದಲ್ಲಿ ಎಸ್‌ಎನ್‌ಆರ್‌ ಆಸ್ಪತ್ರೆಯು ಶೇ 98 ಅಂಕ ಪಡೆದು ಮೂಲಕ ಮೂರನೇ ಸ್ಥಾನ ಗಳಿಸಿದೆ. ಹಾಸನ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ (ಹಿಮ್ಸ್‌) ಶೇ 99 ಅಂಕದೊಂದಿಗೆ ಪ್ರಥಮ ಹಾಗೂ ಬಳ್ಳಾರಿ ಜಿಲ್ಲಾ ಆಸ್ಪತ್ರೆಯು ಶೇ 98.80 ಅಂಕದೊಂದಿಗೆ ದ್ವಿತೀಯ ಸ್ಥಾನ ಪಡೆದಿವೆ. ಪ್ರಶಸ್ತಿಗೆ ಭಾಜನವಾಗಿರುವ ಎಸ್‌ಎನ್‌ಆರ್‌ ಆಸ್ಪತ್ರೆಗೆ ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಯಾಗಲಿದೆ. ಈ ಅನುದಾನವನ್ನು ಆಸ್ಪತ್ರೆಯ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಬಹುದು.

ಎನ್‌ಎನ್‌ಎಫ್ ಮಾನ್ಯತೆ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಹಾಗೂ ವಿಶ್ವ ಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಮತ್ತು ಬೆಂಗಳೂರಿನ ಸೆಂಟ್‌ ಜಾನ್ಸ್ ಆಸ್ಪತ್ರೆ ಸಹಯೋಗದೊಂದಿಗೆ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಮಕ್ಕಳ ಆರೈಕೆಗಾಗಿ ಸುಸಜ್ಜಿತ ತೀವ್ರ ನಿಗಾ ಘಟಕ ಆರಂಭಿಸಲಾಗಿದೆ. ಈ ಘಟಕದಲ್ಲಿ ತಾಯಿ ಮತ್ತು ಮಗುವಿಗೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

ನವಜಾತ ಶಿಶುಗಳ ಆರೈಕೆಗಾಗಿ ಆಸ್ಪತ್ರೆಯಲ್ಲಿ ಕಾಂಗರೊ ಮದರ್ ಕೇರ್‌ ಘಟಕ ತೆರೆಯಲಾಗಿದೆ. ಆಸ್ಪತ್ರೆಯು ಮಕ್ಕಳ ಆರೈಕೆ ಮತ್ತು ಸ್ವಚ್ಛತೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಆಸ್ಪತ್ರೆಯ ಮಕ್ಕಳ ಘಟಕಕ್ಕೆ 2017ರ ಮಾರ್ಚ್‌ನಲ್ಲಿ ರಾಷ್ಟ್ರೀಯ ನವಜಾತ ಶಿಶುಪಾಲನಾ ಸಂಸ್ಥೆಯ (ಎನ್‌ಎನ್‌ಎಫ್) ಮಾನ್ಯತೆ ಸಿಕ್ಕಿದೆ. ಹಿಂದಿನ ವರ್ಷ ಸ್ವಚ್ಛ ಭಾರತ ಅಭಿಯಾನದಡಿ ಆಸ್ಪತ್ರೆಗೆ ₹ 3 ಲಕ್ಷ ಬಹುಮಾನ ದೊರೆತಿದೆ. ಮುಖ್ಯವಾಗಿ ಹೆರಿಗೆ ಪ್ರಮಾಣದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಆಸ್ಪತ್ರೆಯು ಖಾಸಗಿ ಆಸ್ಪತ್ರೆಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ.

ಸೌಕರ್ಯಗಳು: 400 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ ತಿಂಗಳಿಗೆ ಸುಮಾರು 1,500 ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ತಿಂಗಳಿಗೆ ಸರಾಸರಿ 480 ಹೆರಿಗೆಗಳಾಗುತ್ತಿವೆ. 24 ತಾಸು ಕಾರ್ಯನಿರತವಾಗಿರುವ ರಕ್ತನಿಧಿ ಕೇಂದ್ರವಿದೆ. ಒಳ ರೋಗಿಗಳ ಪ್ರತಿ ವಾರ್ಡ್‌ನಲ್ಲೂ ಸ್ನಾನಕ್ಕೆ ಬಿಸಿ ನೀರಿನ ಸೌಲಭ್ಯ
ಕಲ್ಪಿಸಲಾಗಿದೆ.

ಆಸ್ಪತ್ರೆಯಲ್ಲಿ ಸುಮಾರು ₹ 7 ಕೋಟಿ ವೆಚ್ಚದಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ ಸೇವೆ ಆರಂಭಿಸಲಾಗಿದೆ. ರಾಜ್ಯದ ಬೆರಳೆಣಿಕೆ ಜಿಲ್ಲಾಸ್ಪತ್ರೆಗಳಲ್ಲಿ ಈ ಸೇವೆ ಲಭ್ಯವಿದೆ. ಇತ್ತೀಚೆಗೆ ಸಿ.ಟಿ ಸ್ಕ್ಯಾನಿಂಗ್‌ ಸೇವೆ ಸಹ ಆರಂಭವಾಗಿದೆ. ಜತೆಗೆ ಡಯಾಲಿಸಿಸ್‌, ಎಕ್ಸ್‌–ರೇ, ರಕ್ತ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತಿದೆ.

ಗುಣಮಟ್ಟದ ವೈದ್ಯಕೀಯ ಸೇವೆ, ಸ್ವಚ್ಛತೆ, ಔಷಧಗಳ ಲಭ್ಯತೆ, ವೈದ್ಯಕೀಯ ಸಿಬ್ಬಂದಿ, ಸುಸಜ್ಜಿತ ವಾರ್ಡ್‌ಗಳು ಹಾಗೂ ಮೂಲಸೌಕರ್ಯದ ವಿಷಯದಲ್ಲಿ ಆಸ್ಪತ್ರೆಯು ಹೆಚ್ಚಿನ ಪ್ರಗತಿ ಸಾಧಿಸುವ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆದಿದೆ. ನಗರ ಹಾಗೂ ಜಿಲ್ಲೆಯ ವಿವಿಧ ಭಾಗದ ರೋಗಿಗಳು ಖಾಸಗಿ ಆಸ್ಪತ್ರೆಗಳ ಬದಲಿಗೆ ಈ ಆಸ್ಪತ್ರೆಯತ್ತ ಮುಖಮಾಡಿದ್ದಾರೆ.

**

ಎಸ್‌ಎನ್‌ಆರ್‌ ಆಸ್ಪತ್ರೆಯು ವೈದ್ಯಕೀಯ ಸೇವೆಯಲ್ಲಿ ಖಾಸಗಿ ಆಸ್ಪತ್ರೆಗಳಿಗಿಂತ ಕಡಿಮೆಯಿಲ್ಲ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸ್ಪಂದನೆಯೂ ಚೆನ್ನಾಗಿದೆ  –ಹರೀಶ್‌, ರೋಗಿಯ ಸಂಬಂಧಿ.

**

ಈ ಹಿಂದೆ ಎಸ್‌ಎನ್‌ಆರ್‌ಯಲ್ಲಿ ಆಸ್ಪತ್ರೆಗಳಂತೆ ಮೂಲಸೌಕರ್ಯ ಸಮಸ್ಯೆ ಇತ್ತು. ಆದರೆ ನಾಲ್ಕೈದು ವರ್ಷದಲ್ಲಿ ಆಸ್ಪತ್ರೆಯ ಚಿತ್ರಣ ಸಂಪೂರ್ಣ ಬದಲಾಗಿದೆ –ರತ್ನಮ್ಮ,ರೋಗಿಯ ಸಂಬಂಧಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT