ಭಾನುವಾರ, ಡಿಸೆಂಬರ್ 15, 2019
23 °C
ಮತದಾನ ಅರಿವು ಕಾರ್ಯಕ್ರಮ: ಪ್ರತಿಜ್ಞಾವಿಧಿ ಸ್ವೀಕಾರ

ಮತದಾನ ಎಲ್ಲರ ಹಕ್ಕು: ಕಾಪಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತದಾನ ಎಲ್ಲರ ಹಕ್ಕು: ಕಾಪಶಿ

ಉಡುಪಿ:‘ಪ್ರಜಾಪ್ರಭುತ್ವವನ್ನು ಅರ್ಥ ಪೂರ್ಣಗೊಳಿಸಲು ಮತದಾನ ಪ್ರಕ್ರಿಯೆ ಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳವುದು ಅಗತ್ಯ. ಈ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಅಂಗವಿಕಲರಿಗೆ ವಿಶೇಷ ಸವಲತ್ತುಗಳನ್ನು ಕಲ್ಪಿಸಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶಿವಾನಂದ ಕಾಪಶಿ ತಿಳಿಸಿದರು.

ಅಜ್ಜರಕಾಡು ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ, ಮತದಾರರ ಜಾಗೃತಿ ಅಭಿಯಾನ ಸ್ವೀಪ್ ಸಮಿತಿ ಸಹ ಯೋಗದಲ್ಲಿ ಭಾನುವಾರ ದೃಷ್ಠಿ ದೋಷ ಹಾಗೂ ಶ್ರವಣ ದೋಷವುಳ್ಳವರಿಗಾಗಿ ಆಯೋಜಿಸಿದ್ದ ‘ಮತದಾನದ ಅರಿವು’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚುನಾವಣಾ ಆಯೋಗವು ಅಂಧರಿಗೂ ಕೂಡಾ ಸ್ವತಂತ್ರವಾಗಿ ಮತ ಚಲಾಯಿಸಲು ಅನುಕೂಲವಾಗುವಂತೆ ಅಭ್ಯರ್ಥಿಗಳ ಕ್ರಮ ಸಂಖ್ಯೆಯನ್ನು ಬ್ರೈಲ್ ಲಿಪಿಯಲ್ಲಿ ರೂಪಿಸಿದೆ. ಇದರಿಂದ ಯಾರ ಸಹಾಯವೂ ಇಲ್ಲದೆ ವಿವೇಚನಾ ಅನುಸಾರ ದೃಷ್ಟಿ ದೋಷವುಳ್ಳವರು ಮತದಾನ ಮಾಡಬಹುದು. ಯಾರಿಗೆ ಮತ ಹಾಕಲಾಗಿದೆ ಎಂಬುದನ್ನು ಸಂಬಂಧಪಟ್ಟ ಮತದಾರ ಅರಿಯಲು ವಿವಿ ಪ್ಯಾಟ್‌ ಎಂಬ ಯಂತ್ರ ಅಳವಡಿಸಲಾಗಿದೆ ಎಂದು ಹೇಳಿದರು.

ಅಂಗವಿಕಲತೆ ಕಾರಣಕ್ಕೆ ಮತದಾರನೊಬ್ಬ ತನ್ನ ಹಕ್ಕನ್ನು ಕಳೆದುಕೊಳ್ಳುವಂತಾಗಬಾರದು ಎಂಬ ಕಾರಣಕ್ಕಾಗಿ ಅಂಗವಿಕಲರಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ. ಮತದಾನ ಕೇಂದ್ರಕ್ಕೆ ತೆರಳಲು ವಾಹನದ ವ್ಯವಸ್ಥೆ ಹಾಗೂ ರ‍್ಯಾಂಪ್ ವ್ಯವಸ್ಥೆ ಮಾಡಲಾಗಿದೆ. ಮತದಾನದ ಬಗ್ಗೆ ನಿಮ್ಮ ಅಕ್ಕಪಕ್ಕದ ಸ್ನೇಹಿತರಿಗೂ ಅರಿವು ಮೂಡಿಸುವಂತೆ ಮನವಿ ಮಾಡಿದರು.

ಅಂಗವಿಕಲರಿಗೆ ಎಲ್ಲ ವ್ಯವಸ್ಥೆ: ಉಡುಪಿ ಜಿಲ್ಲೆಯಲ್ಲಿ 2,920 ಅಂಗವಿಕಲರು, 480 ಜನರಿಗೆ ಶ್ರವಣ ದೋಷ, 575 ಜನರಿಗೆ ದೃಷ್ಠಿ ದೋಷ ಹಾಗೂ 2,199 ಜನರು ಶ್ರವಣ ಹಾಗೂ ದೃಷ್ಠಿದೋಷ ಹೊಂದಿದ್ದಾರೆ. ಅವರಿಗೆ ಅಗತ್ಯ ವ್ಯವಸ್ಥೆಯೂ ಮತಗಟ್ಟೆ ಕೇಂದ್ರದಲ್ಲಿ ಆಗಲಿದೆ. ಮುಕ್ತವಾಗಿ ಅವರು ಮತ ಚಲಾಯಿಸಬಹುದು. ಈ ಸಂದರ್ಭದಲ್ಲಿ ಯಾವುದೇ ತೊಂದರೆ ಅಧವಾ ಸಮಸ್ಯೆ ಕಂಡ ಬಂದರೆ ಸಂಬಂಧಪಟ್ಟ ಇಲಾಖೆಗೆ ಕರೆ ಮಾಡಬಹುದು. ಯಾವುದೇ ಆಮಿಷಕ್ಕೆ ಬಲಿಯಾಗದೆ ಉತ್ತಮ ಜನ ಪ್ರತಿನಿಧಿಯನ್ನು ಆಯ್ಕೆ ಮಾಡುವ ಹಕ್ಕು ನಿಮ್ಮಲ್ಲಿದೆ ಎಂದು ಹೇಳಿದರು.

ಚುನಾವಣಾ ಪ್ರತಿಜ್ಞಾ ವಿಧಿಯನ್ನು ಸಂಜ್ಞೆಗಳಲ್ಲಿ ಶ್ರವಣದೋಷವಿರುವವರಿಗೆ ಬೋಧಿಸಲಾಯಿತು. ಇವಿಎಂ ಹಾಗೂ ವಿವಿ ಪ್ಯಾಟ್ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಅಂಧ ಮತದಾರರಿಗೆ ಬ್ರೈಲ್ ಲಿಪಿಯಲ್ಲಿ ತಯಾರಿಸಿದ ಪ್ರತಿಜ್ಞಾವಿಧಿಯನ್ನು ದೀಕ್ಷಿತ್ ಅವರು ಬೋಧಿಸಿದರು. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಆಯೋಗ ಹಲವು ಕ್ರಮಗಳನ್ನು ಕೈಗೊಂಡಿದ್ದು ಏಪ್ರಿಲ್ 14ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅವಕಾಶವಿದೆ.

ಚುನಾವಣಾ ಆಯೋಗದ ಸಂಪನ್ಮೂಲಾಧಿಕಾರಿ ಅಶೋಕ, ವಿಕಲಚೇತನರ ಮತ್ತು ಹಿರಿಯನಾಗರಿಕ ಇಲಾಖೆ ಅಧಿಕಾರಿ ಎಂ.ನಿರಂಜನ್‌ ಭಟ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)