ಮಂಗಳವಾರ, ಆಗಸ್ಟ್ 11, 2020
26 °C

‘ಕಲ್ಲಪ್ಪ ಪತ್ನಿ ಕೂಲಿ ಮಾಡಿ ಜೀವನ ಸಾಗಿಸಬೇಕಾಗುತ್ತಿತ್ತು’: ಕಾಂಗ್ರೆಸ್‌ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕಲ್ಲಪ್ಪ ಪತ್ನಿ ಕೂಲಿ ಮಾಡಿ ಜೀವನ ಸಾಗಿಸಬೇಕಾಗುತ್ತಿತ್ತು’: ಕಾಂಗ್ರೆಸ್‌ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಅಥಣಿ (ಬೆಳಗಾವಿ ಜಿಲ್ಲೆ): ‘ಡಿವೈಎಸ್ಪಿಯಾಗಿದ್ದ ಕಲ್ಲಪ್ಪ ಹಂಡಿಬಾಗ್‌ ಆತ್ಮಹತ್ಯೆ ಮಾಡಿಕೊಂಡಾಗ ದನಿ ಎತ್ತಿದ ನಾನು ಸರ್ಕಾರದ ಮೇಲೆ ಒತ್ತಡ ಹೇರಿ ಅವರ ಕುಟುಂಬಕ್ಕೆ ಸೌಲಭ್ಯ ಕೊಡಿಸಿದ್ದೆ. ಇಲ್ಲವಾಗಿದ್ದರೆ ಆ ಅಧಿಕಾರಿ ಪತ್ನಿ ಕೂಲಿ ಮಾಡಿ ಅಥವಾ ಮೈ ಮಾರಿಕೊಂಡು ಜೀವನ ಸಾಗಿಸಬೇಕಾಗುತ್ತಿತ್ತು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಇಲ್ಲಿ ಸೋಮವಾರ ನಡೆದ ಕುಮಾರಪರ್ವ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕಲ್ಲಪ್ಪ ಮನೆಯ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು. ಬಡ ಕುಟುಂಬವಾಗಿತ್ತು. ಆಶ್ರಯ ಮನೆಯಲ್ಲಿ ವಾಸಿಸುತ್ತಿದ್ದರು. ಆ ಕುಟುಂಬದವರಿಗೆ ನಾನು ನೆರವಾದೆ. ಸರ್ಕಾರಿ ಕೆಲಸ ಕಂಡುಕೊಳ್ಳುವುದಕ್ಕೆ ನೆರವಾದೆ’ ಎಂದು ನೆನೆದರು.

‘ನಾನು ಹೋಗಿ ಆ ಕುಟುಂಬದ ಪರಿಸ್ಥಿತಿ ನೋಡಿದ್ದೆ. ವಿಧಾನಸೌಧದಲ್ಲಿ ಕುಟುಂಬದ ಪರವಾಗಿ ನಾನು ಚರ್ಚಿಸದೆ ಇದ್ದಿದ್ದರೆ, 20 ವರ್ಷದ ಹೆಣ್ಣು ಮಗಳು ಭಿಕ್ಷೆ ಬೇಡಕಾಗುತ್ತಿತ್ತು ಅಥವಾ ಕೂಲಿ ಕೆಲಸ ಮಾಡಬೇಕಿತ್ತು ಇಲ್ಲವೇ, ಸಮಾಜದ ಕೆಟ್ಟ ದೃಷ್ಟಿ ಬಿದ್ದು ಮೈ ಮಾರಿಕೊಳ್ಳಬೇಕಾಗುತ್ತಿತ್ತು. ಅಂಥ ಹೆಣ್ಣು ಮಗಳಿಗೆ ಸರ್ಕಾರ ಹೊಸ ಜೀವನ ಕೊಡಬೇಕು ಎಂದು ಹೋರಾಟ ಮಾಡಿದ್ದೆ. ಆಕೆ ಈಗ ಬೈಲಹೊಂಗಲ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಉಪನೋಂದಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಒತ್ತಡ ಹಾಕಿ ಆ ಕುಟುಂಬವನ್ನು ಉಳಿಸಿದ ನನ್ನ ನಡವಳಿಕೆ ಬಗ್ಗೆ ಒಂದು ಉದಾಹರಣೆ ಕೊಡುತ್ತಿದ್ದೇನೆ’ ಎಂದು ತಿಳಿಸಿದರು.

‌‘ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡದಿರುವುದು, ಅಧಿಕಾರ ದುರ್ಬಳಕೆ, ದಕ್ಷ ಅಧಿಕಾರಿಗಳ ಆತ್ಮಹತ್ಯೆ ಇವಿಷ್ಟೇ ಈ ಸರ್ಕಾರದ ಸಾಧನೆ’ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.