ಭಾನುವಾರ, ಡಿಸೆಂಬರ್ 15, 2019
25 °C

ಕಾಡಿನಲ್ಲೊಂದು ಬತೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಡಿನಲ್ಲೊಂದು ಬತೇರಿ

ವೈದ್ಯ ಶಿವಮೊಗ್ಗ

ಬರೇಕಲ್ ಬತೇರಿ. ಹೊಸನಗರ ತಾಲ್ಲೂಕಿನ ಕಾರಣಗಿರಿ ಸಮೀಪದಲ್ಲಿರುವ -ಸಂಪೂರ್ಣ ಅರಣ್ಯ ಆವರಿಸಿಕೊಂಡಿರುವ ಚಾರಣದ ತಾಣ. ಒಂದು ಕಾಲದಲ್ಲಿ ಶತ್ರುಗಳನ್ನು ಮಣಿಸಲು, ಕಲ್ಲುಗಳನ್ನು ಸಂಗ್ರಹಸಿದ್ದ ಜಾಗ ಇದು. ಆಗೆಲ್ಲಾ ಇಲ್ಲಿ ‌‘ಬರೇಕಲ್ಲು’ಗಳೇ! ಆದರೀಗ ಇಲ್ಲಿ ಬರೀ ಗಿಡಗಂಟಿಗಳು, ಪಾಳು ಬಿದ್ದಿರುವ ಬುರ್ಜುಗಳು.

ಹಾಗೆ ನೋಡಿದರೆ, ಇದೊಂದು ಸಾಧಾರಣ ಕೋಟೆ. ಕೆಳದಿ ಅರಸರ ಕಾಲಘಟ್ಟದ ಇತಿಹಾಸದ ಪುಟಗಳಲ್ಲಿ ಅಲ್ಲಲ್ಲಿ ಉಲ್ಲೇಖಗೊಂಡಿರುವ, ಈಗ ಅದೇ ಇತಿಹಾಸವಾಗಿರುವ ಈ ಕೋಟೆ ಒಂದು ಕಾಲದಲ್ಲಿ ಶಸ್ತ್ರಾಗಾರವಾಗಿತ್ತು. ಸೈನಿಕ ಕುಟುಂಬಗಳು ನೆಲೆಸಿದ್ದವು ಎಂಬುದಕ್ಕೆ ಅಲ್ಲಲ್ಲಿ ಈಗಲೂ ಕುರುಹುಗಳಿವೆ. ಅಂದಿನ ದಿನಗಳಲ್ಲಿ ಶತ್ರುಗಳನ್ನು ಎದುರಿಸಲು ಈ ಬತೇರಿ ಮೇಲಿಂದ ‘ಕವಣೆ ಕಲ್ಲು’ಗಳನ್ನು ಪ್ರಯೋಗಿಸಲಾಗುತ್ತಿತ್ತು ಎನ್ನಲಾಗಿದೆ.

ಈ ಕಲ್ಲುಗಳೇ ಕೆಳದಿ ಅರಸ ಪರಂಪರೆಗೆ ಪ್ರಬಲ ಅಸ್ತ್ರ! ಹೀಗಾಗಿ ಇದು ಒಂದು ರೀತಿ ‘ರಕ್ಷಣಾ ಕೋಟೆ’. ಈ ಹೊಸನಗರ ಪ್ರದೇಶದಿಂದ ಆರಂಭಿಸಿ, ಪಶ್ಚಿಮ ಘಟ್ಟಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡು ಅದನ್ನು ರಕ್ಷಿಸಿ-ಉಳಿಸಿಕೊಂಡಿದ್ದು ಕೆಳದಿ ಅರಸರ ಜಾಣ್ಮೆಗೆ ಸಾಕ್ಷಿ.

‘ಅಂದಹಾಗೆ, ಇಲ್ಲಿ, ಬತೇರಿ ಸುತ್ತಮುತ್ತಲೂ ಇದ್ದದ್ದು ಆಪತ್ಕಾಲೀನ ಸೇನೆ. ಅಂದರೆ, ಈಗಿನ ನಮ್ಮ ರಿಸರ್ವ್ ಪೊಲೀಸ್ ಇದ್ದ ಹಾಗೆ. ಹೊನ್ನೆ ಕಂಬಳಿ ಅರಸರಿಂದ ಆರಂಭಿಸಿ ಹೈದರಾಲಿ- ಟಿಪ್ಪುಸುಲ್ತಾನ್- ಅನಂತರ ಬ್ರಿಟಿಷರ ಕಾಲದವರೆಗೆ ಇಲ್ಲಿ ಜನವಸತಿಯೂ ಇತ್ತು. ಸೇನಾ ಸಮುಚ್ಚಯವೂ ಇತ್ತು’ ಎನ್ನುತ್ತಾರೆ ಇತಿಹಾಸ ಸಂಶೋಧಕ ಅಮ್ರಯ್ಯ ಮಠ. ಈ ಅರಸರಿಗೆ ಹೊಸಂಗಡಿ ರಾಜಧಾನಿಯಾಗಿತ್ತು. ಇದನ್ನು 1618ರವರೆಗೆ ವೆಂಕಟಪ್ಪ ನಾಯಕ ಪ್ರಾಂತ್ಯವನ್ನಾಗಿ ಪರಿವರ್ತಿಸಿದ್ದ ಎಂಬ ಉಲ್ಲೇಖವೂ ಇದೆ. ಇದು ಹೆಚ್ಚು ಕಡಿಮೆ ಟಿಪ್ಪು ಸುಲ್ತಾನ್ ಕಾಲದವರೆಗೂ ಕಾರ್ಯಗತವಾಗಿತ್ತು ಎನ್ನಲಾಗಿದೆ.

ಸೂಳಗುಡ್ಡ, ಹನುಮನ ಬಾಗಿಲು, ಕರಿಮನೆಗಳಲ್ಲಿ ಶಸ್ತ್ರಾಗಾರಗಳು, ಕಾವಲು ಭಟರಿಗೆ ವೀಕ್ಷಣಾ ಗೋಪುರಗಳಾಗಿಯೂ ಈ ಬತೇರಿ ಬಳಕೆಯಾಗಿತ್ತು. ಹಾಗೆಯೇ ಅಂದಿನ ರಾಜವೈಭವದ ಸಂಕೇತವಾಗಿಯೂ ಈ ಬತೇರಿ ಇತ್ತು.

ಈ ಭಾಗವನ್ನು ಹೊನ್ನೆ ಕಂಬಳಿಯ ವೆಂಕಟ ಸಾಮಂತ, ಹರಿಹೊನ್ನೆ ಕಂಬಳ, ಶಂಕರಿ ದೇವಿ ಅಮ್ಮ, ಅಮ್ಮಿದೇವಿ ಅಮ್ಮರೆಂಬ ನಾಲ್ವರು ಆಳಿದ್ದರೆ, ಆನಂತರ ಸರಿಸುಮಾರು 1681ರಿಂದ ಕೆಳದಿ ಅರಸರ ಪರಂಪರೆಯ ಹಿರಿಯ ವೆಂಕಟಪ್ಪ ನಾಯಕ, ವೀರಭದ್ರ ನಾಯಕ, ಶಿಸ್ತಿನ ಶಿವಪ್ಪ ನಾಯಕ, ಎರಡನೇ ವೆಂಕಟಪ್ಪ ನಾಯಕ, ಭದ್ರಪ್ಪ ನಾಯಕ, ಸೋಮಶೇಖರ ನಾಯಕ, ಕೆಳದಿ ಚನ್ನಮಾಜಿ, ಬಸವಪ್ಪ ನಾಯಕ, ಎರಡನೇ ಸೋಮಶೇಖರ ನಾಯಕ, ಎರಡನೇ ಬಸಪ್ಪ ನಾಯಕ, ಚನ್ನ ಬಸವ ನಾಯಕ, ಮುಮ್ಮಡಿ ಸೋಮಶೇಖರ ನಾಯಕ ಹಾಗೂ ಈ ಪರಂಪರೆಯ ಕೊನೆಯಲ್ಲಿ ಕೆಳದಿ ವೀರಮ್ಮಾಜಿ ಆಳಿದ್ದಾರೆ.

ಆನಂತರ ಇದು, ಹೈದರಾಲಿ, ಟಿಪ್ಪುಸುಲ್ತಾನ್ ವಶವಾಗಿ, ಅಲ್ಲಿಂದ ಮುಂದೆ ಬ್ರಿಟಿಷರು ಇಲ್ಲಿ ಆಧಿಪತ್ಯ ಸಾಧಿಸಿದ್ದರು ಎನ್ನುತ್ತದೆ ಇತಿಹಾಸ. ಕೊನೆಯಲ್ಲಿ ಮೈಸೂರು ಸಂಸ್ಥಾನಕ್ಕೆ ಒಳಪಟ್ಟಿದ್ದ ಸಂದರ್ಭದಲ್ಲಿಯೂ ಇದು ಗಮನಾರ್ಹ ಪ್ರದೇಶವೇ ಆಗಿತ್ತು. ಆದರೆ, ಸ್ವತಂತ್ರ್ಯಾನಂತರ ಇದು ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟು, ನಮ್ಮನ್ನಾಳುವ ಮಂದಿಯ ದೂರದೃಷ್ಟಿಯ ಕೊರತೆಯ ಸಂಕೇತವಾಗಿ ಉಳಿದುಕೊಂಡಿದೆ.

ಇದು ದಟ್ಟ ಅರಣ್ಯ ಪ್ರದೇಶದಲ್ಲಿರುವುದರಿಂದ, ಅರಣ್ಯ ಇಲಾಖೆಗೆ ಇದನ್ನು ರಕ್ಷಿಸುವ ಹೊಣೆಗಾರಿಕೆ ಸಹಜವಾಗಿಯೇ ಇಲ್ಲ. ಹೀಗಾಗಿ ಪ್ರಾಚ್ಯವಸ್ತು ಇಲಾಖೆ ಇದನ್ನು ಗಮನಿಸುವಂತಿಲ್ಲ. ಇದರ ಪರಿಣಾಮವಾಗಿ ಈ ಐತಿಹಾಸಿಕ ಮಹತ್ವದ ಬತೇರಿ ಇದೀಗ ಬರೀ ಗಿಡಗಂಟಿಗಳ ಕೊಂಪೆಯಾಗಿ ಉಳಿದಿದೆ. ಅದರ ಸೌಂದರ್ಯ ಸಂಪೂರ್ಣ ಮಸುಕಾಗಿ ಹೋಗಿದೆ. ಈ ಬತೇರಿ ಏರಬೇಕಾದರೆ, ದಾರಿ ಹುಡುಕಿಕೊಂಡು-ದಾರಿ ಮಾಡಿಕೊಂಡೇ ಸಾಗಬೇಕು. ಸರಿ ಸುಮಾರು ಎಂಟು ಕಿ.ಮೀ. ಎತ್ತರಕ್ಕೆ ಸಾಗಿದರೂ, ಬತೇರಿ ಮೇಲಿನ ಆ ವಿಹಂಗಮ ನೋಟದ ಆನಂದ ಸಿಗದಿರುವುದಕ್ಕೆ ಈ ಗಿಡಗಂಟಿಗಳು, ಪೊದೆಗಳೇ ಅಡ್ಡಿ.

ಹೀಗೆ ಕಷ್ಟಪಟ್ಟು ಬತೇರಿಯ ನೆತ್ತಿ ತಲುಪಿ ನಿಂತು ನೋಡಿದಾಗ, ಇದನ್ನು ನೋಡಲು ಇಷ್ಟು ಕಷ್ಟಪಡಬೇಕಿತ್ತೇ ಎಂದೆನಿಸದಿರದು. ಆ ಮಟ್ಟಿಗೆ ಅದು ಪಾಳುಬಿದ್ದಿದೆ. ಈ ತುದಿ ತಲುಪಬೇಕಾದರೆ, ಹೊಸನಗರದ ಹೊರವಲಯದ ಕಾರ್ಗಡಿ ವೃತ್ತದಿಂದ ನಾಗರಕುಡಿಗೆ ಮಾರ್ಗವಾಗಿ ತೊಗರೆ ಅರಣ್ಯ ಪ್ರದೇಶವನ್ನು ಹೊಕ್ಕಿ ಸಾಗಬೇಕು. ದಾರಿಯಲ್ಲಿ ಬೃಹದಾಕಾರದ ಬಂಡೆಗಳು ಎದುರಾಗುತ್ತವೆ. ಕೆಲವು ವಿಶಾಲವಾಗಿ ‘ಮಲಗಿದ್ದರೆ’ ಇನ್ನೂ ಕೆಲವು ಭಾರೀ ಗಾತ್ರದಲ್ಲಿ ಎದ್ದು ನಿಂತಿವೆ. ಅದರಲ್ಲಿಯೂ ಎರಡು ಸಣ್ಣ ಬಂಡೆಗಳ ಮೇಲೆ ಭಾರೀ ಗಾತ್ರದಲ್ಲಿ ನಿಂತಿರುವ ‘ಎತ್ತುಗಲ್ಲು’, ‘ಹೋರಿಗಲ್ಲು’ಗಳು ಒಂದು ಆಕರ್ಷಣೆಯಾದರೆ, ಇನ್ನೊಂದೆಡೆಯಲ್ಲಿ ‘ಟಿ’ ಆಕಾರದ ಕೊಳ (ಈಗ ಬೇಸಿಗೆಯಲ್ಲಿ ಬತ್ತಿದೆ) ನೋಡುಗರ ಗಮನ ಸೆಳೆಯುತ್ತದೆ. ಈ ಬತೇರಿ ಮೇಲಿಂದ ಇಡೀ ಪಶ್ಚಿಮ ಘಟ್ಟದ ವಿಹಂಗಮ ನೋಟ ಸಾಧ್ಯ.

ಮಲೆನಾಡಿನ ಮಡಿಲಲ್ಲಿ ಅಡಗಿರುವ ಇಂತಹ ರಮ್ಯತಾಣ ವನ್ನು‘ಅಭಿವೃದ್ಧಿ’ಪಡಿಸುವ ನಿಟ್ಟಿನಲ್ಲಿ ಸಂಬಂಧ ಪಟ್ಟವರು ಈಗಲಾದರೂ ಗಮನ ಹರಿಸಬೇಕಿದೆ. ಕುಟುಂಬ ಸಮೇತ ಮಾಡಬಹುದಾದ ಚಾರಣಕ್ಕೆ ಪ್ರಶಸ್ತ ಸ್ಥಳ ಇದು. ಇದನ್ನು ರಕ್ಷಿಸುವುದರ ಮೂಲಕ  ಐತಿಹಾಸಿಕ ಪರಂಪರೆಯನ್ನು ಉಳಿಸಿಕೊಳ್ಳ ಬೇಕಿದೆ. ಈ ಗಿಡಗಂಟಿಗಳ ಜೊತೆಗಿನ

ಚಾರಣ ಮುಗಿಸಿ, ಬತೇರಿ ಇಳಿದು ದಣಿವಾರಿಸಿಕೊಳ್ಳಲು ಇನ್ನೂ ಒಂದು ಸ್ಥಳವಿದೆ. ಅದೇ ಕಾರಣಗಿರಿಯ ಗಣಪತಿ ದೇವಾಲಯದ ಹಿಂಬದಿಯ ರಸ್ತೆಯ ಕೊನೆಗೆ ಸಿಗುವ ಬಿಲ್ಸಾಗರ-ಬ್ರಾಹ್ಮಣ ತೊರವೆ ನಡುವಿನ ಶರಾವತಿ ಹಿನ್ನೀರು. ಈ ಹಿನ್ನೀರಿನಲ್ಲಿ ಬೋಟಿಂಗ್ ವ್ಯವಸ್ಥೆ ಕೂಡ ಇದೆ. ಚಾರಣದ ದಣಿವು ನೀಗಿಸಲು ಪ್ರಶಸ್ತ ಸ್ಥಳ ಇದು.

ಈ ಚಾರಣದ ಮಾರ್ಗದರ್ಶನಕ್ಕೆ ಕಾರ್ತಿಕ್ –93971 01234 ಹಾಗೂ ಇತಿಹಾಸದ ವಿವರಗಳಿಗಾಗಿ ಅಮ್ರಯ್ಯ ಮಠ –94804 02712 ಅವರನ್ನು ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)