ಭಾನುವಾರ, ಡಿಸೆಂಬರ್ 15, 2019
19 °C

ಚುನಾವಣಾ ಆಯೋಗ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣಾ ಆಯೋಗ ಗರಂ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಸಂಗ್ರಹಿಸುತ್ತಿರುವ ಮಾಹಿತಿಯನ್ನು ಗುಪ್ತಚರದ ಅಧಿಕಾರಿಗಳು ಸೋರಿಕೆ ಮಾಡುತ್ತಿರುವುದಕ್ಕೆ ಚುನಾವಣಾ ಆಯೋಗ ಗರಂ ಆಗಿದೆ.

ಈ ಸಂಬಂಧ ಗುಪ್ತಚರ ಇಲಾಖೆ ಡಿಜಿಪಿ ಎ.ಎಂ.ಪ್ರಸಾದ್ ಅವರಿಗೆ ಬಿಸಿ ಮುಟ್ಟಿಸಿರುವ ಆಯೋಗ, ಸೋರಿಕೆ ಮಾಡುತ್ತಿರುವವರು ಯಾರು ಎಂಬುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಚರ್ಚಿಸಲೆಂದು ಪ್ರಸಾದ್‌, ಸೋಮವಾರ ಗುಪ್ತಚರ ಅಧಿಕಾರಿಗಳ ಸಭೆ ನಡೆಸಿದರು. ಶಾಂತಿನಗರದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

‘ಇಲಾಖೆಯ ಕೆಲವರು, ಮಾಹಿತಿಯನ್ನು ರಾಜಕೀಯ ಪಕ್ಷಗಳ ಮುಖಂಡರಿಗೆ ನಿರಂತರವಾಗಿ ತಿಳಿಸುತ್ತಿದ್ದಾರೆ. ಇದರಿಂದ ಚುನಾವಣಾ ಆಯೋಗವು ಗುಪ್ತಚರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಪ್ರಸಾದ್‌ ಸಭೆಯಲ್ಲಿ ಹೇಳಿದರು’ ಎಂದು ಮೂಲಗಳು ತಿಳಿಸಿವೆ.

ಗುಪ್ತಚರದಿಂದ ಆಗುತ್ತಿರುವ ಮಾಹಿತಿ ಸೋರಿಕೆ ಬಗ್ಗೆ ತನಿಖೆ ನಡೆಸಲೆಂದು ಆಯೋಗವು ಪ್ರತ್ಯೇಕ ತಂಡವೊಂದನ್ನು ರಚಿಸಿದೆ. ಆ ತಂಡದ ಅಧಿಕಾರಿಗಳು, ಈಗಾಗಲೇ ಇಲಾಖೆಯ ಕೆಲ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ಆಯೋಗಕ್ಕೆ ವರದಿ ನೀಡಲಿದ್ದಾರೆ ಎಂದು ಗೊತ್ತಾಗಿದೆ.

ಮಿಂಚಿನ ನೋಂದಣಿ: 6.45 ಲಕ್ಷ ಅರ್ಜಿ ಸ್ವೀಕಾರ

ಬೆಂಗಳೂರು: ಚುನಾವಣಾ ಆಯೋಗ ಏರ್ಪಡಿಸಿದ್ದ ‘ಮಿಂಚಿನ ನೋಂದಣಿ’ ಅಭಿಯಾನದಲ್ಲಿ ರಾಜ್ಯದಾದ್ಯಂತ 6.45 ಲಕ್ಷ ಅರ್ಜಿಗಳು ಸ್ವೀಕಾರಗೊಂಡಿವೆ.

ವಿಧಾನಸಭಾ ಚುನಾವಣೆ ಕಾರಣ ಮತಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಇದೇ 8ರಂದು ಈ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ರಾಜ್ಯದ 30 ಜಿಲ್ಲೆಗಳಿಂದಲೂ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಒಟ್ಟು 4,90,351 ಫಾರಂ-6 ಅನ್ನು ಸ್ವೀಕರಿಸಲಾಗಿದೆ. 6,45,555 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ, ಬಿಬಿಎಂಪಿ ವ್ಯಾಪ್ತಿಯಲ್ಲಿ 1,30,466 ಅರ್ಜಿಗಳು ಸ್ವೀಕಾರಗೊಂಡಿವೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

ಪ್ರಚಾರಕ್ಕೆ ಮಕ್ಕಳ ಬಳಕೆ: ನೋಟಿಸ್‌ ‌

ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಸಿ.ಎಸ್‌.ಪುಟ್ಟರಾಜು ಪರ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷರಿಗೆ ಚುನಾವಣಾಧಿಕಾರಿ ಸೋಮವಾರ ನೋಟಿಸ್‌ ನೀಡಿದ್ದಾರೆ.

ದುದ್ದ ಹೋಬಳಿಯ ಹಳ್ಳಿಗಳಲ್ಲಿ ಭಾನುವಾರ ಪುಟ್ಟರಾಜು ಬೆಂಬಲಿಗರು ಪ್ರಚಾರ ಕೈಗೊಂಡಿದ್ದರು. ಈ ವೇಳೆ ನೀತಿ ಸಂಹಿತೆ ಉಲ್ಲಂಘಿಸಿ ಕಾರ್ಯಕರ್ತರಿಗೆ ಊಟ ಆಯೋಜನೆ ಮಾಡಲಾಗಿತ್ತು, ಅಲ್ಲದೆ ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ಬಳಸಿಕೊಳ್ಳಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ಕಾರಣ ಕೇಳಿ ಜೆಡಿಎಸ್‌ ಪಾಂಡವಪುರ ತಾಲ್ಲೂಕು ಘಟಕದ ಅಧ್ಯಕ್ಷ ಹಿರೇಮರಳಿ ಧರ್ಮರಾಜು ಅವರಿಗೆ ತಾಲ್ಲೂಕು ಚುನಾವಣಾಧಿಕಾರಿ ಎಚ್‌.ಪಿ.ಕುಮಾರ್‌ ನೋಟಿಸ್‌ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)