ಭಾನುವಾರ, ಡಿಸೆಂಬರ್ 15, 2019
23 °C

ಕರಡು ಸಲ್ಲಿಕೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಡು ಸಲ್ಲಿಕೆಗೆ ಸೂಚನೆ

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆಗಾಗಿ ಯೋಜನೆ (ಸ್ಕೀಂ) ರೂಪಿಸುವ ನಿಟ್ಟಿನಲ್ಲಿ, ಮೇ 3ರೊಳಗೆ ಕರಡು ಸಿದ್ಧಪಡಿಸಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೋಮವಾರ ಸೂಚಿಸಿರುವ ಸುಪ್ರೀಂ ಕೋರ್ಟ್‌, ಆ ಕರಡನ್ನು ಪರಿಶೀಲಿಸಿ ಕಣಿವೆ ವ್ಯಾಪ್ತಿಯ ರಾಜ್ಯಗಳಿಗೆ ಯಾವ ರೀತಿ ನೀರು ಒದಗಿಸಬೇಕು ಎಂಬ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದೆ.

‘ಕಾವೇರಿ ಜಲವಿವಾದ ಕುರಿತು ಕಳೆದ ಫೆಬ್ರುವರಿ 6ರ ತೀರ್ಪನ್ನು ಜಾರಿಗೊಳಿಸಲು ನೀಡಲಾದ ಆರು ವಾರಗಳ ಗಡುವು ಮೀರಿದ್ದರೂ ಯಾವುದೇ ಕ್ರಮ ಕೈಗೊಂwಡಿಲ್ಲ’ ಎಂದು ದೂರಿ ತಮಿಳುನಾಡು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ‘ನಮ್ಮ ತೀರ್ಪಿನ ಜಾರಿ ನಿಮ್ಮ ಕರ್ತವ್ಯ. ನಮ್ಮ ಆದೇಶವನ್ನು ಚಾಚೂತಪ್ಪದೆ ಪಾಲಿಸಬೇಕಷ್ಟೆ’ ಎಂದು ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿತು.

‘ಸ್ಕೀಂ ಎಂದರೆ ಏನು ಎಂಬುದನ್ನು ಸ್ಪಷ್ಟಪಡಿಸಲು ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗೂ ಈ ಮೂಲಕ ಉತ್ತರ ನೀಡಿದ ನ್ಯಾಯಪೀಠ, ‘ನೀವು ಯಾವ ರೀತಿ ಅರ್ಥೈಸಿಕೊಂಡಿದ್ದೀರಿ ಎಂಬ ಕುರಿತು ಕರಡು ಸಿದ್ಧಪಡಿಸಿ ಮೇ 3ರೊಳಗೆ ನಮಗೆ ಸಲ್ಲಿಸಿ ಅದನ್ನು ಪರಿಶೀಲಿಸಿದ ನಂತರ ನೀರು ವಿತರಣೆಯ ಬಗೆ ಹೇಗೆ ಎಂಬುದನ್ನು ನಾವೇ ನಿರ್ಧರಿಸುತ್ತೇವೆ’ ಎಂದು ಸ್ಪಷ್ಟಪಡಿಸಿದೆ.

‘ಕರ್ನಾಟಕದಲ್ಲಿ ಚುನಾವಣೆ ಇದೆ ಎಂಬ ಸಬೂಬು ನೀಡಿ ಮಂಡಳಿ ಸ್ಥಾಪಿಸುವುದನ್ನು ಮುಂದೂಡಿರುವ ಕೇಂದ್ರ ಸರ್ಕಾರ, ನ್ಯಾಯಾಲಯದ ಆದೇಶ ಪಾಲಿಸದಿರುವುದು ಸರಿಯಲ್ಲ’ ಎಂದು ಮೇಲ್ಮನವಿ ವಿಚಾರಣೆ ಆರಂಭವಾದ ಕೂಡಲೇ ತಮಿಳುನಾಡಿನ ಪರ ಹಿರಿಯ ವಕೀಲ ಶೇಖರ್ ನಾಫಡೆ ನ್ಯಾಯಪೀಠದ ಗಮನಕ್ಕೆ ತಂದರು.

ತಕ್ಷಣವೇ ಮಧ್ಯ ಪ್ರವೇಶಿಸಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ‘ಕೇಂದ್ರವು ಸ್ಕೀಂ ರೂಪಿಸುವ ಕುರಿತು ಕಣಿವೆ ವ್ಯಾಪ್ತಿಯ ರಾಜ್ಯಗಳ ಅಧಿಕಾರಿಗಳ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದೆ. ನಂತರ ಈ ಕುರಿತು ಸ್ಪಷ್ಟನೆ ಬಯಸಿ ಕೋರ್ಟ್‌ಗೆ ಮೇಲ್ಮನವಿಯನ್ನೂ ಸಲ್ಲಿಸಿದೆ. ಹಾಗಾಗಿ ನ್ಯಾಯಾಂಗ ನಿಂದನೆ ಆಗಿಲ್ಲ’ ಎಂದು ಹೇಳಿ ತಮಿಳುನಾಡಿನ ಆರೋಪವನ್ನು ತಳ್ಳಿ ಹಾಕಿದರು.

‘ಸ್ಕೀಂ ಎಂದರೆ ಸ್ಕೀಂ ಅಷ್ಟೆ. ಅದನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುವ ಅಗತ್ಯವಿಲ್ಲ’ ಎಂದು ಈ ಸಂದರ್ಭ ಪುನರುಚ್ಚರಿಸಿದ ನ್ಯಾಯಮೂರ್ತಿ ಮಿಶ್ರಾ, ಈ ಮೂಲಕ ನದಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಒತ್ತಾಯಿಸುತ್ತಿರುವ ತಮಿಳುನಾಡಿಗೆ ಎಚ್ಚರಿಕೆ ನೀಡಿತು.

ನಿರ್ವಹಣಾ ಮಂಡಳಿ ರಚಿಸುವಂತೆ ಜಲವಿವಾದ ನ್ಯಾಯ ಮಂಡಳಿ ತೀರ್ಪಿನಲ್ಲಿ ತಿಳಿಸಿದ್ದರೂ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ನಾಫಡೆ ಅವರು ಹೇಳುತ್ತಿದ್ದಂತೆಯೇ ಆಕ್ರೋಶ ವ್ಯಕ್ತಪಡಿಸಿದ ಪೀಠವು, ‘ನಾವು ನೀರು ಹಂಚಿಕೆ ಮಾಡಿ ಆದೇಶ ನೀಡಿಯಾಗಿದೆ. ಕಾವೇರಿ ಜಲವಿವಾದ ನ್ಯಾಯಮಂಡಳಿಯು 2007ರ ಫೆಬ್ರುವರಿ 5ರಂದು ನೀಡಿದ್ದ ಐತೀರ್ಪು ನಮ್ಮ ತೀರ್ಪಿನಲ್ಲೇ ವಿಲೀನಗೊಂಡಿದೆ. ಆದರೂ ಈಗ ಪದೇಪದೇ ನ್ಯಾಯಮಂಡಳಿ ಐತೀರ್ಪನ್ನೇ ಏಕೆ ಪ್ರಸ್ತಾಪಿಸುತ್ತೀರಿ’ ಎಂದು ಪ್ರಶ್ನಿಸಿತು.

ವಿಚಾರಣೆಯ ವೇಳೆ ಮಂಡಳಿ ಎಂಬ ಪದವನ್ನೇ ಬಳಸದ ನ್ಯಾಯಪೀಠವು, ‘ಸ್ಕೀಂ’ ಎಂಬ ಪದವನ್ನೇ ಬಳಸಿತಲ್ಲದೆ, ‘ಕೇಂದ್ರ ಸರ್ಕಾರ ಸ್ಕೀಂ ರೂಪಿಸಲೇಬೇಕು. ಇದರಿಂದ ತಪ್ಪಿಸಿಕೊಳ್ಳುವಂತಿಲ್ಲ’ ಎಂದು ಹೇಳಿತು.

‘ನೀರು ಹಂಚಿಕೆ ಬಗ್ಗೆ ಪ್ರತಿ ಸಲವೂ ಕೋರ್ಟ್‌ ಗಮನ ಹರಿಸಲು ಸಾಧ್ಯವಿಲ್ಲ. ಈಗಾಗಲೇ ನೀಡಲಾಗಿರುವ ತೀರ್ಪಿಗೆ ಎಲ್ಲರೂ ಬದ್ಧವಾಗಿರಬೇಕು. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಂತೆ ನೀವು ನಿಮ್ಮ ಸರ್ಕಾರಗಳಿಗೆ ತಿಳಿಸಿ. ಆಯಾ ರಾಜ್ಯಗಳ ಜನರೂ ಸಹಕರಿಸುವಂತೆ ತಿಳಿಹೇಳಿ’ ಎಂದು ಹೇಳಿದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಹಾಗೂ ಎ.ಎಂ. ಖನ್ವಿಲ್ಕರ್‌ ಅವರಿದ್ದ ನ್ಯಾಯಪೀಠ, ಈ ಮೂಲಕ ತಮಿಳುನಾಡಿನಲ್ಲಿ ನಡೆದಿರುವ ಪ್ರತಿಭಟನೆಗಳನ್ನು ನಿಯಂತ್ರಿಸುವಂತೆ ಪರೋಕ್ಷವಾಗಿ ಸಲಹೆ ನೀಡಿತು.

ಕಾವೇರಿ ಕಣಿವೆಯಲ್ಲಿ ಲಭ್ಯವಿರುವ 740 ಟಿಎಂಸಿ ಅಡಿ ನೀರಿನಲ್ಲಿ ಕರ್ನಾಟಕಕ್ಕೆ 284.75 ಟಿಎಂಸಿ ಅಡಿ, ತಮಿಳುನಾಡಿಗೆ 404.25 ಟಿಎಂಸಿ ಅಡಿ, ಕೇರಳಕ್ಕೆ 30 ಟಿಎಂಸಿ ಅಡಿ ಹಾಗೂ ಪುದುಚೇರಿಗೆ 7 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ ತೀರ್ಪು ನೀಡಲಾಗಿದೆ.

ನದಿ ಪಾತ್ರದ ಮೇಲಿನ ಹಂತದ ರಾಜ್ಯವಾಗಿರುವ ಕರ್ನಾಟಕದಿಂದ ಪ್ರತಿ ವರ್ಷ ತಮಿಳುನಾಡು, ಪುದುಚೇರಿಗಳಿಗೆ ನೀರು ಹರಿಸಲು ಅನುಕೂಲವಾಗುವಂತೆ ಸ್ಕೀಂ ರೂಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ.

ನ್ಯಾಯಮಂಡಳಿ ತೀರ್ಪಿನ ಪ್ರಸ್ತಾಪ ಬೇಡ

ಶಾಂತಿ ಕಾಪಾಡುವಂತೆ ಜನತೆಗೆ ತಿಳಿ ಹೇಳಿ

‘ಸ್ಕೀಂ’ಗೆ ಬೇರೆ ರೀತಿಯ ಅರ್ಥ ಸಲ್ಲದು

ಪ್ರತಿಕ್ರಿಯಿಸಿ (+)