ಬಳ್ಳಾರಿ ಗ್ರಾಮೀಣ: ಅತಂತ್ರವಾಗಲಿದೆಯೇ ಬಿಜೆಪಿ?

7
ಮೊಳಕಾಲ್ಮುರಿನತ್ತ ಶ್ರೀರಾಮುಲು, ಸಂಡೂರಿಗೆ ರಾಘವೇಂದ್ರ, ಕಂಪ್ಲಿಯಲ್ಲಿ ಸುರೇಶ್‌ಬಾಬು

ಬಳ್ಳಾರಿ ಗ್ರಾಮೀಣ: ಅತಂತ್ರವಾಗಲಿದೆಯೇ ಬಿಜೆಪಿ?

Published:
Updated:

ಬಳ್ಳಾರಿ: ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆದ್ದು ದಾಖಲೆ ಸೃಷ್ಟಿಸಿದ್ದ ಸಂಸದ ಬಿ.ಶ್ರೀರಾಮುಲು ಅವರಿಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಸೂಚಿಸುವ ಮೂಲಕ ಬಿಜೆಪಿ ವರಿಷ್ಠರು ಪಕ್ಷದ ಸ್ಥಳೀಯ ಮುಖಂಡರಲ್ಲಿ ಮತ್ತು ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಮೊಳಕಾಲ್ಮುರು ಕ್ಷೇತ್ರದಲ್ಲಿ ಶ್ರೀರಾಮುಲು ಗೆಲ್ಲುವರೇ ಎಂಬುದಕ್ಕಿಂತಲೂ, ಅವರಿಲ್ಲದ ಗ್ರಾಮೀಣ ಕ್ಷೇತ್ರದಲ್ಲಿ ಪಕ್ಷಕ್ಕೆ ಗೆಲುವು ಸಾಧ್ಯವೇ? ಇಲ್ಲಿ ಕಾಂಗ್ರೆಸ್‌ ಅಥವಾ ಜೆಡಿಎಸ್‌ಗೆ ಗೆಲುವು ಸುಲಭದ ತುತ್ತಾಗಲಿದೆಯೇ ಎಂಬ ಪ್ರಶ್ನೆಗಳು ಮೂಡಿವೆ.

ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಒಂದು ದಶಕದ ಹಿಂದೆ ಅಸ್ತಿತ್ವಕ್ಕೆ ಬಂದ ಕ್ಷೇತ್ರವು ನಾಲ್ಕು ಚುನಾವಣೆಗಳನ್ನು ಕಂಡಿದ್ದು, ಅವುಗಳಲ್ಲಿ ಎರಡು ಉಪಚುನಾವಣೆಗಳು.

2008ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಇಲ್ಲಿಂದಲೇ ಆಯ್ಕೆಯಾಗಿದ್ದ ಶ್ರೀರಾಮುಲು, 2011ರಲ್ಲಿ ರಾಜೀನಾಮೆ ಸಲ್ಲಿಸಿದ್ದರಿಂದ ಉಪಚುನಾವಣೆ ನಡೆದಿತ್ತು. ಆಗ ಪಕ್ಷೇತರರಾಗಿ ಸ್ಪರ್ಧಿಸಿ ಮತ್ತೆ ಆಯ್ಕೆಯಾಗಿದ್ದರು. 2013ರಲ್ಲಿ ತಾವೇ ಸ್ಥಾಪಿಸಿದ್ದ ಬಿಎಸ್ಆರ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದಿದ್ದರು.

‘ಇಲ್ಲಿ ಶ್ರೀರಾಮುಲು ಸ್ಪರ್ಧಿಸಿದರಷ್ಟೇ ಪಕ್ಷಕ್ಕೆ ಗೆಲುವು ಸಾಧ್ಯ’ ಎಂಬ ಸಂದೇಶವನ್ನು 2014ರಲ್ಲಿ ನಡೆದಿದ್ದ ಉಪಚುನಾವಣೆಯು ಇಡೀ ಜಿಲ್ಲೆಗೆ ರವಾನಿಸಿತ್ತು. ಏಕೆಂದರೆ ಆಗ ಸಂಸದರಾಗಿದ್ದ ಶ್ರೀರಾಮುಲು, ತಮ್ಮ ಆಪ್ತ ಓಬಳೇಶ್‌ ಅವರನ್ನು ಕಣಕ್ಕೆ ಇಳಿಸಿದ್ದರು. ಅವರ ಹೆಸರಿನ ಬಲವಿದ್ದರೂ ಓಬಳೇಶ್‌ ಗೆಲ್ಲಲು ಆಗಿರಲಿಲ್ಲ.

ಶ್ರೀರಾಮುಲು ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಲಿ ಎಂದು ಗ್ರಾಮೀಣ, ಕೂಡ್ಲಿಗಿ, ಸಂಡೂರು ಕ್ಷೇತ್ರದ ಮುಖಂಡರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಕೋರ್‌ ಕಮಿಟಿ ಸಭೆಯಲ್ಲಿ ಆಗ್ರಹಿಸಿದ್ದರು.

ಆ ನಂತರ ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶ್ರೀರಾಮುಲು, ‘ಪರಿಶಿಷ್ಟ ಪಂಗಡದ ಸಮುದಾಯದವರು ಹೆಚ್ಚಿರುವ ಜಿಲ್ಲೆಯ ಹೊರಗಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕೆಂಬ ಒತ್ತಡ ಇದೆ’ ಎಂದು ಸ್ಪಷ್ಟಪಡಿಸಿದ್ದರು. ಆ ಹೊತ್ತಿಗಾಗಲೇ ಅವರಿಗೆ ತಾವು ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸಬೇಕಾಗುವುದು ಎಂಬ ಸಂದೇಶ ದೊರಕಿದ್ದಿರಬಹುದು. ಆದರೆ ಟಿಕೆಟ್‌ ಘೋಷಣೆ ಅವರಿಗೂ ಅಚ್ಚರಿ ತಂದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಫಕ್ಕೀರಪ್ಪ ಅಥವಾ ಓಬಳೇಶ್‌?: ‘ಗ್ರಾಮೀಣ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಸಣ್ಣ ಫಕ್ಕೀರಪ್ಪ’ ಎಂದು ಶ್ರೀರಾಮುಲು ಘೋಷಿಸಿ ಪ್ರಚಾರ ನಡೆಸಿದ್ದರೂ ಅವರಿಗೆ ಟಿಕೆಟ್‌ ದೊರಕುವ ಕುರಿತು ಖಚಿತತೆ ಇಲ್ಲವಾಗಿದೆ.ಹಿಂದಿನ ಉಪಚುನಾವಣೆಯಲ್ಲಿ ಸೋತಿದ್ದ ಓಬಳೇಶ್‌ ಅವರೂ ಆಕಾಂಕ್ಷಿಯಾಗಿದ್ದು, ಈಗ ಅವರ ಹೆಸರೂ ಮುನ್ನೆಲೆಗೆ ಬಂದಿದೆ.

ಇದೇ ಸಂದರ್ಭದಲ್ಲಿ ಅಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಯಾರನ್ನು ಕಣಕ್ಕೆ ಇಳಿಸಲಿದೆ ಎಂಬ ಕುತೂಹಲವೂ ಮೂಡಿದೆ.

ಬಳ್ಳಾರಿ: ಕಾಂಗ್ರೆಸ್‌ ಬಿಟ್ಟು ಬಂದ ಡಿ.ರಾಘವೇಂದ್ರ ಅವರಿಗೆ ಸಂಡೂರಿನಲ್ಲಿ ಹಾಗೂ ಎಚ್‌.ಆರ್‌.ಗವಿಯಪ್ಪ ಅವರಿಗೆ ವಿಜಯನಗರ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಟಿಕೆಟ್‌ ಘೋಷಿಸಿದೆ.ಗಣಿ ಉದ್ಯಮಿ ಗವಿಯಪ್ಪ 2004ರಲ್ಲಿ ಅಸ್ತಿತ್ವದಲ್ಲಿದ್ದ ಹೊಸಪೇಟೆ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿಯನ್ನೇ ಸೋಲಿಸಿದ್ದವರು!

ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಆನಂದ್‌ಸಿಂಗ್‌ ರಾಜೀನಾಮೆ ನೀಡಿ, ಕಾಂಗ್ರೆಸ್‌ ಸೇರ್ಪಡೆಗೊಂಡ ಬಳಿಕ, ಅದೇ ಪಕ್ಷದಲ್ಲಿದ್ದ ಗವಿಯಪ್ಪ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ರಾಘವೇಂದ್ರ: ಪುರಸಭೆ ಸದಸ್ಯರಾಗಿದ್ದ ರಾಘವೇಂದ್ರ ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ಅವರ ಕುಟುಂಬದ ಹಿರಿಯರು ಎಂ.ವೈ. ಘೋರ್ಪಡೆಯವರ ಅನುಯಾಯಿಗಳು. ಅವರ ಅಜ್ಜಿ ಡಿ. ನರಸಮ್ಮ ಸಂಡೂರು ಪಟ್ಟಣ ಪಂಚಾಯ್ತಿಯ ಸದಸ್ಯರಾಗಿದ್ದರು. ತಂದೆ ಡಿ. ಕೃಷ್ಣಪ್ಪ ಒಮ್ಮೆ ಪಟ್ಟಣ ಪಂಚಾಯ್ತಿ ಸದಸ್ಯರಾಗಿ, ಮತ್ತೊಮ್ಮೆ ಪುರಸಭೆಯ ಅಧ್ಯಕ್ಷರಾಗಿದ್ದರು.

ಇದುವರೆಗಿನ 14 ಚುನಾವಣೆಗಳಲ್ಲಿ ಇಲ್ಲಿ ಒಮ್ಮೆಯೂ ಗೆಲ್ಲಲಾಗದ ಬಿಜೆಪಿ, 2008ರ ಚುನಾವಣೆಯಲ್ಲಿ ಮಾತ್ರ ತೀವ್ರ ಪೈಪೋಟಿ ನೀಡಿತ್ತು. ‘ದೇಶದಲ್ಲಿ ಎದ್ದಿರುವ ಬಿಜೆಪಿ ಪರವಾದ ಅಲೆಯೇ ಇಲ್ಲಿಯೂ ಪಕ್ಷಕ್ಕೆ ಬಲ ಕೊಡಲಿದೆ’ ಎಂಬ ವಿಶ್ವಾಸ ರಾಘವೇಂದ್ರ ಅವರದ್ದು.

ನಿರೀಕ್ಷೆಯಂತೆ ಕಂಪ್ಲಿ...

ಶ್ರೀರಾಮುಲು ಆಪ್ತ ಹಾಗೂ ಹಾಲಿ ಶಾಸಕ ಟಿ.ಎಚ್‌.ಸುರೇಶ್‌ಬಾಬು ಅವರಿಗೆ ಈ ಬಾರಿಯೂ ಟಿಕೆಟ್‌ ಘೋಷಣೆಯಾಗಿದೆ. ಪಕ್ಷದ ಮುಖಂಡರಿಗೆ ಇದು ನಿರೀಕ್ಷಿತವೂ ಹೌದು.

2008ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದ ಅವರು, 2013ರಲ್ಲಿ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. ಅವರಿಗೆ ಆಗ ಪಕ್ಷೇತರ ಅಭ್ಯರ್ಥಿ ಜೆ.ಎನ್.ಗಣೇಶ್‌ ಸಮೀಪ ಸ್ಪರ್ಧಿಯಾಗಿದ್ದರು. ಕಾಂಗ್ರೆಸ್‌ ಮೂರೇ ಸ್ಥಾನದಲ್ಲಿತ್ತು.

ಈ ಬಾರಿಯೂ ಇಲ್ಲಿ ಎದುರಾಳಿ ಪಕ್ಷಗಳು ಅತ್ಯಂತ ಗಂಭೀರವಾಗಿ ಚಿಂತಿಸಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕಾದ ಪರಿಸ್ಥಿತಿ ಏರ್ಪಟ್ಟಿದೆ.

**

ಶ್ರೀರಾಮುಲು ಅವರಿಗೆ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ದೊರಕದಿರುವುದು ನಿರಾಶಾದಾಯಕ ಸಂಗತಿ – ಚನ್ನಬಸವನಗೌಡ,ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry