ಭಾನುವಾರ, ಡಿಸೆಂಬರ್ 15, 2019
25 °C
ಹಲಬರ್ಗಾ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶಾಖೆಯಲ್ಲಿ ಸಿಬ್ಬಂದಿ, ಸ್ಥಳ ಕೊರತೆ

ಹಣ ಪಡೆಯಲು ಹರಸಾಹಸ: ರೈತರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಣ ಪಡೆಯಲು ಹರಸಾಹಸ: ರೈತರ ಆಕ್ರೋಶ

ಭಾಲ್ಕಿ: ತಾಲ್ಲೂಕಿನಿಂದ 14 ಕಿ.ಮೀ ದೂರದ ಹಲಬರ್ಗಾ ಗ್ರಾಮದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶಾಖೆಯಲ್ಲಿ ಸ್ಥಳದ ಅಭಾವ ಮತ್ತು ಸಿಬ್ಬಂದಿ ಕೊರತೆಯಿಂದ ತಮ್ಮ ಖಾತೆಯಲ್ಲಿರುವ ಹಣವನ್ನು ಪಡೆಯಲು ಸುಮಾರು 50 ಹಳ್ಳಿಗಳ ರೈತರು, ಜನರು ಪ್ರತಿನಿತ್ಯ ಹರಸಾಹಸ ಪಡಬೇಕಾಗಿದೆ.

ಹಾಲಹಿಪ್ಪರ್ಗಾ, ತರನಳ್ಳಿ, ಸಿದ್ದೇಶ್ವರ, ಮರೂರ, ನೀಲಮನಹಳ್ಳಿ, ನೇಳಗಿ, ಜ್ಯಾಂತಿ, ಸಿದ್ದೇಶ್ವರ ವಾಡಿ, ಕರಡ್ಯಾಳ, ತಳವಾಡ, ಕೋಸಂ, ನಾಗೂರ, ಕುರನಳ್ಳಿ, ಜೈನಾಪೂರ, ಬಾಳೂರ ಸೇರಿದಂತೆ ಅಂದಾಜು 50 ಗ್ರಾಮಗಳ ಜನರು ಏ.1ರಿಂದ ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದಲೇ ಬ್ಯಾಂಕ್‌ಗೆ ಆಗಮಿಸಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಬ್ಯಾಂಕ್ ಮುಂಭಾಗದಲ್ಲಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಇಲ್ಲದಿರುವುದರಿಂದ ಜನರು ಉದಗೀರ್-ಹೈದರಾಬಾದ್ ರಸ್ತೆ ಅಕ್ಕಪಕ್ಕದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ಪಾದಚಾರಿಗಳಿಗೆ ಸಮಸ್ಯೆಯಾಗಿದೆ.

ರೈತರ ಬ್ಯಾಂಕ್ ಖಾತೆಗಳಿಗೆ ಅಂಜುಮಾನ, ಸಾಲಮನ್ನಾ, ತೊಗರಿ ಖರೀದಿ ಹಣ ಜಮೆ ಆಗಿದೆ. ಹಾಗಾಗಿ, ರೈತರು ಕೃಷಿ ಚಟುವಟಿಕೆ, ಮಕ್ಕಳ ಮದುವೆ, ಶಿಕ್ಷಣ, ಆಸ್ಪತ್ರೆ ಒಳಗೊಂಡಂತೆ ಇತರ ಕಾರ್ಯಗಳಿಗಾಗಿ ಹಣ ಪಡೆಯಲು ಬರುತ್ತಿದ್ದಾರೆ. ಆದರೆ, ಬ್ಯಾಂಕ್ ಸಿಬ್ಬಂದಿ ಪ್ರತಿ ರೈತರಿಗೆ ಪ್ರತಿದಿನ ಕೇವಲ ಹತ್ತು ಸಾವಿರ ರೂಪಾಯಿ ಮಾತ್ರ ನೀಡುತ್ತಿದ್ದಾರೆ. ಹಾಗಾಗಿ, ಹೆಚ್ಚಿನ ಹಣ ಬೇಕಾಗಿರುವ ರೈತರು ನಿತ್ಯ ಅಲೆದಾಡಬೇಕಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ರೈತರಾದ ರಾಮಶೆಟ್ಟಿ ವರ್ದಾ ನೇಳಗಿ, ಗುಣವಂತ ಪಾಟೀಲ ನೀಲಮನಹಳ್ಳಿ.

ಸ್ಥಳದ ಅಭಾವ, ಸಿಬ್ಬಂದಿ ಕೊರತೆ ಇರುವುದರಿಂದ ಹೆಚ್ಚಿನ ಕ್ಯಾಶ್ ಕೌಂಟರ್‌ಗಳನ್ನು ತೆರೆಯಲು ಸಾಧ್ಯವಿಲ್ಲ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಬ್ಯಾಂಕ್‌ನಲ್ಲಿ ಬೆರಳೆಣಿಕೆಯಷ್ಟು ರೈತರಿಗೆ ಮಾತ್ರ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಇದೆ. ಕನಿಷ್ಠ 100 ರಿಂದ 200 ಜನ ರೈತರು ಒಳಗಡೆ ಮತ್ತು ಹೊರಗಡೆ ಬಿಸಿಲಿನಲ್ಲಿ ನಿಂತು ಕೊಳ್ಳಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಸಿದ್ದಮ್ಮಾ ಸಿದ್ದೇಶ್ವರ, ಅನಿತಾ ಸೇವಾನಗರ.

ಮೂರು ಸಾವಿರ ರೈತರ ಅಂಜುಮಾನ, ಸಾಲಮನ್ನಾ ಮತ್ತು ಏಳು ಕೃಷಿ ಪತ್ತಿನ ಸಹಕಾರ ಸಂಘಗಳ ರೈತರ ತೊಗರಿ ಖರೀದಿ ಹಣ ಖಾತೆಗೆ ಜಮೆ ಆಗಿದೆ. ನಿತ್ಯ 100 ಗ್ರಾಹಕರ ಆರ್‌ಟಿಜಿಎಸ್ ಮಾಡುವುದು ಇದ್ದಿರುತ್ತದೆ. ಹಾಗಾಗಿ, ಹಣ ಪಡೆಯಲು ರೈತರು ಹೆಚ್ಚು ಸಮಯ ಕಾಯಬೇಕಾಗಿದೆ. ಮೇಲಧಿಕಾರಿಗಳ ಆದೇಶದ ಮೇರೆಗೆ ₹ 10 ಸಾವಿರ ಮಾತ್ರ ನೀಡುತ್ತಿದ್ದೇವೆ ಎಂದು ವ್ಯವಸ್ಥಾಪಕ ಶಿವಶರಣಪ್ಪ ತಿಳಿಸುತ್ತಾರೆ.

ಈಗಿರುವ ಬ್ಯಾಂಕ್‌ನ್ನು ವಿಶಾಲವಾದ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಇಲ್ಲವೇ ಶೀಘ್ರದಲ್ಲಿ ಇನ್ನೊಂದು ಹೊಸ ಶಾಖೆಯನ್ನು ಆರಂಭಿಸಬೇಕು ಎಂಬುದು ನಮ್ಮ ಬೇಡಿಕೆ. ಶೀಘ್ರದಲ್ಲಿ ಬೇಡಿಕೆ ಈಡೇರದಿದ್ದಲ್ಲಿ ರಸ್ತೆಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ ರೈತರು.

**

ಮದುವೆ ಸುಗ್ಗಿ ಇರುವುದರಿಂದ ರೈತರಿಗೆ ಹೆಚ್ಚಿನ ಹಣದ ಅವಶ್ಯಕತೆ ಇದೆ. ಬ್ಯಾಂಕ್‌ನವರು ಸ್ಪಂದಿಸಬೇಕು. ಇಲ್ಲವಾದಲ್ಲಿ ಧರಣಿ ನಡೆಸಲಾಗುವುದು – ಮಾರುತಿರಾವ್ ಪಾಟೀಲ,ರೈತ.

**

ಬಸವರಾಜ್ ಎಸ್.ಪ್ರಭಾ

ಪ್ರತಿಕ್ರಿಯಿಸಿ (+)