ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ಅಮಿತ್‌, ನಮನ್‌

ಭಾರತದ ಬಾಕ್ಸರ್‌ಗಳ ಮಿಂಚು: ಹಸಮುದ್ದೀನ್‌, ಮನೋಜ್‌ ಜಯದ ಓಟ
Last Updated 10 ಏಪ್ರಿಲ್ 2018, 19:40 IST
ಅಕ್ಷರ ಗಾತ್ರ

ಗೋಲ್ಡ್‌ ಕೋಸ್ಟ್‌: ಭಾರತದ ಅಮಿತ್‌ ಪಂಗಲ್‌ ಮತ್ತು ನಮನ್‌ ತನ್ವರ್‌ ಅವರು ಕಾಮನ್‌ವೆಲ್ತ್‌ ಕ್ರೀಡಾಕೂಟದ ಬಾಕ್ಸಿಂಗ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ಪುರುಷರ 49 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಅಮಿತ್‌ 4–1ರಿಂದ ಸ್ಕಾಟ್ಲೆಂಡ್‌ನ ಅಕ್ವೀಲ್‌ ಅಹಮದ್‌ ಅವರನ್ನು ಸೋಲಿಸಿದರು.

ಮೊದಲ ಸುತ್ತಿನಲ್ಲಿ ಎದುರಾಳಿ ಯಿಂದ ಕಠಿಣ ಪೈಪೋಟಿ ಎದುರಿಸಿದ ಅಮಿತ್‌, ಎರಡನೆ ಸುತ್ತಿನಲ್ಲಿ ಕೆಚ್ಚೆದೆ ಯಿಂದ ಹೋರಾಡಿದರು. ಬಲಿಷ್ಠ ಪಂಚ್‌ಗಳ ಮೂಲಕ ಅಹಮದ್‌ ಅವ ರನ್ನು ತಬ್ಬಿಬ್ಬುಗೊಳಿಸಿದರು. ಅಮಿತ್‌ಗೆ ಪಂದ್ಯದ ಐದು ಮಂದಿ ನಿರ್ಣಾಯಕರು ತಲಾ 10 ಪಾಯಿಂಟ್ಸ್‌ ನೀಡಿದರು.

ಮೂರನೆ ಸುತ್ತಿನಲ್ಲೂ ಅಮಿತ್‌ ವಿಶ್ವಾಸದಿಂದ ಸೆಣಸಿದರು. ಎದು ರಾಳಿಯ ಮೇಲೆ ನಿರಂತರವಾಗಿ ಪ್ರಹಾರ ನಡೆಸಿದ ಅವರು ಪಂದ್ಯ ಗೆದ್ದು ಸಂಭ್ರಮಿಸಿದರು.

91 ಕೆ.ಜಿ. ವಿಭಾಗದಲ್ಲಿ ಕಣದಲ್ಲಿದ್ದ ನಮನ್‌ ತನ್ವರ್‌ ಕೂಡ ಮೋಡಿ ಮಾಡಿದರು.

ಎಂಟರ ಘಟ್ಟದ ಪೈಪೋಟಿಯಲ್ಲಿ ನಮನ್‌ 5–0ರಿಂದ ಸಮವೊ ದೇಶದ ಫ್ರಾಂಕ್‌ ಮಾಸೊಯೆ ಅವರನ್ನು ಸೋಲಿಸಿದರು.

ನಮನ್‌ ಅವರು ಮೂರು ಸುತ್ತುಗಳಲ್ಲಿ ಮಿಂಚಿನ ಸಾಮರ್ಥ್ಯ ತೋರಿ ಏಕ‍ಪಕ್ಷೀಯವಾಗಿ ಗೆದ್ದರು.

ಸೆಮಿಗೆ ಹಸಮುದ್ದೀನ್‌: ಪುರುಷರ 56 ಕೆ.ಜಿ. ವಿಭಾಗದಲ್ಲಿ ಭಾರತದ ಹಸಮುದ್ದೀನ್‌ ಮಹಮ್ಮದ್‌ ಅವರು ಸೆಮಿಫೈನಲ್‌ ಪ್ರವೇಶಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ಹಸಮುದ್ದೀನ್‌ 5–0ಯಿಂದ ಜಾಂಬಿಯಾದ ಎವರಿಸ್ಟೊ ಮುಲೆಂಗಾ ವಿರುದ್ಧ ಜಯಿಸಿದರು.

69 ಕೆ.ಜಿ. ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಮನೋಜ್‌ ಕುಮಾರ್‌ 4–1ರಿಂದ ಆಸ್ಟ್ರೇಲಿಯಾದ ಟೆರಿ ನಿಕೊ ಲಸ್‌ ಅವರನ್ನು ಪರಾಭವಗೊಳಿಸಿದರು.

+91 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಸತೀಶ್‌ ಕುಮಾರ್‌ 4–1 ರಿಂದ ಟ್ರಿನಿಡಾಡ್‌ ಮತ್ತು ಟೊಬ್ಯಾಗೊದ ನಿಗೆಲ್‌ ಪಾಲ್‌ ವಿರುದ್ಧ ಗೆದ್ದರು.

ಇಂದು ಮೇರಿ, ಸರಿತಾ ಕಣಕ್ಕೆ: ಭಾರತದ ಅನುಭವಿ ಮಹಿಳಾ ಬಾಕ್ಸರ್‌ಗಳಾದ ಎಂ.ಸಿ. ಮೇರಿ ಕೋಮ್ ಮತ್ತು ಎಲ್‌.ಸರಿತಾ ದೇವಿ ಅವರು ಬುಧವಾರ ‘ರಿಂಗ್‌’ಗೆ ಇಳಿಯಲಿದ್ದಾರೆ.

48 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಮೇರಿ, ಶ್ರೀಲಂಕಾದ ಅನುಷಾ ದಿಲ್ರುಕ್ಷಿ ಕೊಡಿತುವಾಕ್ಕು ವಿರುದ್ಧ ಸೆಣಸಲಿದ್ದಾರೆ.

ಕ್ವಾರ್ಟರ್‌ ಫೈನಲ್‌ನಲ್ಲಿ ಮೇರಿ, ಸ್ಕಾಟ್ಲೆಂಡ್‌ನ ಮೇಗನ್‌ ಗಾರ್ಡನ್‌ ವಿರುದ್ಧ ಸುಲಭವಾಗಿ ಗೆದ್ದಿದ್ದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐದು ಚಿನ್ನ ಜಯಿಸಿರುವ ಭಾರತದ ಬಾಕ್ಸರ್‌, ಅನುಷಾ ಅವರ ಸವಾಲನ್ನು ನಿರಾಯಾ ಸವಾಗಿ ಮೀರಿ ನಿಲ್ಲುವ ನಿರೀಕ್ಷೆ ಇದೆ.

60 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಸರಿತಾ, ಆಸ್ಟ್ರೇಲಿಯಾದ ಆ್ಯಂಜಾ ಸ್ಟ್ರಿಡ್ಸ್‌ಮನ್‌ ವಿರುದ್ಧ ಪೈಪೋಟಿ ನಡೆಸಲಿದ್ದಾರೆ. 51 ಕೆ.ಜಿ. ವಿಭಾಗದ ಎಂಟರ ಘಟ್ಟದ ಹಣಾಹಣಿಯಲ್ಲಿ ಪಿಂಕಿ ರಾಣಿ, ಇಂಗ್ಲೆಂಡ್‌ನ ಲಿಸಾ ವೈಟ್‌ಸೈಡ್‌ ಎದುರು ಆಡುವರು. ಪುರುಷರ 52 ಕೆ.ಜಿ. ವಿಭಾಗದ ಎಂಟರ ಘಟ್ಟದ ಹೋರಾಟದಲ್ಲಿ ಗೌರವ್‌ ಸೋಳಂಕಿ, ಪಪುವಾ ನ್ಯೂ ಗಿನಿ ದೇಶದ ಚಾರ್ಲ್ಸ್ ಕೆಯೆಮಾ ವಿರುದ್ಧ ಸೆಣಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT