ಕುರುಗೋಡು: ಕ್ಷೇತ್ರ ಹೋಯ್ತು, ತಾಲ್ಲೂಕು ಬಂತು

7
ಒಂಬತ್ತು ಬಾರಿ ಕಾಂಗ್ರೆಸ್‌ಗೆ ಒಲಿದಿದ್ದ ಕ್ಷೇತ್ರ; ಅಲ್ಲಂ ಕುಟುಂಬದ ಪ್ರಾಬಲ್ಯ ಮುರಿದ ಸೂರ್ಯನಾರಾಯಣರೆಡ್ಡಿ

ಕುರುಗೋಡು: ಕ್ಷೇತ್ರ ಹೋಯ್ತು, ತಾಲ್ಲೂಕು ಬಂತು

Published:
Updated:

ಬಳ್ಳಾರಿ: 2008ರ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಅಸ್ತಿತ್ವಕ್ಕೆ ಬಂದ ಕಂಪ್ಲಿ, ಬಳ್ಳಾರಿ ನಗರ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ವಿಲೀನವಾದ ಕುರುಗೋಡು ಕ್ಷೇತ್ರ ಈಗ ತಾಲ್ಲೂಕು ಕೇಂದ್ರ.

ವಿಧಾನಸಭಾ ಕ್ಷೇತ್ರದ ಅಸ್ತಿತ್ವ ಕಳೆದುಕೊಂಡು ಒಂದು ದಶಕದ ಬಳಿಕ ತಾಲ್ಲೂಕು ಅಸ್ತಿತ್ವ ಪಡೆದಿರುವ ಕುರುಗೋಡು 11 ಚುನಾವಣೆಗಳಲ್ಲಿ 9ರಲ್ಲಿ ಕಾಂಗ್ರೆಸ್‌ಗೆ ಗೆಲುವನ್ನು ತಂದು ಕೊಟ್ಟಿತ್ತು. ಆ ಒಂಬತ್ತರಲ್ಲಿ ಆರು ಚುನಾವಣೆಗಳಲ್ಲಿ ಅಲ್ಲಂ ಕುಟುಂಬಕ್ಕೇ ಅವಕಾಶ ದೊರಕಿತ್ತು. ಪಕ್ಷೇತರರು ಮತ್ತು ಜನತಾ ಪರಿವಾರದ ಅಭ್ಯರ್ಥಿಗಳು ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಿರುವುದು ವಿಶೇಷ.

ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದ ಅಲ್ಲಂ ಸುಮಂಗಳಮ್ಮ ಬಳಿಕ ಅವರ ಪತಿ ಅಲ್ಲಂ ಕರಿಬಸಪ್ಪ ಸತತ ಎರಡು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದರು. 1972ರಿಂದ 1985ರವರೆಗೂ ಈ ಕುಟುಂಬಕ್ಕೆ ಮತ್ತೆ ಆಯ್ಕೆಯಾಗುವ ಅವಕಾಶ ದೊರಕಿರಲಿಲ್ಲ. ಕಾಂಗ್ರೆಸ್‌ ಟಿಕೆಟ್‌ ದೊರಕದೆ 1972ರಲ್ಲಿ ಸಂಸ್ಥಾಪನಾ ಕಾಂಗ್ರೆಸ್‌ನಿಂದ ಹಾಗೂ 1978ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಕರಿಬಸಪ್ಪ ಸೋಲುಂಡರು.

ಒಂದೂವರೆ ದಶಕಕ್ಕೂ ಹೆಚ್ಚು ಕಾಲ ರಾಜಕೀಯ ಅಜ್ಞಾತವಾಸದಲ್ಲಿದ್ದ ಈ ಕುಟುಂಬಕ್ಕೆ ಮತ್ತೆ ಅವಕಾಶ ದೊರಕಿದ್ದು 1989ರಲ್ಲಿ. ಅಲ್ಲಿಂದ 1999ರವರೆಗೂ ಮೂರು ಚುನಾವಣೆಗಳಲ್ಲಿ ಸತತವಾಗಿ ಅಲ್ಲಂ ವೀರಭದ್ರಪ್ಪ ಆಯ್ಕೆಯಾಗಿದ್ದು ವಿಶೇಷ.

ಆದರೆ 2004ರ ಚುನಾವಣೆಯಲ್ಲಿ ಜೆಡಿಎಸ್‌ನ ನಾ.ರಾ.ಸೂರ್ಯನಾರಾಯಣರೆಡ್ಡಿ ಆಯ್ಕೆಯಾಗುವ ಮೂಲಕ ಅಲ್ಲಂ ಕುಟುಂಬದ ಪ್ರಾಬಲ್ಯ ಕ್ಷೇತ್ರದಲ್ಲಿ ಕರಗಿಹೋಯಿತು. 1999ರ ಚುನಾವಣೆಯಲ್ಲಿ ವೀರಭದ್ರಪ್ಪ ವಿರುದ್ಧ ಕೇವಲ 4408 ಮತಗಳ ಅಂತರದಲ್ಲಿ ಸೋತಿದ್ದ ರೆಡ್ಡಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ನಂತರದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಬಿಜೆಪಿಯ ಕೆ.ಎ.ರಾಮಲಿಂಗಪ್ಪ ಅವರನ್ನು 19,271 ಮತಗಳ ಅಂತರದಲ್ಲಿ ಸೋಲಿಸಿದ್ದರು.

2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾಗಿ ಕುರುಗೋಡು ಅಸ್ತಿತ್ವಕಳೆದುಕೊಂಡ ಬಳಿಕ ಅಲ್ಲಂ ವೀರಭದ್ರಪ್ಪ ಮತ್ತೆ ಬೇರೆ ಕ್ಷೇತ್ರದಿಂದ ಸ್ಪರ್ಧಿಸಲಿಲ್ಲ. ನಾರಾಯಣರೆಡ್ಡಿ ಅವರಿಗೂ ಪುನರ್‌ವಿಂಗಡಣೆಯು ರಾಜಕೀಯ ಅಸ್ತಿತ್ವದ ಸವಾಲನ್ನು ಎದುರಾಗಿಸಿತ್ತು. ಅವರೂ ಕೂಡ ನಂತರ ಸ್ಪರ್ಧಿಸಲಿಲ್ಲ. ತಾಲ್ಲೂಕು ಕೇಂದ್ರವಾಗಿರುವ ಕುರುಗೋಡು ಪಟ್ಟಣ, ಇದೀಗ ಕಂಪ್ಲಿ ಕ್ಷೇತ್ರಕ್ಕೆ ಸೇರಿದ್ದು, ಅಲ್ಲಿ ತನ್ನ ಚಹರೆ ಗುರುತಿಸಿಕೊಳ್ಳುವ ಹವಣಿಕೆಯಲ್ಲಿದೆ.ಇಲ್ಲಿ ಸ್ಪರ್ಧಿಸಿದವರೆಲ್ಲರ ಮನದಾಳದಲ್ಲಿ ಕುರುಗೋಡು ಕಟು– ಮಧುರ ನೆನಪಾಗಿ ಅಷ್ಟೇ ಉಳಿದಿದೆ.

ಜಿಲ್ಲೆಯ ಮೊದಲ ಶಾಸಕಿ!

ಬಳ್ಳಾರಿ: 1957ರ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾದ ಅಲ್ಲಂ ಸುಮಂಗಳಮ್ಮ ಜಿಲ್ಲೆಯ ಮೊದಲ ಮಹಿಳಾ ಶಾಸಕಿ ಎಂಬುದು ವಿಶೇಷ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry