ಗುರುವಾರ , ಜೂನ್ 4, 2020
27 °C

ರಸ್ತೆ ಬದಿ ಕೊಳಚೆ ಗುಂಡಿ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸ್ತೆ ಬದಿ ಕೊಳಚೆ ಗುಂಡಿ ನಿರ್ಮಾಣ

ಬ್ಯಾಡಗಿ: ನಿತ್ಯ ಚರಂಡಿಯ ದುರ್ನಾತ, ಸಂಜೆಯಾಗುತ್ತಿದ್ದಂತೆಯೇ ಜೇನು ಹಿಂಡಿನಂತೆ ಮುತ್ತಿಕೊಳ್ಳುವ ಸೊಳ್ಳೆಗಳು, ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದ ಸ್ಥಿತಿ...ಇದು ಪಟ್ಟಣದ ಗುಮ್ಮನಹಳ್ಳಿ ರಸ್ತೆ ಬದಿಯ ನಿವಾಸಿಗಳು ನಿತ್ಯ ಅನುಭವಿಸುತ್ತಿರುವ ಸಂಕಷ್ಟಗಳು. ಈ ರಸ್ತೆ ಬದಿಯಲ್ಲಿ ಅಪೂರ್ಣಗೊಂಡ ಚರಂಡಿಯ ಕೊಳಚೆ ನೀರು ಹೊಂಡದ ರೀತಿಯಲ್ಲಿ ನಿಂತುಕೊಂಡಿರುವುದೇ ಇದಕ್ಕೆ ಮುಖ್ಯ ಕಾರಣ. ಹೀಗಾಗಿ, ಸೊಳ್ಳೆಗಳ ಹಾವಳಿ ಮತ್ತು ದುರ್ನಾತ ಹೆಚ್ಚಾಗಿದೆ.

‘ಈ ಸಮಸ್ಯೆ ಕುರಿತು ಕಳೆದ ಮೂರು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಆದರೆ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯರು ದೂರುತ್ತಿದ್ದಾರೆ.

‘ಮಳೆಗಾಲ ಪ್ರಾರಂಭವಾಗುವ ಮೊದಲೇ ಈ ಚರಂಡಿ ವ್ಯವಸ್ಥೆಯನ್ನು ದುರಸ್ತಿ ಮಾಡದಿದ್ದರೆ, ಸ್ಥಳೀಯರೆಲ್ಲ ಪುರಸಭೆ ಎದುರು ಪ್ರತಿಭಟನೆ ಮಾಡಲು ಮುಂದಾಬೇಕಾಗುತ್ತದೆ’ ಎಂದು ಸ್ಥಳೀಯ ನಿವಾಸಿ ಕಲ್ಲಪ್ಪ ಗೂರಮ್ಮನವರ ತಿಳಿಸಿದರು.

‘ಪಟ್ಟಣದ ಅಭಿವೃದ್ಧಿಗೆ ಕೋಟಿ ಕೋಟಿ ಹಣ ಹರಿದು ಬಂದಿದೆ ಎಂದು ಶಾಸಕರು ತಮ್ಮ ಭಾಷಣದಲ್ಲಿ ಹೇಳುತ್ತಾರೆ. ಆದರೆ, ಆ ಹಣ ಎಲ್ಲಿಗೆ ಹೋಯಿತು’ ಎಂದು ’ಪ್ರಶ್ನಿಸಿದರು.

‘ಚರಂಡಿಯ ದುರ್ನಾತದಿಂದ ಸುತ್ತಲಿನ ಕಾರ್‌ಸ್ಟ್ಯಾಂಡ್‌, ಕಾಂಗ್ರೆಸ್‌ ಕಚೇರಿ, ಪಂಪ್‌ಹೌಸ್‌, ಉಜನಿಯವರ ಓಣಿಯಲ್ಲಿ ಮೂಗು ಮುಚ್ಚಿಕೊಂಡು ಸಂಚರಿಸುವುದು ನಿವಾರ್ಯವಾಗಿದೆ ಎಂದು ಸ್ಥಳೀಯ ನಿವಾಸಿ ರಮೇಶ ಹುಣಸಿಮರದ ದೂರಿದರು.

‘ಸುತ್ತಮುತ್ತಲಿನ ನಿವಾಸಿಗಳಲ್ಲಿ ಈ ಚರಂಡಿ ದುರ್ನಾತ ಹಾಗೂ ಸೊಳ್ಳೆಗಳ ಹಾವಳಿಯಿಂದ ಡೆಂಗಿ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗಿದೆ. ಆದರೆ, ಪುರಸಭೆಯಿಂದ ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಸ್ಥಳೀಯ ನಿವಾಸಿ ಬಸವರಾಜ ದೂರಿದರು.

‘2018–19ನೇ ಸಾಲಿನಲ್ಲಿ ಪುರಸಭೆ ಕ್ರಿಯಾಯೋಜನೆಯಲ್ಲಿ ಪಟ್ಟಣದ ಬೀರೇಶ್ವರ ದೇವಸ್ಥಾನದ ಎದುರಿನ ಚರಂಡಿಗೆ ಈ ಚಂಡಿಯನ್ನು ಸೇರಿಸುವಂತೆ ಯೋಜನೆ ರೂಪಿಸಲಾಗಿದೆ. ಚುನಾವಣೆ ಬಳಿಕ ಕೆಲಸವನ್ನು ಆರಂಭಿಸಲಾಗುವುದು’ ಎಂದು 8ನೇ ವಾರ್ಡ್‌ ಸದಸ್ಯ ನಜೀರ್‌ ಅಹಮ್ಮದ ಶೇಖ್‌ ‘ಪ್ರಜಾವಾಣಿ’ಗೆ ತಿಳಿಸಿದರು.

**

ಪಟ್ಟಣದಲ್ಲಿ ಒಟ್ಟು 51 ಪೌರಕಾರ್ಮಿಕರಿದ್ದು, 15 ಮಹಿಳೆಯರು ನಿತ್ಯ ಮನೆಮನೆಗೆ ಹೋಗಿ ಕಸ ಸಂಗ್ರಹಣೆ ಮಾಡುತ್ತಿದ್ದಾರೆ. ಅವರಿಗೆ ಗುತ್ತಿಗೆ ಸಂಸ್ಥೆಯ ಮೂಲಕ ತಿಂಗಳಿಗೆ ತಲಾ ₹5 ಸಾವಿರ ಗೌರವಧನ ನೀಡಲಾಗುತ್ತಿದೆ – ರವಿ ಕೀರ್ತಿ, ಆರೋಗ್ಯ ಸಿಬ್ಬಂದಿ, ಪುರಸಭೆ.

**

ಪ್ರಮೀಳಾ ಹುನಗುಂದ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.