ಮಂಗಳವಾರ, ಆಗಸ್ಟ್ 4, 2020
25 °C

ಕೆಂಡಸಂಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಡಸಂಪಿಗೆ

‘ದುನಿಯಾ’ ಸಿನಿಮಾದ ಮೂಲಕ ಚಿತ್ರನಿರ್ದೇಶಕನಾಗಿ ಗುರ್ತಿಸಿಕೊಂಡ ಸೂರಿ ಕನ್ನಡದ ಪ್ರತಿಭಾವಂತ ನಿರ್ದೇಶಕರಲ್ಲೊಬ್ಬರು. ನೆತ್ತರ ಕಮಟು ವಾಸನೆಯ ಜಗತ್ತಿನಲ್ಲಿಯೂ ಬದುಕಿನ ಸತ್ಯಗಳನ್ನು ಕಾವ್ಯಾತ್ಮಕವಾಗಿ ತೋರಿಸುವುದು ಅವರ ಅನನ್ಯ ಗುಣ. ಕ್ರೌರ್ಯವನ್ನು ಕೊಂಚ ಅತಿ ಎನಿಸುವಷ್ಟೇ ತೋರಿಸುವ ಅವರು ತಮ್ಮ ಜಾಡಿನಿಂದ ಆಚೆ ಹೆಜ್ಜೆ ಇಟ್ಟು ಅರಳಿಸಿದ ಹೂವು ‘ಕೆಂಡಸಂಪಿಗೆ’.

ಕೆಂಡಸಂಪಿಗೆ ಸಿನಿಮಾ ಬಿಡುಗಡೆಯಾಗಿದ್ದು 2015ರಲ್ಲಿ. ಸುರೇಂದ್ರನಾಥ್‌ ಕಥೆ ಬರೆದಿರುವ ಈ ಚಿತ್ರದಲ್ಲಿ ವಿಕ್ಕಿ ವರುಣ್‌ ಮತ್ತು ಮಾನ್ವಿತಾ ಹರೀಶ್‌ ನಾಯಕ– ನಾಯಕಿಯಾಗಿ ನಟಿಸಿದ್ದರು.

‘ಪೌರುಷದ ನಾಯಕ, ಅವನ ಹಿಂದೆ ಬಚ್ಚಿಟ್ಟುಕೊಂಡು, ಹಾಡಿನಲ್ಲಿ ಬೆನ್ನತಬ್ಬಿಕೊಂಡು ಅಳುವ ಬಳುಕುವ ಬಳ್ಳಿ ನಾಯಕಿ’ – ಚಿತ್ರರಂಗದಲ್ಲಿ ಸ್ಥಾಪಿತವಾಗಿರುವ ಈ ಜನಪ್ರಿಯ ಮಾದರಿಯನ್ನು ಮುರಿದು ಅಪ್ಪಟ ಯುವ ಮನಸ್ಸುಗಳ ತಾಜಾ ಕಥೆಯನ್ನು ಸಿನಿಮಾ ಆಗಿಸಿರುವ ರೀತಿಯೇ ಗಮನಸೆಳೆಯುವಂಥದ್ದು. ಭೂಗತ ಲೋಕದ ಎಳೆ, ಸಮಾಜವನ್ನು ಉಸಿರುಗಟ್ಟಿಸುವಂತೆ ಬಿಗಿದು ಹಿಡಿದಿರುವ ಅಂತಸ್ತುಗಳ ಅಂತರ, ಅವುಗಳಿಂದ ನಲುಗುವ ಎಳೆ ಮನಸ್ಸುಗಳ ಚಡಪಡಿಕೆಯನ್ನು ಅವರು ನಾಜೂಕಾಗಿ ಹೆಣೆದಿದ್ದಾರೆ. ಇದರ ಜತೆಜತೆಗೆ ಹೊಸ ಕಾಲದ ತರುಣ/ತರುಣಿಯರ ಬದುಕಿನಲ್ಲಿನ ಪ್ರೇಮದ ವ್ಯಾಖ್ಯಾನವನ್ನೂ ಅರ್ಥಮಾಡಿಕೊಳ್ಳುವ ಪ್ರಯತ್ನ ಇಲ್ಲಿದೆ. ಸತ್ಯ ಹೆಗಡೆ ಅವರ ಕ್ಯಾಮೆರಾ ಕರ್ನಾಟಕದ ಬೇರೆ ಬೇರೆ ಪ್ರದೇಶಗಳನ್ನು ಸೆರೆಹಿಡಿದಿರುವ ರೀತಿ ಚಿತ್ರಕ್ಕೊಂದು ಪ್ರಾದೇಶಿಕ ಅಧಿಕೃತತೆಯನ್ನು ನೀಡಿದೆ.

ವಿಕ್ಕಿ ಮತ್ತು ಮಾನ್ವಿತಾ ಅವರ ಮುಗ್ಧ ಅಭಿನಯ, ರಾಜೇಶ ನಟರಂಗ, ಪ್ರಕಾಶ ಬೆಳವಾಡಿ ಅವರ ಮಾಗಿದ ನಟನೆ, ನಗುವುಕ್ಕಿಸುವ ಪ್ರಶಾಂತ ಸಿದ್ದಿ ಎಲ್ಲರೂ ಚಿತ್ರವನ್ನು ಇನ್ನಷ್ಟು ಆಪ್ತಗೊಳಿಸುತ್ತಲೇ ಹೋಗುತ್ತಾರೆ.

ಜಯಂತ ಕಾಯ್ಕಿಣಿ ಬರೆದಿರುವ ಹಾಡುಗಳು ಈ ಚಿತ್ರದ ಇನ್ನೊಂದು ಧನಾತ್ಮಕ ಅಂಶ. ‘ನೆನಪೆ ನಿತ್ಯ ಮಲ್ಲಿಗೆ...’, ‘ಮರೆಯದೆ ಕ್ಷಮಿಸು...’ ಈ ಹಾಡುಗಳು ಯುವ ಮನಸ್ಸುಗಳ ನೆಚ್ಚಿನ ಗೀತೆಗಳ ಸಾಲಿನಲ್ಲಿ ಮುಂಚೂಣಿಯಲ್ಲಿವೆ. ಸೂರಿ ಎಂದರೆ ಕ್ರೌರ್ಯ, ಹಸಿಬಿಸಿ ರೌಡಿಸಂ ಕಥೆ ಎನ್ನುವವರು ಒಮ್ಮೆ ಈ ಚಿತ್ರವನ್ನು ನೋಡಬೇಕು. ಇದೇ ಸಿನಿಮಾದ ಮುಂದುವರಿದ ಭಾಗ ‘ಕಾಗೆ ಬಂಗಾರ’ದ ಕುರಿತೂ ಪ್ರೇಕ್ಷಕ ನಿರೀಕ್ಷೆ ಇರಿಸಿಕೊಳ್ಳುವಂತೆ ಮಾಡುವುದು ಈ ಚಿತ್ರದ ಯಶಸ್ಸು.

https://goo.gl/NFhrga ಕೊಂಡಿ ಬಳಸಿಕೊಂಡು ಈ ಚಿತ್ರವನ್ನು ಯೂ ಟ್ಯೂಬ್‌ನಲ್ಲಿ ನೋಡಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.