ಸೋಮವಾರ, ಆಗಸ್ಟ್ 10, 2020
26 °C

ಕೋಟಿ ಜನರ ಮೆಚ್ಚುಗೆ ಪಡೆದ ‘ರಾಝಿ’ ಟ್ರೇಲರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಟಿ ಜನರ ಮೆಚ್ಚುಗೆ ಪಡೆದ ‘ರಾಝಿ’ ಟ್ರೇಲರ್‌

ಬಾಲಿವುಡ್ ಚಿನಕುರುಳಿ ಅಲಿಯಾ ಭಟ್ ಅಭಿನಯದ ‘ರಾಝಿ’ ಚಿತ್ರದ ಟ್ರೇಲರ್ ಮಂಗಳವಾರವಷ್ಟೆ ಬಿಡುಗಡೆಯಾಗಿದೆ. ಒಂದು ದಿನದಲ್ಲಿಯೇ 1 ಕೋಟಿಗೂ ಹೆಚ್ಚು ಬಾರಿ ಟ್ರೇಲರ್ ವೀಕ್ಷಣೆ ಕಂಡಿದ್ದು, ವೀಕ್ಷಿಸಿದವರು ಅಲಿಯಾ ಅಭಿನಯಕ್ಕೆ ಮಾರು ಹೋಗಿದ್ದಾರೆ.

ರಾಜಿ ಚಿತ್ರವು, ಭಾರತದ ಗೂಢಾಚಾರಿಯೊಬ್ಬಳು ಪಾಕಿಸ್ತಾನಕ್ಕೆ ತೆರಳಿ ಅಲ್ಲಿನ ಸೇನೆಯ ಮಾಹಿತಿಗಳನ್ನು ಭಾರತಕ್ಕೆ ರವಾನಿಸುವ ಕಥಾಹಂದರ ಒಳಗೊಂಡಿದೆ. ಗೂಢಾಚಾರಿ ಪಾತ್ರದಲ್ಲಿ ಆಲಿಯಾ ನಟಿಸಿದ್ದು, ಟ್ರೇಲರ್‌ನಲ್ಲಿ ಕಾಣುವಂತೆ, ನಗು, ಉದ್ವೇಗ, ಪ್ರೀತಿ, ರೋಷ, ಆ್ಯಕ್ಷನ್ ಎಲ್ಲದರಲ್ಲೂ ಆಲಿಯಾ ಪಾತ್ರವೇ ಪ್ರಮುಖವಾಗಿದೆ.

ಉಡ್ತಾ ಪಂಜಾಬ್, ಹೈವೇ, ಡಿಯರ್ ಜಿಂದಗೀ ರೀತಿಯ ಚಿತ್ರಗಳ ಕ್ಲಿಷ್ಟಕರ ಪಾತ್ರಗಳಲ್ಲಿ ಸಮರ್ಥವಾಗಿ ನಟಿಸುವ ಮೂಲಕ ತಾನು ಕೇವಲ ಬಬ್ಲಿ ಹುಡಗಿ ಅಲ್ಲ, ಪ್ರಬುದ್ಧ ನಟಿಯೂ ಹೌದು ಎನ್ನುವುದನ್ನು ರುಜಾವಾತು ಮಾಡಿರುವ ಆಲಿಯಾ ‘ರಾಝಿ’ ಚಿತ್ರದ ಮೂಲಕ ಮತ್ತೊಮ್ಮೆ ತನ್ನ ನಟನಾ ಕೌಶಲವನ್ನು ಪ್ರದರ್ಶಿಸಿ ಜನರ ಮನಗೆದಿದ್ದಾರೆ.

‘ಆಲಿಯಾ ಭಟ್ ತನ್ನ ಅಭಿನಯದಿಂದ ನನ್ನನ್ನು ಮತ್ತೆ ಮತ್ತೆ ವಿಸ್ಮಿತಗೊಳಿಸುತ್ತಿದ್ದಾರೆ’ ಎಂದು ಬಾಲಿವುಡ್ ನಟ ನಾಸಿರ್‌ವುದ್ದೀನ್ ಶಾ ಉದ್ಘರಿಸಿರುವುದು ಆಲಿಯಾ ಪ್ರಬುದ್ಧತೆಗೆ ಸಿಕ್ಕ ಪ್ರಮಾಣಪತ್ರದಂತಿದೆ.

‘ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುವ ವ್ಯಕ್ತಿತ್ವ ನನ್ನದು. ಅದು ನನ್ನಲ್ಲಿ ಬೇರೂರಿದೆ. ನಟನೆ ವಿಚಾರದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದ್ದರೂ ಒತ್ತಡಕ್ಕೆ ಒಳಗಾಗುತ್ತೇನೆ. ಆದರೆ, ಜನರು ಮಾತ್ರ ನನ್ನನ್ನು ಆ ದಾಟಿಯಲ್ಲಿ ನೋಡಿಲ್ಲ.

ನಾಸೀರ್‌ ಅವರಂತವರು ಒಳ್ಳೆಯ ವಿಚಾರಗಳನ್ನು ಹೇಳಿದಾಗ ಹಾಗೂ ಮೆಚ್ಚುಗೆ ವ್ಯಕ್ತಪ‍ಡಿಸಿದಾಗಿ  ಸಂತೋಷಪಡುತ್ತೇನೆ. ನನಗೆ ಒಳ್ಳೆಯ ಜೀವನ ಸಿಕ್ಕಿದೆ. ನಾನು ಎಲ್ಲವನ್ನು ಪ್ರೀತಿಸುವುದು ಹಾಗೂ ಪ್ರೀತಿ ಪಡೆಯುವುದೇ ಜೀವನ ಎಂದು ನಂಬಿದ್ದೇನೆ’ ಎಂದಿದ್ದಾರೆ ಆಲಿಯಾ.

ಜಂಗಲ್ ಪಿಕ್ಚರ್ ಮತ್ತು ಧರ್ಮ ಪ್ರೊಡಕ್ಷನ್‌ನ ‘ರಾಝಿ’ ಹಾಗೂ ‘ಗಲ್ಲಿ ಬಾಯ್’ ಚಿತ್ರಗಳಲ್ಲಿ ಸವಾಲುಗಳನ್ನು ಎದುರಿಸುವ ಪಾತ್ರ ಆಲಿಯಾ ಅವರದು. ಎರಡೂ ಚಿತ್ರಗಳು ಈ ವರ್ಷ ನೋಡಬಹುದಾಗಿದೆ. ಕಾಕತಾಳೀಯವೆಂಬಂತೆ ಈ ಎರಡೂ ಚಿತ್ರಗಳನ್ನು ಮೇಘನಾ ಗುಲ್ಜಾರ್ ಮತ್ತು ಜೋಯಾ ಅಖ್ತಾರ್ ನಿರ್ದೇಶಿಸಿದ್ದಾರೆ.

ಗೌರಿ ಶಿಂಧೆ ನಿರ್ದೇಶನದ ಚಿತ್ರದಲ್ಲೂ ಆಲಿಯಾ ನಟಿಸಿದ್ದಾರೆ. ಈ ಮೂವರು ನಿರ್ದೇಶಕಿಯರ ಜತೆ ಮತ್ತೆ ಮತ್ತೆ ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದು ಆಲಿಯಾ ಹೇಳಿಕೊಂಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.