ಮಂಗಳವಾರ, ಆಗಸ್ಟ್ 4, 2020
26 °C

ಬಂದಿದ್ದಾರೆ ಸೋಮಣ್ಣ; ರಂಗೇರಿದೆ ಕಣ

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಬಂದಿದ್ದಾರೆ ಸೋಮಣ್ಣ; ರಂಗೇರಿದೆ ಕಣ

ಚುನಾವಣಾ ತಂತ್ರಗಳ ಅನುಭವಿ ‘ಪೈಲ್ವಾನ’ ಎನಿಸಿದ ಬಿಜೆಪಿ ಮುಖಂಡ ವಿ.ಸೋಮಣ್ಣ ಅವರು ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದ ಅಖಾಡ ಪ್ರವೇಶಿಸಿದ್ದರಿಂದ ಅದೀಗ ಜಿದ್ದಾಜಿದ್ದಿನ ಕಣ. ಸದ್ಯ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವವರು ರಾಜ್ಯದಲ್ಲೇ ಅತ್ಯಂತ ಶ್ರೀಮಂತ ಶಾಸಕನೆಂದು ಗುರುತಿಸಿಕೊಂಡಿರುವ ಕಾಂಗ್ರೆಸ್‌ನ ಪ್ರಿಯಾಕೃಷ್ಣ.

ವಸತಿ ಸಚಿವ ಎಂ.ಕೃಷ್ಣಪ್ಪ ಅವರ ಪುತ್ರನಾಗಿರುವ ಈ ಯುವ ಶಾಸಕ, ಹಿಂದಿನ ಚುನಾವಣೆ ಸಂದರ್ಭದಲ್ಲೇ ₹ 910 ಕೋಟಿಯಷ್ಟು ಘೋಷಿತ ಆಸ್ತಿಯನ್ನು ಹೊಂದಿದ್ದರು. ಗಾಲ್ಫ್‌ ಆಟಗಾರನೂ ಆಗಿರುವ ಅವರು, 2001ರಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ಅಕ್ಕಪಕ್ಕದ ಕ್ಷೇತ್ರಗಳಲ್ಲಿ (ವಿಜಯನಗರ ಮತ್ತು ಗೋವಿಂದರಾಜನಗರ) ಈಗ ತಂದೆ–ಮಗನದೇ ರಾಜ್ಯಭಾರ.

ಹಿಂದಿನ ಚುನಾವಣೆಯಲ್ಲಿ ವಿಜಯನಗರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದ ಸೋಮಣ್ಣ, ಈ ಸಲ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಸ್ಪರ್ಧಿಸಲು ಒಲವು ತೋರಿದ್ದರು. ಹಲವು ತಿಂಗಳುಗಳಿಂದ ಅಲ್ಲಿಯೇ ‘ಕ್ಷೇತ್ರಕಾರ್ಯ’ದಲ್ಲೂ ತೊಡಗಿದ್ದರು. ಆದರೆ, ಗೋವಿಂದರಾಜನಗರದಲ್ಲಿ ಅವರಿಗೆ ಟಿಕೆಟ್‌ ಘೋಷಣೆಯಾಗಿದ್ದರಿಂದ ಕ್ಷೇತ್ರಕಾರ್ಯ ಕೂಡ ಈಗ ಸ್ಥಳಾಂತರಗೊಂಡಿದೆ. ಸುರಕ್ಷಿತ ತಾಣದಿಂದ ಹೊರಬಂದು ಸವಾಲಿನ ಅಖಾಡದೊಳಗೆ ಇಳಿಯಲು ಒಪ್ಪಿಕೊಂಡಿರುವ ಅವರು, ಅದಕ್ಕೆ ಪ್ರತಿಯಾಗಿ ಪುತ್ರ ಅರುಣ್‌ ಅವರಿಗೆ ಅರಸೀಕೆರೆ ಕ್ಷೇತ್ರದ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದಾರಂತೆ.

ಸಚಿವ ಕೃಷ್ಣಪ್ಪನವರು ಬಿಜೆಪಿಗೆ ಹೋಗುವ ಸುದ್ದಿ ಹರಿದಾಡಿದಂತೆಯೇ ಸೋಮಣ್ಣನವರು ಕಾಂಗ್ರೆಸ್‌ಗೆ ಜಿಗಿಯಲಿದ್ದಾರೆ ಎಂಬ ಮಾತೂ ಗಾಳಿಯಲ್ಲಿ ತೇಲಾಡಿದೆ. ಗಡಿಯಾರದ ಲೋಲಕದಂತೆ ಅತ್ತಿತ್ತ ಚಿತ್ತ ಹರಿದಾಡಿದ ಬಳಿಕ ಇಬ್ಬರೂ ಮುಖಂಡರು ತಾವು ಈಗಿರುವ ಪಕ್ಷಗಳಲ್ಲೇ ರಾಜಕೀಯ ನೆಲೆ ಕಂಡುಕೊಳ್ಳಲು ಮನಸ್ಸು ಮಾಡಿದ್ದಾರೆ.

(ಸೋಮಣ್ಣ)

ಕ್ಷೇತ್ರ ಪುನರ್‌ವಿಂಗಡಣೆಗೆ ಮುನ್ನ ಈ ಪ್ರದೇಶ ಬಿನ್ನಿಪೇಟೆ ವ್ಯಾಪ್ತಿಯಲ್ಲಿತ್ತು. ಆಗ ಸೋಮಣ್ಣ ಪಾಲಿಗೆ ಇದು ಅದೃಷ್ಟದ ನೆಲೆಯಾಗಿತ್ತು. 1989ರಲ್ಲಿ ಜಯಪ್ರಕಾಶ ನಾರಾಯಣ ಪಕ್ಷದಿಂದ (ಜೆಎನ್‌ಪಿ) ಸ್ಪರ್ಧಿಸಿ ಸೋಲು ಅನುಭವಿಸಿದ್ದ ಅವರು, ನಂತರದ ಮೂರು ಚುನಾವಣೆಗಳಲ್ಲಿ ಕ್ರಮವಾಗಿ ಒಮ್ಮೆ ಜನತಾ ದಳದಿಂದ, ಮತ್ತೊಮ್ಮೆ ಸ್ವತಂತ್ರವಾಗಿ, ಮಗದೊಮ್ಮೆ ಕಾಂಗ್ರೆಸ್‌ನಿಂದ ಸೆಣಸಿ, ಗೆಲುವಿನ ನಗೆ ಬೀರಿದ್ದರು.

ಬಿನ್ನಿಪೇಟೆ ಇಬ್ಭಾಗವಾಗಿ ಗೋವಿಂದರಾಜನಗರ ಕ್ಷೇತ್ರ ಉದಯವಾದ ಬಳಿಕ (2008) ಮತ್ತೆ ಕಾಂಗ್ರೆಸ್‌ನಿಂದ ಜಯದ ಸಿಹಿ ಉಂಡಿದ್ದರು ಸೋಮಣ್ಣ. 2013ರಲ್ಲಿ ಬಿಜೆಪಿ ಸೇರ್ಪಡೆಗೊಂಡು ವಿಜಯನಗರದಿಂದ ಸ್ಪರ್ಧಿಸಿ, ಉರುಳಿಸಿದ ದಾಳ ಫಲ ನೀಡದೆ ಪರಾಭವಗೊಂಡಿದ್ದರು. ಮೂವತ್ತು ವರ್ಷಗಳ ಚುನಾವಣಾ ರಾಜಕೀಯದಲ್ಲಿ ಎಲ್ಲ ಪಕ್ಷಗಳ ಜತೆ ಅವರು ಸರಸವಾಡಿದ್ದಾರೆ.

ಕ್ಷೇತ್ರದಲ್ಲಿ ಒಕ್ಕಲಿಗ ಹಾಗೂ ಕುರುಬ ಸಮುದಾಯದವರು ಗಣನೀಯ ಪ್ರಮಾಣದಲ್ಲಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಬಿಜೆಪಿಯ ಆರ್‌.ರವೀಂದ್ರ ಅವರನ್ನು ಸುಲಭವಾಗಿ ಮಣಿಸಿದ್ದ ಪ್ರಿಯಾಕೃಷ್ಣ ಅವರಿಗೆ ‘ಹಳೇ ಹುಲಿ’ಯ ಪುನರಾಗಮನ ತಲೆನೋವು ತಂದಿದೆ. ಹೀಗಾಗಿ ಕೃಷ್ಣಪ್ಪ ಅವರು ಮಗನ ಕ್ಷೇತ್ರದ ಕಡೆಗೆ ಹೆಚ್ಚಿನ ಮುತುವರ್ಜಿ ವಹಿಸುವಂತೆ ಮಾಡಿದೆ.

ಮುಂಚಿನಿಂದಲೂ ಸೋಮಣ್ಣನವರು ಹನೂರಿಗೆ ಹೋಗುವ ಸಾಧ್ಯತೆಗಳೇ ಹೆಚ್ಚಾಗಿದ್ದರಿಂದ ಈ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಎನ್‌.ಶಾಂತಕುಮಾರಿ, ಉಮೇಶ್ ಶೆಟ್ಟಿ, ಆರ್‌.ರವೀಂದ್ರ ಹಾಗೂ ವಾಗೀಶ್‌ ಪ್ರಯತ್ನ ನಡೆಸಿದ್ದರು. ಆದರೆ, ಲೆಕ್ಕಾಚಾರವೆಲ್ಲ ಉಲ್ಟಾ ಆಗಿದ್ದರಿಂದ ಬಿಜೆಪಿಯ ಸ್ಥಳೀಯ ಮುಖಂಡರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಪಕ್ಷದ ನಾಯಕತ್ವದ ಮುಂದೆಯೂ ಕೆಲವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಈ ಅತೃಪ್ತಿಯ ಕಾವಿನಲ್ಲಿ ತಮ್ಮ ಅಡುಗೆ ಎಷ್ಟು ಬೇಯಬಹುದು ಎಂದು ಕಾಂಗ್ರೆಸ್‌ ನಾಯಕರು ಲೆಕ್ಕ ಹಾಕುತ್ತಿದ್ದಾರೆ.

ಜೆಡಿಎಸ್‌ ಇಲ್ಲಿ ಗೆಲ್ಲುವಷ್ಟು ಸಾಮರ್ಥ್ಯ ಹೊಂದಿಲ್ಲದಿದ್ದರೂ ಕಣದಲ್ಲಿರುವ ಇತರ ಇಬ್ಬರು ಅಭ್ಯರ್ಥಿಗಳ ಅದೃಷ್ಟವನ್ನು ಏರುಪೇರು ಮಾಡುವಷ್ಟು ಪ್ರಭಾವ ಹೊಂದಿದೆ. ಈ ಹಿಂದಿನ ಎರಡು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ರಂಗೇಗೌಡರು 20 ಸಾವಿರದಷ್ಟು ಮತಗಳನ್ನು ಪಡೆದಿರುವುದೇ ಇದಕ್ಕೆ ಸಾಕ್ಷಿ. ಈ ಸಲ ರಂಗೇಗೌಡರಿಗೆ ಟಿಕೆಟ್‌ ಕೊಡುವ ಮುನ್ನ ಬಿಜೆಪಿಯ ಅತೃಪ್ತರಿಗಾಗಿ ಕಾಯುವ ತಂತ್ರವನ್ನು ಜೆಡಿಎಸ್‌ ಅನುಸರಿಸುತ್ತಿದೆ.

ಹಲವು ವರ್ಷಗಳವರೆಗೆ ರಸ್ತೆಗಳು ಹದಗೆಟ್ಟ ಸ್ಥಿತಿಯಲ್ಲಿದ್ದರೂ ಯಾರೂ ಕೇಳಿರಲಿಲ್ಲ. ಆದರೆ, ಕೆಲವೇ ವಾರಗಳಲ್ಲಿ ಬಹುತೇಕ ರಸ್ತೆಗಳಿಗೆ ಟಾರು ಹಾಕಲಾಗಿದೆ. ನೀರಿನ ಕೊರತೆ ಈಗಾಗಲೇ ಕಾಡಲಾರಂಭಿಸಿದೆ. ಕ್ಷೇತ್ರದ ಜನ ಮಾತ್ರ ತಮ್ಮ ಸಮಸ್ಯೆಗಳನ್ನು ಮರೆತು, ಜಿದ್ದಾಜಿದ್ದಿನ ಸೆಣಸಾಟದಲ್ಲಿ ಗೆಲುವು ಯಾರದಾಗಬಹುದು ಎಂಬ ಚರ್ಚೆಯಲ್ಲಿ ಮುಳುಗಿದ್ದಾರೆ!

*****

ನಮ್ಮ ಭಾಗದಲ್ಲಿ ಹೇಳಿಕೊಳ್ಳುವಂತಹ ಸಮಸ್ಯೆಗಳು ಏನಿಲ್ಲ. ಶಾಸಕರು ಮಾತ್ರವಲ್ಲದೆ ಕಾರ್ಪೊರೇಟರ್‌ಗಳು ಸಹ ನಮಗೆ ಸ್ಪಂದಿಸುತ್ತಿದ್ದಾರೆ. ನಮ್ಮ ಪ್ರದೇಶದ ರಸ್ತೆಗಳೆಲ್ಲ ಹದಗೆಟ್ಟಿದ್ದವು. ಆದರೀಗ ದುರಸ್ತಿಯಾಗಿವೆ. ಜನಪ್ರತಿನಿಧಿಗಳು ಬೇಸಿಗೆ ದಿನಗಳಲ್ಲಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಂಡರೆ ಸಾಕು.

-ಉಮೇಶ್‌, ಅಗ್ರಹಾರ ದಾಸರಹಳ್ಳಿ

*****

ಮೂರೂ ಪಕ್ಷಗಳಿಗೆ ಮಣೆ(
ಪ್ರಿಯಾಕೃಷ್ಣ)

 

ಬಿಬಿಎಂಪಿ ಚುನಾವಣೆಯಲ್ಲಿ ಈ ಕ್ಷೇತ್ರದ ಜನ ಮೂರೂ ಪಕ್ಷಗಳಿಗೆ ಮಣೆ ಹಾಕಿದ್ದಾರೆ. ಆದರೆ, ಅದರಲ್ಲಿ ಬಿಜೆಪಿಯದ್ದೇ ಸಿಂಹಪಾಲು. ಒಂಬತ್ತರಲ್ಲಿ ಆರು ವಾರ್ಡ್‌ಗಳನ್ನು (ಗೋವಿಂದರಾಜನಗರ, ಅಗ್ರಹಾರ ದಾಸರಹಳ್ಳಿ, ಮಾರೇನಹಳ್ಳಿ, ಮಾರುತಿ ಮಂದಿರ, ಮೂಡಲಪಾಳ್ಯ, ನಾಗರಬಾವಿ) ಆ ಪಕ್ಷ ಗೆದ್ದರೆ, ಎರಡನ್ನು (ನಾಯಂಡಹಳ್ಳಿ, ರಾಜಕುಮಾರ್‌ ವಾರ್ಡ್‌) ಕಾಂಗ್ರೆಸ್‌ ತನ್ನದಾಗಿಸಿಕೊಂಡಿದೆ. ಮತ್ತೊಂದು ವಾರ್ಡ್‌ (ಕಾವೇರಿಪುರ) ಜೆಡಿಎಸ್‌ ಪಾಲಾಗಿದೆ.

ಕ್ಷೇತ್ರದಲ್ಲಿ ಶಾಸಕ ಪ್ರಿಯಾಕೃಷ್ಣ ಅವರಿಗೂ ಬಿಜೆಪಿ ಕಾರ್ಪೊರೇಟರ್‌ ಉಮೇಶ್‌ ಶೆಟ್ಟಿ ಅವರಿಗೂ ಮೊದಲಿನಿಂದಲೂ ಜಿದ್ದಾಜಿದ್ದಿ. ಅವರಿಬ್ಬರ ಪ್ರತಿಷ್ಠೆಯ ಕಾರಣದಿಂದ, ಚಂದ್ರಾ ಲೇಔಟ್‌ನ ನವೀಕೃತ ಉದ್ಯಾನ ಉದ್ಘಾಟನೆ ಸಮಾರಂಭ ಎರಡೂ ಪಕ್ಷಗಳ ಕಾರ್ಯಕರ್ತರ ಮಾರಾಮಾರಿಗೆ ವೇದಿಕೆಯಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.