ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಯುತ ತೈಲ ಬೆಲೆ ನಿಗದಿ: ಮೋದಿ ಸಲಹೆ

Last Updated 11 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರತಿಯೊಬ್ಬರಿಗೂ ಸುಲಭವಾಗಿ ಮತ್ತು ಕೈಗೆಟುಕುವ ದರದಲ್ಲಿ ಶುದ್ಧ ಇಂಧನ ದೊರೆಯಲು ನ್ಯಾಯಯುತವಾದ ಬೆಲೆ ನಿಗದಿ ವ್ಯವಸ್ಥೆ ಜಾರಿಗೆ ಬರಬೇಕಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ಮಾಡಿದ್ದಾರೆ.

ಬುಧವಾರ ಇಲ್ಲಿ ಆರಂಭವಾದ 16ನೇ ಅಂತರರಾಷ್ಟ್ರೀಯ ಇಂಧನ ವೇದಿಕೆ (ಐಇಎಫ್‌) ಸಮಾವೇಶದಲ್ಲಿ ಮಾತನಾಡಿದ ಅವರು, ಕೃತಕವಾಗಿ ಇಂಧನ ಬೆಲೆ ಏರಿಳಿಸುವ ಯತ್ನಗಳು ಸ್ವಯಂ ನಾಶಕ್ಕೆ ದಾರಿ ಮಾಡಿಕೊಡಲಿವೆ ಎಂದು ಎಚ್ಚರಿಕೆ ನೀಡಿದರು.

‘ಭಾರತದಲ್ಲಿ ಇಂದಿಗೂ ಕೋಟ್ಯಂತರ ಮನೆಗಳಿಗೆ ವಿದ್ಯುತ್‌ ಸಂಪರ್ಕ ಇಲ್ಲ. ಶುದ್ಧ ಅಡುಗೆ ಅನಿಲ ಸಿಗುತ್ತಿಲ್ಲ. ಹೀಗಾಗಿ ಬಡವರಿಗೆ ಸುಲಭವಾಗಿ ಮತ್ತು ಅಗ್ಗವಾಗಿ ಸಿಗುವ ಶುದ್ಧ ಇಂಧನ ದೇಶಕ್ಕೆ ಅಗತ್ಯವಾಗಿದೆ’ ಎಂದರು.

ಕಡಿವಾಣ ಅಗತ್ಯ: ‘ಜಾಗತಿಕ ಮಾರುಕಟ್ಟೆಯಲ್ಲಿ ಅನಿಯಂತ್ರಿತ ಕಚ್ಚಾತೈಲ ಬೆಲೆ ಏರಿಕೆಗೆ ಕಡಿವಾಣ ಹಾಕುವ ಅಗತ್ಯವಿದೆ. ಇದಕ್ಕಾಗಿ ಎಲ್ಲ ರಾಷ್ಟ್ರಗಳ ಸಮ್ಮತಿ ಪಡೆದು ತೈಲ ಬೆಲೆಗಳ ನಿಗದಿ ಮಾಡಬೇಕು’ ಎಂದು ಸಲಹೆ ಮಾಡಿದರು.

‘ಕಚ್ಚಾತೈಲ ಬೆಲೆ ಏರಿಳಿತವು ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಅಭಿವೃದ್ಧಿಯ ಮೇಲೆ ಭಾರಿ ದುಷ್ಪರಿಣಾಮ ಬೀರುತ್ತಿದೆ’ ಎಂದೂ ಅವರು ಆತಂಕ ವ್ಯಕ್ತಪಡಿಸಿದರು.

‘ತೈಲ ಮತ್ತು ಅನಿಲ ಜೀವನಾವಶ್ಯಕ ವಸ್ತುಗಳಾಗಿರುವುದರಿಂದ ತೈಲ ಬೆಲೆಗಳ ನಿಯಂತ್ರಣ ಮತ್ತು ಸ್ಥಿರತೆ ಕಾಪಾಡುವುದು ಅಗತ್ಯ. ತೈಲ ಉತ್ಪಾದಕ ಮತ್ತು ಬಳಕೆ ಮಾಡುವ ರಾಷ್ಟ್ರಗಳ ಹಿತದೃಷ್ಟಿಯಿಂದಲೂ ಇದು ಒಳ್ಳೆಯದು’ ಎಂದರು.

ಸೌದಿ ಅರೇಬಿಯಾದ ಇಂಧನ ಸಚಿವ ಅಲ್‌ ಫಲಿಹ್‌ ಸೇರಿದಂತೆ ಕಚ್ಚಾ ತೈಲ ಉತ್ಪಾದಿಸುವ ಬಹುತೇಕ ರಾಷ್ಟ್ರಗಳ ಇಂಧನ ಸಚಿವರು ಮತ್ತು ಉನ್ನತ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT