ಶುಕ್ರವಾರ, ಡಿಸೆಂಬರ್ 13, 2019
19 °C

ಕೃಷಿ ಸಾಲ ಮನ್ನಾ ಎನ್ನುವ ರಾಜಕೀಯ...

ಯತೀಶ್‌ ಕುಮಾರ್‌ ಜಿ.ಡಿ Updated:

ಅಕ್ಷರ ಗಾತ್ರ : | |

ಕೃಷಿ ಸಾಲ ಮನ್ನಾ ಎನ್ನುವ ರಾಜಕೀಯ...

ರೈತ ಎಂದಾಕ್ಷಣ ಕಣ್ಣ ಮುಂದೆ ಬರುವುದು ಮಾಸಲು ಬಟ್ಟೆ ಹಾಕಿದ, ಕ್ಷೌರವಿಲ್ಲದ, ನೆರಿಗೆಗಟ್ಟಿದ ಮುಖ. ಇಂತಹ ಕೃಷಿಕ ಆರ್ಥಿಕವಾಗಿ ಬಲವಾಗಿದ್ದಾನೆ ಎಂದರೆ ಯಾರೂ ನಂಬುವುದಿಲ್ಲ. ಸ್ವಾತಂತ್ರ್ಯಪೂರ್ವದಿಂದ ಇಂದಿನವರೆಗೂ ಕೃಷಿ ಮಾರುಕಟ್ಟೆ ವ್ಯವಸ್ಥೆಯೇ ಪರಿಪಕ್ವವಾಗಿಲ್ಲ. ಹೂಡಿದ ಬಂಡವಾಳ ವಾಪಸ್‌ ಬರುತ್ತದೆ ಎನ್ನುವ ಖಾತ್ರಿ ಇಲ್ಲದಿದ್ದರೂ ರೈತ, ಬಿತ್ತನೆಯ ಮೇಲೆ ಬಂಡವಾಳ ಹೂಡಿ ಜೂಜಾಡುತ್ತಿದ್ದಾನೆ. ಮಳೆಯೂ ಇವನ ಪರವಾಗಿಲ್ಲ. ಇಂತಹ ಸ್ಥಿತಿಯಲ್ಲಿ ಸರ್ಕಾರ ರೈತರ ಕೈಹಿಡಿಯದಿದ್ದರೆ ಹೇಗೆ? ಕೈಗಾರಿಕೆಗಳ ಮಾಲೀಕರಿಗೆ ಕೋಟ್ಯಂತರ ರೂಪಾಯಿ ಸಬ್ಸಿಡಿ ನೀಡುವ ಸರ್ಕಾರ, ಅನ್ನ ನೀಡುವ ರೈತರ ಸಾಲ ಮನ್ನಾ ಮಾಡಿದರೆ ವಕ್ರದೃಷ್ಟಿಯಿಂದ ನೋಡುವುದು ಯಾಕೆ? ಇದು ಕೃಷಿ ತಜ್ಞರೊಬ್ಬರು ಕೇಳುವ ಪ್ರಶ್ನೆ.

’ಕೃಷಿ ಸಬ್ಸಿಡಿ ನೀಡುವುದಿಲ್ಲ ಎಂದು ಕೊಚ್ಚಿಕೊಳ್ಳುವ ಯುರೋಪ್‌ನಲ್ಲಿ ಬೆಳೆಗೆ ಕ್ವಿಂಟಲ್‌ಗೆ ಇಂತಿಷ್ಟು ಎಂದು ಹಣ ನಿಗದಿಯಾಗಿರುತ್ತದೆ. ಹೂಡಿದ ಬಂಡವಾಳದ ಮೇಲೆ 3ರಿಂದ 4 ಪಟ್ಟು ಹಣ ಸಿಗುತ್ತದೆ. ಆಸ್ಟ್ರೇಲಿಯ, ಅಮೆರಿಕ ಮತ್ತಿತರ ಮುಂದುವರಿದ ದೇಶಗಳಲ್ಲಿ ಈ ವ್ಯವಸ್ಥೆಯಿದೆ. ಎಷ್ಟು ಪ್ರಮಾಣದ ಕೃಷಿ ಉತ್ಪನ್ನ ಬೆಳೆಯಬೇಕು ಎಂದು ನಿಗದಿ ಮಾಡಿರುತ್ತಾರೆ. ಅವರಿಗೆ ನ್ಯಾಯವಾದ ಬೆಲೆ ಸಿಗುತ್ತದೆ. ಅಲ್ಲಿಯ ಕೃಷಿಕರಲ್ಲಿ ನೆಮ್ಮದಿ ಇದೆ. ಆದರೆ ಭಾರತದ ಪರಿಸ್ಥಿತಿ ವ್ಯತಿರಿಕ್ತ. ಇಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚು. ಇವರಿಗೆ ಕೃಷಿಯಿಂದ ವರ್ಷಕ್ಕೆ ಹಲವು ಸಾವಿರದಿಂದ ಲಕ್ಷ ರೂಪಾಯಿ ಸಿಕ್ಕರೆ ಒಂದು ಕುಟುಂಬ ನಿರ್ವಹಣೆ ಸಾಧ್ಯವೇ?’ ಎಂದು ಕೃಷಿ ಹವಾಮಾನ ತಜ್ಞ ಡಾ. ಎಂ.ಬಿ.ರಾಜೇಗೌಡ ಪ್ರಶ್ನಿಸುವರು.

ಪ್ರಧಾನಿ ನರೇಂದ್ರ ಮೋದಿ ಅವರು, ಕೃಷಿ ಮೇಲೆ ಹೂಡಿದ ಬಂಡವಾಳವನ್ನು ಪರಿಗಣಿಸಿ ಶೇ 50ರಷ್ಟು ಲಾಭಾಂಶ ಸೇರಿಸುವ ಮಾತನ್ನು ಆಡುತ್ತಿದ್ದಾರೆ. ಕರ್ನಾಟಕ ಸರ್ಕಾರ ಕೃಷಿ ಬೆಲೆ ಆಯೋಗವನ್ನು ರಚಿಸುವ ಮೂಲಕ ವೈಜ್ಞಾನಿಕ ಬೆಲೆ ನಿಗದಿ ಮಾಡುವ ಪ್ರಯತ್ನ ಮಾಡಿತು. ಇದೊಂದು ಒಳ್ಳೆಯ ಪ್ರಯತ್ನ. ಆದರೆ ರೈತರಿಗೆ ಸಬ್ಸಿಡಿ ನೀಡಿದರೆ ಕೊಂಕು ಮಾತಾಡುವುದು, ಸಾಲ ಮನ್ನಾ ಮಾಡಿದರೆ ರಾಜಕೀಯ ದೃಷ್ಟಿ

ಯಿಂದ ನೋಡುವುದು ಸರಿಯಲ್ಲ. ರೈತರಿಗೆ ಕೃಷಿಯ ಆಧುನಿಕ ತಂತ್ರಜ್ಞಾನ, ಹೊಸ ಬಗೆಯ ಸಲಕರಣೆಗಳನ್ನು ನೀಡಿದರೆ ಇಳುವರಿ ಅಧಿಕಗೊಂಡು ಲಾಭ ಹೆಚ್ಚಾಗುತ್ತದೆ. ಈ ರೀತಿಯ ಸ್ಥಿತಿ ಸೃಷ್ಟಿಸಿದರೆ ಯಾವ ರೈತನೂ ಸಾಲ ಮನ್ನಾ ಕೇಳುವುದೇ ಇಲ್ಲ ಎನ್ನುವರು.

ಕೃಷಿ ವಲಯವನ್ನು ಗಮನಿಸಿದರೆ, ಸ್ವಾತಂತ್ರ್ಯಪೂರ್ವಕ್ಕೂ ನಂತರದ ದಿನಗಳಿಗೂ ಹೆಚ್ಚೇನೂ ವ್ಯತ್ಯಾಸವೇ ಆಗಿಲ್ಲ. ಈ ವಲಯದಲ್ಲಿ ಪ್ರತಿ ಎಕರೆಗೆ ಬಂಡವಾಳ ಹೂಡಿಕೆ ಹೆಚ್ಚಾಗುತ್ತಲೇ ಇದೆ. ಕೂಲಿ, ಬಿತ್ತನೆ ಬೀಜ, ರಸಗೊಬ್ಬರದ ಬೆಲೆ ಏರುತ್ತಲೇ ಇದೆ. ಪಟ್ಟಣದ ಕಡೆ ವಲಸೆ ಹೆಚ್ಚಾಗಿ ಕೂಲಿಕಾರರ ಸಮಸ್ಯೆ ತೀವ್ರವಾಗಿದೆ. ವಾಣಿಜ್ಯ ಬೆಳೆಗಳಾದ ಕಾಫಿ, ಏಲಕ್ಕಿ ತೋಟಗಳಲ್ಲೂ ಕಾರ್ಮಿಕರ ಕೊರತೆ ಕಾಡುತ್ತಿದೆ. ಈ ತೋಟಗಳಿಗೆ ಸ್ಥಳೀಯ ಕೂಲಿಕಾರರ ಬದಲು ಈಶಾನ್ಯ ರಾಜ್ಯಗಳಿಂದ ಕಾರ್ಮಿಕರನ್ನು ಕರೆತರುವ ಮಧ್ಯವರ್ತಿ ವರ್ಗವೇ ತಲೆಯೆತ್ತಿದೆ.

ಕೃಷಿಕರಿಗೆ ಹೆಚ್ಚಿನ ವಿದ್ಯೆಯಿಲ್ಲ. ಹೀಗಾಗಿ ಹೊಸ ತಂತ್ರಜ್ಞಾನ ಅರ್ಥವಾಗುವುದೇ ಇಲ್ಲ. ಕೆಲ ವಿದ್ಯಾವಂತ ಕೃಷಿಕರು ತಂತ್ರಜ್ಞಾನ ಅಳವಡಿಸಿಕೊಳ್ಳುವ ಮನಸ್ಸು ಮಾಡುತ್ತಿದ್ದಾರೆ. ಆದರೆ ಅವರೂ ಮಾರುಕಟ್ಟೆಯ ಏರಿಳಿತದಿಂದ ತತ್ತರಿಸಿದ್ದಾರೆ. ಮಾರುಕಟ್ಟೆಯ ಅಧ್ಯಯನ ಮಾಡಿ, ಅದಕ್ಕೆ ತಕ್ಕಂತೆ ವಿವಿಧ ಬೆಳೆ ತೆಗೆಯುತ್ತಿರುವ ಪ್ರಗತಿಪರ ಕೃಷಿಕರಿದ್ದರೂ ಅವರ ಸಂಖ್ಯೆ ತೀರಾ ಕಡಿಮೆ. ಹೈನುಗಾರಿಕೆ ಮಾಡುತ್ತಿರುವ ರೈತರು ಕೆಎಂಎಫ್‌ನಿಂದಾಗಿ ತಿಂಗಳಿಗೊಮ್ಮೆ ಹಣ ಎಣಿಸುತ್ತಿದ್ದಾರೆ. ಇಲ್ಲಿ ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿಯಾಗಿದೆ. ಆದರೆ ಕೃಷಿ ನಂಬಿದ ರೈತ ಮದುವೆ, ತಿಥಿ, ಬೀಗರ ಊಟ, ಹಬ್ಬ, ನೆಂಟರು ಮನೆಗೆ ಬಂದಾಗ ಮಾಡುವ ಖರ್ಚಿಗೆ ಎಲ್ಲಿಂದ ಹಣ ತರಬೇಕು? ಇದಕ್ಕೆ ಉತ್ತರವೇ ಕೃಷಿ ಸಾಲ.

ಕೃಷಿಗೆ ನೀಡಿದ ಸಾಲ, ವ್ಯವಸಾಯಕ್ಕೆ ಸಂಪೂರ್ಣವಾಗಿ ಬಳಕೆಯಾಗುತ್ತಿಲ್ಲ ಎನ್ನುವುದನ್ನು ಒಪ್ಪುವ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್‌ ಕಮ್ಮರಡಿ, ’ಕೃಷಿ ಉತ್ಪನ್ನಗಳಿಗೆ ಗ್ರಾಹಕರು ಒಳ್ಳೆಯ ಬೆಲೆ ನೀಡಿ ಖರೀದಿ ಮಾಡುತ್ತಿದ್ದಾರೆ. ಆದರೆ ಮಧ್ಯವರ್ತಿಗಳು ದೊಡ್ಡ ಪ್ರಮಾಣದಲ್ಲಿ ಲಾಭ ಪಡೆಯುತ್ತಿದ್ದಾರೆ. ಎಲ್ಲಾ ರೀತಿಯ ಕೃಷಿ ಉತ್ಪನ್ನಕ್ಕೆ ಆನ್‌ಲೈನ್‌ ಮಾರುಕಟ್ಟೆ ಸೃಷ್ಟಿಯಾಗಬೇಕು. ತಿಪಟೂರಿನ ಕೊಬ್ಬರಿಗೆ ಆನ್‌ಲೈನ್‌ನಲ್ಲಿ ಒಳ್ಳೆಯ ಬೆಲೆ ಸಿಗುತ್ತಿತ್ತು. ಆದರೆ ಆ ವ್ಯವಸ್ಥೆಯನ್ನೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪದಾಧಿಕಾರಿಗಳು ಮತ್ತು ದಲ್ಲಾಳಿಗಳು ಹಾಳುಮಾಡಿದ್ದಾರೆ. ಬೆಲೆ ಸಿಗದಿದ್ದರೆ ರೈತ ಮತ್ತೆ ಸಾಲ ಮಾಡಲೇಬೇಕಾಗುತ್ತದೆ. ಸಾಲ ಮರುಪಾವತಿ ಸಾಧ್ಯವೇ ಇಲ್ಲ ಎನ್ನುವ ಸಂದರ್ಭದಲ್ಲಿ ಸರ್ಕಾರ ಮನ್ನಾ ಮಾಡಲೇಬೇಕಾಗುತ್ತದೆ’ ಎಂದು ಸ್ಪಷ್ಟವಾಗಿ ಹೇಳಿದರು.

’ಲಾಭವೇ ಇಲ್ಲದ ಕೃಷಿ ವ್ಯವಸ್ಥೆ ಸರಿಯಾಗಬೇಕಾದರೆ ಬೆಂಬಲ ಬೆಲೆ ನೀತಿಗೆ ಕಾನೂನು ಸ್ವರೂಪ ಸಿಗಬೇಕು. ಆಯೋಗ ರಚಿಸಿದ ಕರಡು ನೀತಿಯನ್ನು ರಾಜ್ಯ ಸರ್ಕಾರದ ಕಾನೂನು ಇಲಾಖೆ ಪರಿಶೀಲಿಸುತ್ತಿದೆ. ಇಂತಹ ನೀತಿಗೆ ಶಾಸಕರು ಬೆಂಬಲ ನೀಡುವರೇ ಎಂದು ಕಾದು ನೋಡಬೇಕು’ ಎಂದರು.

ಸಾಲ ಮನ್ನಾ ಘೋಷಣೆಯಿಂದ ಅಪೆಕ್ಸ್ ಬ್ಯಾಂಕ್‌ಗಳು ತತ್ತರಿಸುತ್ತಿವೆ ಎನ್ನುವ ಬ್ಯಾಂಕ್‌ನ ಮಾಜಿ ನಿರ್ದೇಶಕ ಸಿ.ಬಸವೇಗೌಡ, ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿ, ಅಪೆಕ್ಸ್‌ ಬ್ಯಾಂಕ್‌ಗಳಿಗೆ ಸಾಲ ಮರುಪಾವತಿ ತಡ ಮಾಡುತ್ತದೆ. ಇದರಿಂದಾಗಿ ಹೊಸ ಸಾಲ ನೀಡಲು ಸಾಧ್ಯವಾಗುವುದಿಲ್ಲ. ರಾಜ್ಯ ಸರ್ಕಾರ ಕಳೆದ ವರ್ಷ 50 ಸಾವಿರ ರೂಪಾಯಿವರೆಗೆ ಸಾಲ ಮನ್ನಾ ಘೋಷಿಸಿತು. ಅದಕ್ಕಿಂತ ಹೆಚ್ಚಿನ ಸಾಲ ಪಡೆದಿದ್ದ ರೈತರು, ಉಳಿದ ಹಣವನ್ನು ನಿಗದಿತ ಸಮಯದಲ್ಲಿ ಬ್ಯಾಂಕ್‌ಗೆ ಕಟ್ಟಿದರೆ ಮಾತ್ರ ಈ ಸೌಲಭ್ಯ ಸಿಗುತ್ತದೆ. ರೈತರು ಬ್ಯಾಂಕ್‌ಗಳಿಂದ ಸಾಲ ಪಡೆಯುವ ಜೊತೆಯಲ್ಲಿ ಕೈಸಾಲವನ್ನೂ ಪಡೆದಿರುತ್ತಾರೆ. ಇಂತಹ ಸಂದರ್ಭದಲ್ಲಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗದೆ ಮತ್ತೆ ಖಾಸಗಿ ಸಾಲಕ್ಕೆ ಕೈಚಾಚುತ್ತಾರೆ. ಸಂಪೂರ್ಣ ಸಾಲ ಮನ್ನಾ ಆದರೆ ಮಾತ್ರ ಕೃಷಿಕ ಸಾಲದ ಸುಳಿಯಿಂದ ಹೊರಬರುತ್ತಾನೆ. ಸರ್ಕಾರ ಸಾಲ ಮನ್ನಾ ಘೋಷಣೆ ಮಾಡಿ, ನಿಗದಿತ ಹಣವನ್ನು ಬ್ಯಾಂಕ್‌ಗಳಿಗೆ ಸರಿಯಾದ ಸಮಯಕ್ಕೆ ನೀಡಬೇಕು. ಆಗ ಮಾತ್ರ ಬ್ಯಾಂಕ್‌ಗಳ ಮೇಲಿನ ಹೊರೆ, ರೈತರ ಮೇಲಿನ ಹೊರೆ ಇಳಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

(ಕುರುಬೂರು ಶಾಂತಕುಮಾರ್‌)

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ರಾಷ್ಟ್ರೀಯ ಬ್ಯಾಂಕ್‌ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಕೃಷಿಕರ ಸಾಲವನ್ನು ಒಮ್ಮೆ ಮನ್ನಾ ಮಾಡಿ, ನಂತರ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ಮುಂದೆಂದೂ ರೈತರು ಸಾಲ ಮನ್ನಾದ ಮಾತೇ ಆಡುವುದಿಲ್ಲ ಎನ್ನುತ್ತಾರೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌.

’ಕೇಂದ್ರ ಸರ್ಕಾರ ಕೈಗಾರಿಕೆಗಳ ₹ 2.48 ಲಕ್ಷ ಕೋಟಿ ಮನ್ನಾ ಮಾಡುವ ಘೋಷಣೆ ಮಾಡಿದೆ. ಆದರೆ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡರೂ ಕೃಷಿ ಸಾಲ ಮನ್ನಾ ಮಾಡಲಿಲ್ಲ. ಯಾಕೆಂದರೆ ಉದ್ಯಮಿಗಳು ಚುನಾವಣೆಗೆ ಫಂಡ್‌ ಕೊಟ್ಟು ಲಾಬಿ ಮಾಡುತ್ತಾರೆ. ನಮಗೆ ಆ ಶಕ್ತಿ ಇಲ್ಲ’ ಎಂದು ಅವರು ನೊಂದು ನುಡಿದರು.

**

ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯು ರೈತರ ಸಾಲವನ್ನು ಮನ್ನಾ ಮಾಡಿದೆ. ಇಲ್ಲಿ ರೈತರ ಆತ್ಮಹತ್ಯೆಯ ಸರಣಿಯೇ ನಡೆದಿದೆ. ಇದನ್ನಾದರೂ ನೋಡಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು ಸಾಲ ಮನ್ನಾ ಮಾಡಬಹುದಿತ್ತು. ನಮ್ಮದು ರೈತರ ಸರ್ಕಾರ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌, ಕೃಷಿಕರಿಗೆ ದ್ರೋಹ ಮಾಡಿದೆ. ಕಳೆದ ವರ್ಷ ಕೇವಲ ₹ 50 ಸಾವಿರ ಸಾಲ ಮನ್ನಾ ಮಾಡಿದರು. ಆದರೆ ಸರಿಯಾದ ಸಮಯದಲ್ಲಿ ಅಪೆಕ್ಸ್‌ ಬ್ಯಾಂಕ್‌ಗಳಿಗೆ ನಿಗದಿತ ಹಣವನ್ನು ನೀಡದೆ ಬ್ಯಾಂಕ್‌ಗಳನ್ನು ಇಕ್ಕಟ್ಟಿಗೆ ಸಿಗಿಸಿದರು.

ರೈತರಿಗೆ ತಾವು ಹೂಡಿದ ಬಂಡವಾಳದ ಮೇಲೆ ಕನಿಷ್ಠ ಶೇ 50ರಷ್ಟು ಹೆಚ್ಚು ಹಣ ಸಿಗಬೇಕು. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಗತಗೊಳಿಸಲು ಮುಂದಾಗಿದ್ದಾರೆ. ಈ ಕೆಲಸ ರಾಜ್ಯದಲ್ಲಿ ಯಾವ ಕಾರಣಕ್ಕೆ ಆಗಲಿಲ್ಲ ಎನ್ನುವುದನ್ನು ನಾವು ಪ್ರಶ್ನೆ ಮಾಡುತ್ತೇವೆ. ಬರೀ ಕೃಷಿ ಮಾತ್ರವಲ್ಲ, ತೋಟಗಾರಿಕೆ, ಹೈನುಗಾರಿಕೆ, ಕೃಷಿ ವಾಣಿಜ್ಯ ಬೆಳೆಗೂ ವೈಜ್ಞಾನಿಕ ಬೆಲೆ ದೊರಕಬೇಕು. ಇಲ್ಲವಾದರೆ ರೈತ ನೆಮ್ಮದಿಯ ಬದುಕು ಸಾಗಿಸಲಾರ. ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿದರೆ ಕೃಷಿ, ತೋಟಗಾರಿಕೆ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ.

ಪಿ.ಸಿ.ಮೋಹನ್‌

ಸಂಸದ,ರಾಜ್ಯ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕ

**

ಕಾಂಗ್ರೆಸ್‌ ನೇತೃತ್ವದ ಸರ್ಕಾರ ಕಳೆದ ವರ್ಷ ಜಾರಿಗೆ ತಂದ ಸಾಲ ಮನ್ನಾ ಸರಿಯಾಗಿ ರೈತರಿಗೆ ತಲುಪಲೇ ಇಲ್ಲ. ₹ 50,000 ಮಿತಿಯ ಸಾಲ ಮನ್ನಾದಿಂದ ಸರ್ಕಾರಕ್ಕೆ ಎಂಟು ಸಾವಿರ ಕೋಟಿ ರೂಪಾಯಿ ಹೊರೆಯಾಯಿತು. ಇದನ್ನೂ ಸರಿಯಾದ ಸಮಯಕ್ಕೆ ಸಹಕಾರಿ ಬ್ಯಾಂಕ್‌ಗಳಿಗೆ ನೀಡಲಿಲ್ಲ. ಇದರಿಂದ ಮತ್ತೆ ಕೃಷಿ ಸಾಲ ನೀಡಲು ತಾಲ್ಲೂಕು ಮತ್ತು ಜಿಲ್ಲಾ ಸಹಕಾರ ಬ್ಯಾಂಕ್‌ಗಳ ಬಳಿ ಹಣವೇ ಇರಲಿಲ್ಲ. ಸರ್ಕಾರ ಹಣ ನೀಡಿದ್ದರೆ ಬ್ಯಾಂಕ್‌ಗಳು ನಬಾರ್ಡ್‌ಗೆ ಸಾಲ ಮರುಪಾವತಿ ಮಾಡಿ ಮತ್ತೆ ಸಾಲ ಪಡೆಯಬಹುದಿತ್ತು. ರೈತರಿಗೆ ಹಣ ನೀಡಲು ಸರ್ಕಾರದ ಬಳಿ ಹಣ ಇರಲಿಲ್ಲ ಎನ್ನುವುದು ಇದರಿಂದ ಗೊತ್ತಾಗುತ್ತದೆ. ನಮ್ಮ ಸರ್ಕಾರ ಜಾರಿಗೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ

ಎಚ್‌.ಡಿ. ಕುಮಾರಸ್ವಾಮಿ ಈಗಾಗಲೇ ಘೋಷಿಸಿದ್ದಾರೆ. ಇದರಿಂದ ₹ 52,000 ಕೋಟಿ ಹೊರೆಯಾಗುತ್ತದೆ.

ಇದಾದ ನಂತರ ಕೃಷಿ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುತ್ತೇವೆ. ಇದರ ಜೊತೆಯಲ್ಲಿ ಇಸ್ರೇಲ್‌ ತಂತ್ರಜ್ಞಾನ ಬಳಸಿ ಕೃಷಿ ಮಾರುಕಟ್ಟೆ ಬಲಪಡಿಸುತ್ತೇವೆ. ಆನ್‌ಲೈನ್‌ ಮಾರುಕಟ್ಟೆ ಸಹ ಸೃಷ್ಟಿಸುತ್ತೇವೆ. ಕಡಿಮೆ ನೀರಿನಲ್ಲಿ ಹೆಚ್ಚು ಫಸಲು ಬರುವ ತಂತ್ರಜ್ಞಾನವನ್ನು ರೈತರಿಗೆ ನೀಡುತ್ತೇವೆ. ಕೃಷಿಯಲ್ಲಿ ಬದಲಾವಣೆ ತರಬೇಕು ಎನ್ನುವ ಉದ್ದೇಶದಿಂದ ಕುಮಾರಸ್ವಾಮಿ ಇಸ್ರೇಲ್‌ ಪ್ರವಾಸ ಮಾಡಿದ್ದರು. ಈ ವಿಷಯವನ್ನು ನಮ್ಮ ಪಕ್ಷದ ಪ್ರಣಾಳಿಕೆಯಲ್ಲೂ ತಂದಿದ್ದೇವೆ.

ಕೆ.ರಮೇಶ್‌ ಬಾಬು, ಜೆಡಿಎಸ್‌ ವಕ್ತಾರ

**

ರೈತರಿಗೆ ನೀಡುವ ಸಾಲ ಮನ್ನಾ ಕೊಡುಗೆಯನ್ನು ಇತರ ವಲಯದವರು ಕೆಟ್ಟ ದೃಷ್ಟಿಯಿಂದ ನೋಡಬಾರದು. ಕೃಷಿ ವಲಯ ಜಗತ್ತಿನಾದ್ಯಂತ ಸವಾಲು ಎದುರಿಸುತ್ತಿದೆ. ಚೀನಾದಲ್ಲಿ ಒಂದು ಗಾದೆ ’ಯಾರಿಗೂ ಪುಕ್ಕಟೆಯಾಗಿ ಮೀನನ್ನು ನೀಡಬೇಡಿ, ಬದಲು ಮೀನು ಹಿಡಿಯಲು ಹೇಳಿಕೊಡಿ’ ಎಂದು ಹೇಳುತ್ತದೆ. ಆದರೆ ಮೀನನ್ನು ಹಿಡಿಯಲು ದೇಹವನ್ನು ಬಲಪಡಿಸುವುದು ಬೇಡವೇ? ಇದೇ ಕಾರಣದಿಂದ ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿದ್ದು. ಹವಾಮಾನ ಮತ್ತು ಬೆಲೆ ಏರಿಳಿತದಿಂದ ರೈತ ಕಂಗಾಲಾಗಿದ್ದಾನೆ. ರೈತ ಸಾಲ ತೀರಿಸುವುದಿಲ್ಲ ಎಂದು ಯಾವತ್ತೂ ಹೇಳಿಲ್ಲ. ಆದರೆ ಸಾಲ ತೀರಿಸುವ ಪರಿಸ್ಥಿತಿ

ಯಲ್ಲಿ ಅವನಿಲ್ಲ. ಹೀಗಾಗಿ ಕೃಷಿಗೆ ಮಾಡಿದ ಸಾಲವನ್ನು ಸರ್ಕಾರವೇ ತೀರಿಸಿದರೆ ಅದನ್ನು ಆರ್ಥಿಕತೆಯ ಪ್ರೋತ್ಸಾಹ ಧನ ಎಂದು ಪರಿಗಣಿಸಬೇಕು.

ಕಾಂಗ್ರೆಸ್‌ ನೇತೃತ್ವದ ಸರ್ಕಾರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲು ಇದೇ ಮೊದಲ ಬಾರಿಗೆ ಕೃಷಿ ಬೆಲೆ ಆಯೋಗ ರಚಿಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಆಳವಾದ ಅಧ್ಯಯನ ನಡೆಸಿ ಎಲ್ಲಾ ತೋಟಗಾರಿಕೆ, ವಾಣಿಜ್ಯ ಕೃಷಿ ಉತ್ಪನ್ನ, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುತ್ತೇವೆ. ಮಾರುಕಟ್ಟೆ ಏರುಪೇರು ಆದರೂ ಬೆಲೆ ಸ್ಥಿರೀಕರಣಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ. ಕೃಷಿ ವಿಮೆ ವ್ಯವಸ್ಥೆಯನ್ನೂ ಬಲಪಡಿಸುತ್ತೇವೆ.

-ಪ್ರೊ. ಕೆ.ಈ. ರಾಧಾಕೃಷ್ಣ

ಕೆಪಿಸಿಸಿ ಉಪಾಧ್ಯಕ್ಷ , ಮಾಧ್ಯಮ ವಿಭಾಗದ ಮುಖ್ಯಸ್ಥ

ಪ್ರತಿಕ್ರಿಯಿಸಿ (+)