ಶುಕ್ರವಾರ, ಡಿಸೆಂಬರ್ 6, 2019
26 °C

ಸೂಪರ್‌ ಕಪ್‌ ಫುಟ್‌ಬಾಲ್‌: ಸೆಮಿಫೈನಲ್‌ಗೆ ಬಾಗನ್‌ ತಂಡ

Published:
Updated:
ಸೂಪರ್‌ ಕಪ್‌ ಫುಟ್‌ಬಾಲ್‌: ಸೆಮಿಫೈನಲ್‌ಗೆ ಬಾಗನ್‌ ತಂಡ

ಭುವನೇಶ್ವರ್‌ (ಪಿಟಿಐ): ಫೈಯಾಜ್‌, ನಿಖಿಲ್‌ ಕದಂ ಹಾಗೂ ಲಾರೆನ್ಸ್‌ ಡೊ ಅವರು ಗಳಿಸಿದ ತಲಾ ಒಂದು ಗೋಲುಗಳ ಬಲದಿಂದ ಮೋಹನ್‌ ಬಾಗನ್‌ ತಂಡ ಸೂಪರ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ 3–1 ಅಂತರದಿಂದ ಶಿಲ್ಲಾಂಗ್‌ ಲಾಜೊಂಗ್‌ ತಂಡಕ್ಕೆ ಸೋಲುಣಿಸಿ ಸೆಮಿಫೈನಲ್‌ ತಲುಪಿದೆ.

ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೋಹನ್‌ ಬಾಗನ್‌ ತಂಡವು ಮೊದಲಿಂದಲೂ ವೇಗದ ಆಟಕ್ಕೆ ಒತ್ತು ನೀಡಿತು. ಪಂದ್ಯದ 12ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಫೈಯಾಜ್‌ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದಾದ ಹತ್ತು ನಿಮಿಷಕ್ಕೆ ನಿಖಿಲ್‌ ಕದಂ ಕೂಡ ಗೋಲು ಬಾರಿಸಿ ತಂಡವು ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾದರು.

ಶಿಲ್ಲಾಂಗ್‌ ತಂಡದ ಅಬ್ದುಲ್ಲಾಯ್‌ ಕೊಫಿ 28ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇದರಿಂದ ಉತ್ಸಾಹಗೊಂಡ ಶಿಲ್ಲಾಂಗ್‌ ತಂಡದ ಆಟಗಾರರು ಕೆಲಕಾಲ ಬಿರುಸಿನ ಆಟಕ್ಕಿಳಿದರು.

ಪಂದ್ಯದ ದ್ವಿತಿಯಾರ್ಧದಲ್ಲಿ ಗೋಲು ಗಳಿಸುವ ಅನೇಕ ಅವಕಾಶಗಳನ್ನು ಶಿಲ್ಲಾಂಗ್‌ ತಂಡ ಕೈ ಚೆಲ್ಲಿತು. ಇದೇ ವೇಳೆ ಮೋಹನ್‌ ಬಾಗನ್‌ನ ಲಾರೆಲ್‌ ಡೊ (60 ನೇ ನಿಮಿಷ) ಗೋಲು ಬಾರಿಸಿ ತಂಡಕ್ಕೆ 3–1ರ ಮುನ್ನಡೆ ತಂದುಕೊಟ್ಟರು.

ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ವಿಜಯೀ ತಂಡ ಕೊನೆಯ ನಿಮಿಷಗಳಲ್ಲಿ ರಕ್ಷಣಾ ಆಟಕ್ಕೆ ಒತ್ತು ನೀಡಿತು.

ಇದರಿಂದಾಗಿ ಮೋಹನ್‌ ಬಾಗನ್‌ ತಂಡದ ರಕ್ಷಣಾ ಪಡೆಯನ್ನು ದಾಟಲು ಶಿಲ್ಲಾಂಗ್‌ ತಂಡ ಹರಸಾಹಸ ಪಡಬೇಕಾಯಿತು. 

ಶಿಲ್ಲಾಂಗ್‌ನ ಕೊಫಿ ಅವರಿಗೆ ಹೆಚ್ಚುವರಿ ಅವಧಿಯಲ್ಲಿ ಚೆಂಡನ್ನು ಗುರಿ ಮುಟ್ಟಿಸುವ ಅವಕಾಶವಿತ್ತು. ಆದರೆ, ಮೋಹನ್‌ ಬಾಗನ್‌ ತಂಡದ ಆಟಗಾರರು ಇದಕ್ಕೆ ಅವಕಾಶ ನೀಡಲಿಲ್ಲ.

ಇದೇ 17ರಂದು ಸೆಮಿಫೈನಲ್‌ ಪಂದ್ಯ ನಡೆಯಲಿದೆ.

ಪ್ರತಿಕ್ರಿಯಿಸಿ (+)