‘ತಾಯಿ ಆರೋಗ್ಯದ ಕಾಳಜಿ ಅಗತ್ಯ’

7
‘ತಾಯ್ತನವನ್ನು ಸುರಕ್ಷಿತವಾಗಿಸೋಣ’ ಪ್ರಾದೇಶಿಕ ಸಮ್ಮೇಳನ ಉದ್ಘಾಟನೆ

‘ತಾಯಿ ಆರೋಗ್ಯದ ಕಾಳಜಿ ಅಗತ್ಯ’

Published:
Updated:

ಮಂಗಳೂರು: ‘ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ತಾಯಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಾಯಿಯ ಆರೋಗ್ಯ ರಕ್ಷಣೆಯತ್ತಲೂ ಗಮನ ಹರಿಸುವ ಅಗತ್ಯ ಹೆಚ್ಚಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಕೃಷ್ಣರಾವ್‌ ಹೇಳಿದರು.

ಲಕ್ಷ್ಮಿ ಮೆಮೋರಿಯಲ್ ನರ್ಸಿಂಗ್‌ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀ ರೋಗ ಶುಶ್ರೂಷಕ ವಿಭಾಗ, ಸಮುದಾಯ ಆರೋಗ್ಯ ಶುಶ್ರೂಷಕ ವಿಭಾಗ ಹಾಗೂ ಎಜೆಐಎಂಎಸ್‌ನ ಪ್ರಸೂತಿ ಮತ್ತು  ಸ್ತ್ರೀ ರೋಗ ವೈದ್ಯಕೀಯ ವಿಭಾಗ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಬುಧವಾರ ನಗರದ ಎ.ಜೆ. ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ‘ತಾಯ್ತನ ನಮ್ಮ ಭವಿಷ್ಯವನ್ನು ರೂಪಿಸುತ್ತದೆ, ಇದನ್ನು ಸುರಕ್ಷಿತವಾಗಿಸೋಣ’ ಕುರಿತಾದ ಪ್ರಾದೇಶಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಮಗುವಿನ ಮೌನವೂ ತಾಯಿಗೆ ಅರ್ಥವಾಗುತ್ತದೆ. ದೇವರ ಅದ್ಭುತ ಸೃಷ್ಟಿ ತಾಯಿ. ದೇವರು ತಾಯಿಗೆ ವಿಶೇಷ ಶಕ್ತಿಯನ್ನು ನೀಡಿದ್ದು, ಮಗುವಿಗೆ ಏನು ಒಳ್ಳೆಯದು, ಹೇಗೆ ಮಗುವಿನ ವಿಕಾಸ ಮಾಡಬಹುದು ಎಂಬಿತ್ಯಾದಿ ವಿಷಯಗಳು ತಾಯಿಗೆ ಅರ್ಥವಾಗುತ್ತವೆ ಎಂದು ತಿಳಿಸಿದರು.

ಪ್ರತಿ ಮಹಿಳೆಯು ತಾಯ್ತನದ ನಂತರ ಎದುರಿಸುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಯೋಚಿಸುವ ಅಗತ್ಯವಿದೆ. ಹೆರಿಗೆಯ ನಂತರ ಮಹಿಳೆು ಅನುಭವಿಸುವ ಒತ್ತಡ ದಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಕ್ಷುಲ್ಲಕ ಕಾರಣಕ್ಕೆ ಅಳುವುದು, ಕಿರಿಕಿರಿ ಅನುಭವಿಸುವುದು, ವಿಶ್ರಾಂತಿ ಇಲ್ಲದಿರುವುದು, ಹೆಚ್ಚಾಗಿ ನಿದ್ರಿಸುವುದು ಅಥವಾ ನಿದ್ರೆ ಬಾರದೇ ಇರುವುದು, ಹೆಚ್ಚು ಆಹಾರ ಸೇವನೆ ಅಥವಾ ಅತಿ ಕಡಿಮೆ ಆಹಾರ ಸೇವನೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ವಿವರಿಸಿದರು.

ಇಂತಹ ಸಂದರ್ಭದಲ್ಲಿ ಕುಟುಂಬದ ಬೆಂಬಲ ಮಹಿಳೆಗೆ ಅಗತ್ಯವಾಗಿ ಬೇಕಾಗುತ್ತದೆ. ಆಪ್ತ ಸಮಾಲೋಚಕರ ಸಲಹೆಗಳಿಂದ ಇಂತಹ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ. ಈ ನಿಟ್ಟಿನಲ್ಲಿ ಇಂತಹ ಸಮ್ಮೇಳನ ಹೆಚ್ಚು ಸಹಕಾರಿ ಎಂದು ಅಭಿಪ್ರಾಯಪಟ್ಟರು.

ಲಕ್ಷ್ಮಿ ಮೆಮೋರಿಯಲ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಲಾರಿಸ್ಸಾ ಮಾರ್ಥಾ ಸಾಮ್ಸ್, ಸಮ್ಮೇಳನದ ಸಂಘಟನಾಧ್ಯಕ್ಷೆ ಸಂಧ್ಯಾ ಡಿ.ಅಲ್ಮೇಡಾ, ಸಂಘಟನಾ ಕಾರ್ಯದರ್ಶಿ ಡಾ.ಜೆನ್ನಿಫರ್ ಡಿಸೋಜ, ಆರ್‌ಸಿಎಚ್‌ ಅಧಿಕಾರಿ ಡಾ.ಅಶೋಕ್ ಎಚ್., ಮೂಡುಶೆಡ್ಡೆಯ ಕ್ಷಯರೋಗ ಆಸ್ಪತ್ರೆಯ ಉಪ ವೈದ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಎಂ., ಎ.ಜೆ. ವೈದ್ಯಕೀಯ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ತಜ್ಞೆ ಡಾ.ವತ್ಸಲಾ ಕಾಮತ್, ಸಮ್ಮೇಳನದ ಸಂಯೋಜಕಿ ಸರಿತಾ ಆರ್. ಹೆಗಡೆ ಉಪಸ್ಥಿತರಿದ್ದರು.

ಡಾ. ಅಶೋಕ್‌, ಡಾ.ಕಿಶೋರ್ ಕುಮಾರ್ ಎಂ., ಪ್ರಭಾತ್ ಕಲ್ಕೂರ ಎಂ., ಡಾ.ಪೂರ್ಣಿಮಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು, ಶುಶ್ರೂಷಕರು, ಉಪನ್ಯಾಸಕರು ಸೇರಿದಂತೆ ಒಟ್ಟು 200 ಜನರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry