ಶನಿವಾರ, ಡಿಸೆಂಬರ್ 14, 2019
20 °C
ರಿಂಗ್‌ ರಸ್ತೆಯಲ್ಲಿ ನಿಲ್ಲದ ಸುಲಿಗೆ, ದರೋಡೆ

ಬೆಳಗದ ವಿದ್ಯುದ್ದೀಪ: ಹೆಚ್ಚಿದ ಅಪಘಾತ

ಜಿ.ಬಿ.ನಾಗರಾಜ್ Updated:

ಅಕ್ಷರ ಗಾತ್ರ : | |

ಬೆಳಗದ ವಿದ್ಯುದ್ದೀಪ: ಹೆಚ್ಚಿದ ಅಪಘಾತ

ಮೈಸೂರು: ನಗರದ ಹೊರವಲಯದಲ್ಲಿ ನಿರ್ಮಿಸಿದ 42 ಕಿ.ಮೀ ಉದ್ದದ ರಿಂಗ್ ರಸ್ತೆಯಲ್ಲಿ ವಿದ್ಯುತ್‌ ದೀಪಗಳು ಬೆಳಗದೆ ಇರುವುದರಿಂದ ರಾತ್ರಿ ವೇಳೆ ಅಪಘಾತ ಹಾಗೂ ಅಪರಾಧ ಕೃತ್ಯ ಹೆಚ್ಚಾಗುತ್ತಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ವಿದ್ಯುತ್‌ ದೀಪದ ವ್ಯವಸ್ಥೆ ಮಾಡುವಂತೆ ಕೋರಿ ಸಿದ್ಧಾರ್ಥನಗರ, ವಿ.ವಿ.ಪುರಂ ಹಾಗೂ ಕೆ.ಆರ್‌. ಸಂಚಾರ ಠಾಣೆಯ ಪೊಲೀಸರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಾಗೂ ‘ಸೆಸ್ಕ್‌’ಗೆ ಪತ್ರ ಬರೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ‘ಮುಡಾ’ ನಡುವಿನ ಜಟಾಪಟಿಯಲ್ಲಿ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ವಾಹನ ದಟ್ಟಣೆಯನ್ನು ನಿಯಂತ್ರಿಸುವ ಮೂಲಕ ಅಪಘಾತ ತಪ್ಪಿಸಲು ₹ 332 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ರಿಂಗ್‌ ರಸ್ತೆಯೇ ಅಪಘಾತ ವಲಯವಾಗಿ ಮಾರ್ಪಟ್ಟಿರುವುದು ಸಂಚಾರ ಪೊಲೀಸರ ನಿದ್ದೆಗೆಡಿಸಿದೆ. ರಾತ್ರಿ ಸಮಯದಲ್ಲೇ ಅಪಘಾತಗಳು ಹೆಚ್ಚಾಗುತ್ತಿರುವುದಕ್ಕೆ ಕಾರಣವನ್ನು ಪತ್ತೆ ಹಚ್ಚಿದ ಪೊಲೀಸ್‌ ಇಲಾಖೆ, ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದೆ ಅಸಹಾಯಕತೆ ವ್ಯಕ್ತಪಡಿಸಿದೆ.

ಬೋಗಾದಿ ಜಂಕ್ಷನ್‌ ಸೇರಿ ಅನೇಕ ಕಡೆ ಸಿಗ್ನಲ್ ವ್ಯವಸ್ಥೆ ಮಾಡುವ ಮೂಲಕ ಅಪಘಾತ ನಿಯಂತ್ರಣಕ್ಕೆ ಪೊಲೀಸರು ಪ್ರಯತ್ನಿಸಿದ್ದಾರೆ. ರಸ್ತೆ ಉಬ್ಬು ನಿರ್ಮಾಣಕ್ಕೆ ಅವಕಾಶ ಇಲ್ಲದಿರುವುದರಿಂದ ಬ್ಯಾರಿಕೇಡ್‌ಗಳನ್ನು ಹಾಕಿ ವೇಗ ನಿಯಂತ್ರಣ ಮಾಡಲಾಗಿದೆ. ಆದರೆ, ದೀಪದ ಕೊರತೆ ಅಪಘಾತ, ಸುಲಿಗೆ, ದರೋಡೆಗೆ ನೆರವಾಗಿದ್ದು ಇತ್ತೀಚೆಗೆ ದೃಢಪಟ್ಟಿದೆ.

ರಿಂಗ್ ರಸ್ತೆಯ ಸುತ್ತಲೂ ವಿದ್ಯುತ್‌ ಕಂಬಗಳಿದ್ದು, ನಿತ್ಯ ಸಂಜೆ ದೀಪಗಳು ಬೆಳಗುತ್ತವೆ. ಆದರೆ, ರಾತ್ರಿ 8 ಗಂಟೆ ಕಳೆದ ಬಳಿಕ ಬಹುತೇಕ ದೀಪಗಳನ್ನು ಆರಿಸಲಾಗುತ್ತದೆ. ಹೈಮಾಸ್ಟ್‌ ದೀಪಗಳು ಬಹುತೇಕ ದಿನ ಬೆಳಕು ನೀಡುವುದಿಲ್ಲ.

‘ರಾತ್ರಿ 9 ಗಂಟೆಯ ಬಳಿಕ ದ್ವಿಚಕ್ರ ವಾಹನದಲ್ಲಿ ರಿಂಗ್‌ ರಸ್ತೆಯಲ್ಲಿ ಸಾಗಲು ಭಯವಾಗುತ್ತದೆ. ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದ ಪರಿಣಾಮ ಅಪರಾಧ ಕೃತ್ಯಗಳೂ ಹೆಚ್ಚಾಗಿವೆ.

ಮೊಬೈಲ್ ಬೆಳಕಿನ ಮೊರೆ

ರಿಂಗ್‌ ರಸ್ತೆಯ ಸಾತಗಳ್ಳಿ ಬಸ್‌ ಡಿಪೊ ಬಳಿ ಏ.6ರ ರಾತ್ರಿ ಸಂಭವಿಸಿದ ಸರಣಿ ಅಪಘಾತದಲ್ಲಿ ಛಿದ್ರವಾಗಿದ್ದ ದ್ವಿಚಕ್ರ ವಾಹನದ ಬಿಡಿಭಾಗಗಳನ್ನು ಸಂಚಾರ ಪೊಲೀಸರು ಮೊಬೈಲ್‌ ಬೆಳಕಲ್ಲಿ ಕಲೆ ಹಾಕಿದ್ದರು. ಕೊಲಂಬಿಯಾ ಏಷಿಯಾ ಜಂಕ್ಷನ್‌ನಿಂದ ಮಹದೇವಪುರದ ಕಡೆ ಮೂರು ದ್ವಿಚಕ್ರ ವಾಹನಗಳು ಸಾಗುತ್ತಿದ್ದಾಗ ಈ ಅಪಘಾತ ಸಂಭಿವಿಸಿತ್ತು. ಮೃತಪಟ್ಟ ವ್ಯಕ್ತಿ ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಪೊಲೀಸರು ಪರದಾಡಿದ್ದರು.

ನೀತಿ ಸಂಹಿತೆ ಅಡ್ಡಿ...

ಮೈಸೂರು: ವಿದ್ಯುತ್‌ ದೀಪಗಳ ಸಮಸ್ಯೆಯ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಂಗಳ ಹಿಂದೆ ಪತ್ರ ಬರೆದಿತ್ತು. ನಿಯಮಗಳ ಪ್ರಕಾರ ಈ ಹೊಣೆಯನ್ನು ಸ್ಥಳೀಯ ಸಂಸ್ಥೆಗಳು ನಿರ್ವಹಿಸಬೇಕು. ಹೀಗಾಗಿ, ಈ ಪತ್ರವನ್ನು ಮೈಸೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿಗೆ ರವಾನೆ ಮಾಡಲಾಗಿದೆ ಎಂದು ಮುಡಾ ಆಯುಕ್ತ ಪಿ.ಎಸ್.ಕಾಂತರಾಜು ತಿಳಿಸಿದರು. ‘4 ಹಂತದಲ್ಲಿ ನಿರ್ಮಾಣವಾದ ರಿಂಗ್‌ ರಸ್ತೆಯ ಒಂದು ಭಾಗ ಮಾತ್ರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಬಹುತೇಕ ಭಾಗ ಪಾಲಿಕೆಗೆ ಸೇರುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ. ನೀತಿ ಸಂಹಿತೆ ಜಾರಿಯಾಗಿದ್ದರಿಂದ ಇದು ನನೆಗುದಿಗೆ ಬಿದ್ದಿದೆ’ ಎಂದು ಹೇಳಿದರು.

**

ವಿದ್ಯುತ್‌ ದೀಪದ ಸಮಸ್ಯೆಯ ಕುರಿತು ಮುಡಾ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಸೂಚನಾ ಫಲಕ ಕಾಣುವಂತೆ ಬೆಳಕಿಗೆ ವ್ಯವಸ್ಥೆ ಮಾಡಿದಾಗ ಮಾತ್ರ ಅಪಘಾತ ನಿಯಂತ್ರಣಕ್ಕೆ ಬರುತ್ತವೆ – ಎನ್‌.ಮುನಿಯಪ್ಪ,  ಇನ್‌ಸ್ಪೆಕ್ಟರ್ ಸಿದ್ಧಾರ್ಥನಗರ ಸಂಚಾರ ಠಾಣೆ.

**

ಪ್ರತಿಕ್ರಿಯಿಸಿ (+)