ಮಂಗಳವಾರ, ಆಗಸ್ಟ್ 11, 2020
27 °C
ಜೆಡಿಎಸ್‌ನಿಂದ ಬಿಜೆಪಿಗೆ, ಬಿಜೆಪಿಯಿಂದ ಜೆಡಿಎಸ್‌ಗೆ

ಜಿಲ್ಲೆಯಲ್ಲಿ ಬಿರುಸುಗೊಂಡ ಪಕ್ಷಾಂತರ ಪರ್ವ..!

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಜಿಲ್ಲೆಯಲ್ಲಿ ಬಿರುಸುಗೊಂಡ ಪಕ್ಷಾಂತರ ಪರ್ವ..!

ವಿಜಯಪುರ: ನಾಮಪತ್ರ ಸಲ್ಲಿಕೆಗೆ ಬೆರಳೆಣಿಕೆ ದಿನ ಬಾಕಿ ಉಳಿದ ಹೊತ್ತಿನಲ್ಲಿ; ಪಕ್ಷಾಂತರದ ಪರ್ವ ಜಿಲ್ಲೆಯ ವ್ಯಾಪ್ತಿಯಲ್ಲಿ ಹೆಚ್ಚಿದೆ. ಜತೆಗೆ ಬಂಡಾಯದ ಬಿಸಿಯೂ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಅತೃಪ್ತರು ಅವಕಾಶ ನೀಡುವ ಪಕ್ಷಗಳತ್ತ ತಮ್ಮ ಚಿತ್ತ ಹರಿಸಿದ್ದಾರೆ.

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ಮುಖಂಡೆ ಮಂಗಳಾದೇವಿ ಬಿರಾದಾರ, ಬುಧವಾರ ಹುಬ್ಬಳ್ಳಿಯಲ್ಲಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಜತೆ ಚರ್ಚಿಸಿ, ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಿಗೆ ಕ್ಷೇತ್ರದ ಹುರಿಯಾಳಾಗಿಯೂ ಕಣಕ್ಕಿಳಿಯಲಿದ್ದಾರೆ ಎಂಬುದು ಗೊತ್ತಾಗಿದೆ.

ಮುದ್ದೇಬಿಹಾಳ ಕ್ಷೇತ್ರದಿಂದ 2008ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಂಗಳಾದೇವಿ ಬಿರಾದಾರ ಸಿ.ಎಸ್‌.ನಾಡಗೌಡರಿಗೆ ಮೊದಲ ಬಾರಿಗೆ ಪ್ರಬಲ ಪೈಪೋಟಿಯೊಡ್ಡಿದ್ದರು. ಬಿ.ಎಸ್‌.ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮಂಗಳಾದೇವಿ ಬಿಎಸ್‌ವೈ ಬಿಜೆಪಿ ತೊರೆದಾಗ ಜತೆಯಲ್ಲೇ ಹಿಂಬಾಲಿಸಿದ್ದರು.

2013ರ ವಿಧಾನಸಭಾ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಕೆಜೆಪಿ ಟಿಕೆಟ್‌ ಕೈ ತಪ್ಪಿದ್ದಕ್ಕೆ ತೀವ್ರ ಆಕ್ರೋಶಗೊಂಡು ಕಾಂಗ್ರೆಸ್‌ ಸೇರ್ಪಡೆ ಯಾಗಿ, ನಾಡಗೌಡ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ನಂತರ ನಡೆದ ವಿದ್ಯಮಾನಗಳಲ್ಲಿ ಬಿಜೆಪಿಗೆ ಮರಳಿ, ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.

ಬಿಎಸ್‌ವೈ ಜತೆಗಿನ ಆಪ್ತತೆಯಿಂದ, ಈ ಬಾರಿ ಟಿಕೆಟ್‌ಗೆ ತೀವ್ರ ಪೈಪೋಟಿಯಿದ್ದರೂ; ಮಂಗಳಾದೇವಿ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂಬ ನಿರೀಕ್ಷೆ ಹೆಚ್ಚಿತ್ತು. ಹಿಂದಿನ ಚುನಾವಣೆ ಸಂದರ್ಭದಲ್ಲಂತೆ ಈ ಬಾರಿಯೂ ಯಡಿಯೂರಪ್ಪ ಚುನಾವಣೆ ಘೋಷಣೆ ಸಮಯದಲ್ಲಿ ದಿಢೀರ್‌ ರಾಜಕೀಯ ಬೆಳವಣಿಗೆ ಮೂಲಕ ದೇವರಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು, ಟಿಕೆಟ್‌ ಘೋಷಿಸಿದ್ದರಿಂದ ಅಸಮಾಧಾನ ಹೆಚ್ಚಿದೆ. ‘ನಡಹಳ್ಳಿಗೆ ಟಿಕೆಟ್‌ ಘೋಷಣೆ ಬೆನ್ನಿಗೆ ಮಂಗಳಾದೇವಿ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದರು. 2008ರಿಂದಲೂ ಸತತವಾಗಿ ಅನ್ಯಾಯ ಮಾಡುತ್ತಿದ್ದಾರೆ. ಇವರ ಸಂಬಂಧ ನನ್ನ ನೌಕರಿ, ಸಂಪತ್ತು, ಕುಟುಂಬದ ನೆಮ್ಮದಿಯನ್ನೇ ಕಳೆದುಕೊಂಡಿರುವೆ ಎಂದು ಗುಡುಗಿದ್ದರು. ಈ ಸಂದರ್ಭವೇ ಜಿಲ್ಲಾ ರಾಜಕೀಯ ಪಡಸಾಲೆಯಲ್ಲಿ ಮಂಗಳಾದೇವಿ ಮತ್ತೊಮ್ಮೆ ಬಿಜೆಪಿ ಯಿಂದ ಹೊರಹೋಗುವುದು ಖಚಿತ ವಾಗಿತ್ತು. ಅದರಂತೆ ಮೂರ್ನಾಲ್ಕು ದಿನಗಳಲ್ಲೇ ಕಲಮದಿಂದ ಜಾರಿ, ತೆನೆ ಹೊತ್ತಿದ್ದಾರೆ.

ಮುದ್ದೇಬಿಹಾಳ ಬಿಜೆಪಿ ಮಂಡಲದಲ್ಲಿ ಅಸಮಾಧಾನ ಇನ್ನೂ ಮುಂದುವರೆದಿದೆ. ಕೆಲ ಮುಖಂಡರು ಪಕ್ಷಕ್ಕಾಗಿ ನಡಹಳ್ಳಿ ಬೆಂಬಲಿಸುತ್ತೇವೆ ಎಂಬ ಹೇಳಿಕೆ ನೀಡಿದರೆ, ಪ್ರಬಲ ಟಿಕೆಟ್‌ ಆಕಾಂಕ್ಷಿಗಳಲ್ಲಿ ಕೆಲವರು ಮೌನಕ್ಕೆ ಶರಣಾಗಿದ್ದಾರೆ. ಅಸಮಾಧಾನ ಯಾವಾಗ ಸ್ಫೋಟಗೊಳ್ಳಲಿದೆ ಎಂಬುದೇ ತಿಳಿಯದಾಗಿದೆ’ ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

‘ಮಂಗಳಾದೇವಿ ಬಿರಾದಾರ ವೀರಶೈವ ಹಂಡೇವಜೀರ ಸಮುದಾಯಕ್ಕೆ ಸೇರಿದವರು. ದಶಕದಿಂದ ಜಿಲ್ಲೆಯಲ್ಲಿ ಸಮುದಾಯದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಮುದ್ದೇಬಿಹಾಳ, ದೇವರಹಿಪ್ಪರಗಿ, ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಂಡೇವಜೀರ ಮತದಾರರ ಸಂಖ್ಯೆ ಗಣನೀಯವಾಗಿವೆ.

ಹಂಡೇವಜೀರ ಸಮಾಜದ ಪದಾಧಿಕಾರಿಗಳು ಟಿಕೆಟ್‌ ಪೈಪೋಟಿ ಸಂದರ್ಭ ಮಂಗಳಾದೇವಿ ಪರ ಬ್ಯಾಟಿಂಗ್‌ ನಡೆಸಿದ್ದರು. ಇದೀಗ ಬಿರಾದಾರ ಬಿಜೆಪಿ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ. ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕ್ಷೀಣಿಸಿದ್ದ ಜೆಡಿಎಸ್‌ ಬಲವರ್ಧನೆಗೊಳ್ಳಲಿದೆ. ಇದರ ಜತೆಗೆ ಮಹಿಳಾ ಕೋಟಾದಿಂದ ಮಂಗಳಾದೇವಿ ಟಿಕೆಟ್‌ ಗಿಟ್ಟಿಸಿದ್ದು, ಮಹಿಳೆಯರ ಬೆಂಬಲವೂ ದೊರಕಲಿದೆ’ ಎಂದು ಜಿಲ್ಲಾ ಜೆಡಿಎಸ್‌ನ ಪ್ರಭಾವಿ ಮುಖಂಡರೊಬ್ಬರು ಹೇಳಿದರು.

ಶಮನವಾಗದ ಬಂಡಾಯ

ಟಿಕೆಟ್ ಘೋಷಣೆಗೆ ಮುನ್ನ ಬಣ ರಾಜಕಾರಣಕ್ಕೆ ಖ್ಯಾತಿಯಾಗಿದ್ದ ಜಿಲ್ಲಾ ಬಿಜೆಪಿ ಘಟಕದಲ್ಲಿ, ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸುತ್ತಿದ್ದಂತೆ ಬಂಡಾಯದ ಬಾವುಟ ಬಿರುಸಿನಿಂದ ಹಾರಾಡತೊಡಗಿದೆ.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಕೇಂದ್ರ ಸಚಿವ ರಮೇಶ ಜಿಗಜಿಣಗಿ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಪ್ರಬಲ ಟಿಕೆಟ್‌ ಆಕಾಂಕ್ಷಿಗಳು ಸೇರಿದಂತೆ ಅಪ್ಪು ಮೌನಕ್ಕೆ ಶರಣಾಗಿದ್ದು, ಯಾವ ರಹಸ್ಯ ಕಾರ್ಯಸೂಚಿಯ ತಂತ್ರಗಾರಿಕೆ ನಡೆಸುತ್ತಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿ ಕಾಡಲಾರಂಭಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.