ಸೋಮವಾರ, ಡಿಸೆಂಬರ್ 9, 2019
22 °C

ನೆಲಮಂಗಲದಲ್ಲಿ ಸೆಳೆದ ‘ಹಳ್ಳಿ ಸೊಗಡು’

Published:
Updated:
ನೆಲಮಂಗಲದಲ್ಲಿ ಸೆಳೆದ ‘ಹಳ್ಳಿ ಸೊಗಡು’

ನೆಲಮಂಗಲದಲ್ಲಿ ಹರ್ಷ ಸಂಸ್ಥೆ ಇತ್ತೀಚಿಗೆ ಆಯೋಜಿಸಿದ್ದ ‘ಹಳ್ಳಿಸೊಗಡು’ ಎಂಬ ಕಾರ್ಯಕ್ರಮ ಪಟ್ಟಣದೊಳಗೊಂದು ಸುಂದರ ಹಳ್ಳಿಯನ್ನು ಸೃಷ್ಟಿಸಿತ್ತು. ಹರ್ಷ ಶಿಕ್ಷಣ ಸಂಸ್ಥೆಯ ಆಟದ ಮೈದಾನದಲ್ಲಿ ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನ ಪರಿಚಯಿಸುವ ಸಲುವಾಗಿ ಆಯೋಜಿಸಿದ್ದ ಈ ಸಮಾರಂಭದಲ್ಲಿ ಹಳ್ಳಿ ಕಲೆ, ಜೀವನಶೈಲಿಯ ಕಂಪಿನೊಂದಿಗೆ ಗ್ರಾಮೀಣ ಅಡುಗೆಯ ಘಮವು ಇತ್ತು.

ಹಸು, ಎಮ್ಮೆ, ಕುರಿಗಳ ಕೊಟ್ಟಿಗೆ, ಕೋಳಿ ಸಾಕಣೆ, ಹಾಲು ಕರಿಯುವುದು, ಬಾವಿಯಿಂದ ನೀರು ಸೇದುವುದು, ಎತ್ತಿನ ಬಂಡಿ, ಹೊಲ ಊಳುವ ಪ್ರಾತ್ಯಕ್ಷಿಕೆ, ಒರಳುಕಲ್ಲು, ಮೊರ, ಒನಕೆ, ಹಿತ್ತಾಳೆ ಮತ್ತು ಮಣ್ಣಿನ ಪಾತ್ರೆಗಳ ಪ್ರದರ್ಶನವಿತ್ತು.

ಇಷ್ಟೆಲ್ಲ ನೋಡುವಷ್ಟರಲ್ಲಿ ಅಜ್ಜಿ ಅಡುಗೆಯ ಸುವಾಸನೆ ಮೂಗಿಗೆ ಬಡಿಯಿತು, ಎಲ್ಲಿಂದ ಎಂದು ಪಕ್ಕಕ್ಕೆ ತಿರುಗಿ ನೋಡಿದರೆ ರಾಗಿ ಮುದ್ದೆ, ಬಸ್ಸಾರು, ಕಾಳು ಉಸುಲಿ, ಹೋಳಿಗೆ, ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ, ಬೋಂಡ, ಹುರುಳಿಕಾಳು ಹಪ್ಪಳ, ಸಂಡಿಗೆ, ಕೇರಳ ಶೈಲಿಯ ಅಡುಗೆಗೆ ಜನ ಮುಗಿಬೀಳುತ್ತಿದ್ದರು. ವಿದ್ಯಾರ್ಥಿಗಳೇ ಅದರ ನಿರ್ವಹಣೆ ಮಾಡುತ್ತಿದ್ದುದು ವಿಶೇಷವಾಗಿತ್ತು. ಇಷ್ಟೆಲ್ಲ ಆದಮೇಲೆ ಬಿಸಿಲಿನ ಬೇಗೆಗೆ ದಣಿವಾರಿಸಿಕೊಳ್ಳಲು ಎಳನೀರು, ಕಬ್ಬಿನ ಹಾಲು, ಪಾನಕವನ್ನು ವಿದ್ಯಾರ್ಥಿಗಳೇ ನೀಡುತ್ತಿದ್ದರು. ಒಟ್ಟಿನಲ್ಲಿ ಯಾವುದೊ ಹಳ್ಳಿಯ ಜಾತ್ರೆಗೆ ಹೋಗಿ ಬಂದ ಅನುಭವ ಊರ ಜನರಿಗೆ ಸಿಕ್ಕಿತು.

ಪ್ರತಿಕ್ರಿಯಿಸಿ (+)