ಭಾನುವಾರ, ಡಿಸೆಂಬರ್ 15, 2019
23 °C

ಸುಟ್ಟು ಹೋಗಿರುವ ಪರಿವರ್ತಕ ಕಿತ್ತೊಗೆಯಿರಿ: ಸಿದ್ದರಾಮಯ್ಯ ವಿರುದ್ಧ ಅಮಿತ್‌ ಶಾ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಟ್ಟು ಹೋಗಿರುವ ಪರಿವರ್ತಕ ಕಿತ್ತೊಗೆಯಿರಿ: ಸಿದ್ದರಾಮಯ್ಯ ವಿರುದ್ಧ ಅಮಿತ್‌ ಶಾ ವಾಗ್ದಾಳಿ

ಗದಗ: ‘ನರೇಂದ್ರ ಮೋದಿ ಸರ್ಕಾರ ವಿದ್ಯುತ್‌ ಸ್ಥಾವರ ಇದ್ದಂತೆ. ಅಲ್ಲಿಂದ ರಾಜ್ಯಕ್ಕೆ ವಿದ್ಯುತ್‌ ಪೂರೈಸಲಾಗಿದೆ. ಆದರೆ, ಇಲ್ಲಿನ ಸಿದ್ದರಾಮಯ್ಯ ಸರ್ಕಾರ ಎಂಬ ಟ್ರಾನ್ಸ್‌ಫಾರ್ಮರ್ ಸಂಪೂರ್ಣ ಸುಟ್ಟು ಹೋಗಿದೆ. ಸುಟ್ಟು ಹೋಗಿರುವ ಈ ಪರಿವರ್ತಕವನ್ನು ಕಿತ್ತೊಗೆಯಿರಿ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದರು.

ಕರುನಾಡ ಜಾಗೃತಿ ಯಾತ್ರೆ ಅಂಗವಾಗಿ ಗುರುವಾರ ಜಿಲ್ಲೆಯ ರೋಣ ತಾಲ್ಲೂಕಿನ ಅಬ್ಬಿಗೆರೆ ಗ್ರಾಮದಲ್ಲಿ ನಡೆದ ಮುಷ್ಟಿ ಧಾನ್ಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಮೂರುವರೆ ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ₹40 ಲಕ್ಷ ಮೊತ್ತದ ವಾಚ್‌ ಕಟ್ಟಿಕೊಂಡು ತಿರುಗುತ್ತಿದ್ದಾರೆ. ನೀರಾವರಿ ಯೋಜನೆಗಾಗಿ ಕೇಂದ್ರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಆದರೆ, ಅದರಲ್ಲಿ ಎಷ್ಟು ಪರ್ಸೆಂಟೇಜ್‌ ಪಡೆಯಬೇಕು ಎನ್ನುವುದು ತೀರ್ಮಾನವಾಗದ ಕಾರಣ ಇದರ ಪ್ರಯೋಜನ ರೈತರಿಗೆ ಲಭಿಸಿಲ್ಲ. ಸಿದ್ದರಾಮಯ್ಯ ಅವರೇ ನೀವು  ಮನೆಗೆ ಹೋಗುವ ಸಮಯ ಸನ್ನಿಹಿತವಾಗಿದೆ’ ಎಂದು ಶಾ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಯಲ್ಲಿ ಶಾ ರೋಡ್ ಶೋ

ಹುಬ್ಬಳ್ಳಿ:
ಇಲ್ಲಿ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್ ಶಾ ಅವರು ಗುರುವಾರ ಸಂಜೆ ರೋಡ್ ಶೋ ನಡೆಸಿದರು. ಮೂರುಸಾವಿರ ಮಠದಿಂದ ದುರ್ಗದ ಬೈಲ್‌ವರೆಗೆ ಮೆರವಣಿಗೆ ಮಾಡಿದರು. ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಪ್ರಹ್ಲಾದ ಜೋಶಿ ಭಾಗಿಯಾಗಿದ್ದರು.

ಮೂರುಸಾವಿರ ಮಠದಿಂದ ಮೈಸೂರು ಸ್ಟೋರ್, ಜವಳಿ ಸಾಲ್ ಮಾರ್ಗವಾಗಿ ದುರ್ಗದ ಬೈಲ್‌ವರೆಗೆ ನಡೆದ ರೋಡ್ ಶೋದಲ್ಲಿ ಡೊಳ್ಳು ಕುಣಿತ, ವಂದೇ ಮಾತರಂ ಘೋಷಣೆ ಮೊಳಗಿತು.

ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಾದ ಪಡೆದು ಅಮಿತ್‌ ಶಾ ರೋಡ್ ಶೋ ಆರಂಭಿಸಿದರು.

ಹುಬ್ಬಳ್ಳಿಯಲ್ಲಿ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್ ಶಾ ರೋಡ್ ಶೋ.

ಪ್ರತಿಕ್ರಿಯಿಸಿ (+)