ಪರಿಸರ ಕೆಡಿಸದಿರಿ

7

ಪರಿಸರ ಕೆಡಿಸದಿರಿ

Published:
Updated:

ಚಾರಣಪ್ರಿಯರಾದ ನಾವು, ಕುಟುಂಬಸಮೇತ ಸದಾ ಒಂದಿಲ್ಲೊಂದು ಬೆಟ್ಟ ಹತ್ತಲು ಹೋಗುತ್ತಿರುತ್ತೇವೆ. ಇತ್ತೀಚೆಗೆ ನೆಲಮಂಗಲ ತಾಲ್ಲೂಕಿನ ಶಿವಗಂಗೆ ಬೆಟ್ಟಕ್ಕೆ 5ನೇ ಬಾರಿ ಚಾರಣಕ್ಕೆ ಹೋಗಿದ್ದೆವು. ಪ್ರಕೃತಿಯ ರಮ್ಯ ತಾಣವಾದ ಈ ಬೆಟ್ಟ ಸಾಹಸಿಗರಿಗಷ್ಟೇ ಅಲ್ಲ ಧಾರ್ಮಿಕತೆಗೂ ಪ್ರಾಮುಖ್ಯ ಪಡೆದ ಪ್ರವಾಸಿ ಸ್ಥಳವಾಗಿದೆ. ದೇವರ ಸಾನ್ನಿಧ್ಯದಲ್ಲಿ ಭಕ್ತರು ಧನ್ಯತೆ ಪಡೆದರೆ, ಚಾರಣಿಗರು ಪ್ರಕೃತಿ ಹಾಗೂ ಸಾಹಸದಲ್ಲಿ ಖುಷಿಪಡುತ್ತಾರೆ.

ಬೇಸರದ ಸಂಗತಿ ಎಂದರೆ, ಶಿವಗಂಗೆ ಬೆಟ್ಟದಲ್ಲಿ ಎಲ್ಲೆಲ್ಲೂ ಪ್ಲಾಸ್ಟಿಕ್. ಈ ಕಸದ ಗುಡ್ಡೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಬೆಟ್ಟದ ತಪ್ಪಲಿನಿಂದ ತುತ್ತ ತುದಿಯವರೆಗೂ ಪ್ಲಾಸ್ಟಿಕ್ ಕಸ ರಾರಾಜಿಸುತ್ತಿದೆ. ಪ್ರಕೃತಿಯನ್ನು ಹಾಳುಗೆಡುವುದರಲ್ಲಿ ನಾವು ಭಾರತೀಯರು ಸದಾ ಮುಂದೆ ಇರುತ್ತೇವೆ ಎನಿಸುತ್ತಿದೆ. ಬೆಟ್ಟದುದ್ದಕ್ಕೂ ತಿಂಡಿ-ತಿನಿಸು, ಪಾನಕ, ಮಜ್ಜಿಗೆ, ನೀರು ಮಾರುವ ವ್ಯಾಪಾರಸ್ಥರೂ ಬೇಕಾಬಿಟ್ಟಿ ಪ್ಲಾಸ್ಟಿಕ್ ಬಳಸುತ್ತಾರೆ. ಬಳಸಿದ್ದನ್ನು ಅಲ್ಲೇ ಬಿಸಾಡುತ್ತಾರೆ. ಪ್ರವಾಸಿಗರೂ ಬೆಟ್ಟ ಹತ್ತುವಾಗ ತೆಗೆದುಕೊಂಡು ಹೋದ ನೀರಿನ ಬಾಟಲಿ, ತಿಂಡಿ, ಬಿಸ್ಕತ್ತುಗಳ ಪ್ಯಾಕೆಟ್, ಐಸ್ ಕ್ರೀಂ ಕವರ್, ಚಾಕೊಲೆಟ್‌ ಕವರ್... ಇತ್ಯಾದಿ ಕಸವನ್ನು ಅಲ್ಲಲ್ಲೇ ಬಿಸಾಕಿ ಬರುವ ಪ್ರವೃತ್ತಿ ಹೆಚ್ಚಾಗುತ್ತಿದೆ.

ಇದಲ್ಲದೇ, ಕೆಲವರು ಯಾತ್ರಾಸ್ಥಳದಲ್ಲಿ ತಮ್ಮಲ್ಲಿರುವ ಯಾವುದಾದರೂ ವಸ್ತುವನ್ನು ಬಿಟ್ಟು ಬಂದರೆ ಒಳ್ಳೆಯದೆಂದುಕೊಂಡು ಅದನ್ನೂ ಮಾಡುತ್ತಾರೆ. ತಿಳಿ ಹೇಳಿದರೆ ‘ನಮ್ಮ ನಂಬಿಕೆ ಮತ್ತು ಭಕ್ತಿಭಾವ’ ಎನ್ನುತ್ತಾರೆ. ಬೆಟ್ಟದ ತಪ್ಪಲಿನಲ್ಲಿರುವ ಪ್ರವೇಶದ್ವಾರದಲ್ಲೇ, ‘ಈ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಕಸವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ’ ಎಂಬ ನಾಮಫಲಕ ಹಾಕಿದ್ದರೂ ಯಾರಿಗೂ ಅದರ ಬಗ್ಗೆ ಕಾಳಜಿ ಇಲ್ಲ ಎಂಬಂತೆ ವರ್ತಿಸುತ್ತಾರೆ.

ಯಾವುದೇ ಯಾತ್ರಾಸ್ಥಳ ಅಥವಾ ಪ್ರವಾಸಿ ಸ್ಥಳವನ್ನು ಸ್ವಯಂಪ್ರೇರಿತವಾಗಿ ಸ್ವಚ್ಛವಾಗಿಡುವ ಸಂಕಲ್ಪವನ್ನು ಕೈಗೊಂಡು ನಮ್ಮ ಪರಿಸರವನ್ನು ಉಳಿಸಿಕೊಳ್ಳುವ ಮನೋಭಾವ ರೂಢಿಸಿಕೊಳ್ಳಬೇಕು. ಸ್ವಚ್ಛತೆ ಕಾಪಾಡುವ ಅಗತ್ಯವನ್ನು ಮಕ್ಕಳಿಗೂ ತಿಳಿಹೇಳಬೇಕು.

–ಕೆ.ಸಿ. ರತ್ನಶ್ರೀ ಶ್ರೀಧರ್‌, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry