ಭಾನುವಾರ, ಡಿಸೆಂಬರ್ 15, 2019
23 °C
ಬೆಳೆ ನಷ್ಟದ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಕೆ ಶೀಘ್ರ: ಭರವಸೆ

ಆಲಿಕಲ್ಲು ಮಳೆ: ಭತ್ತದ ಬೆಳೆಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಿಕಲ್ಲು ಮಳೆ: ಭತ್ತದ ಬೆಳೆಗೆ ಹಾನಿ

ಸಿರುಗುಪ್ಪ: ತಾಲ್ಲೂಕಿನ ತೆಕ್ಕಲಕೋಟೆ ಹೋಬಳಿಯ ಕೆಂಚನಗುಡ್ಡ, ಕೆಂಚನಗುಡ್ಡ ತಾಂಡಾ, ಹೆರಕಲ್ ಗ್ರಾಮಗಳಲ್ಲಿ ಬುಧವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ 500 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ಭತ್ತದ ಬೆಳೆಗೆ ಹಾನಿಯಾಗಿದೆ.

ಕಟಾವು ಹಂತದಲ್ಲಿದ್ದ ಭತ್ತದ ತೆನೆಗಳಿಂದ ಕಾಳುಗಳು ನೆಲಕ್ಕೆ ಉದುರಿವೆ. ‘ಒಂದು ಎಕರೆ ಭತ್ತ ಬೆಳೆಯಲು ₹ 25 ಸಾವಿರ ವರೆಗೂ ಖರ್ಚು ಬಂದಿದ್ದು, ಕೆಲವೇ ದಿನಗಳಲ್ಲಿ ಭತ್ತವನ್ನು ಕಟಾವು ಮಾಡಬೇಕಿತ್ತು. ಆದರೆ ಆಲಿಕಲ್ಲು ಮಳೆಯಿಂದಾಗಿ ನಮ್ಮ 20ಎಕರೆ ಜಮೀನಿನಲ್ಲಿ ಬೆಳೆದ ಬೆಳೆಯಲ್ಲಿನ ಕಾಳುಗಳು ನೆಲದ ಪಾಲಾಗಿದೆ. ಹೀಗಾದರೆ ಕೃಷಿ ಮಾಡುವುದು ಹೇಗೆ’ ಎಂದು ರೈತ ಲೋಕನಾಥರಾವ್ ಅಳಲು ತೋಡಿಕೊಂಡಿದ್ದಾರೆ.

ಹಾನಿಗೊಳಗಾದ ಪ್ರದೇಶಕ್ಕೆ ತೆಕ್ಕಲಕೋಟೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಿವಪ್ಪ ಬಾರೆಗಿಡದ್ ಹಾಗೂ ಕೆಂಚನಗುಡ್ಡ, ಹೆರಕಲ್ ಗ್ರಾಮಗಳ ಗ್ರಾಮಲೆಕ್ಕಾಧಿಕಾರಿಗಳಾದ ವಿರೂಪಾಕ್ಷಪ್ಪ, ನಾಗರತ್ನಮ್ಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೈತರಾದ ಬಿ.ಎಂ.ರುದ್ರಮುನಿ, ಸುಬ್ಬರಾಜು, ಸೀತರಾಮಯ್ಯ, ಶ್ರೀನಿವಾಸರಾಜು, ಗಾಂಧಿರಾಜು, ಶಿವಪ್ರಸಾದ್, ಕೃಷ್ಣಂರಾಜು, ರಾಮಕೃಷ್ಣರಾಜು, ಸತ್ಯನಾರಾಯಣ ರಾಜು, ವೈ.ವೆಂಕಪ್ಪ, ನಾಗಪ್ಪ, ಅಂಬರೀಷ ತಮ್ಮ ಜಮೀನುಗಳಲ್ಲಿ ನೆಲಕ್ಕೆ ಒರಗಿದ ಭತ್ತದ ಬೆಳೆ ಹಾಗೂ ಹಾನಿಯನ್ನು ಅಧಿಕಾರಿಗಳ ಗಮನಕ್ಕೆ ತಂದು ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಮನವಿ ಮಾಡಿದರು.

**

ಬುಧವಾರ ರಾತ್ರಿ ಸುರಿದ ಆಲಿಕಲ್ಲು ಮಳೆಯಿಂದ 15 ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ ಸಂಪೂರ್ಣ ಹಾನಿಗೆ ಒಳಗಾಗಿದೆ  – ಬಿ.ಎಂ.ರುದ್ರಮುನಿ, ರೈತ ಹೆರಕಲ್‌.

**

 

ಪ್ರತಿಕ್ರಿಯಿಸಿ (+)