ಗುರುವಾರ , ಜುಲೈ 16, 2020
22 °C
ರಾಜ್ಯಮಟ್ಟದ ಅಥ್ಲೆಟಿಕ್ಸ್‌ನಲ್ಲಿ ನಾಲ್ಕು ಬಾರಿ ಪ್ರತಿನಿಧಿಸಿರುವ ಮೇರಿ ಅರುಳ್‍ಪ್ರಿಯಾ

ಬಡತನದಲ್ಲಿ ಅರಳಿದ ಪ್ರತಿಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಡತನದಲ್ಲಿ ಅರಳಿದ ಪ್ರತಿಭೆ

ಹನೂರು: ಸಾಧನೆಗೆ ಬಡತನ ಅಡ್ಡಿಯಲ್ಲ. ಆತ್ಮವಿಶ್ವಾಸವೊಂದಿದ್ದರೆ ಎಂತಹ ಕಾರ್ಯವನ್ನು ಸಾಧಿಸಬಹುದು ಎನ್ನುವುದಕ್ಕೆ ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದು ರಾಜ್ಯಮಟ್ಟದ ಅಥ್ಲೆಟಿಕ್ಸ್‌ನಲ್ಲಿ ನಾಲ್ಕು ಬಾರಿ ಪ್ರತಿನಿಧಿಸಿರುವ ಮೇರಿ ಅರುಳ್‍ಪ್ರಿಯಾ ಉತ್ತಮ ಉದಾಹರಣೆ.

ತಾಲ್ಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಬಹುತೇಕ ಅರಣ್ಯದಿಂದಲೇ ಆವೃತ್ತವಾಗಿರುವ ಪ್ರದೇಶ. ಇದರ ವ್ಯಾಪ್ತಿಗೆ ಒಳಪಡುವ ವಡ್ಡರದೊಡ್ಡಿಯ ಸಂತ ಚಾರ್ಲ್ಸ್‌ ಗ್ರಾಮಾಂತರ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಮೇರಿ ಅರಳ್ ಪ್ರಿಯಾ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಇದುವರೆಗೆ ನಾಲ್ಕು ಬಾರಿ ಆಯ್ಕೆಯಾಗುವ ಮೂಲಕ ಜಿಲ್ಲೆಯ ಗಮನ ಸಳೆದಿದ್ದಾಳೆ.

6ನೇ ತರಗತಿಗೆ ಪ್ರಾರಂಭವಾದ ಈ ವಿದ್ಯಾರ್ಥಿಯ ಓಟ ಇಂದಿಗೂ ಮುಂದುವರೆಯುತ್ತಲೇ ಇದೆ. ಗ್ರಾಮೀಣ ಭಾಗದ ಈ ಪ್ರತಿಭೆಯ ಸಾಧನೆಗೆ ಎಲ್ಲೆಡೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. 2014ರಲ್ಲಿ ಗದಗ, 2015 ಬೆಂಗಳೂರು, 2016 ಹುಬ್ಬಳ್ಳಿ ಹಾಗೂ 2017ರಲ್ಲಿ ಬೆಳಗಾಂನಲ್ಲಿ ನಡೆದ ರಾಜ್ಯಮಟ್ಟದ 1500- 3000 ಮೀ ಅಥ್ಲೆಟಿಕ್ಸ್‌ನಲ್ಲಿ 8ನೇ ಸ್ಥಾನ ಪಡೆದಿದ್ದಾಳೆ. ಕೃಷಿಕ ಕುಟುಂಬದ ಹಿನ್ನೆಲೆಯಿರುವ ಮೇರಿ ಅರುಳ್ ಪ್ರಿಯಾ ಬಡತನದಿಂದ ಬಂದ ವಿದ್ಯಾರ್ಥಿನಿ. ಅಗತ್ಯ ಸೌಕರ್ಯ ಕೊರತೆಯೂ ಪೋಷಕರು ಮಗಳಲ್ಲಿರುವ ಕ್ರೀಡಾಸಕ್ತಿಗೆ ನೀರೆರೆದು ಪೋಷಿಸುತ್ತಿದ್ದಾರೆ.

‘ಶಾಲೆಯಲ್ಲಿ ಪಾಠ ಪ್ರವಚನ ಜತೆಗೆ ಕ್ರೀಡೆಗೂ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಮೇರಿ ಅರುಳ್ ಪ್ರಿಯಾ ನಾಲ್ಕು ಭಾರಿ ಪ್ರತಿನಿಧಿಸಿರುವುದು ಹೆಮ್ಮೆಯ ಸಂಗತಿ. ಇಲ್ಲಿನ ಶಿಕ್ಷಕರು ಸಹ ಬಿಡುವಿನ ವೇಳೆಯಲ್ಲಿ ಮಕ್ಕಳನ್ನು ವಿವಿಧ ಆಟೋಟಗಳಲ್ಲಿ ತೊಡಗಿಸುವ ಮೂಲಕ ಕ್ರೀಡಾಕ್ಷೇತ್ರಕ್ಕೆ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಅತ್ಯಂತ ಅವಶ್ಯಕ. ಕಾರಣ ಕ್ರೀಡೆ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಿ ಸಮಯದ ಮಹತ್ವವನ್ನು ತಿಳಿಸುತ್ತದೆ. ಆದ್ದರಿಂದ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಸಕ್ರಿಯವಾಗಿ ಭಾಗವಹಿಸಲು ಶಾಲೆಯಲ್ಲಿ ಉತ್ತಮ ವೇದಿಕೆ ಕಲ್ಪಿಸಲಾಗಿದೆ’ ಎನ್ನುತ್ತಾರೆ ಮುಖ್ಯಶಿಕ್ಷಕ ಜೇವಿಯರ್ ಜಯಶೀಲನ್.

‘ಪ್ರಾಥಮಿಕ ಶಾಲೆಯಲ್ಲಿ ಹೋಬಳಿ ಮಟ್ಟದ ಸ್ಫರ್ಧೆಗಳಲ್ಲಿ ಭಾಗವಹಿಸುತ್ತಿದ್ದ ನನಗೆ ಪೋಷಕರು ಹಾಗೂ ಶಿಕ್ಷಕರು ಇನ್ನಷ್ಟು ಹುರುಪು ತುಂಬಿಸಿದರು. ಅವರ ಹಾರೈಕೆ ಮತ್ತು ಪ್ರೋತ್ಸಾಹದಿಂದ ಇಂದು ನಾನು ರಾಜ್ಯಮಟ್ಟದಲ್ಲಿ ಪ್ರತಿನಿಧಿಸುವಂತೆ ಮಾಡಿದೆ. ಕ್ರೀಡಾಕೂಟ 2 ತಿಂಗಳಿರುವಾಗ ಅಭ್ಯಾಸ ಆರಂಭಿಸುತ್ತೇನೆ. ಪಾಠ ಪ್ರವಚನ, ಪರೀಕ್ಷೆ ಇವೆಲ್ಲದರ ನಡುವೆ ಕ್ರೀಡೆಗೆ ತಯಾರಿ ನಡೆಸಬೇಕೆಂದಾಗ ಸ್ವಲ್ಪ ಒತ್ತಡವಾಗುತ್ತದೆ. ಆದರೆ, ದೈಹಿಕ ಶಿಕ್ಷಕರು ಹಾಗೂ ಮುಖ್ಯಶಿಕ್ಷಕರ ಸಹಕಾರದಿಂದ ಎಲ್ಲವನ್ನು ಸರಿದೂಗಿಸಿಕೊಂಡು ಅಭ್ಯಾಸ ನಡೆಸುತ್ತೇನೆ. ನಾಲ್ಕು ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರೂ ಒಮ್ಮೆಯೂ ಪ್ರಥಮ ಸ್ಥಾನ ಗಳಿಸಲಾಗಲಿಲ್ಲ ಎಂಬ ಕೊರಗು ಇದೆ. ಮುಂದಿನ ವರ್ಷದಲ್ಲಿ ಪ್ರಥಮ ಸ್ಥಾನ ಗಳಿಸಬೇಕು ಎಂಬ ಉದ್ದೇಶದಿಂದ ಇಂದಿನಿಂದಲೇ ತಯಾರಿ ನಡೆಸಲು ಸಜ್ಜಾಗಿದ್ದೇನೆ’ ಎನ್ನುತ್ತಾರೆ ಅರುಳ್ ಪ್ರಿಯಾ.

ಮುಂದಿನ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಿರುವುದರಿಂದ ಮುಂಚಿತವಾಗಿ ಅಭ್ಯಾಸ ನಡೆಸಲು ಚಿಂತಿಸಿದ್ದೇನೆ. ಈ ಬಗ್ಗೆ ದೈಹಿಕ ಶಿಕ್ಷಕರೊಂದಿಗೂ ಚರ್ಚಿಸಿ ಅಭ್ಯಾಸ ನಡಸುತ್ತೇನೆ. ಕ್ರೀಡೆಯ ಬಗ್ಗೆ ಪೋಷಕರಿಗೂ ಆಸಕ್ತಿಯಿರುವುದರಿಂದ ಅವರು ಸಹ ನನ್ನ ಅಭ್ಯಾಸಕ್ಕೆ ಸಹಕರಿಸುತ್ತಿದ್ದಾರೆ. ಕ್ರೀಡೆ ಜತೆಗೆ ಸಾಂಸ್ಕೃತಿಕ ಚಟುವಟಿಕೆಯಲ್ಲೂ ಸಕ್ರಿಯವಾಗಿ ಭಾಗವಹಿಸುವುದಾಗಿ ಹೇಳುವ ವಿದ್ಯಾರ್ಥಿ ಮೇರಿ ಅರುಳ್‍ಪ್ರಿಯಾ ಭವಿಷ್ಯದಲ್ಲಿ ಐಪಿಎಸ್ ಅಧಿಕಾರಿಯಾಗುವ ಹೆಬ್ಬಯಕೆ ಹೊಂದಿದ್ದಾರೆ.

‘ಸತತ 5 ವರ್ಷಗಳಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಬಾರಿ 5 ವಿದ್ಯಾರ್ಥಿಗಳು ವೈಯಕ್ತಿಕ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ’ ಎಂದರು ದೈಹಿಕ ಶಿಕ್ಷಕ ಗಿಲ್ಬರ್ಟ್ ಸಗಾಯ್‍ರಾಜ್.

ಬಿ.ಬಸವರಾಜು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.