ಭಾನುವಾರ, ಡಿಸೆಂಬರ್ 15, 2019
25 °C

ಮಾತಿಲ್ಲ, ಕಥೆಯಿಲ್ಲ; ರೋಮಾಂಚನವೂ ಹೆಚ್ಚಿಲ್ಲ

ಪದ್ಮನಾಭ ಭಟ್‌ Updated:

ಅಕ್ಷರ ಗಾತ್ರ : | |

ಮಾತಿಲ್ಲ, ಕಥೆಯಿಲ್ಲ; ರೋಮಾಂಚನವೂ ಹೆಚ್ಚಿಲ್ಲ

ಸಿನಿಮಾ: ಮರ್ಕ್ಯುರಿ

ನಿರ್ಮಾಣ: ಕಾರ್ತಿಕೇಯನ್, ಸಂತಾನಂ

ನಿರ್ದೇಶನ: ಕಾರ್ತಿಕ್ ಸುಬ್ಬರಾಜ್

ತಾರಾಗಣ: ಪ್ರಭುದೇವ, ಸನತ್ ರೆಡ್ಡಿ, ದೀಪಕ್ ಪರಮೇಶ್, ಇಂದುಜಾ, ಶಶಾಂಕ್ ಪುರುಷೋತ್ತಮ್, ಅನಿಶ್ ಪದ್ಮನಾಭನ್

ಮಾರುಕಟ್ಟೆಯಲ್ಲಿ ಯಾವುದೇ ಉತ್ಪನ್ನಗಳಿಗೆ ಒಂದು ಜೀವಿತಾವಧಿ ಎಂಬುದಿರುತ್ತದೆ. ಅದು ಮುಗಿಯುತ್ತಿದ್ದ ಹಾಗೆ ಬೇಡಿಕೆ ಕಡಿಮೆಯಾಗುತ್ತದೆ. ಆಗ ಅದೇ ಉತ್ಪನ್ನವನ್ನು ಅಲ್ಪಸ್ವಲ್ಪ ಬದಲಾವಣೆ ಮಾಡಿ, ಹೊಸ ವೇಷ ತೊಡಿಸಿ ಮತ್ತೊಂದು ಹೆಸರಿನೊಂದಿಗೆ ಮಾರುಕಟ್ಟೆಗೆ ಬಿಟ್ಟು, ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದು ಬಹುತೇಕ ಎಲ್ಲ ಉತ್ಪಾದಕ ಕಂಪನಿಗಳೂ ಅನುಸರಿಸುವ ಸೂತ್ರ. ಸಿನಿಮಾ ಕ್ಷೇತ್ರದಲ್ಲಿಯೂ ಇಂಥ ತಂತ್ರಗಳು ಪದೆ ಪದೆ ಬಳಕೆಯಾಗುತ್ತಲೇ ಇರುತ್ತವೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ‘ಮರ್ಕ್ಯುರಿ’ ಕೂಡ ಹಳೇ ಸರಕಿಗೆ ಹೊಸ ಪರಿವೇಷ ತೊಡಿಸುವ ಪ್ರಯತ್ನವಾಗಿ ಕಾಣುತ್ತದೆ.

ಇದು ಮೂಕಿ ಚಿತ್ರ. ಹಾಗೆಂದು ಮೌನ ಪ್ರಧಾನ ಎನ್ನುವಂತಿಲ್ಲ. ಮಾತಿಲ್ಲ, ವಿಶೇಷ ಕಥೆಯೂ ಇಲ್ಲ. ಆದರೆ ಸದ್ದಿಗೇನೂ ಕೊರತೆಯಿಲ್ಲ. ಹಾಗೆ ನೋಡಿದರೆ ಸದ್ದು ಮತ್ತು ಸಂಗೀತದ ಮೂಲಕವೇ ಕಾರ್ತಿಕ್ ಸಿನಿಮಾ ಕಟ್ಟಲು ಹೊರಟಿದ್ದಾರೆ.

1992 ‘ಕಾರ್ಪೊರೇಟ್ ಅರ್ತ್’ ಎಂಬ ಪಾದರಸ ತಯಾರಿಕಾ ಕಾರ್ಖಾನೆಯಲ್ಲಿ ನಡೆದ ದುರಂತದ ಪರಿಣಾಮವಾಗಿ ಹಲವರು ಕಿವುಡ, ಮೂಗರಾಗಿ ಹುಟ್ಟಿರುತ್ತಾರೆ. ಅಂಥ ವಿಕಲಾಂಗರ ಶಾಲೆಯಲ್ಲಿ ಕಲಿತ ಐವರು ಸಹಪಾಠಿಗಳು ಹಲವು ವರ್ಷಗಳ ನಂತರ ಸಂತೋಷಕೂಟ ಮಾಡಲು ಒಂದೆಡೆ ಸೇರುತ್ತಾರೆ. ಸಂಗೀತ ಕೇಳದಿದ್ದರೂ ಕುಡಿದು, ಕುಣಿದ ಅವರು ನಡುರಾತ್ರಿ ಲಾಂಗ್ ಡ್ರೈವ್ ಹೊರಡುತ್ತಾರೆ. ದಾರಿಮಧ್ಯ ಒಬ್ಬನ ಸಾವಿಗೂ ಕಾರಣರಾಗುತ್ತಾರೆ. ಈ ಘಟನೆ ಅವರನ್ನು ಹೇಗೆಲ್ಲಾ ದುರಂತಕ್ಕೆ ತಳ್ಳುತ್ತದೆ ಎನ್ನುವುದೇ ಈ ಚಿತ್ರದ ಕಥಾಎಳೆ.

‘ಕಾರ್ಪೊರೇಟ್‌ ಅರ್ತ್’ ಎಂಬ ಹೆಸರು, ‘ಮರ್ಕ್ಯುರಿ ದುರಂತ’ದ ಉಲ್ಲೇಖಗಳು ಅಲ್ಲಲ್ಲಿ ಬಂದು ಹೋದರೂ, ಈ ದುರಂತದ ಪರಿಣಾಮವನ್ನು ಕಟ್ಟಿಕೊಡುವುದು ನಿರ್ದೇಶಕರ ಉದ್ದೇಶವಲ್ಲ. ಈ ಚಿತ್ರದ ಒಟ್ಟಾರೆ ಉದ್ದೇಶವೇ ಥ್ರಿಲ್ ಹುಟ್ಟಿಸುವುದು. ಆದರೆ ಆ ವಿಷಯದಲ್ಲಿಯೂ ನಿರ್ದೇಶಕರು ಪೂರ್ತಿ ಯಶಸ್ವಿಯಾಗುವುದಿಲ್ಲ. ಬೆಚ್ಚಿಸಲು ಪ್ರಭುದೇವ ಅವರ ರಕ್ತಸಿಕ್ತ ಮುಖ, ಕಿಡಿಕಾರುವ ಕಣ್ಣುಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಅವುಗಳಿಗೆ ಬಹುಬೇಗ ಪ್ರೇಕ್ಷಕ ಒಗ್ಗಿಕೊಂಡುಬಿಡುತ್ತಾನೆ.

ಮೊದಲರ್ಧ ಹರೆಯದ ಹುಡುಗರ ಮೋಜು, ಮಸ್ತಿ, ಎದೆಯನ್ನು ಆರ್ದ್ರಗೊಳಿಸುವ ಒಂದು ನವಿರಾದ ಪ್ರೇಮದ ಎಳೆಯ ಮೂಲಕವೇ ಬೆಳೆಯುವ ಸಿನಿಮಾ, ದ್ವಿತೀಯಾರ್ಧದಲ್ಲಿ ಸೇಡಿನ ಕಥೆಯಾಗಿ ಬದಲಾಗುತ್ತದೆ. ಮುಖ್ಯ ಭೂಮಿಕೆಯಲ್ಲಿರುವ ಐವರು ಸ್ನೇಹಿತರ ಪಾತ್ರಧಾರಿಗಳೂ ಮುಖದಲ್ಲಿಯೇ ಮಾತಿಗೆ ಮೀರಿದ ಭಯ, ದುಃಖ, ನಗು, ತಮಾಷೆ, ಪ್ರೇಮ ಭಾವಗಳನ್ನು ಅಭಿವ್ಯಕ್ತಿಸಿದ್ದಾರೆ. ಸಂಗೀತ ಕೇಳದೆಯೂ ಕುಣಿಯುವ ಜೀವನಪ್ರೀತಿ ಮತ್ತು ಕಣ್ಣೆದುರಿನ ಸಾವಿನ ರುದ್ರನರ್ತನದ ತುಳಿತದಿಂದ ತಪ್ಪಿಸಿಕೊಳ್ಳುವ ಒದ್ದಾಟ ಎರಡನ್ನೂ ಅವರು ದಾಟಿಸಿದ ರೀತಿ ಮೆಚ್ಚುಗೆಯಾಗುತ್ತದೆ. ಪ್ರಭು ದೇವ ‘ಲುಕ್‌’ ಅನ್ನೇ ಹೆಚ್ಚು ನೆಚ್ಚಿಕೊಂಡಿದ್ದಾರೆ.

ಈ ಚಿತ್ರದ ನಿಜವಾದ ನಾಯಕರು ಸಂತೋಷ್ ನಾರಾಯಣನ್ (ಹಿನ್ನೆಲೆ ಸಂಗೀತ), ಕುನಾಲ್ ರಾಜನ್ (ಧ್ವನಿ ವಿನ್ಯಾಸ) ಮತ್ತು ಎಸ್. ತಿರುನವುಕ್ಕರಸು (ಛಾಯಾಗ್ರಹಣ). ಅದರಲ್ಲಿಯೂ ದ್ವಿತೀಯಾರ್ಧದಲ್ಲಿ ಕುನಾಲ್ ರಾಜನ್ ಅವರ ಕೆಲಸಕ್ಕೆ ಹೆಚ್ಚು ಅಂಕ ಕೊಡಬೇಕು. ನಡುರಾತ್ರಿ ಮುಸುಕಿದ ಮಂಜಿನ ಪರದೆಯ ಮೇಲೆ ನೆರಳುಗಳ ನೃತ್ಯವನ್ನೂ, ಕಾರ್ಖಾನೆಯೊಳಗಿನ ಇಕ್ಕಟ್ಟಿನಲ್ಲಿನ ದೃಶ್ಯಗಳನ್ನೂ ತಿರುನವುಕ್ಕರಸು ಕ್ಯಾಮೆರಾ ಸಮರ್ಥವಾಗಿ ಕಟ್ಟಿಕೊಟ್ಟಿದೆ.

ಹಾಗೆ ನೋಡಿದರೆ ಇಡೀ ಚಿತ್ರದಲ್ಲಿ ‘ಮಾತು’ ಇಲ್ಲದಿದ್ದರಿಂದ ಹೆಚ್ಚಿನ ಬದಲಾವಣೆ ಏನೂ ಆದಂತಿಲ್ಲ. ಹಲವು ಸನ್ನಿವೇಶಗಳಲ್ಲಿ ಏಳುವ ತಾರ್ಕಿಕ ಪ್ರಶ್ನೆಗಳಿಗೆ ಉತ್ತರವೂ ಇಲ್ಲ. ಈ ಚಿತ್ರ ಪಾದರಸದಷ್ಟು ಚುರುಕು, ಹೊಳಪು ಹೊಂದಿಲ್ಲ. ಆದರೂ ವಿಶೇಷ ನಿರೀಕ್ಷೆ ಇರಿಸಿಕೊಳ್ಳದೆ ಒಮ್ಮೆ ನೋಡಿಬರಲು ಅಡ್ಡಿಯಿಲ್ಲ

ಪ್ರತಿಕ್ರಿಯಿಸಿ (+)