ಭಾನುವಾರ, ಡಿಸೆಂಬರ್ 15, 2019
25 °C

ಸುರಮಣಿ ಮರಡೂರರಿಗೆ ‘ಕಲಾಶೃಂಗ’

ಉಮಾ ಅನಂತ್‌ Updated:

ಅಕ್ಷರ ಗಾತ್ರ : | |

ಸುರಮಣಿ ಮರಡೂರರಿಗೆ ‘ಕಲಾಶೃಂಗ’

ದಿಗ್ಗಜರಿಂದ ಹಿಂದೂಸ್ತಾನಿ ಸಂಗೀತವನ್ನು ಆಳವಾಗಿ ಅಧ್ಯಯನ ಮಾಡಿ, ಸಾಕಷ್ಟು ರಿಯಾಜ್‌ ಮಾಡಿ, ಲೆಕ್ಕವಿಲ್ಲದಷ್ಟು ಕಛೇರಿಗಳನ್ನು ನೀಡಿ, ಹತ್ತು ಹಲವು ಪ್ರಶಸ್ತಿಗಳನ್ನು ಗಳಿಸಿ, ಸಂಗೀತ ಲೋಕದಲ್ಲಿ ಭದ್ರವಾಗಿ ನೆಲೆಯೂರಿ ‘ಗಟ್ಟಿಕುಳ’ ಎನಿಸಿಕೊಂಡವರು ಪಂ.ಸೋಮನಾಥ ಮರಡೂರ.

ತಮ್ಮ 17ನೇ ವಯಸ್ಸಿನಲ್ಲೇ ಆಕಾಶವಾಣಿಯ ಅಖಿಲ ಭಾರತ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಅಂದಿನ ರಾಷ್ಟ್ರಪತಿಗಳಾದ ಡಾ.ಎಸ್‌. ರಾಧಾಕೃಷ್ಣನ್‌ ಅವರಿಂದ ಪ್ರಶಸ್ತಿ ಪಡೆದದ್ದು ಕಡಿಮೆ ಸಾಧನೆಯಲ್ಲ. ಹಾವೇರಿ ಜಿಲ್ಲೆ ಮರಡೂರಿನಲ್ಲಿ ಜನಿಸಿದ ಪಂ. ಸೋಮನಾಥ್‌ ನಾಲ್ಕನೇ ವಯಸ್ಸಿಗೇ ವೀರಪ್ಪಯ್ಯ ಸ್ವಾಮೀಜಿ ಅವರಿಂದ ಸಂಗೀತ ಕಲಿಯಲಾರಂಭಿಸಿದರು. ಗದಗದ ವೀರೇಶ್ವರ ಪುಣ್ಯಾಶ್ರಮದ ಪಂ. ಪುಟ್ಟರಾಜ ಗವಾಯಿಗಳಲ್ಲಿ ಹೆಚ್ಚಿನ ಅಭ್ಯಾಸ ಮಾಡಿದರು. ಮುಂದೆ ಶಾಸ್ತ್ರೀಯ ಸಂಗೀತದ ವಿವಿಧ ಆಯಾಮಗಳನ್ನು ಪದ್ಮಭೂಷಣ ಪಂ. ಬಸವರಾಜ ರಾಜಗುರು ಹಾಗೂ ಪಂ.ಮಲ್ಲಿಕಾರ್ಜುನ ಮನ್ಸೂರ ಅವರಲ್ಲಿ ಕಲಿತರು.

ಕಿರಾಣ ಘರಾಣದ ಖಯಾಲ್‌ ‘ಗಾಯಕಿ’ಯಲ್ಲಿ ಮಧುರಾತಿ ಮಧುರವಾಗಿ ಗಾಯನವನ್ನು ಪ್ರಸ್ತುತಪಡಿಸುವ ಛಾತಿ ಉಳ್ಳ ಪಂ.ಸೋಮನಾಥ ಮರಡೂರ, ಮುಂದೆ ತಮ್ಮದೇ ಆದ ಸ್ವಂತ ಗಾಯನಶೈಲಿಯನ್ನು ರೂಢಿಸಿಕೊಂಡರು. ವಿಶ್ವದಾದ್ಯಂತ ಸಂಗೀತ ಪಯಣ ನಡೆಸಿ ಕೇಳುಗರಿಂದ ಅದ್ಭುತ ಪ್ರತಿಕ್ರಿಯೆ ಪಡೆದ ವಿರಳಾತಿ ವಿರಳ ಕಲಾವಿದರೆನಿಸಿಕೊಂಡರು.

1961ರಲ್ಲಿ ಆಕಾಶವಾಣಿ ನಡೆಸಿದ ರಾಷ್ಟ್ರೀಯ ಸಂಗೀತ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದವರು. 2004ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1994ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಕಿರಾಣ ಘರಾಣ ಪ್ರಶಸ್ತಿ ಪಡೆದುಕೊಂಡರು. ಸುರಮಣಿ, ಸುರಸಿಂಗಾರ್‌, ಸಂಗೀತ ರತ್ನ, ಸ್ವರ ಮಾಂತ್ರಿಕ, ಕುಮಾರಶ್ರೀ, ರಮಣಶ್ರೀ, ಗಾನಶ್ರೀ, ಪುಟ್ಟರಾಜ ಗೌರವ ಸಮ್ಮಾನ್‌.. ಮುಂತಾದ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಈ ಘನ ವಿದ್ವಾಂಸರು ಮೈಸೂರು ದರ್ಬಾರಿನ ‘ಆಸ್ಥಾನ ವಿದ್ವಾನ್‌’ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡವರು.

ಸಾಧನೆಗೆ ಮನ್ನಣೆ– ಕಲಾಶೃಂಗ

‘ಸಂಗೀತದ ಅಭಿರುಚಿಯನ್ನು ಮಕ್ಕಳಲ್ಲಿ ಬೆಳೆಸುವುದು, ಅವರಲ್ಲಿ ಉತ್ತಮ ಸಂಸ್ಕಾರ ಮೂಡಿಸುವುದು ಜತೆಗೆ ಸದ್ಭಾವನೆ ಬೆಳೆಯುವಂತೆ ಮಾಡುವುದು ನಮ್ಮ ಉದ್ದೇಶ. ಇದಕ್ಕಾಗಿ ನಮ್ಮ ಕಾರ್ಯಕ್ರಮಗಳಲ್ಲಿ ಮಕ್ಕಳ ಪ್ರತಿಭೆಗೆ, ಯುವ ಕಲಾವಿದರ ಸಾಧನೆಗೆ ಹೆಚ್ಚಿನ ಮನ್ನಣೆ ನೀಡುತ್ತಾ ಬಂದಿದ್ದೇವೆ. ಜತೆಗೆ ಸಾಧಕರ ಸಂಗೀತವೂ ಮಕ್ಕಳಿಗೆ ಪರಿಚಯ ಆಗಬೇಕು ಎಂಬ ಉದ್ದೇಶದಿಂದ ಹಿರಿಯ ವಿದ್ವಾಂಸರ ಸಂಗೀತವನ್ನೂ ಆಯೋಜಿಸುತ್ತೇವೆ..’ ಎಂದು ವಿವರ ನೀಡುತ್ತಾರೆ ಶ್ರೀರಾಮ ಕಲಾ ವೇದಿಕೆಯ ಅಧ್ಯಕ್ಷ, ನಾಡಿನ ಹೆಸರಾಂತ ತಬಲಾ ವಾದಕ ಪಂ. ರವೀಂದ್ರ ಯಾವಗಲ್‌.

ಸಂಗೀತದಲ್ಲಿ ಅದ್ವಿತೀಯ ಸಾಧನೆ ಮಾಡಿದ ಹಿರಿಯ ವಿದ್ವಾಂಸರಿಗೆ ಪ್ರತೀ ವರ್ಷ ‘ಕಲಾಶೃಂಗ’ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ. ರಾಮಕಲಾ ವೇದಿಕೆ ಕಳೆದ 15 ವರ್ಷಗಳಿಂದ ವಿಶಿಷ್ಟ ಸಂಗೀತ ಕಾರ್ಯಕ್ರಮ ಆಯೋಜಿಸಿ ಸಾಧಕರನ್ನು ಸನ್ಮಾನಿಸುವ ಮೂಲಕ ಸಂಗೀತ ಸೇವೆ ಮಾಡುತ್ತಿದೆ. ಇದುವರೆಗೆ ಪಂ.ರಾಜೀವ ತಾರಾನಾಥ್‌, ಮಾಧವರಾವ್‌ ಇಂಧೋರ್‌ಕರ್‌ ಮುಂಬೈ, ವಿಶ್ವಮೋಹನ ಭಟ್‌, ಪಂ. ರಾಜನ್‌–ಸಾಜನ್‌ ಮಿಶ್ರಾ, ಪಂ. ವಸಂತ ಕನಕಾಪುರ, ವಿದ್ವಾನ್‌ ಆರ್‌.ಕೆ. ಶ್ರೀಕಂಠನ್‌, ಎಂ.ಎಸ್‌.ಗೋಪಾಲಕೃಷ್ಣನ್‌, ಅಶ್ವಿನಿ ಭಿಡೆ ದೇಶಪಾಂಡೆ, ಪಂ. ವಿನಾಯಕ ತೊರವಿ, ಶಾಹಿದ್‌ಪರ್ವೇಜ್‌, ವೀಣೆ ಆರ್‌. ವಿಶ್ವೇಶ್ವರನ್‌ ಅವರಿಗೆ ಕಲಾಶೃಂಗ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಜಕ್ಕೂರಿನಲ್ಲಿರುವ ಶ್ರೀರಾಮ ಕಲಾ ವೇದಿಕೆ ದಿ.ರಾಮಚಂದ್ರ ಯಾವಗಲ್‌ ಸ್ಮರಣಾರ್ಥ ‘ನಾದ ನಮನ’ ಹಾಗೂ ಸಂಗೀತ ಕಾರ್ಯಕ್ರಮ ಏರ್ಪಡಿಸಿದೆ. ಎನ್‌.ಆರ್‌. ಕಾಲೊನಿಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ಇದೇ ಭಾನುವಾರ (ಏ.15) ಬೆಳಿಗ್ಗೆ 9ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ವೈವಿಧ್ಯಮಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಖ್ಯಾತ ಗಾಯಕ ಹಾಗೂ ಸಂಗೀತ ಗುರು ಪಂ. ಸೋಮನಾಥ ಮರಡೂರ ಅವರಿಗೆ ‘ಕಲಾ ಶೃಂಗ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಭಾನುವಾರ ಬೆಳಿಗ್ಗೆ 9ಗಂಟೆಯಿಂದ ದೆಹಲಿಯ ರಾಜೇಂದ್ರ ಪ್ರಸನ್ನ ಅವರ ಬಾನ್ಸುರಿ ವಾದನ, ಯುವಕಲಾವಿದರಾದ ಅನಿರುದ್ಧ ಐತಾಳ್‌ ಹಾಗೂ ಆದಿತ್ಯ ಪಲ್ಲಕ್ಕಿ ಅವರಿಂದ ಗಾಯನ, ಕಿರಣ್‌ ಯಾವಗಲ್‌ ತಬಲಾ ವಾದನ, ಅಶೋಕ ನಾಡಿಗೇರ್‌ ಅವರಿಂದ ಗಾಯನ ಕಾರ್ಯಕ್ರಮವಿದೆ. ಸಂಜೆಯ ಕಾರ್ಯಕ್ರಮದಲ್ಲಿ ನಿಖಿತಾ ಹಾಗೂ ನಿಶ್ಚಿತಾ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ, ರಾಜೀವ್‌ ತಾರಾನಾಥ್‌ ಅವರ ಸರೋದ್‌ ವಾದನವಿದೆ. ಪಂ. ಸೋಮನಾಥ್‌ ಮರಡೂರ ಅವರಿಗೆ ಕಲಾಶೃಂಗ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಹಾಗೂ ಪಂ. ರಾಜೀವ್‌ ತಾರಾನಾಥ್‌ ಪ್ರದಾನ ಮಾಡುವರು. ಪ್ರಶಸ್ತಿ ಪ್ರದಾನದ ಬಳಿಕ ಪಂ.ಸೋಮನಾಥ ಮರಡೂರ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನವೂ ಇದೆ.

ಪ್ರತಿಕ್ರಿಯಿಸಿ (+)