ಬುಧವಾರ, ಆಗಸ್ಟ್ 5, 2020
20 °C
ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡ ಮಾತನಾಡಿರುವ ವಿಡಿಯೊ ವೈರಲ್‌

‘ಆರ್‌ಎಸ್‌ಎಸ್‌ನವರು ಭ್ರಷ್ಟರು, ಹುಳಿ ಹಿಂಡಿದ ಅನಂತ ಕುಮಾರ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಆರ್‌ಎಸ್‌ಎಸ್‌ನವರು ಭ್ರಷ್ಟರು, ಹುಳಿ ಹಿಂಡಿದ ಅನಂತ ಕುಮಾರ್‌’

ತುಮಕೂರು: ‘ಆರ್‌ಎಸ್‌ಎಸ್‌ನವರು ದೇಶಭಕ್ತರು ಎನ್ನುತ್ತಾರೆ. ಆದರೆ ಅವರಷ್ಟು ಭ್ರಷ್ಟರು ಯಾರೂ ಇಲ್ಲ. ಆರ್‌ಎಸ್ಎಸ್‌ನ ಎಷ್ಟು ಜನರಿಗೆ ಭೂಮಿ ಕೊಡಲಾಗಿದೆ ಎಂಬುದು ಯಡಿಯೂರಪ್ಪನವರಿಗೆ ಗೊತ್ತು. ಪಕ್ಷದಲ್ಲಿ ಎಲ್ಲರೂ ಅಣ್ಣ ತಮ್ಮಂದಿರಂತಿದ್ದೆವು. ಅನಂತ ಕುಮಾರ್‌ ಹುಳಿ ಹಿಂಡಿದರು. ಯಡಿಯೂರಪ್ಪ ಅವರ ಕಾಳೆಲೆಯಲು ಅವರು ಎಲ್ಲರನ್ನೂ ಬಳಸಿಕೊಂಡರು’

ಹೀಗೆ ತಮ್ಮ ಪಕ್ಷ, ನಾಯಕರು ಹಾಗೂ ಆರ್‌ಎಸ್‌ಎಸ್‌ನವರ ಬಗ್ಗೆ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಸುರೇಶ್‌ ಗೌಡ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ವೈರಲ್‌ ಆಗಿದೆ. ಐದು ವರ್ಷಗಳ ಹಿಂದೆ ಕೆಲವು ಪತ್ರಕರ್ತರೊಂದಿಗೆ ಲೋಕಾಭಿರಾಮವಾಗಿ ಮಾತನಾಡುವಾಗ ಈ ವಿಡಿಯೊ ಮಾಡಿಕೊಳ್ಳಲಾಗಿದ್ದು, ಈಗ ಚುನಾವಣಾ ಕಾರಣ ವೈರಲ್‌ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

‘ಅನಂತ ಕುಮಾರ್‌ ಹುಳಿ ಹಿಂಡುವ ಮೂಲಕ ನಮ್ಮನ್ನು ಒಂದಾಗಲು ಬಿಡಲಿಲ್ಲ. ಈಶ್ವರಪ್ಪ ಬಳಿ ನೀನೇ ಸಿಎಂ, ಜಗದೀಶ್‌ ಶೆಟ್ಟರ್‌ ಬಳಿ, ಆರ್.ಆಶೋಕ್ ಬಳಿ ನೀನೇ ಸಿಎಂ ಎಂದು ಹೇಳುತ್ತಾ ಅವರನ್ನು ಬಳಸಿಕೊಂಡು ಅನಂತಕುಮಾರ್‌ ಅವರು ಯಡಿಯೂರಪ್ಪ ಅವರ ಕಾಲೆಳೆದರು’ ಎಂದು ಹೇಳಿದ್ದಾರೆ.

‘ಯಡಿಯೂರಪ್ಪ ಲೋಕಾಯುಕ್ತ ಪ್ರಕರಣದಲ್ಲಿ ಸಿಕ್ಕಿದ್ದಾರೆ. ಏನೇ ಮಾಡಿದ್ರೂ ಅವರು ಗೆಲ್ಲುವುದಿಲ್ಲ ಎಂದು ಜನರ ಬಾಯಲ್ಲಿ ಬಂದ್ರೆ ಮುಗೀತು. ಬಿಜೆಪಿಗೆ ಜನರು ವೋಟ್‌ ಹಾಕುವುದಿಲ್ಲ. ₹ 100 ಕೋಟಿ ಅಲ್ಲ ₹ 500 ಕೋಟಿ ಖರ್ಚು ಮಾಡಿದರೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್‌ಗೆ ಬೆಂಬಲ ಸಿಗಲಿದೆ ಎಂದು ಯಡಿಯೂರಪ್ಪ ಕೆಜೆಪಿ ಕಟ್ಟಿದರು’ ಎಂದಿದ್ದಾರೆ.

‘ಒಂದು ದಿನ ವಾಯು ವಿಹಾರಕ್ಕೆ ನನ್ನನ್ನು ಕರೆದರು. ಮುಂದಿನ ಮುಖ್ಯಮಂತ್ರಿ ಯಾರು ಎಂದು ನಾನು ಯಡಿಯೂರಪ್ಪ ಅವರನ್ನು ಕೇಳಿದೆ. ಅವರು ನಾನೇ ಎಂದರು. ಒಂದು ವೇಳೆ ಸಮ್ಮಿಶ್ರ ಸರ್ಕಾರ ಬಂದು ಉಪಮುಖ್ಯಮಂತ್ರಿ ಸ್ಥಾನ ಸಿಕ್ಕರೆ ಶೋಭಾನ ಅಥವಾ ನಿಮ್ಮ ಮಗಾನ ಎಂದು ನೇರವಾಗಿ ಕೇಳಿದ್ದೆ’ ಎಂದು ಹೇಳಿಕೊಂಡಿದ್ದಾರೆ.

‘ಯಡಿಯೂರಪ್ಪ ಅವರನ್ನು ದೇವರು ಎಂದುಕೊಂಡಿದ್ದೆವು. ಅವರು ಜೈಲಿಗೆ ಹೋದಾಗ ಕಣ್ಣೀರಿಟ್ಟೆವು. ಆದರೆ ಅವರು ನಿಷ್ಠಾವಂತರಿಗೆ ಬೆಲೆ ಕೊಡಲಿಲ್ಲ. ಸದಾನಂದ ಗೌಡ ಅವರನ್ನು ಮುಖ್ಯಮಂತ್ರಿ ಮಾಡಬೇಡಿ ಎಂದು ಹೇಳಿದೆವು. ಆದರೂ ಅವರನ್ನೇ ಮಾಡಿದರು. ನಂತರ ಅವರನ್ನು ಕೆಳಗಿಳಿಸಿ ಜಗದೀಶ್‌ ಶೆಟ್ಟರ್‌ ಅವರನ್ನು ಮಾಡಿದರು. ಸಿ.ಟಿ.ರವಿ ಅವರನ್ನು ತುಳಿಯಲು ಜೀವರಾಜ್‌ ಅವರನ್ನು ಬೆಳೆಸಲು ಹೋಗುತ್ತಾರೆ’ ಎಂದು ಹೇಳಿದ್ದಾರೆ.

‘ಯಾವುದೇ ಹೈಕಮಾಂಡ್‌ ಯಾರನ್ನೂ ಬಲಿಷ್ಠವಾಗಿ ಬೆಳೆಯಲು ಬಿಡುವುದಿಲ್ಲ. ನಮ್ಮ ಮಾತು ಕೇಳುತ್ತಿಲ್ಲ ಎಂದಾಗ ಅವರನ್ನು ತುಳಿದು ಹಾಕುತ್ತದೆ. ಯಡಿಯೂರಪ್ಪ ಅವರಿಗೂ ಹೀಗೇ ಮಾಡಲಾಯಿತು. ಅಂಥ ಅಡ್ವಾಣಿ ಅವರನ್ನೇ ಮೂಲೆಗೆ ಸರಿಸಿದವರಿಗೆ ಯಡಿಯೂರಪ್ಪ ಯಾವ ಲೆಕ್ಕ’ ಎಂದಿದ್ದಾರೆ.

**

‘ವಿಡಿಯೊ ವಿಶ್ವಾಸಾರ್ಹವಲ್ಲ; ಆದರೂ ಚುನಾವಣೆ ಸಂದರ್ಭದಲ್ಲಿ ಪ್ರಸಾರ ಮಾಡಿರುವ ಬಿ.ಟಿ.ವಿ ವಾಹಿನಿ ವಿರುದ್ಧ ಚುನಾವಣಾ ಆಯೋಗ ಹಾಗೂ ಪೊಲೀಸರಿಗೆ ದೂರು ನೀಡುತ್ತೇನೆ. ಪಕ್ಷವೂ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ. ವಿರೋಧಿಗಳು ನಡೆಸಿರುವ ಕೃತ್ಯ ಇದಾಗಿದೆ. ತನಿಖೆ ಬಳಿಕ ನಿಜಾಂಶ ಹೊರಬೀಳಲಿದೆ’ ಎಂದು ಸುರೇಶ್‌ ಗೌಡ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.