ನಗರದಲ್ಲಿ ರಾಜೀನಾಮೆ ಪರ್ವ

7
ಬಿಜೆಪಿ ತೊರೆದ ಹೇಮಚಂದ್ರ ಸಾಗರ್‌, ‘ಕೈ’ಕೊಟ್ಟ ಪಿ.ರಮೇಶ್‌

ನಗರದಲ್ಲಿ ರಾಜೀನಾಮೆ ಪರ್ವ

Published:
Updated:

ಬೆಂಗಳೂರು: ಚುನಾವಣಾ ಚಟುವಟಿಕೆ ಬಿರುಸು ಪಡೆಯುತ್ತಿದ್ದಂತೆಯೇ, ನಗರದಲ್ಲಿ ಮುಖಂಡರ ರಾಜೀನಾಮೆ ಪರ್ವವೂ ಜೋರಾಗಿದೆ.  ಸಿ.ವಿ.ರಾಮನ್‌ನಗರದ ಕಾಂಗ್ರೆಸ್‌ ಮುಖಂಡ ಪಿ.ರಮೇಶ್‌ ಜೆಡಿಎಸ್‌ಗೆ ಶುಕ್ರವಾರ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಟಿಕೆಟ್‌ ಕೈತಪ್ಪಿದ ಮುನಿಸಿನಿಂದ ಮಾಜಿ ಶಾಸಕ ಡಾ.ಹೇಮಚಂದ್ರ ಸಾಗರ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

2013ರ ಚುನಾವಣೆಯಲ್ಲಿ ಬಿಜೆಪಿಯ ಎಸ್‌. ರಘು ವಿರುದ್ಧ 8,419 ಮತಗಳ ಅಂತರದಿಂದ ಸೋತಿದ್ದ ರಮೇಶ್‌ ಈ ಬಾರಿಯೂ ಸಿ.ವಿ.ರಾಮನ್‌ನಗರದಲ್ಲಿ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಕಳೆದ ಚುನಾವಣೆಯಲ್ಲಿ 44,945 ಮತ ಪಡೆದಿದ್ದ ಅವರು ಸೋತ ಬಳಿಕವೂ ಪಕ್ಷದ ಸಂಘಟನೆಯಲ್ಲಿ  ಸಕ್ರಿಯರಾಗಿದ್ದರು. ಆದರೆ, ಟಿಕೆಟ್‌ ಕೈತಪ್ಪುವ ಸುಳಿವು ಸಿಕ್ಕಿದ್ದರಿಂದ ಅವರು ಕಾಂಗ್ರೆಸ್‌ ನಂಟು ಕಳೆದುಕೊಳ್ಳಲು ನಿರ್ಧರಿಸಿದ್ದಾರೆ.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ರಮೇಶ್‌  ಭೇಟಿ ಮಾಡಿದರು.

‘ಮುಖ್ಯಮಂತ್ರಿಗೆ ನಾನು ಸಹಕಾರ ಕೊಟ್ಟಿಲ್ಲ ಎಂಬ ನೆಪವೊಡ್ಡಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದರು. ಪಕ್ಷಕ್ಕೆ ಮಾಡಿದ ಸೇವೆಗೆ ಮನ್ನಣೆ ನೀಡಿಲ್ಲ. ಹಾಗಾಗಿ ಬೇಸತ್ತು ರಾಜೀನಾಮೆ ನೀಡಿದ್ದೇನೆ. ಸಿ.ವಿ. ರಾಮನ್ ನಗರದಿಂದ ನಾನೇ ಜೆಡಿಎಸ್ ಅಭ್ಯರ್ಥಿ’ ಎಂದು ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಜೆಪಿ ತೊರೆದ ಹೇಮಚಂದ್ರ: 2008ರ ಚುನಾವಣೆಯಲ್ಲಿ ಚಿಕ್ಕಪೇಟೆ ಕ್ಷೇತ್ರದಲ್ಲಿ ಆರ್‌.ವಿ.ದೇವರಾಜ್‌ ವಿರುದ್ಧ 7,281 ಮತಗಳಿಂದ ಗೆದ್ದಿದ್ದ ಸಾಗರ್‌ ಅವರಿಗೆ ಬಿಜೆಪಿ 2013ರಲ್ಲಿ ಟಿಕೆಟ್‌ ನಿರಾಕರಿಸಿತ್ತು. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಉದ್ಯಮಿ ಉದಯ ಗರುಡಾಚಾರ್‌, ದೇವರಾಜ್‌ ವಿರುದ್ಧ ಸೋತಿದ್ದರು. ಕಳೆದ ಬಾರಿ ಸೋತ ಅಭ್ಯರ್ಥಿಗೆ ಪಕ್ಷವು ಈ ಬಾರಿ ಮತ್ತೆ ಟಿಕೆಟ್‌ ನೀಡಿದ್ದರಿಂದ ಹೇಮಚಂದ್ರ  ಬೇಸರ ಮಾಡಿಕೊಂಡಿದ್ದರು.

‘ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಬೇರೆ ಪಕ್ಷ ಸೇರುವ ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲ’ ಎಂದು ಅವರು ತಿಳಿಸಿದರು.

‘ನನ್ನಂತಹ ನಾಯಕರ ಅಗತ್ಯ ಬಿಜೆಪಿಗೆ ಇಲ್ಲ. ಅಲ್ಲಿರುವವರು ತುಂಬಾ ಅದ್ಭುತ ವ್ಯಕ್ತಿಗಳು’ ಎಂದೂ ಅವರು ವ್ಯಂಗ್ಯವಾಡಿದರು.

ನಾರಾಯಣಸ್ವಾಮಿ ಮುನಿಸು: ರಾಜರಾಜೇಶ್ವರಿ ನಗರ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ, ಪಾಲಿಕೆಯ ಮಾಜಿ ಸದಸ್ಯ ಲಗ್ಗೆರೆ ನಾರಾಯಣಸ್ವಾಮಿ, ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪಕ್ಷದ ಸಮಾವೇಶಕ್ಕೆ ಗೈರು ಹಾಜರಾಗುವ ಮೂಲಕ, ತಮ್ಮ ಅಸಹನೆ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry