3
ಚುನಾವಣಾ ಆಯೋಗಕ್ಕೆ ಪತ್ರ ಬರೆದ ರಾಜ್ಯ ಸರ್ಕಾರ

‘ಕೆಂಪಯ್ಯನವರು ಸರ್ಕಾರಿ ಕಾರು ಬಳಸುತ್ತಿಲ್ಲ‘

Published:
Updated:
‘ಕೆಂಪಯ್ಯನವರು ಸರ್ಕಾರಿ ಕಾರು ಬಳಸುತ್ತಿಲ್ಲ‘

ಬೆಂಗಳೂರು: ‘ನಿವೃತ್ತ ಐಪಿಎಸ್‌ ಅಧಿಕಾರಿ ಕೆಂಪಯ್ಯ ಗೃಹ ಸಚಿವರ ಸಲಹೆಗಾರರಾಗಿ ಮುಂದುವರಿದಿದ್ದಾರೆ. ಆದರೆ, ರಾಜ್ಯ ಸರ್ಕಾರ ನೀಡಿರುವ ಕಚೇರಿ ಹಾಗೂ ಕಾರು ಬಳಸುತ್ತಿಲ್ಲ’ ಎಂದು ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಚುನಾವಣಾ ಆಯೋಗ ಈಚೆಗೆ ಸರ್ಕಾರಕ್ಕೆ ಪತ್ರ ಬರೆದು ಕೆಂಪಯ್ಯ ಹಾಗೂ ರಾಮಯ್ಯ ಸದ್ಯದ  ಹುದ್ದೆಗಳ ಬಗ್ಗೆ ಮಾಹಿತಿ ನೀಡುವಂತೆ ಕೇಳಿತ್ತು. ಚುನಾವಣಾ ಆಯೋಗಕ್ಕೆ ಉತ್ತರ ಕಳುಹಿಸಿರುವ ಸರ್ಕಾರ ಕೆಂಪಯ್ಯ ರಾಜ್ಯ ಸಚಿವರ ಸ್ಥಾನಮಾನ ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಆದರೆ, ಚುನಾವಣಾ ನೀತಿ– ಸಂಹಿತೆ ಜಾರಿಯಾದ ಬಳಿಕ ಕೆಂಪಯ್ಯ ಸರ್ಕಾರದ ಸೌಲಭ್ಯಗಳನ್ನು ಬಳಸುತ್ತಿಲ್ಲ. ಆದರೆ, ಪೊಲೀಸ್‌ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಅವರ ಅನುಭವವನ್ನು ಮುಖ್ಯಮಂತ್ರಿ ಬಳಸಿಕೊಳ್ಳುತ್ತಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ರಾಮಯ್ಯ ಸರ್ಕಾರದಲ್ಲಿ ಯಾವುದೇ ಅಧಿಕೃತ ಹುದ್ದೆ ಹೊಂದಿಲ್ಲವೆಂದೂ ಸರ್ಕಾರದ ಪತ್ರದಲ್ಲಿ ತಿಳಿಸಲಾಗಿದೆ. ಇವರು ಕೆಲವು ಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಕೆಲಸ ಮಾಡಿದ್ದರು.

**

ಐ.ಟಿಗೆ ಮಾಹಿತಿ ನೀಡಿದ ಸರ್ಕಾರ

ಬೆಂಗಳೂರು: ರಾಜ್ಯದ ವಿವಿಧ ಇಲಾಖೆಗಳು ಈ ವರ್ಷದ ಜನವರಿಯಿಂದ ಮಾರ್ಚ್‌ ಅಂತ್ಯದವರೆಗೆ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿರುವ ಹಣದ ವಿವರವನ್ನು ಆದಾಯ ತೆರಿಗೆ ಇಲಾಖೆಗೆ ಕಳುಹಿಸಲಾಗಿದೆ.

ಐ.ಟಿ ಇಲಾಖೆ ಕರ್ನಾಟಕ ಹಾಗೂ ಗೋವಾ ವೃತ್ತದ ಮಹಾ ನಿರ್ದೇಶಕ ಬಾಲಕೃಷ್ಣ ಅವರಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಬರೆದಿರುವ ಪತ್ರದಲ್ಲಿ ವಿವಿಧ ಇಲಾಖೆಗಳು ಗುತ್ತಿಗೆದಾರರಿಗೆ ಬಿಡುಗಡೆ ಮಾಡಿರುವ ಹಣದ ವಿವರವನ್ನು ಪ್ರತ್ಯೇಕವಾಗಿ ನಿಮಗೆ ಕಳಿಸಿವೆ ಎಂದಿದ್ದಾರೆ.

ಲೋಕೋಪಯೋಗಿ, ಜಲ ಸಂಪನ್ಮೂಲ, ಇಂಧನ, ಕಂದಾಯ ಹಾಗೂ ಪಶುಸಂಗೋಪನೆ ಇಲಾಖೆಗಳು ತಮ್ಮ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿರುವ ಹಣದ ವಿವರ ನೀಡುವಂತೆ ಬಾಲಕೃಷ್ಣ ಇತ್ತೀಚೆಗೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

‘ಮೇ 12ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಖರ್ಚು ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿದೆ ಎಂದು ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ಕೊಡಿ’ ಎಂದೂ ಕೇಳಿದ್ದರು.

ಐದು ಇಲಾಖೆಗಳು ಗುತ್ತಿಗೆದಾರರಿಗೆ ಎಷ್ಟು ಹಣ ಬಿಡುಗಡೆ ಮಾಡಿವೆ ಎಂಬ ವಿವರ ನೀಡಲು ಮುಖ್ಯ ಕಾರ್ಯದರ್ಶಿ ಕಚೇರಿ ಹಾಗೂ ಆದಾಯ ತೆರಿಗೆ ಇಲಾಖೆ ನಿರಾಕರಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry