ಗುರುವಾರ , ಡಿಸೆಂಬರ್ 12, 2019
20 °C

ಬ್ಯಾಡ್ಮಿಂಟನ್‌: ಸೆಮಿಫೈನಲ್‌ಗೆ ಸೈನಾ, ಪಿ.ವಿ. ಸಿಂಧು ಲಗ್ಗೆ

ಪಿಟಿಐ Updated:

ಅಕ್ಷರ ಗಾತ್ರ : | |

ಬ್ಯಾಡ್ಮಿಂಟನ್‌: ಸೆಮಿಫೈನಲ್‌ಗೆ ಸೈನಾ, ಪಿ.ವಿ. ಸಿಂಧು ಲಗ್ಗೆ

ಗೋಲ್ಡ್‌ ಕೋಸ್ಟ್‌: ಭಾರತದ ಸೈನಾ ನೆಹ್ವಾಲ್‌ ಮತ್ತು ಪಿ.ವಿ.ಸಿಂಧು ಅವರು ಕಾಮನ್‌ವೆಲ್ತ್‌ ಕ್ರೀಡಾಕೂಟದ ಬ್ಯಾಡ್ಮಿಂಟನ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು.

ಕ್ಯಾರರಾ ಕ್ರೀಡಾ ಸಂಕೀರ್ಣದಲ್ಲಿ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಸಿಂಧು 21–14, 21–17ರಲ್ಲಿ ಕೆನಡಾದ ಬ್ರಿಟ್ನಿ ಟ್ಯಾಮ್‌ ಅವರನ್ನು ಸೋಲಿಸಿದರು.

ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದ ಸಿಂಧು, ಎರಡೂ ಗೇಮ್‌ಗಳಲ್ಲಿ ಎದುರಾಳಿಯ ಸವಾಲು ಮೀರಿದರು.

ನಾಲ್ಕರ ಘಟ್ಟದ ಪೈಪೋಟಿಯಲ್ಲಿ ಸಿಂಧು, ಕೆನಡಾದ ಮೈಕೆಲ್ಲೆ ಲಿ ವಿರುದ್ಧ ಸೆಣಸಲಿದ್ದಾರೆ. ಮೈಕೆಲ್ಲೆ ಹಿಂದಿನ ಕೂಟದಲ್ಲಿ ಚಿನ್ನ ಗೆದ್ದಿದ್ದರು.

ಇನ್ನೊಂದು ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಸೈನಾ 21–8, 21–13ರಲ್ಲಿ ಕೆನಡಾದ ರಚೆಲ್‌ ಹೊಂಡೆರಿಚ್‌ ಸವಾಲು ಮೀರಿದರು. ಈ ಹೋರಾಟ 32 ನಿಮಿಷ ನಡೆಯಿತು.

ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಸಾಧನೆ ಮಾಡಿದ್ದ ಸೈನಾ ಮುಂದಿನ ಸುತ್ತಿನಲ್ಲಿ ಸ್ಕಾಟ್ಲೆಂಡ್‌ನ ಕ್ರಿಸ್ಟಿ ಗಿಲ್‌ಮೌರ್‌ ವಿರುದ್ಧ ಸೆಣಸಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಭರವಸೆಯಾಗಿರುವ ಕೆ.ಶ್ರೀಕಾಂತ್‌ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.

ಕ್ವಾರ್ಟರ್‌ ಫೈನಲ್‌ನಲ್ಲಿ ಶ್ರೀಕಾಂತ್‌ 21–15, 21–12ರಿಂದ ಸಿಂಗಪುರದ ಜಿನ್‌ ರೆಯಿ ರ‍್ಯಾನ್‌  ವಿರುದ್ಧ ಗೆದ್ದರು.

ಎಂಟರ ಘಟ್ಟದ ಇನ್ನೊಂದು ಹೋರಾಟದಲ್ಲಿ ಎಚ್‌.ಎಸ್‌.ಪ್ರಣಯ್‌ 21–13, 21–6ರಲ್ಲಿ ಶ್ರೀಲಂಕಾದ ದಿನುಕಾ ಕರುಣರತ್ನೆ ಅವರನ್ನು ಸೋಲಿಸಿದರು.

ಮಹಿಳೆಯರ ಡಬಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪೈಪೋಟಿಯಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ 21–11, 21–13ರಿಂದ ಶ್ರೀಲಂಕಾದ ಹಸಿನಿ ಅಂಬಲಾಂಗೊಡಗೆ ಮತ್ತು ಮಧುಶಿಕಾ ದಿಲ್ರುಕ್ಷಿ ಅವರನ್ನು ಸೋಲಿಸಿದರು.

ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಅಶ್ವಿನಿ ಮತ್ತು ಸಾತ್ವಿಕ್‌ ಸಾಯಿರಾಜ್‌ 21–19, 21–19ರಲ್ಲಿ ಮಲೇಷ್ಯಾದ ಗೊಹ್‌ ಸೂನ್‌ ಹುವಾತ್‌ ಮತ್ತು ಲಾಯ್‌ ಶೆವೊನ್‌ ಜೆಮಿ ಅವರನ್ನು ಪರಾಭವಗೊಳಿಸಿದರು.

ಪ್ರತಿಕ್ರಿಯಿಸಿ (+)