ನೌಕರರ ಸಂಘದ ಅಧ್ಯಕ್ಷ ಸ್ಥಾನ: ಚುನಾವಣೆಗೆ ಆದೇಶ

7

ನೌಕರರ ಸಂಘದ ಅಧ್ಯಕ್ಷ ಸ್ಥಾನ: ಚುನಾವಣೆಗೆ ಆದೇಶ

Published:
Updated:

ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರನ್ನು ಚುನಾವಣೆ ಮೂಲಕವೇ ಆಯ್ಕೆ ಮಾಡಬೇಕು ಎಂದು ಬೆಂಗಳೂರು ನಗರ ಜಿಲ್ಲೆ 4ನೇ ವಲಯದ ಸಂಘಗಳ ನೋಂದಣಾಧಿಕಾರಿ ಆದೇಶಿಸಿದ್ದಾರೆ.

ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ ಅವರು ಈಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಸಂಘದ ಗೌರವಾಧ್ಯಕ್ಷ ಎಚ್‌.ಕೆ. ರಾಮು ಅವರು ಪ್ರಭಾರ ವಹಿಸಿಕೊಂಡಿದ್ದರು.

ಸಂಘದ ಕೇಂದ್ರ ಕಾರ್ಯಕಾರಿಣಿ ನಿರ್ಧಾರದಂತೆ ಉಳಿದ ಎಂಟು ತಿಂಗಳ ಅವಧಿಗೆ ತಾವೇ ಅಧ್ಯಕ್ಷರು ಎಂದು ಅವರು ಘೋಷಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಸಹಕಾರ ಇಲಾಖೆಗೆ ದೂರು ನೀಡಿದ್ದರು.

2014ರಲ್ಲಿ ಅಂದಿನ ಅಧ್ಯಕ್ಷ ಎಲ್‌. ಭೈರಪ್ಪ ಅವರ ನಿವೃತ್ತಿಯಿಂದ ಸ್ಥಾನ ತೆರವಾಗಿತ್ತು. ಆಗಲೂ ಇದೇ ರೀತಿ ಕಾರ್ಯಕಾರಿ ಸಮಿತಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿತ್ತು. ಈ ನಿರ್ಧಾರದ ವಿರುದ್ಧ ಮಂಜೇಗೌಡ ಮತ್ತಿತರರು ಹೈಕೋರ್ಟ್ ಮೊರೆ ಹೋಗಿದ್ದರು. ಅಕ್ಟೋಬರ್ 10ರಂದು (2014) ಈ ಕುರಿತು ತೀರ್ಪು ನೀಡಿದ್ದ ನ್ಯಾಯಮೂರ್ತಿ ವೇಣುಗೋಪಾಲ ಗೌಡ ಅವರು ಚುನಾವಣೆ ಮೂಲಕವೇ ಅಧ್ಯಕ್ಷರ ಆಯ್ಕೆ ಮಾಡುವಂತೆ ಸೂಚಿಸಿದ್ದರು.

ಅಂದಿನ ಕೋರ್ಟ್ ಆದೇಶದ ಪ್ರತಿಯೊಂದಿಗೆ ಷಡಾಕ್ಷರಿ ಅವರು ನೀಡಿದ ದೂರು ಪರಿಗಣಿಸಿದ ನೋಂದಣಾಧಿಕಾರಿ, 15 ದಿನಗಳ ಒಳಗೆ ಚುನಾವಣೆ ನಡೆಸುವಂತೆ ಆದೇಶ ನೀಡಿದ್ದಾರೆ. ನೌಕರರ ಸಂಘದ ಕೇಂದ್ರ ಕಾರ್ಯಕಾರಿಣಿ ಸದಸ್ಯರು ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರಿಗೆ ಮತದಾನದ ಹಕ್ಕು ಇರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry